ಹೊರ ರಾಜ್ಯಗಳಿಂದ ಬಂದ ಅಧಿಕಾರಿಗಳಿಗೆ ಕನ್ನಡ ಮಾತನಾಡು ಚಳುವಳಿ, ಕಾಲ್ನಡಿಗೆ ಜಾಥಾ 

0
  • ಪುತ್ತೂರಿಗೆ ಬರುವ ಅತಿಥಿಗಳೆಲ್ಲಾ ಕನ್ನಡಾಭಿಮಾನಿಗಳಾಗಬೇಕು – ಸಂಜೀವ ಮಠಂದೂರು

 

ಪುತ್ತೂರು: ಕನ್ನಡ ನಾಡಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ಕೂಡಾ ಸಮೃದ್ಧವಾದ ಕನ್ನಡವನ್ನು ಮಾತನಾಡಿದಾಗ ಮಾತ್ರ ಅದು ಸರ್ವಜನಾಂಗದ ಸುಂದರ ತೋಟ ಆಗುತ್ತದೆ. ಈ ನಿಟ್ಟಿನಲ್ಲಿ ಪುತ್ತೂರಿಗೆ ಬರುವ ಅತಿಥಿಗಳೆಲ್ಲಾ ಕನ್ನಡಾಭಿಮಾನಿಗಳಾಗಬೇಕೆಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಇತಿಹಾಸದಲ್ಲ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಪುತ್ತೂರಿನ ಏಳು ರೋಟರಿ ಕ್ಲಬ್‌ಗಳ ನೇತೃತ್ವದಲ್ಲಿ ’ಕನ್ನಡ ಮಾತಾಡು’ ಚಳುವಳಿಗೆ ಎ.8ರಂದು ಅವರು ದರ್ಬೆಯಲ್ಲಿ ಚಾಲನೆ ನೀಡಿ ಮಾತನಾಡಿದರು. ರಾಷ್ಟ್ರಾಭಿಮಾನದ ಬಗ್ಗೆ ಮಾತನಾಡಬೇಕಾದರೆ ನನ್ನ ತನದ, ನನ್ನ ಭಾಷೆ, ಸಂಪ್ರದಾಯ, ಆಚಾರ ವಿಚಾರದ ಬಗ್ಗೆ ನನಗೆ ಒಂದು ಅಭಿಮಾನ ಇರಬೇಕು. ಅದೇ ರೀತಿ ಭಾಷೆಯು ಸಮಾಜವನ್ನು ಒಟ್ಟು ಮಾಡುವ ಕೆಲಸ ಮಾಡುತ್ತದೆ. ನಮ್ಮ ಕನ್ನಡ ಭಾಷೆ ಇತರ ಭಾಷೆಗಿಂತ ಸಮೃದ್ದಿಯಾಗಿದೆ. 8 ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ರಾಜ್ಯ ಕನ್ನಡ ಸಂಸ್ಕೃತಿ ಸಚಿವರು ಕೂಡಾ ಇತ್ತೀಚೆಗೆ ಮಾತಾಡು, ಮತಾಡು ಕಾರ್ಯಕ್ರಮ ನಡೆಸಿದ್ದರು. ಈ ನಿಟ್ಟಿನಲ್ಲಿ ಪುತ್ತೂರಿಗೆ ಬರುವ ಅತಿಥಿಗಳೆಲ್ಲಾ ಕನ್ನಡಾಭಿಮಾನಿಗಳಾಗಬೇಕು. ಕನ್ನಡ ಭಾಷೆಯ ಬಗ್ಗೆ ಅವರು ಜ್ಞಾನ ವೃದ್ಧಿಸಬೇಕು. ಕನ್ನಡವು ಸರ್ವ ವ್ಯಾಪಿ, ಸರ್ವ ಸ್ಪರ್ಶಿ, ಸರ್ವ ಗ್ರಾಹಿ ಬೆಳೆಯಬೇಕೆಂದ ಅವರು ಪುತ್ತೂರಿನ ಕನ್ನಡ ಸಾಹಿತ್ಯ ಪರಿಷತ್ ಹಾಕಿಕೊಂಡ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು. ಮುಂದಿನ ದಿನ ನಾವೆಲ್ಲ ಕನ್ನಡದಲ್ಲಿ ಮತನಾಡುವ, ನಮ್ಮ ಮಕ್ಕಳಿಗೆ ಕನ್ನಡದಲ್ಲಿ ವಿದ್ಯಾಭ್ಯಾಸ ಕೊಡುವ, ನಾವೆಲ್ಲ ಕನ್ನಡ ಶಾಲೆಗೆ ಮಕ್ಕಳನ್ನು ಕಲಿಸುತ್ತೇವೆ ಎಂಬ ಪ್ರತಿಜ್ಞೆ ಸ್ವಿಕಾರ ಮಾಡೋಣ ಎಂದರು.

