ಬೆಲೆ ಏರಿಕೆಯಿಂದ ಜನಜೀವನ ಅಸ್ತವ್ಯಸ್ಥವಾಗಿದ್ದರೂ ಬಿಜೆಪಿ ಕೋಮುಗಲಭೆಗೆ ಸಂಚು ನಡೆಸುತ್ತಿದೆ: ಎಂ ಬಿ ವಿಶ್ವನಾಥ

0

ಪುತ್ತೂರು: ನಿರಂತರ ಬೆಲೆ ಏರಿಕೆಯಿಂದ ಜನ ಮೂರು ಹೊತ್ತಿನ ಊಟಕ್ಕೂ ತತ್ವಾರ ಪಡೆಯುವಂತ ವಾತಾವರಣ ಸೃಷ್ಟಿಯಾಗಿದೆ. ಯುವಕರಿಗೆ ಉದ್ಯೋಗವಿಲ್ಲ, ವಿದ್ಯಾವಂತರು ಕೆಲಸವಿಲ್ಲದೆ ಯಾತನೆ ಅನುಭವಿಸುತ್ತಿದ್ದು ಈ ವೇಳೆ ಬಿಜೆಪಿ ಓಟಿನ ರಾಜಕೀಯಕ್ಕಾಗಿ ದೇಶದಲ್ಲಿ, ರಾಜ್ಯದಲ್ಲಿ ಕೋಮುಗಲಭೆ ನಡೆಸಲು ಸಂಚು ನಡೆಸುತ್ತಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಆರೋಪಿಸಿದರು.
ಅವರು ಎ. 9 ರಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಪಂಚರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಇಂಧನ ಬೆಲೆಯಲ್ಲಿ ಕೊಂಚ ಇಳಿಕೆ ಮಾಡಲಾಗಿತ್ತು, ಮತ ಎಣಿಕೆಯ ಬಳಿಕ ಮತ್ತೆ ಏರಿಸಿದ್ದಾರೆ. ತಮ್ಮ ಕೆಲಸ ಆಗುವ ತನಕ ಅಥವಾ ಚುನಾವಣೆಯಲ್ಲಿ ಮತ ಗಿಟ್ಟಿಸಿಕೊಳ್ಳುವುದಕ್ಕೆ ಮಾತ್ರ ಇಂಧನ ಬೆಲೆ ಇಳಿಸಿ ಆ ಬಳಿಕ ಮತ್ತೆ ಏರಿಕೆ ಮಾಡಿದ್ದು ಬಿಜೆಪಿಗೆ ಜನರ ಹಿತ ಬೇಕಿಲ್ಲ ಅವರಿಗೆ ಚುನಾವಣೆಯಲ್ಲಿ ಗೆಲ್ಲಬೇಕು ಎಂಬುದೇ ಉದ್ದೇಶವಾಗಿದ್ದು ಅದಕ್ಕೆ ಯಾವ ಕೆಲಸಕ್ಕೆ ಬೇಕಾದರೂ ಕೈ ಹಾಕುತ್ತಾರೆ, ಕೈ ಜೋಡಿಸುತ್ತಾರೆ ಎಂದು ಹೇಳಿದ ಅವರು ಬೆಲೆ ಏರಿಕೆಯಿಂದ ದೇಶದಲ್ಲಿ, ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಹೇಳಿದರು.

ಯುವಕರ ತಲೆಗೆ ಹುಳಬಿಟ್ಟಿದ್ದಾರೆ
ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕಾಗಿ ಈಗಲೇ ಬಿಜೆಪಿ ಸಿದ್ದತೆ ಮಾಡಿಕೊಂಡಿದೆ. ಜನರ ಧಾರ್ಮಿಕ ಭಾನವೆಗಳ ಜೊತೆ ಚೆಲ್ಲಾಟವಾಡುವ ಕೆಲಸವನ್ನು ಮಾಡುತ್ತಿದೆ. ಹಿಜಬ್, ಆಝಾನ್, ವ್ಯಾಪಾರ ನಿರ್ಭಂಧ, ಹಲಾಲ್ ಕಟ್ , ಜಟ್ಕಾ ಕಟ್ ಹೀಗೇ ಹಲವು ಬಾವನಾತ್ಮ ವಿಚಾರವನ್ನು ಮುಂದಿಟ್ಟು ಎಳೆ ಯುವಕರ ತಲೆಗೆ ಧರ್ಮದ ಬಗ್ಗೆ ಕೆಟ್ಟಭಾವನೆಯನ್ನು ತುಂಬಿ ಅವರು ರಸ್ತೆಗೆ ಇಳಿಸಿದ್ದಾರೆ. ಏನೂ ಗೊತ್ತಿಲ್ಲದ ಮುಗ್ದ ಮನಸ್ಸುಗಳಲ್ಲಿ ವಿಷ ಬೀಜವನ್ನು ಬಿತ್ತುವ ಮೂಲಕ ಬಿಜೆಪಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ. ಇದರಿಂದ ಹಿಂದೂ ಧರ್ಮಕ್ಕೆ ಏನೂ ಲಾಭವಿಲ್ಲ. ಹಿಂದೂ ಧರ್ಮ ಎಲ್ಲರನ್ನೂ ಆದರದಿಂದ ಕಾನುವ ಧರ್ಮವಾಗಿದೆ, ಬಿಜೆಪಿ ಧರ್ಮವನ್ನು ರಾಜಕೀಯಕ್ಕೆ ಬಳಸಿ ಕೋಮುಗಲಭೆ ನಡಸುತ್ತಿದೆ ಎಂದು ಹೇಳಿದರು.ಶಾಸಕರು, ಮಂತ್ರಿಗಳು 4೦ ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗೆ ಪತ್ರಬರೆದರೂ ಮೋದಿ ಕ್ರಮಕೈಗೊಂಡಿಲ್ಲ ಯಾಕೆ? ಎಂದು ಹೇಳಿದ ಅವರು ಕಮಿಷನ್ ಎಲ್ಲರಿಗೂ ಹಂಚಲಾಗುತ್ತದೆ ಎಂದು ಆರೋಪಿಸಿದರು.

