ಬಾಲವನದ ಈಜುಕೊಳದಲ್ಲಿ ಬೇಸಿಗೆ ಶಿಬಿರ

0
  • ಮಕ್ಕಳಿಗೆ, ಮಹಿಳೆಯರಿಗೆ ಪ್ರತ್ಯೇಕ ಬ್ಯಾಚ್ 
  • ಸ್ಪರ್ಧೆಯ ಜೊತೆಗೆ ಜೀವರಕ್ಷಕವಾಗಿ ಈಜುಕಲಿಕೆ

ಬಾಲವನದ ಮಕ್ಕಳ ಈಜುಕೊಳದಲ್ಲಿ ಮಕ್ಕಳಿಗೆ ತರಬೇತಿ

ಪುತ್ತೂರು: ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಈಜುಪಟುಗಳನ್ನು ತಯಾರುಗೊಳಿಸಿದ ಬಾಲವನದ ಈಜುಕೊಳದಲ್ಲಿ ಬೇಸಿಗೆ ಶಿಬಿರ ಆರಂಭಗೊಂಡಿದೆ. ಈ ಮೂಲಕ ಇನ್ನಷ್ಟು ಈಜುಪಟುಗಳನ್ನು ತಯಾರಿಗೊಳಿಸುವ ಕಾಯಕಕ್ಕೆ ಇದು ಮುಂದಾಗಿದೆ.

ಬಾಲವನದಲ್ಲಿ ಈಜು ಆಕಾಂಕ್ಷಿಗಳಿಗೆ ತರಬೇತಿ.

ಡಾ. ಶಿವರಾಮ ಕಾರಂತರು ಸಾಹಿತ್ಯ ಕೃಷಿ ನಡೆಸಿದ ಬಾಲವನದ ಜಾಗದಲ್ಲಿ ಈಜುಕೊಳವನ್ನು ನಿರ್ಮಾಣ ಮಾಡಿದ ಬಳಿಕ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಈಜು ತರಬೇತಿಗೆಂದು ಎಳೆ ಪ್ರಾಯದಲ್ಲೇ ಸೇರಿಕೊಳ್ಳುವ ಮಕ್ಕಳು ಮುಂದೆ ಈಜು ಸ್ಪರ್ಧೆಗಳಿಗೂ ಸಿದ್ಧಗೊಳ್ಳುತ್ತಿರುವುದು ಇಲ್ಲಿನ ವಿಶೇಷತೆ. ಇದರಿಂದ ಪುತ್ತೂರಿನಲ್ಲಿ ಈಜುಪಟುಗಳು ಹುಟ್ಟಿಕೊಳ್ಳುವುದಲ್ಲದೇ, ಜೀವರಕ್ಷಕ ಈಜಿನ ಬಗೆಗಿನ ಅರಿವು ಕೂಡ ಬೆಳೆಯತೊಡಗಿದೆ.

ಈಜನ್ನು ಜೀವರಕ್ಷಕವಾಗಿ ಕಲಿಸುತ್ತಿರುವುದು ಬಾಲವನ ಈಜುಕೊಳದ ವಿಶೇಷತೆ. ಆತ್ಮರಕ್ಷಣೆಯ ಜೊತೆಗೆ ನೀರಲ್ಲಿ ಮುಳುಗುತ್ತಿರುವ ಅನ್ಯರ ಪ್ರಾಣವನ್ನು ರಕ್ಷಿಸಲು ಇದರಿಂದ ಸಾಧ್ಯ. ಇದರ ಜೊತೆಗೆ ಆರೋಗ್ಯಕ್ಕೂ ನಾನಾ ರೀತಿಯ ಪ್ರಯೋಜನಗಳು ಲಭ್ಯ – ದೇಹ ಸದೃಢ, ಬೊಜ್ಜು ಕರಗುವುದು, ಸುಖವಾದ ನಿದ್ದೆ, ಅಂಗಾಂಗ ಸಡಿಲ, ಮುದಿತನ ದೂರ, ಚಿಕ್ಕಪುಟ್ಟ ಕಾಯಿಲೆಗಳಿಂದ ಮುಕ್ತಿ, ಉಸಿರಾಟದ ಬಾಧೆ- ಅಸ್ತಮಾ ಹತೋಟಿಗೆ ಬರುತ್ತದೆ, ದೇಹದ ಸ್ನಾಯುಗಳು ಗಟ್ಟಿಗೊಳ್ಳುತ್ತವೆ, ರಕ್ತಚಲನೆ ಚುರುಕುಗೊಳ್ಳುತ್ತದೆ, ಮಾನಸಿಕ ಒತ್ತಡ ನಿವಾರಣೆಗೊಳ್ಳುತ್ತದೆ, ನಿತ್ಯ ಲವಲವಿಕೆಯಿಂದಿರಬಹುದು. ಇದಕ್ಕೆ ಕಾರಣ ನೆಲದ ಮೇಲೆ ಮಾಡುವ ವ್ಯಾಯಾಮಕ್ಕಿಂತಲೂ ಈಜುಕೊಳದೊಳಗಿನ ಈಜು ೧೨ ಪಟ್ಟು ಅಧಿಕ ಪರಿಣಾಮಕಾರಿ. ಈ ಹಿನ್ನೆಲೆಯಲ್ಲಿ ಸಣ್ಣ ಪ್ರಾಯದ ಮಕ್ಕಳಿಂದ ೭೦ ವರ್ಷದವರೆಗಿನ ವ್ಯಕ್ತಿಗಳಿಗೂ ಬೇಸಿಗೆ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿದೆ.

