ಫಿಲೋಮಿನಾ ಪ್ರೌಢಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆ

0

ಹಿರಿಯರು ನಡೆದುಕೊಂಡು ಬಂದ ಹಾದಿ ಮಕ್ಕಳು ತಿಳಿಯುವವರಾಗಲಿ-ರಾಧಾಕೃಷ್ಣ ರೈ
ಕಲಿತ ಶಾಲೆ ಬಗ್ಗೆ ಧನಾತ್ಮಕವಾಗಿ ಮಾತನಾಡಿದರೆ ಅದುವೇ ಪ್ರಚಾರ ತಂತ್ರ-ಚಂದ್ರಹಾಸ ರೈ
ಶಾಲಾ ಹಿರಿಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಕೆಲಸವಾಗಬೇಕಿದೆ-ವಂ|ಲಾರೆನ್ಸ್ ಮಸ್ಕರೇನ್ಹಸ್
ಸಂಸ್ಥೆಯನ್ನು ಉತ್ತುಂಗಕ್ಕೇರಿಸುವುದು ಉದ್ಧೇಶ-ಎನ್.ಕೆ ಜಗನ್ನೀವಾಸ್ ರಾವ್

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆಯು ಜ.26 ರಂದು ಬೆಳಿಗ್ಗೆ ಶಾಲೆಯ ಸಭಾಂಗಣದಲ್ಲಿ ಜರಗಿತು.


ಹಿರಿಯರು ನಡೆದುಕೊಂಡು ಬಂದ ಹಾದಿ ಮಕ್ಕಳು ತಿಳಿಯುವವರಾಗಬೇಕು-ರಾಧಾಕೃಷ್ಣ ರೈ:
ಮುಖ್ಯ ಅತಿಥಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಮಾತನಾಡಿ, ಮಕ್ಕಳಿಗೆ ಹೆತ್ತವರು ಬೈಯ್ಯುವುದು ಮಕ್ಕಳು ಅದನ್ನು ಹಿತವಚನ ಎಂದು ತೆಗೆದುಕೊಳ್ಳಬೇಕು. ಹಿರಿಯರು ನಡೆದುಕೊಂಡು ಬಂದ ಹಾದಿ, ಜೀವನ ಕಂಡುಕೊಳ್ಳಲು ಯಾವ ರೀತಿ ಹೋರಾಟ ಮಾಡಿರುತ್ತಾರೆ ಎಂಬುದನ್ನು ಅರಿಯುವಸಾಕ್ತರಾಬೇಕು. ಹಿಂದೆ ನಾವು ಕಲಿಯುತ್ತಿರುವ ಸಂದರ್ಭದಲ್ಲಿ ಅಧ್ಯಾಪಕರು ಪೆಟ್ಟು ಕೊಟ್ಟಾಗ ಹೆತ್ತವರು ಖುಶಿ ಪಡುತ್ತಿದ್ದರು. ಯಾಕೆಂದರೆ ಬುದ್ದಿ ಕಲಿಯಬೇಕಾದರೆ ಅಧ್ಯಾಪಕರು ಪೆಟ್ಟು ನೀಡಲೇಬೇಕು ಎಂಬ ನಿಲುವು ಅವರದಾಗಿತ್ತು. ಆದರೆ ಈಗ ಎಲ್ಲವೂ ಭಿನ್ನ. ಅಧ್ಯಾಪಕರು ಹೊಡೆಯುವಂತಿಲ್ಲ. ಹೊಡೆದರೆ ಮಾರನೇ ದಿನವೇ ಹೆತ್ತವರು ಮುಖ್ಯ ಶಿಕ್ಷಕರ ಬಳಿ ಅಧ್ಯಾಪಕರು ಯಾಕೆ ಹೊಡೆದರು ಎಂದು ಕೇಳುವ ಪರಿಸ್ಥಿತಿ ಉದ್ಭವವಾಗಿದೆ ಎಂದರು.