ಕಾಶ್ಮೀರ್ ಫೈಲ್ಸ್ ಬಂಡಲ್ ಸಿನಿಮಾ
ಕಾಶ್ಮೀರ್ ಫೈಲ್ಸ್ ಸಿನಿಮಾ ತೋರಿಸಿ ಜನರನ್ನು ಮರಳು ಮಾಡಲು ಯತ್ನಿಸಿದ್ದಾರೆ. ಈ ಸಿನಿಮಾ ಬಿಜೆಪಿ ಕೃಪಾಪೋಷಿತ ಸಿನಿಮಾ ಆಗಿದೆ. ಇದರಿಂದ ಸಿನಿಮಾ ಮಾಡಿದವನಿಗೆ, ನಟ, ನಟಿಯರಿಗೆ ಹಣ ಮತ್ತು ಪ್ರಚಾರ ಸಿಕ್ಕಿದೆ, ಬಿಜೆಪಿ ಮೊಸಳೆಕಣ್ಣೀರು ಹಾಕಿ ಜನರನ್ನು ಉದ್ರೇಕಿಸಿದ್ದು ಬಿಟ್ಟರೆ ಸಿನಿಮಾ ಬರೇ ಬಂಡಲ್ ಎಂದು ಎಂ ಬಿ ವಿಶ್ವನಾಥ್ ಹೇಳಿದರು. ಕಾಶ್ಮೀರದಲ್ಲಿ ಪಂಡಿತರಿಗೆ ತೊಂದರೆಯಾದಾಗ ಕೇಂದ್ರದಲ್ಲಿ ಬಿಜೆಪಿ ಸಮ್ಮಿಶ್ರ ಸರಕಾರವೇ ಇತ್ತು ಯಾಕೆ ಕಾನೂನುಕ್ರಮಕ್ಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದರು. ಭಾವನಾತ್ಮಕ ವಿಚಾರ ಮುಂದಿಟ್ಟು ಯುವಕರಲ್ಲಿ ಕೋಮು ಜ್ವಾಲೆ ಹಚ್ಚಿ ಏನಾದರೂ ಹೆಚ್ಚು ಕಮ್ಮಿಯಾದರೆ ಹೆಣ ನೋಡಲು ಬರುತ್ತಾರೆ ಮತ್ತೆ ಬಿಜೆಪಿಯವರು ತಿರುಗಿ ನೋಡುವುದಿಲ್ಲ ಎಂಬುದನ್ನು ಪ್ರತೀಯೊಬ್ಬ ಯುವಕನ ತಂದೆ ತಾಯಿ ಆಲೋಚಿಸಿ, ತಮ್ಮ ಮಕ್ಕಳ ಭವಿಷ್ಯವನ್ನು ಹಾಳುಮಾಡದಿರಿ ಎಂದು ಮನವಿ ಮಾಡಿದ ಅವರು ಮಾನವೀಯತೆಗೆ ಮಿಗಿಲಾದುದು ಯಾವುದೂ ಇಲ್ಲ. ನಾವು ಜೀವನದಲ್ಲಿ ಸೋತಾಗ ನಮ್ಮೊಂದಿಗೆ ಯಾರೂ ಇರುವುದಿಲ್ಲ. ಧರ್ಮದ ಹೆಸರಿನಲ್ಲಿ ದೊಂಬಿ, ಗಲಾಟೆ ಮಾಡಿ ಸಾಧಿಸಿದ್ದೂ ಏನೂ ಇಲ್ಲ. ಇತಿಹಾಸ ನಮಗೆ ಪಾಠವಾಗಬೇಕು ಎಂದು ಹೇಳಿದರು.

