ಉಪ್ಪಿನಂಗಡಿ ಉಪವಲಯಾರಣ್ಯಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ

0

ಮುಗೇರಡ್ಕದಲ್ಲಿ ಅಕ್ರಮ ಮರ ಸಾಗಾಟ ಪತ್ತೆ; ಮರ, ವಾಹನ ವಶ-ಮೂವರ ಸೆರೆ

ನೆಲ್ಯಾಡಿ: ಉಪ್ಪಿನಂಗಡಿ ವಲಯದ ಬಂದಾರು ಶಾಖೆಯ ಉಪವಲಯಾರಣ್ಯಾಧಿಕಾರಿ ಜೆರಾಲ್ಡ್ ಡಿ.ಸೋಜ ಅವರ ನೇತೃತ್ವದಲ್ಲಿ ಅರಣ್ಯ ಇಲಾಖಾಧಿಕಾರಿಗಳ ತಂಡ ಬೆಳ್ತಂಗಡಿ ತಾಲೂಕಿನ ಮುಗೇರಡ್ಕದಲ್ಲಿ ಜ.30ರಂದು ಮುಂಜಾನೆ ಕಾರ್ಯಾಚರಣೆ ನಡೆಸಿ ಸರಕಾರಿ ಜಾಗದಿಂದ ಬೆಲೆಬಾಳುವ ಮರಗಳನ್ನು ಕಡಿದು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಮರ ಹಾಗೂ ವಾಹನ ವಶಪಡಿಸಿಕೊಂಡಿದ್ದಾರೆ. ಘಟನೆಯಲ್ಲಿ ಮೂವರು ಆರೋಪಿಗಳು ಸೆರೆ ಸಿಕ್ಕಿದ್ದು, ಮೂವರು ಪರಾರಿಯಾಗಿದ್ದಾರೆ.


ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕ ನಿವಾಸಿ ಕೃಷ್ಣಪ್ಪ ಕ್ಷೌರಿಕ, ಅಬ್ಬಾಸ್ ಪಾಣೆಮಂಗಳೂರು ಹಾಗೂ ಇರ್ಫಾನ್ ಕಡಬ ಬಂಧಿತ ಆರೋಪಿಗಳಾಗಿದ್ದಾರೆ. ಅಶ್ರಫ್ ಅಂಡೆತ್ತಡ್ಕ, ರಹಿಮಾನ್ ಅಂಡೆತ್ತಡ್ಕ ಹಾಗೂ ಲಾರಿ ಚಾಲಕ ಅಶ್ರಫ್ ಎಂಬವರು ಪರಾರಿಯಾಗಿದ್ದಾರೆ. ಆರೋಪಿಗಳು ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ ಕೃಷ್ಣಪ್ಪ ಕ್ಷೌರಿಕ ಎಂಬವರ ಸ್ವಾಧೀನದಲ್ಲಿರುವ ಸರಕಾರಿ ಜಾಗದಿಂದ 1 ಹೆಬ್ಬಲಸು ಮರ, 2 ಮಾವಿನ ಮರ ಹಾಗೂ 1 ಕಾಡು ಜಾತಿಯ ಮರಗಳನ್ನು ಕಡಿದು ಸುಮಾರು 26 ದಿಮ್ಮಿಗಳನ್ನಾಗಿ ಮಾಡಿ ಲಾರಿಯೊಂದರಲ್ಲಿ ಸಾಗಾಟ ಮಾಡುತ್ತಿದ್ದರು. ಅಲ್ಲದೇ ಮರ ಸಾಗಾಟದ ಲಾರಿಗೆ 1 ಸ್ಕೂಟಿ ಹಾಗೂ 3 ಬೈಕ್‌ಗಳಲ್ಲಿ ಬೆಂಗಾವಲಾಗಿ ಹೋಗಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದುಕೊಂಡು ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಮುಗೇರಡ್ಕ ಎಂಬಲ್ಲಿ ಮರ ಸಾಗಾಟದ ಲಾರಿ (ಕೆಎ 13, ಎ 2102) ಹಾಗೂ ಅದಕ್ಕೆ ಬೆಂಗಾವಲಾಗಿ ಹೋಗುತ್ತಿದ್ದ 1 ಸ್ಕೂಟಿ ಹಾಗೂ 3 ಬೈಕ್ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ವಶಪಡಿಸಿಕೊಂಡಿರುವ ಮರಗಳ ಮೌಲ್ಯ ರೂ.2,57,592 ಹಾಗೂ ವಶಪಡಿಸಿಕೊಂಡು ವಾಹನಗಳ ಮೌಲ್ಯ 5 ಲಕ್ಷ ರೂ.ಎಂದು ಅಂದಾಜಿಸಲಾಗಿದೆ.

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಬಂದಾರು ಶಾಖೆಯ ಉಪವಲಯಾರಣ್ಯಾಧಿಕಾರಿ ಜೆರಾಲ್ಡ್ ಡಿ.ಸೋಜ ಅವರ ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಬಂದಾರು ಶಾಖೆಯ ಗಸ್ತು ಅರಣ್ಯ ಪಾಲಕ ಕೆ.ಎನ್.ಜಗದೀಶ್, ನಿಡ್ಲೆ ಗಸ್ತು ಅರಣ್ಯ ಪಾಲಕ ಪ್ರಶಾಂತ್ ಮಾಳಗಿ, ಕೆಯ್ಯೂರು ಗಸ್ತು ಅರಣ್ಯ ಪಾಲಕ ಜಗದೀಶ್, ಕಣಿಯೂರು ಗಸ್ತು ಅರಣ್ಯ ವೀಕ್ಷಕ ರವಿ ಬಿ., ಬಂದಾರು ಗಸ್ತು ಅರಣ್ಯ ವೀಕ್ಷಕ ಶೇಷಪ್ಪ ಗೌಡ, ಜೀಪು ಚಾಲಕ ಕಿಶೋರ್ ಕುಮಾರ್ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here