ಕಲಿತ ಶಾಲೆ ಬಗ್ಗೆ ಧನಾತ್ಮಕವಾಗಿ ಮಾತನಾಡಿದರೆ ಅದುವೇ ಪ್ರಚಾರ ತಂತ್ರ-ಚಂದ್ರಹಾಸ ರೈ:
ಮುಖ್ಯ ಅತಿಥಿ, ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಚಂದ್ರಹಾಸ ರೈ ಬಿ ಮಾತನಾಡಿ, ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಪಾತ್ರ ಬಹಳ ಮುಖ್ಯ ಜೊತೆಗೆ ಶಾಲೆಯ ಬೆಳವಣಿಗೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘವು ದೊಡ್ಡ ಸಂಪನ್ಮೂಲ ಹಾಗೂ ರಾಯಭಾರಿ ಎನಿಸಿದೆ. ಹಿರಿಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಇಂದು ಉತ್ತಮವಾದ ಬದುಕನ್ನು ಕಂಡುಕೊಂಡಿರುವುದು ಸತ್ಯದ ವಿಚಾರ. ತಾನು ಕಲಿತ ಶಾಲೆಯ ಬಗ್ಗೆ ಧನಾತ್ಮಕವಾಗಿ ಮಾತನಾಡಿದರೆ ಅದುವೇ ಉತ್ತಮವಾದ ಪ್ರಚಾರ ತಂತ್ರವಾಗಿದೆ ಅಲ್ಲದೆ ಸಾಧನೆ ಮಾಡಿದಂತಹ ಹಿರಿಯ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ಸಂಸ್ಥೆಗೆ ಕರೆಯಿಸಿ ಪ್ರಸಕ್ತ ವಿದ್ಯಾರ್ಥಿಗಳಿಗೆ ಅವರ ಸಾಧನೆ ಬಗ್ಗೆ ತಿಳಿಸಿದಾಗ ವಿದ್ಯಾರ್ಥಿಗಳಿಗೆ ಅದು ಪ್ರೇರಣೆ ಎನಿಸುತ್ತದೆ ಎಂದರು.

ಶಾಲಾ ಹಿರಿಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಕೆಲಸವಾಗಬೇಕಿದೆ-ವಂ|ಲಾರೆನ್ಸ್ ಮಸ್ಕರೇನ್ಹಸ್:
ಗೌರವ ಅತಿಥಿ, ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಜಗತ್ತಿನಲ್ಲಿಯೇ ಉತ್ತಮ ಸಂವಿಧಾನ ನಮ್ಮದಾಗಿದೆ. ಸಮಾನತೆ, ಸ್ವಾತಂತ್ರ್ಯತೆ ಹಾಗೂ ಭ್ರಾತೃತ್ವ ಸಂವಿಧಾನವು ಒಳಗೊಂಡಿದೆ. ಈ ನಿಟ್ಟಿನಲ್ಲಿ ಸಂವಿಧಾನವನ್ನು ದೇಶಕ್ಕೆ ಅರ್ಪಣೆ ಮಾಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ. ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿ ಹಾಗೂ ಸ್ವಾತಂತ್ರ್ಯದ ಜೀವನದೊಂದಿಗೆ ದೇಶವನ್ನ ಪ್ರೀತಿಸಿ ದೇಶ ಕಟ್ಟುವವರಾಗಬೇಕು. ಹಿರಿಯ ವಿದ್ಯಾರ್ಥಿಗಳು ಶಾಲೆಯ ಆಧಾರಸ್ತಂಭ. ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ನೆಲೆಯನ್ನು ಕಂಡುಕೊಂಡಿದ್ದು, ಅವರನ್ನೆಲ್ಲಾ ಒಗ್ಗೂಡಿಸುವ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಮಾಡಬೇಕಿದೆ ಎಂದರು.