ಅಂತಾರಾಷ್ಟ್ರೀಯ ಶೈಲಿಯ ತರಬೇತಿಯನ್ನು ನೀಡುವುದು ಬಾಲವನ ಈಜುಕೊಳದ ವಿಶೇಷತೆ. ಈ ವಿಧಾನವನ್ನು ಕಲಿತುಕೊಂಡರೆ, ಸಾಮಾನ್ಯ ಈಜುಗಾರರಿಗಿಂತಲೂ ವೇಗವಾಗಿ ಈಜಲು ಸಾಧ್ಯ. ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಸುಲಭವಾಗುತ್ತದೆ. ಒಂದು ವೇಳೆ ಈಗಾಗಲೇ ನೀವು ಈಜು ಕಲಿತಿದ್ದೀರಿ ಎಂದಾದರೆ, ಮುಂದುವರಿದ ಕೋಚಿಂಗ್ ಪಡೆದುಕೊಂಡು ರಾಷ್ಟ್ರಮಟ್ಟದ ತರಬೇತುದಾರರೊಂದಿಗೆ, ಈಜುಪಟುಗಳೊಂದಿಗೆ ವೈವಿಧ್ಯ ಶೈಲಿಗಳನ್ನು ಕಲಿತುಕೊಳ್ಳಲು ಇಲ್ಲಿ ಅವಕಾಶವಿದೆ. ನೀರಿನಲ್ಲಿ ಹ್ಯಾಂಡ್‌ಬಾಲ್ ಅಥವಾ ವಾಟರ್ ಪೋಲೋ ಆಟವನ್ನು ಆಡಬಹುದು. ಸ್ಕೂಲ್ ಟೀಮ್, ಕಾಲೇಜ್ ಟೀಮ್, ಫ್ರೆಂಡ್ಸ್ ಟೀಮ್‌ಗಳಿಗೆ ಈ ಆಟವನ್ನು ಕಲಿಸಿ ಕೊಡುವ ವ್ಯವಸ್ಥೆಯೂ ಇಲ್ಲಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಈಜು, ಹೃದಯ ಮತ್ತು ಹೃದಯರಕ್ತನಾಳದ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮಕ್ಕಳು ಪ್ರತಿದಿನ ಈಜುವುದರಿಂದ ದೇಹ ಮತ್ತು ಮನಸ್ಸು ಉತ್ತಮ ರೀತಿಯಲ್ಲಿ ಬೆಳವಣಿಗೆ ಆಗುತ್ತದೆ. ಮೆದುಳಿನ ಕಾರ್ಯ ಮತ್ತು ಗಮನವನ್ನು ಸುಧಾರಿಸಬಲ್ಲ ಈಜು, ಸ್ನಾಯುಗಳ ನಾರಿನ ಬೆಳವಣಿಗೆಯನ್ನು ಅಭಿವೃದ್ಧಿಪಡಿಸುತ್ತದೆ. ಕೈರಟ್ಟೆ, ಎದೆಗೂಡು, ಕಿಬ್ಬೊಟ್ಟೆ, ಹೃದಯ, ಹೊಟ್ಟೆ, ಕಾಲಿನ ಸ್ನಾಯುಗಳನ್ನು ಗಟ್ಟಿಗೊಳಿಸುತ್ತವೆ. ಈ ಹಿನ್ನೆಲೆಯಲ್ಲಿ ಬಾಲವನದ ಈಜುಕೊಳವು ಬೇಸಿಗೆ ಶಿಬಿರವನ್ನು ಪ್ರತಿವರ್ಷ ಆಯೋಜಿಸುತ್ತದೆ.

 

ನೀರು ಜೀವಜಲ. ಎಂದಿಗೂ ನೀರು ಮೃತ್ಯುವಾಗಬಾರದು. ಈ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಪರ್ಲಡ್ಕ ಡಾ. ಶಿವರಾಮ ಕಾರಂತರ ಬಾಲವನದ ಈಜುಕೊಳ, ಆರೋಗ್ಯವಂತ ಸಮಾಜ ರೂಪೀಕರಣಕ್ಕೆ ಶ್ರಮಿಸುತ್ತಿದೆ.

