ಸುಳ್ಯದಲ್ಲಿ ಸುದ್ದಿ ಸೌಹಾರ್ದ ಸಹಕಾರಿಯ ಶಾಖೆ ಹಾಗೂ ಸುದ್ದಿ ಕೃಷಿ ಸೇವಾ ಕೇಂದ್ರದ ಉದ್ಘಾಟನೆ

0

  • ಸುದ್ದಿ ಕೃಷಿ ಸೇವಾ ಕೇಂದ್ರದ ಉದ್ಘಾಟನಾ ಸಮಯದಲ್ಲಿ ಅತಿಥಿಗಳಿಗೆ ಶುದ್ಧ ದ್ರಾಕ್ಷ ರಸ ನೀಡಿ ಸತ್ಕರಿಸಲಾಯಿತು.
  • ಸುದ್ದಿ ಕೃಷಿ ಸೇವಾ ಕೇಂದ್ರದಲ್ಲಿ ಜೇನುತುಪ್ಪ, ದನದ ತುಪ್ಪ, ವಿವಿಧ ಆಕಾರದ ಹಾಳೆತಟ್ಟೆಗಳು, ಮಶ್ರೂಮ್, ಮುಟ್ಟಪಾಲೆ,
  • ಹಪ್ಪಳಗಳು, ಕರಕುಶಲ ವಸ್ತುಗಳ ಮಾರಾಟ ವ್ಯವಸ್ಥೆ ಇದೆ.
  • ಕಾರ್ಯಕ್ರಮದಲ್ಲಿ ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.
  • ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ಸ್ಮರಣಿಕೆ ಜೊತೆಗೆ ಒಣ ಹಣ್ಣುಗಳು ಮತ್ತು ಶುದ್ಧ ಜೇನುತುಪ್ಪ ನೀಡಲಾಯಿತು.

ಸುಳ್ಯ: ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸುದ್ದಿ ಸೌಹಾರ್ದ ಸಹಕಾರಿಯ ಶಾಖೆಯನ್ನು ಸುಳ್ಯದಲ್ಲಿ ತೆರೆಯುವ ಮೂಲಕ ಹಾಗೂ ಕೃಷಿಕರಿಗೆ ಮಾಹಿತಿ ಮತ್ತು ಸೇವೆ ನೀಡುವ ಉದ್ದೇಶದಿಂದ ಸುದ್ದಿ ಕೃಷಿ ಸೇವಾ ಕೇಂದ್ರ ಕಚೇರಿ ಆರಂಭಿಸುವ ಮೂಲಕ ವ್ಯವಹಾರ ಕ್ಷೇತ್ರ ಹಾಗೂ ಕೃಷಿ ಕ್ಷೇತ್ರಕ್ಕೆ ಸುದ್ದಿಯವರು ಕೊಡುಗೆ ನೀಡತೊಡಗಿದ್ದಾರೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ. ಚಿದಾನಂದರವರು ಹಾಗೂ ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರವರು ಶ್ಲಾಘನೆ ವ್ಯಕ್ತ ಪಡಿಸಿದರು.

ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ದ್ವಾರಕಾ ಹೋಟೇಲ್ ಪಕ್ಕದ ರಾಜಶ್ರೀ ಕಾಂಪ್ಲೆಕ್ಸ್‌ನಲ್ಲಿ ತೆರೆಯಲಾದ ಸುದ್ದಿ ಸೌಹಾರ್ದ ಸಹಕಾರಿಯ ಶಾಖೆಯನ್ನು ಡಾ| ಕೆ.ವಿ. ಚಿದಾನಂದರು ಉದ್ಘಾಟಿಸಿದರೆ, ಅದರ ಪಕ್ಕದ ಕೊಠಡಿಯಲ್ಲಿ ಆರಂಭಿಸಲಾಗಿರುವ ಸುದ್ದಿ ಕೃಷಿ ಸೇವಾ ಕೇಂದ್ರದ ಕಚೇರಿಯನ್ನು ಡಾ.| ಕೆ.ವಿ. ಚಿದಾನಂದರು ಹಾಗೂ ಸಚಿವ ಎಸ್.ಅಂಗಾರರು ಜಂಟಿಯಾಗಿ ಉದ್ಘಾಟಿಸಿದರು.‌