ಸಂಸ್ಥೆಯನ್ನು ಉತ್ತುಂಗಕ್ಕೇರಿಸುವುದು ಉದ್ಧೇಶ-ಎನ್.ಕೆ ಜಗನ್ನೀವಾಸ್ ರಾವ್:
ಅಧ್ಯಕ್ಷತೆ ವಹಿಸಿದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನ್ಯಾಯವಾದಿ ಎನ್.ಕೆ ಜಗನ್ನೀವಾಸ್ ರಾವ್ ಮಾತನಾಡಿ, ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆಯಲ್ಲಿ ಸಾಧಕ ಹಿರಿಯ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವುದು ಅವರ ಸಾಧನೆಗಳನ್ನು ಪರಿಚಯಿಸುವುದಾಗಿದೆ. ಅಮೃತಮಹೋತ್ಸವದ ಹೊಸ್ತಿಲಲ್ಲಿರುವ ಈ ಶಾಲೆಯ ಹಿರಿಯ ವಿದ್ಯಾರ್ಥಿಗಳ ದೊಡ್ಡ ಮಟ್ಟದ ಸಭೆ ಆಯೋಜಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಯೋಜನೆ ಹಾಕಿಕೊಳ್ಳಲಾಗುವುದು. ಇದರ ಮುಖ್ಯ ಉದ್ಧೇಶ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವುದಾಗಿದೆ. ಯಾಕೆಂದರೆ ಈ ಶಾಲೆಯಲ್ಲಿ ನಮ್ಮ ಋಣ ಇದೆ ಎಂದರು.

ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಜೋನ್ ಕುಟಿನ್ಹಾ, ಕಾರ್ಯದರ್ಶಿ ಶಿಕ್ಷಕ ಕ್ಲೆಮೆಂಟ್ ಪಿಂಟೋ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ  ಕಾರ್ಮಿನ್ ಪಾಯಿಸ್ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಹಾಗೂ ಶಾಲಾ ಆಡಳಿತ ಸಿಬ್ಬಂದಿ ವಿಲಿಯಂ ನೊರೋನ್ಹಾ ವಂದಿಸಿದರು. ಶಿಕ್ಷಕ ಹಾಗೂ ಹಿರಿಯ ವಿದ್ಯಾರ್ಥಿ ರೋಶನ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ
ಶಾಲಾ ಹಿರಿಯ ವಿದ್ಯಾರ್ಥಿಗಳಾದ ಶಂಕರ್ ಭಟ್, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ಲಾರೆನ್ಸ್ ಗೊನ್ಸಾಲ್ವಿಸ್, ಎಂ.ಆರ್ ಜಯಕುಮಾರ್ ರೈ, ಜೋನ್ಸನ್ ಡೇವಿಡ್ ಸಿಕ್ವೇರಾ, ಪೀಟರ್ ನರೇಶ್ ಲೋಬೊ, ರಿಚರ್ಡ್ ವೇಗಸ್ ಸಹಿತ ಹಲವರು ಉಪಸ್ಥಿತರಿದ್ದರು.

ಸನ್ಮಾನ…
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಲಾ ಹಿರಿಯ ವಿದ್ಯಾರ್ಥಿಗಳಾದ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಹಾಗೂ ತುಳು ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಚಂದ್ರಹಾಸ ರೈರವರನ್ನು ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನಿತರ ಪರಿಚಯವನ್ನು ಹಿರಿಯ ವಿದ್ಯಾರ್ಥಿಗಳಾದ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈ ಹಾಗೂ ಶಿಕ್ಷಕ ಬೆನೆಟ್ ಮೊಂತೇರೊರವರು ನೀಡಿದರು.

ಅಭಿನಂದನೆ…
ಶಾಲಾ ಹಿರಿಯ ವಿದ್ಯಾರ್ಥಿಗಳಾಗಿದ್ದು ಪ್ರಸ್ತುತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಮೊಹಮದ್ ಆಶಿಕ್, ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಶ್ರೀನಿವಾಸ್ ಹೆಗ್ಡೆ ಮತ್ತು 2021-22ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕಗಳನ್ನು ಪಡೆದಿರುವ ಶಾಲಾ ಹಿರಿಯ ವಿದ್ಯಾರ್ಥಿಗಳಾದ ಆಂಗ್ಲ ಮಾಧ್ಯಮದಲ್ಲಿ ಪವನ್ ಕುಮಾರ್(625 ಅಂಕ), ಕನ್ನಡ ಮಾಧ್ಯಮದಲ್ಲಿ ನಾರಾಯಣ್ ಭಟ್(605 ಅಂಕ)ರನ್ನು ಹೂ ನೀಡಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here