ನಮ್ಮೂರಿಗೆ ಬಂದ ಅಧಿಕಾರಿಗಳು ಕನ್ನಡದಲ್ಲೇ ಮಾತನಾಡಬೇಕು:

ಕನ್ನಡ ಭಾಷೆ ಉಳಿಸುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಳೆದ ಹಲವಾರು ವರ್ಷಗಳಿಂದ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ.ಹೊರ ರಾಜ್ಯಗಳಿಂದ ನಮ್ಮೂರಿಗೆ ಬಂದ ಅನೇಕ ಅಧಿಕಾರಿಗಳು ಕನ್ನಡ ಅಥವಾ ಸ್ಥಳೀಯ ಭಾಷೆಯಾದ ತುಳುವನ್ನು ಕಲಿತು ಕನ್ನಡಿಗರಾಗಿ ಬೆರೆತಿದ್ದಾರೆ. ಆದರೆ ಪುತ್ತೂರಿನ ಅನೇಕ ಬ್ಯಾಂಕ್‌ಗಳಲ್ಲಿ ಹೊರರಾಜ್ಯದಿಂದ ಬಂದ ಕೆಲವು ಬ್ಯಾಂಕ್ ಉದ್ಯೋಗಿಗಳು ಕನ್ನಡದಲ್ಲಿ ಮಾತನಾಡುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರಿಗೆ ವ್ಯವಹಾರ ನಡೆಸಲು ಅನಾನುಕೂಲವಾಗುತ್ತಿದೆ.ಇದನ್ನು ಮನಗಂಡು ಎಂದು ಕನ್ನಡ ಮಾತನಾಡು ಚಳುವಳಿ ಆರಂಭಿಸಿದ್ದೇವೆ ಎಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಹೇಳಿದರು.
ರೋಟರಿ ಎಲೈಟ್ ಅಧ್ಯಕ್ಷ ಮನ್ಸೂರ್, ರೋಟರಿ ಕ್ಲಬ್ ಯುವ ಅಧ್ಯಕ್ಷ ಭರತ್ ಪೈ ಮಾತನಾಡಿದರು.

ಆಂಧ್ರದಿಂದ ಬಂದು ಕನ್ನಡ ಕಲಿತ ಬ್ಯಾಂಕ್ ಅಧಿಕಾರಿಗೆ ಸನ್ಮಾನ:

ಆಂಧ್ರದಿಂದ ಪುತ್ತೂರು ಕೆನರಾ ಬ್ಯಾಂಕ್‌ಗೆ ವರ್ಗಾವಣೆಗೊಂಡಿರುವ ಬ್ಯಾಂಕ್‌ನ ಪ್ರಬಂಧಕ ಶ್ರೀನಿವಾಸ್ ಕುಮಾರ್ ಅವರು ಕೇವಲ 6 ತಿಂಗಳಲ್ಲಿ ಕನ್ನಡ ಕಲಿತಿರುವ ಕುರಿತು ಉಮೇಶ್ ನಾಯಕ್ ಅವರು ಸಭೆಯಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ಅವರನ್ನು ಶಾಸಕರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಶ್ರೀನಿವಾಸ್ ಕುಮಾರ್ ಕನ್ನಡದಲ್ಲಿ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಹೊಸದಾಗಿ ಕ್ಯಾಲಿಕಟ್‌ನಿಂದ ಬಂದಿರುವ ಕೆನರಾ ಬ್ಯಾಂಕ್ ಚಿನ್ನದ ಸಾಲದ ವಿಭಾಗದ ಸಿಬ್ಬಂದಿ ಜಿನು ಕುರಿಯನ್ ಅವರನ್ನು ಮೊದಲ ಕನ್ನಡ ಕಲಿಯುವ ವಿದ್ಯಾರ್ಥಿಯಾಗಿದ್ದಾರೆಂದು ಗುರುತಿಸಲಾಯಿತು. ಜೆಸಿಐ ಅಧ್ಯಕ್ಷ ಶಶಿರಾಜ್, ರೋಟರಿ ಕ್ಲಬ್ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಕಣಜಾಲು, ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ನವೀನ್‌ಚಂದ್ರ, ರೋಟರಿ ಕ್ಲಬ್ ಸಿಟಿಯ ಗುರುರಾಜ್, ಚೇತನ್ ಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ್ಹೋ ಸ್ವಾಗತಿಸಿ, ರೋಟರಿ ಸ್ವರ್ಣದ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್‌ನ ಅಬೂಬಕ್ಕರ್ ಆರ್ಲಪದವು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here