ಸುದ್ದಿ ಸೌಹಾರ್ದ ಸಹಕಾರಿಯ ಭದ್ರತಾ ಕೊಠಡಿಯನ್ನು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾಪ್ರಸಾದ್‌ರವರು ಫಿಕ್ಸೆಡ್ ಡಿಪಾಸಿಟ್ ಇಟ್ಟು ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವ ಎಸ್. ಅಂಗಾರರವರು ಸಭೆಯನ್ನುದ್ದೇಶಿಸಿ ಮಾತನಾಡಿ, ವಿಚಾರಕ್ಕೆ ಬದ್ಧರಾಗಿ ಸಂಸ್ಥೆಯನ್ನು ಮುನ್ನಡೆಸಿದಾಗ ಯಶಸ್ಸು ಸಿಗುತ್ತದೆ. ಸಹಕಾರಿ ಸಂಸ್ಥೆಗಳ ಮೂಲಕ, ಸ್ವಉದ್ಯೋಗ ಕೈಗೊಳ್ಳುವ ಯುವಕ-ಯುವತಿಯರಿಗೆ ನೆರವಾಗಲು ಸಾಧ್ಯ ಎಂದರು.

ಅಭಿವೃದ್ಧಿಗೆ ಅನುದಾನ ಸಾಲದು: ಸುಳ್ಯ ನಗರದ ಅಭಿವೃದ್ಧಿಯ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ ಇದೆ. ಆದರೆ ಜನರಲ್ಲಿ ಗೊಂದಲ ಇದೆ. ಕೆಲವರು ರಸ್ತೆ ಇಲ್ಲಿ ಆಗಬೇಕು ಎಂದರೆ, ಕೆಲವರು ಇಲ್ಲಿ ಆಗಬಾರದು ಅನ್ನುತ್ತಾರೆ. ನಗರದ ಅಭಿವೃದ್ಧಿಗೆ ನಗರ ಪಂಚಾಯತ್‌ಗೆ ಬರುವ ಅನುದಾನ ಏನೇನೂ ಸಾಲದು. ಹೆಚ್ಚು ಅನುದಾನ ಬರಲು ಕೆಲವೊಂದು ಅರ್ಹತೆ ಬೇಕಾಗುತ್ತದೆ. ಸುಳ್ಯ ನಗರದ ಜನ ಸಂಖ್ಯೆ ಹೆಚ್ಚಾಗಿ ಇದು ಪುರಸಭೆಯಾಗಿ ಪರಿವರ್ತನೆಯಾಗಬೇಕಾಗುತ್ತದೆ ಎಂದು ಸಚಿವರು ಹೇಳಿದರು.

ಸುದ್ದಿ ಸೌಹಾರ್ದ ಸಹಕಾರಿ ಶಾಖೆಯನ್ನು ಉದ್ಘಾಟಿಸಿದ ಡಾ| ಕೆ.ವಿ.ಚಿದಾನಂದರವರು ಮಾತನಾಡಿ, ದ.ಕ.ಜಿಲ್ಲೆಯಲ್ಲಿ ಜನರಲ್ಲಿ ಸಹಕಾರಿ ಮನೋಭಾವ ಇರುವುದರಿಂದ ಸಹಕಾರಿ ಸಂಸ್ಥೆಗಳು ಯಶಸ್ವಿಯಾಗಿ ನಡೆಯುತ್ತವೆ. ಸುದ್ದಿ ಸೌಹಾರ್ದ ಸಹಕಾರಿ ಕಳೆದ 7 ವರ್ಷಗಳಲ್ಲಿ ಯಶಸ್ವಿಯಾಗಿ ಮುನ್ನಡೆದು ಕಳೆದ ವರ್ಷ 33 ಕೋಟಿ ರೂ. ವ್ಯವಹಾರ ಮಾಡಿ 34 ಲಕ್ಷ ರೂ. ಲಾಭ ಕಂಡುಕೊಂಡಿದೆ. 11 ಶೇಕಡಾ ಡಿವಿಡೆಂಟ್ ನೀಡಿದೆ ಎಂದರು.

