ಪುತ್ತೂರು: ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವಳಿ ಸಹೋದರರಾದ ಕೆ.ರಾಮಣ್ಣ ಶೆಟ್ಟಿ ಹಾಗೂ ಲಕ್ಷ್ಮಣ ಶೆಟ್ಟಿ ಅವರು ಜ.31 ರಂದು ನಿವೃತ್ತರಾಗಲಿದ್ದಾರೆ. ಹಿರೇಬಂಡಾಡಿ ಗ್ರಾಮದ ಕೆಮ್ಮಾರ ಗುತ್ತುಮನೆ ಕೃಷ್ಣ ಶೆಟ್ಟಿ ಹಾಗೂ ಕುಸುಮಾವತಿ ದಂಪತಿಯ ಅವಳಿ-ಜವಳಿ ಮಕ್ಕಳಾಗಿರುವ ಕೆ.ರಾಮಣ್ಣ ಶೆಟ್ಟಿ ಹಾಗೂ ಲಕ್ಷ್ಮಣ ಶೆಟ್ಟಿ ಅವರು ಕಳೆದ 38 ವರ್ಷಗಳಿಂದ ಕೆಎಸ್‌ಆರ್‌ಟಿಸಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿರುತ್ತಾರೆ. ಕೆ.ರಾಮಣ್ಣ ಶೆಟ್ಟಿ ಅವರು 1985ರಲ್ಲಿ ಬೆಂಗಳೂರಿನ ಕುಣಿಗಲ್‌ನಲ್ಲಿ ಕೆಎಸ್‌ಆರ್‌ಟಿಸಿಯಲ್ಲಿ ಸೇವೆಗೆ ಸೇರಿದ್ದು ಮಂಗಳೂರು ಮತ್ತು ಪುತ್ತೂರು ವಿಭಾಗದಲ್ಲಿ ಒಟ್ಟು 37 ವರ್ಷ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ಬಿ.ಸಿ.ರೋಡು ಘಟಕದ ವಿಟ್ಲ ಬಸ್‌ನಿಲ್ದಾಣದಲ್ಲಿ ಸಂಚಾರ ನಿಯಂತ್ರಕರಾಗಿದ್ದಾರೆ. ಪ್ರಸ್ತುತ ಇವರು ವಿಟ್ಲ ಕಸಬ ಚಂದಳಿಕೆ ನಿಡ್ಯದಲ್ಲಿ ಪತ್ನಿ ಸುಜಾತ ಆರ್.ಶೆಟ್ಟಿ, ಪುತ್ರಿಯರಾದ ಹಿತಾಶ್ರೀ,
ಜೀವಿತಾಶ್ರೀಯವರೊಂದಿಗೆ ವಾಸವಾಗಿದ್ದಾರೆ.
ಲಕ್ಷ್ಮಣ ಶೆಟ್ಟಿ ಅವರು ಕೆಎಸ್‌ಆರ್‌ಟಿಸಿಯಲ್ಲಿ 38 ವರ್ಷ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರು 1984ರಲ್ಲಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಲ್ಲಿ ಭದ್ರತಾ ರಕ್ಷಕರಾಗಿ ಸೇರ್ಪಡೆಗೊಂಡಿದ್ದರು. ಬಳಿಕ ಪುತ್ತೂರು, ಕುಂದಾಪುರ, ಧರ್ಮಸ್ಥಳ, ಬಿ.ಸಿ.ರೋಡ್ ಘಟಕಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಪುತ್ತೂರು ವಿಭಾಗೀಯ ಕಾರ್ಯಗಾರ ಕಚೇರಿಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಪತ್ನಿ ವಿನಯ ಎಲ್.ಶೆಟ್ಟಿ, ಪುತ್ರ ಗಗನ್‌ದೀಪ್ ಎಲ್. ಶೆಟ್ಟಿ ಹಾಗೂ ಗುಲ್ಸಾನ್ ಎಲ್.ಶೆಟ್ಟಿ ಅವರ ಜೊತೆ ಹಿರೇಬಂಡಾಡಿ ಗ್ರಾಮದ ಕೆಮ್ಮಾರ ಗುತ್ತುಮನೆಯಲ್ಲಿ ವಾಸವಾಗಿದ್ದಾರೆ.