 

ಬಾಲವನ ಈಜುಕೊಳದ ಗರಿಮೆ: ಈಜು ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ. 187 ದೇಶಗಳು ಭಾಗವಹಿಸುವ ಈಜು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬಾಲವನದ ಪುತ್ತೂರು ಅಕ್ವಾಟಿಕ್ ಕ್ಲಬ್ ಕೂಡ ಕಳೆದ ಕೆಲ ವರ್ಷಗಳಿಂದ ಭಾಗವಹಿಸುತ್ತಿರುವುದು ಹೆಚ್ಚುಗಾರಿಕೆಯೇ ಸರಿ. 100ಕ್ಕೂ ಅಧಿಕ ಈಜುಪಟುಗಳನ್ನು ತಯಾರುಗೊಳಿಸಿರುವ ಅಕ್ವಾಟಿಕ್ ಕ್ಲಬ್, 3 ಸಾವಿರಕ್ಕೂ ಅಧಿಕ ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ 2 ಅಂತಾರಾಷ್ಟ್ರೀಯ ಚಿನ್ನದ ಪದಕ ಎನ್ನುವುದು ಪುತ್ತೂರಿಗೆ ಸಂದ ಗರಿಮೆ.

3 ವರ್ಷದಿಂದಲೇ ತರಬೇತಿ:

ಎಳೆ ಪ್ರಾಯದಲ್ಲಿ ಮಕ್ಕಳು ಈಜು ತರಬೇತಿಯನ್ನು ಸಮರ್ಥವಾಗಿ ಮತ್ತು ಸುಲಭವಾಗಿ ಅರಗಿಸಿಕೊಳ್ಳುತ್ತಾರೆ. ಆದ್ದರಿಂದ ೩ ವರ್ಷದ ಮಕ್ಕಳಿಂದಲೇ ಈಜು ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ. ಬೆಳಿಗ್ಗೆ 6.30ರಿಂದ 7.15ರವರೆಗೆ, 8.30ರಿಂದ 9.15 ರವರೆಗೆ, 7.30ರಿಂದ 8.15 ರವರೆಗೆ ಸಂಜೆ 6.30ರಿಂದ 7.15ರವರೆಗಿನ ಸೆಷನ್ಸ್‌ಗಳು ಮಕ್ಕಳಿಗೆಂದು ನಿಗದಿ ಮಾಡಲಾಗಿದೆ. ಬೇಸಿಗೆ ಶಿಬಿರದಲ್ಲಿ ಫ್ಯಾಮಿಲಿ ಪ್ಯಾಕೇಜ್‌ಗಳು ಮತ್ತು ಗ್ರೂಪ್ ಡಿಸ್ಕೌಂಟ್‌ಗಳನ್ನು ನೀಡಲಾಗಿದೆ.

ಬೇಸಿಗೆ ಶಿಬಿರದ ಬ್ಯಾಚ್‌ಗಳು

ಈಗಾಗಲೇ ಪ್ರಥಮ ಬ್ಯಾಚ್ ಆರಂಭಗೊಂಡಿದ್ದು, ಏಪ್ರಿಲ್ ೨೨ರಂದು ತರಬೇತಿ ಅಂತ್ಯಗೊಳ್ಳಲಿದೆ. ಏಪ್ರಿಲ್ 23ರಿಂದ ಎರಡನೇ ಬ್ಯಾಚ್‌ನ ತರಬೇತಿ ಆರಂಭಗೊಳ್ಳಲಿದೆ. ಮೇ 14ರಿಂದ ಮೂರನೇ ಬ್ಯಾಚ್‌ನ ತರಬೇತಿ ನಡೆಯಲಿದೆ. ಹೀಗೆ ಮೂರು ಬ್ಯಾಚ್‌ಗಳಾಗಿ ಪುತ್ತೂರು ಅಕ್ವೆಟಿಕ್ ಕ್ಲಬ್ ತರಬೇತಿ ನೀಡುತ್ತಿದೆ. ಇದರಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪ್ರತ್ಯೇಕ ವಿಭಾಗಗಳನ್ನೂ ತೆರೆಯಲಾಗಿದೆ. 3 ವಾರಗಳ ತರಬೇತಿಯಲ್ಲಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಸೆಷನ್ಸ್‌ಗಳು ನಡೆಯಲಿವೆ. ಈ ಎಲ್ಲಾ ಸೆಷನ್ಸ್‌ಗಳನ್ನು ಅಂತಾರಾಷ್ಟ್ರೀಯ ಶೈಲಿಯಲ್ಲಿ ತರಬೇತು ಪಡೆದ ಈಜು ಪಟುಗಳು ನಡೆಸಿಕೊಡಲಿದ್ದಾರೆ. ಸಮಯ ಹೀಗಿದೆ – ಬೆಳಿಗ್ಗೆ 6.30ರಿಂದ 7.15, 7.30ರಿಂದ 8.15, 8.30ರಿಂದ 9.15, 9.30ರಿಂದ 10.15, ಮಧ್ಯಾಹ್ನ 3.30ರಿಂದ 4.15, 4.30ರಿಂದ 5.15, ಸಂಜೆ 6.30ರಿಂದ 7.15, 7.30ರಿಂದ 8.15ರವರೆಗೆ ತರಬೇತಿಯ ಅವಧಿಯನ್ನು ನಿಗದಿಗೊಳಿಸಲಾಗಿದೆ.

 

 

 

 

LEAVE A REPLY

Please enter your comment!
Please enter your name here