ನಾನು ಕೂಡಾ ಕೃಷಿಕ. ಕೃಷಿ ಕ್ಷೇತ್ರ ಕೆಲಸಗಾರರ ಸಮಸ್ಯೆಯನ್ನು ತೀವ್ರವಾಗಿ ಎದುರಿಸುತ್ತಿದೆ. ಅದಕ್ಕಾಗಿ ನೂತನ ಆವಿಷ್ಕಾರಗಳು ಸಾಕಷ್ಟು ನಡೆಯುತ್ತಿವೆ. ರೈತರಿಗೆ ಇವೆಲ್ಲದರ ಮಾಹಿತಿ ಬೇಕಾಗುತ್ತದೆ. ಸುದ್ದಿ ಕೃಷಿ ಸೇವಾ ಕೇಂದ್ರ ತೆರೆದಿರುವುದರಿಂದ ರೈತರಿಗೆ ಬಹಳ ಅನುಕೂಲವಾಗಲಿದೆ ಎಂದು ಡಾ.ಕೆ.ವಿ. ಚಿದಾನಂದರವರು ಹೇಳಿದರು.

ಠೇವಣಿ ಪತ್ರ ವಿತರಣೆ ಮಾಡಿದ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕರವರು ಮಾತನಾಡಿ, 2001ರಲ್ಲಿ ಜಾರಿಗೆ ಬಂದ ಸೌಹಾರ್ದ ಸಹಕಾರ ಕಾಯಿದೆಯ ಮೂಲಕ ನೂರಾರು ಸಹಕಾರಿ ಸಂಸ್ಥೆಗಳು ನೋಂದಾಯಿಸಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸುದ್ದಿ ಸಹಕಾರಿ ಸಂಸ್ಥೆಯೂ ಅತ್ಯಂತ ಯಶಸ್ವಿಯಾಗಿ ಸುಳ್ಯದಲ್ಲಿ ಜನರಿಗೆ ಸೇವೆ ನೀಡುವಂತಾಗಲಿ ಎಂದರು.

ಲಾಕರ್ ಉದ್ಘಾಟಿಸಿದ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ| ಕೆ.ವಿ.ರೇಣುಕಾಪ್ರಸಾದ್‌ರವರು ಮಾತನಾಡಿ, ಡಾ|ಶಿವಾನಂದರು ಏನು ಮಾಡಿದರೂ ವಿಶಿಷ್ಟವಾಗಿ ಮಾಡುತ್ತಾರೆ. ಸುದ್ದಿ ಪತ್ರಿಕೆಯನ್ನು ರಾಜ್ಯವೇ ಗುರುತಿಸುವಂತೆ ಬೆಳೆಸಿದ್ದಾರೆ. ಸುದ್ದಿ ಕೃಷಿ ಸೇವಾ ಕೇಂದ್ರದಲ್ಲಿ ಬಿತ್ತನೆಯಿಂದ ಹಿಡಿದು ಮಾರುಕಟ್ಟೆವರೆಗೆ ಮಾಹಿತಿ ಮಾರ್ಗದರ್ಶನ ಕೊಡುವ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದರು.

ಸಾಲಪತ್ರ ವಿತರಣೆ ಮಾಡಿದ ಸುಳ್ಯ ತಾಲೂಕು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್ ರೈಯವರು ಸುದ್ದಿ ಸೌಹಾರ್ದ ಸಹಕಾರಿ ಹಾಗೂ ಸುದ್ದಿ ಕೃಷಿ ಕೇಂದ್ರಕ್ಕೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿದ್ದ ಸುದ್ದಿ ಸೌಹಾರ್ದ ಸಹಕಾರಿ ಸ್ಥಾಪನೆಯ ಸಂದರ್ಭ ಮುಖ್ಯ ಪ್ರವರ್ತಕರಾಗಿ ಕಾರ್ಯನಿರ್ವಹಿಸಿದ್ದ, ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ, ಸೌಹಾರ್ದ ಸಂಯುಕ್ತ ಸಹಕಾರಿಯ ಹಿರಿಯ ವ್ಯವಸ್ಥಾಪಕರಾದ ಗುರುಪ್ರಸಾದ್ ಬಂಗೇರ, ರಾಜಶ್ರೀ ಕಾಂಪ್ಲೆಕ್ಸ್ ಮಾಲಕ ಇಂಜಿನಿಯರ್ ಕೃಷ್ಣ ರಾವ್, ವಿಶೇಷ ಆಹ್ವಾನಿತರಾಗಿದ್ದ ಸುಳ್ಯ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಪಂಜ ರೈತ ಉತ್ಪಾದಕ ಕಂಪನಿಯ ತೀರ್ಥಾನಂದ ಕೊಡೆಂಕಿರಿ ಶುಭಹಾರೈಸಿದರು.

