ಕಡಬ: ಇಲ್ಲಿನ ನಡುಮಜಲು ಗುತ್ತು ಪ್ರೇಮಸಾಯಿ ಗುಡ್ಡಪ್ಪ ರೈ ಅವರು ಪದೋನ್ನತಿ ಹೊಂದಿದ್ದು, ಬೆಂಗಳೂರು ಹೈಕೋರ್ಟ್ ಜಾಗೃತದಳದ ಎಸ್ಪಿಯಾಗಿ ನೇಮಕಗೊಳಿಸಿ ಸರಕಾರ ಆದೇಶಿಸಿದೆ.
ಬೆಂಗಳೂರಿನ ಹೊಸಕೋಟೆಯಲ್ಲಿ ಪ್ರೊಬೆಷನರಿ ಸಬ್ ಇನ್ಸ್‌ಪೆಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಡುಗೋಡಿ ಹಾಗೂ ಸರ್ಜಾಪುರ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅನಂತರ ಇನ್ಸ್‌ಪೆಕ್ಟರ್ ಆಗಿ ಪದೋನ್ನತಿ ಪಡೆದು ರಾಜ್ಯ ಗುಪ್ತವಾರ್ತೆ, ಎಸ್‌ಟಿಎಫ್ (ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ), ಅತ್ತಿಬೆಲೆ ಸರ್ಕಲ್, ಹೆನ್ನೂರು, ಶಂಕರಪುರ, ಇಲೆಕ್ಟ್ರಾನಿಕ್ ಸಿಟಿ ಹಾಗೂ ಜಿಗಿಣಿ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಡಿವೈಎಸ್ಪಿಯಾಗಿ ಭಡ್ತಿ ಪಡೆದು ಸರಕಾರಿ ಭೂಮಿ ಒತ್ತುವರಿ ತನಿಖಾ ದಳದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರು ಹೈಕೋರ್ಟ್ ಜಾಗೃತದಳದ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲ ದಿನಗಳ ಹಿಂದೆ ಅವರಿಗೆ ಮುಂಭಡ್ತಿ ನೀಡಿ ರಾಜ್ಯ ಸಿಐಡಿ ಎಸ್ಪಿಯಾಗಿ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದ ಸರಕಾರವು ಇದೀಗ ಮರು ಆದೇಶ ಹೊರಡಿಸಿ ರಾಜ್ಯದ ವ್ಯಾಪ್ತಿಯನ್ನು ಹೊಂದಿರುವ ಬೆಂಗಳೂರು ಹೈಕೋರ್ಟ್ ಜಾಗೃತದಳದ ಎಸ್ಪಿಯಾಗಿ ನೇಮಕಗೊಳಿಸಿದೆ.