3೦ ಸೀಟು ಬರುತ್ತದೆ ಎಂದು ಗೊತ್ತಾಗಿ ಬಿಜೆಪಿ ರೋಡಿಗಿಳಿದಿದೆ: ಅಮಲ
ಸಂಘಪರಿವಾರ ನಡೆಸಿದ ಗುಪ್ತಚರ ವರದಿಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 3೦ ಸೀಟಿ ಪಡೆಯಲಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಮುಗ್ದ ಯುವಕರನ್ನು ಬಳಸಿ ಕೋಮುಗಲಭೆ ನಡೆಸುತ್ತಿದೆ. ಇವರಿಗೆ ಎಸ್‌ಡಿಪಿಐ ಪರೋಕ್ಷವಾಗಿ ಬೆಂಬಲವನ್ನು ನೀಡುತ್ತಿದೆ.ಹಿಂಸೆಗೆ ಪ್ರಚೋಧನೆ ನೀಡುವುದೇ ಬಿಜೆಪಿ ಉದ್ದೇಶವಾಗಿದೆ ಎಂದು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಮಲರಾಮಚಂದ್ರ ಹೇಳಿದರು.ಬಿಜೆಪಿಯ ಬಗ್ಗೆ ಜನ ರೋಸಿ ಹೋಗಿದ್ದಾರೆ, ಇನ್ನು ಅಧಿಕಾರಕ್ಕೆ ಬಂದರೆ ಬದುಕುವುದು ಕಷ್ಟ ಎಂಬುದು ಬೆಲೆ ಏರಿಕೆಯಿಂದ ಜನರಿಗೆ ಗೊತ್ತಾಗಿದೆ. ದೇಶದಲ್ಲಿ ಪ್ರಕ್ಷುಬ್ದ ವಾತಾವರಣ ಇದೆ. ಸರಕಾರ ಒಮ್ಮೆ ಮುಗಿದರೆ ಸಾಕಿತ್ತು ಎಂಬ ಭಾವನೆ ಜನರಲ್ಲಿದೆ. ಇದಕ್ಕಾಗಿ ಬಿಜೆಪಿ ತನ್ನ ಪರಿವಾರವನ್ನು ಬಳಸಿ ಜನರ ನಡುವೆ ವೈಷಮ್ಯವನ್ನು ಹುಟ್ಟು ಹಾಕುತ್ತಿದೆ ಇದನ್ನು ಜನ ಸಹಿಸಲ್ಲ ಎಂದು ಹೇಳಿದರು.

ಯುವಕರನ್ನು ಹಿಂಸೆಗೆ ಛೂ ಬಿಟ್ಟ ಶಾಸಕರು ಅದೇ ಯುವಕರ ಮೇಲೆ ಕೇಸು ಆದಾಗ ಕಿಡಗೇಡಿಗಳು ಎಂದು ಹೇಳುತ್ತಿದ್ದಾರೆ. ಬಿಜೆಪಿಯವರ ಪ್ರಚೋಧನೆಗೆ ಒಳಗಾಗಿ ಶಿರಾಡಿಯಲ್ಲಿ ಯುವಕರು ಕಾನೂನು ಕೈಗೆತ್ತಿಕೊಂಡಿದ್ದಾರೆ. ರಕ್ಷಿಸಿ ಎಂದು ಶಾಸಕರ ಬಳಿ ಬಂದಾಗ ಓಡಿಸಿದ್ದಾರೆ. ಕಾರ್ಯಕರ್ತರು ದಿಕ್ಕಾರ ಕೂಗಿದ್ದಾರೆ. ಪುತ್ತೂರಿನ ಇತಿಹಾಸದಲ್ಲೇ ತನ್ನದೇ ಪಕ್ಷದ ಕಾರ್ಯಕರ್ತರಿಂದ ಯಾವ ಶಾಸಕರೂ ಧಿಕ್ಕಾರ ಕೂಗು ಕೇಳಿರಲಿಲ್ಲ ಎಂದು ಹೇಳಿದ ಅವರು ಭಾರತವನ್ನು ತಾಲಿಬಾನ್ ಮಾಡಲು ಬಿಜೆಪಿ ಸಿದ್ದತೆ ನಡೆಸಿದೆ, ಹಿಂದೂ ಧರ್ಮಕ್ಕೆ ಬಿಜೆಪಿ ಹಾನಿ ಮಾಡುತ್ತಿದೆ, ಉದ್ಯೋಗ ಕೊಡುವ ಬದಲು ಯುವಕರ ಕೈಗೆ ತಳವಾರು ಕೊಡುತ್ತಿದೆ. ಬಡವರ ಮಕ್ಕಳೇ ಬೀದಿಹೆಣಗಳಾಗುತ್ತಿದ್ದಾರೆ ಎಂದು ಹೇಳಿದರು.

ತಮ್ಮ ನ್ಯೂನತೆಯನ್ನು ಮುಚ್ಚಿ ಹಾಕಲು ಬಿಜೆಪಿ ರಾಜ್ಯದ ನಾಲ್ಕು ಚಾನೆಲ್‌ಗಳಿಗೆ ಗುತ್ತಿಗೆ ನೀಡಿದ್ದು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಬ್ಲಾಕ್ ಉಪಧ್ಯಕ್ಷ ಮೌರಿಶ್‌ಮಸ್ಕರೇನಸ್ ಆರೋಪಿಸಿದರು.

LEAVE A REPLY

Please enter your comment!
Please enter your name here