ಸನ್ಮಾನ : ಸಹಕಾರ ರತ್ನ ಪುರಸ್ಕಾರ ಪಡೆದ ಹಿರಿಯ ಸಹಕಾರಿ ಧುರೀಣ ಸುದ್ದಿ ಸೌಹಾರ್ದ ಸಹಕಾರಿಯ ಸಲಹಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿಯವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿತ್ಯಾನಂದ ಮುಂಡೋಡಿಯವರು ರೂ. 33.5 ಲಕ್ಷ ಲಾಭ, ಶೇ.11 ಡಿವಿಡೆಂಡ್ ಸುದ್ದಿ ಸಹಕಾರಿ ಸಂಘ ಕೊಡುತ್ತಿದೆ. ಆದ್ದರಿಂದ ಇದರಲ್ಲಿ ಹಣ ತೊಡಗಿಸಲು ಯಾರೂ ಹೆದರಬೇಕಾಗಿಲ್ಲ. ಯಾಕೆಂದರೆ ಇದು ಲಾಭದಲ್ಲಿ ಮುಂದುವರಿಯುತ್ತಿರುವ ಸಂಸ್ಥೆ ಎಂದರು.

ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಸುದ್ದಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಡಾ| ಯು.ಪಿ.ಶಿವಾನಂದರವರು, ಸುದ್ದಿ ಬಳಗದಲ್ಲಿರುವ ಎಲ್ಲಾ ನಿರ್ದೇಶಕರು, ಸಲಹಾ ಸಮಿತಿ ಸದಸ್ಯರು ಮತ್ತು ಸಿಬ್ಬಂದಿಗಳು ಸಂಘದ ಚೌಕಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ತಾಳ್ಮೆ ಮತ್ತು ನಗುಮುಖದಿಂದ ಸರ್ವಿಸ್ ಕೊಡುವವರಿದ್ದರೆ ಸಹಕಾರಿ ಸಂಘ ಯಶಸ್ವಿಯಾಗುತ್ತದೆ ಎಂದು ಹೇಳಿದರು.

ನಿರ್ದೇಶಕ ಹರೀಶ್ ಬಂಟ್ವಾಳ್ ಸ್ವಾಗತಿಸಿದರು. ನಿರ್ದೇಶಕ ಜಗನ್ನಿವಾಸ ರಾವ್‌ರವರು ಸುದ್ದಿ ಸೌಹಾರ್ದ ಸಹಕಾರಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ವಿವರ ನೀಡಿದರು. ನಿರ್ದೇಶಕ ಸುಂದರ ನಾಯ್ಕ್‌ರವರು ಸುದ್ದಿ ಕೃಷಿ ಕೇಂದ್ರದ ಬಗ್ಗೆ ವಿವರ ನೀಡಿದರು. ನಿರ್ದೇಶಕಿ ಜೋಹರಾ ನಿಸಾರ್ ಅಹ್ಮದ್ ವಂದಿಸಿದರು. ದುರ್ಗಾಕುಮಾರ್ ನಾಯರ್‌ಕೆರೆ ಕಾರ್ಯಕ್ರಮ ನಿರೂಪಿಸಿದರು. ಯಶ್ವಿತ್ ಕಾಳಮ್ಮನೆ ಸನ್ಮಾನ ಪತ್ರ ವಾಚಿಸಿದರು. ಶಿವಪ್ರಸಾದ್ ಆಲೆಟ್ಟಿ ಮತ್ತು ರಂಗಮಯೂರಿ ತಂಡದವರು ರೈತಗೀತೆಯನ್ನು ಹಾಡಿದರು.

