ಉಪ್ಪಿನಂಗಡಿ: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೇತುವೆಯಿಂದ ನೇತ್ರಾವತಿ ನದಿಗೆ ಧುಮುಕಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.7ರಂದು ಸಂಜೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಮೂಲತಃ ಗದಗ ಜಿಲ್ಲೆಯ ರೋಣ ನಿವಾಸಿ ಭರಮಪ್ಪ (31) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಕೂಲಿ ಕಾರ್ಮಿಕನಾಗಿದ್ದು, ತನ್ನ ಕುಟುಂಬ ಸಮೇತ ತೆಕ್ಕಾರು ಗ್ರಾಮದ ಸರಳೀಕಟ್ಟೆಯ ಮೂಡಡ್ಕ ಎಂಬಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಸ್ಥಳೀಯ ನಿವಾಸಿಯೋರ್ವರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದ. ವಿಪರೀತ ಮದ್ಯವ್ಯಸನಿಯಾಗಿದ್ದ. ಕೂಲಿ ಕೆಲಸಕ್ಕೆಂದು ಹೋದವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಗೀತಾ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈತ ನದಿಗೆ ಹಾರುವುದನ್ನು ಕಂಡ ಇಳಂತಿಲ ಗ್ರಾ.ಪಂ. ಸದಸ್ಯ ಇಸುಬು ಪೆದಮಲೆ, ಮಾಜಿ ಸದಸ್ಯ ಫಯಾಝ್, ನವಾಝ್ ಹಾಗೂ ಅಮ್ಮಿ ಅವರು ಈತನನ್ನು ರಕ್ಷಿಸಲು ಬಂದಿದ್ದು, ಇವರು ನೀರಿಗಿಳಿಯುವಷ್ಟರಲ್ಲೇ ಈತ ಮೃತಪಟ್ಟಿದ್ದ ಎಂದು ವರದಿಯಾಗಿದೆ.