ಸುದ್ದಿ ಸೊಸೈಟಿ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ಮುಖ್ಯ ಕಾರ್ಯನಿರ್ವಹಣಾಽಕಾರಿ ನರೇಂದ್ರರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕರಾದ ಸ್ವಾತಿ ಮಲ್ಲಾರ, ಈಶ್ವರ ವಾರಣಾಶಿ, ರಾಜೇಶ್ ಎಂ.ಎಸ್., -ರೂಕ್ ಮುಕ್ವೆ, ಶೇಷಪ್ಪ ಕಜೆ ಮಾರ್, ಸಲಹಾ ಸಮಿತಿ ಸದಸ್ಯರುಗಳಾದ ರೇಣುಕಾ ಸದಾನಂದ ಜಾಕೆ, ಅಬ್ದುಲ್ ಗ-ರ್, ಸಂತೋಷ್ ಜಾಕೆ, ರಾಮಚಂದ್ರ ಪಲ್ಲತಡ್ಕ, ಜತ್ತಪ್ಪ ರೈ, ಸುಧಾಮ ಆಲೆಟ್ಟಿ, ಯಶ್ವಿತ್ ಕಾಳಮ್ಮನೆ, ರೂಪಾಶ್ರೀ ಜೆ.ರೈ, ಡಾ| ರಂಗಯ್ಯ ಉಪಸ್ಥಿತರಿದ್ದರು.

ಸುದ್ದಿಗೆ ಶ್ಲಾಘನೆ

“ಡಾಕ್ಟ್ರು ಸುದ್ದಿ ಸಂಸ್ಥೆಯನ್ನು ಸುಳ್ಯ, ಪುತ್ತೂರು ಬೆಳ್ತಂಗಡಿಯಲ್ಲಿ ತನ್ನದೇ ಆದ ಶೈಲಿಯಲ್ಲಿ ಯಶಸ್ವಿಯಾಗಿ ಬೆಳೆಸಿದ್ದಾರೆ. ಅದೇ ರೀತಿ ಸುದ್ದಿ ಸೌಹಾರ್ದ ಸಹಕಾರಿ ಹಾಗೂ ಸುದ್ದಿ ಕೃಷಿ ಸೇವಾ ಕೇಂದ್ರಗಳು ಕೂಡಾ ಯಶಸ್ವಿಯಾಗುತ್ತದೆ” ಎಂದು ಸಚಿವ ಎಸ್. ಅಂಗಾರ ಶುಭ ಹಾರೈಸಿದರು.

ಮೀನು ಸಾಕಾಣಿಕೆಗೆ ಕರೆ

50 ಸೆಂಟ್ಸ್ ಸ್ಥಳದಲ್ಲಿ ಮೀನು ಸಾಕಾಣಿಕೆ ಮಾಡುವುದರಿಂದ 5 ಎಕರೆ ಅಡಿಕೆ ತೋಟದಿಂದ ಪಡೆಯ ಬಹುದಾದಷ್ಟು ಆದಾಯ ಪಡೆಯಲು ಸಾಧ್ಯ ಎಂದ ಮೀನುಗಾರಿಕಾ ಸಚಿವ ಎಸ್.ಅಂಗಾರರು ಮೀನು ಸಾಕಾಣಿಕೆಯ ವಿಧಾನವನ್ನು ಸವಿಸ್ತಾರವಾಗಿ ವಿವರಿಸಿದರು. ರೈತರು ಸಾಕಿದ ಮೀನಿಗೆ ಮಾರುಕಟ್ಟೆಯ ವ್ಯವಸ್ಥೆಯನ್ನು ಇಲಾಖೆಯ ಮೂಲಕ ಮಾಡುವುದಾಗಿ ಸಚಿವರು ಭರವಸೆ ನೀಡಿದರು.

LEAVE A REPLY

Please enter your comment!
Please enter your name here