ಏಕಲವ್ಯ ಪ್ರಶಸ್ತಿ ಪುರಸ್ಕೃತ ಪ್ರಶಾಂತ್ ರೈಯವರಿಗೆ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನಿಂದ ಸನ್ಮಾನ

0

  • ಪ್ರಶಾಂತ್‌ರವರು ಭಾರತ ತಂಡಕ್ಕೆ ಆಡಬೇಕೆನ್ನುವ ಕನಸು ನಮ್ಮದು-ಚಂದ್ರಹಾಸ ಶೆಟ್ಟಿ

ಪುತ್ತೂರು: ಕರ್ನಾಟಕದ ಕಬಡ್ಡಿ ಆಟಗಾರರ ಪೈಕಿ ಪ್ರಶಾಂತ್ ರೈಯವರು ನಂಬರ್ ವನ್ ಆಟಗಾರರಾಗಿದ್ದಾರೆ. ಆದ್ದರಿಂದ ಪ್ರಶಾಂತ್ ರೈಯವರು ಭಾರತ ತಂಡಕ್ಕೆ ಆಡಬೇಕು ಎನ್ನುವ ಕನಸು ನಮ್ಮದು ಎಂದು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಗೌರವಾಧ್ಯಕ್ಷರಾದ ಎನ್.ಚಂದ್ರಹಾಸ ಶೆಟ್ಟಿಯವರು ಹೇಳಿದರು.

 

ರಾಜ್ಯ ಸರಕಾರದಿಂದ ಕಬಡ್ಡಿ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗೆ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ಪುರಸ್ಕೃತರಾಗಿ ಆಯ್ಕೆಯಾಗಿರುವ ಪ್ರೊ ಕಬಡ್ಡಿ ಆಟಗಾರ, ಪಾಟ್ನಾ ಪೈರೆಟ್ಸ್ ತಂಡದ ಕಪ್ತಾನ ಪ್ರಶಾಂತ್ ರೈ ಕೈಕಾರರವರಿಗೆ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ವತಿಯಿಂದ ಏ.೦೯ ರಂದು ದರ್ಬೆ ಬಳಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಬಡ್ಡಿಯಲ್ಲಿನ ಸಾಧಕ ಪ್ರಶಾಂತ್ ರೈ ಸೇರಿದಂತೆ ಅನೇಕ ಪ್ರತಿಭೆಗಳಿಗೆ ವಿಜಯಾ ಬ್ಯಾಂಕಿನಲ್ಲಿ ಉದ್ಯೋಗ ದೊರಕಿಸಿಕೊಡುವಲ್ಲಿ ಜಯಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಹಾಗೂ ವಿಜಯಾ ಬ್ಯಾಂಕ್ ಜನರಲ್ ಮ್ಯಾನೇಜರ್ ಜಯಕರ ಶೆಟ್ಟಿಯವರು ಪ್ರಮುಖ ಕಾರಣರಾಗಿದ್ದಾರೆ. ಪ್ರಶಾಂತ್ ರೈಯವರನ್ನು ವಿಜಯಾ ಬ್ಯಾಂಕಿಗೆ ಸೇರ್ಪಡೆಗೊಳಿಸುವುದು ಅಷ್ಟೊಂದು ಸುಲಭದಾಯಕವಾಗಿರಲಿಲ್ಲ. ಆದರೆ ಇಂದು ಪ್ರಶಾಂತ್ ರೈಯವರು ಕಬಡ್ಡಿಯಲ್ಲಿ ಮಾಡಿದ ಸಾಧನೆಯನ್ನು ಗಮನಿಸಿದಾಗ ಪ್ರಶಾಂತ್ ರೈಯವರನ್ನು ವಿಜಯಾ ಬ್ಯಾಂಕಿಗೆ ಸೇರ್ಪಡೆಗೊಳಿಸಿರುವುದು ಸಾರ್ಥಕವೆನಿಸಿದೆ. ೧೯೮೪ರಲ್ಲಿ ತಾನು ವಿಜಯಾ ಬ್ಯಾಂಕ್ ಸೇರಲು ಮಾಜಿ ಸಂಸದ ವಿನಯಕುಮಾರ್ ಸೊರಕೆಯವರು ಕಾರಣರಾಗಿದ್ದು ಇಂದಿಗೂ ಅವರನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಸರಳ ಸಜ್ಜನ ವ್ಯಕ್ತಿತ್ವದ ಪ್ರಶಾಂತ್ ರೈಯವರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಪುರಸ್ಕಾರಗಳು ಲಭಿಸಲಿ ಎಂಬುದೇ ನಮ್ಮ ಹಾರೈಕೆಯಾಗಿದೆ ಎಂದರು.

ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮೆಲ್ಲರ ಹೆಮ್ಮೆಯ ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್ ರೈಯವರಿಗೆ ಏಕಲವ್ಯ ಪ್ರಶಸ್ತಿ ಒಲಿದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಗ್ರಾಮೀಣ ಪ್ರದೇಶದಿಂದ ರಾಷ್ಟ್ರೀಯ ಮಟ್ಟಕ್ಕೆ ಪ್ರಶಾಂತ್ ರೈಯವರು ಇಂದು ಗುರುತಿಸಿಕೊಳ್ಳಲು ಅವರು ಕಬಡ್ಡಿಯಲ್ಲಿ ಮಾಡಿದ ನಿರಂತರ ಪರಿಶ್ರಮದ ಸಾಧನೆಯಾಗಿದೆ. ಕ್ರೀಡೆಗೆ ಪ್ರಸಿದ್ಧಿ ಪಡೆದ ಫಿಲೋಮಿನಾ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಕಬಡ್ಡಿ ಕೋಚ್ ಹಬೀಬ್ ಮಾಣಿರವರ ಪ್ರೋತ್ಸಾಹದಿಂದ ಬೆಳೆದು ಪ್ರತಿಷ್ಠಿತ ವಿಜಯಾ ಬ್ಯಾಂಕಿನಲ್ಲಿ ಎನ್.ಚಂದ್ರಹಾಸ ಶೆಟ್ಟಿಯವರ ಮುಂದಾಳತ್ವದಲ್ಲಿ ಉದ್ಯೋಗ ದಕ್ಕಿರುವುದು ಮತ್ತು ಕಬಡ್ಡಿಯಲ್ಲಿ ಮಾಡಿರುವ ಸಾಧನೆಗೆ ಒಲಿದಿರುವಂತಹ ಏಕಲವ್ಯ ಪ್ರಶಸ್ತಿ ನಿಜಕ್ಕೂ ಪ್ರಶಾಂತ್‌ರವರ ಪ್ರತಿಭೆಗೆ ಸಿಕ್ಕಂತಹ ಗೌರವವಾಗಿದೆ ಎಂದರು.

ಕರ್ನಾಟಕ ರಾಜ್ಯ ಅಮೆಚೂರು ಅಸೋಸಿಯೇಶನ್ ಚೇರ್‌ಮ್ಯಾನ್ ರಾಕೇಶ್ ಮಲ್ಲಿ, ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಅಧ್ಯಕ್ಷ ಸುರೇಂದ್ರ ರೈ ನೇಸರ, ಪ್ರಮುಖರಾದ ಉದ್ಯಮಿ ಶಿವರಾಂ ಆಳ್ವ, ಕೋಟಿ-ಚೆನ್ನಯ ಕಂಬಳ ಸಮಿತಿಯ ಕೋಶಾಧಿಕಾರಿ ಈಶ್ವರ್ ಭಟ್ ಪಂಜಿಗುಡ್ಡೆ, ನವನೀತ್ ಬಜಾಜ್, ರೋಶನ್ ರೈ ಬನ್ನೂರು, ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ, ಕಬಡ್ಡಿ ಕೋಚ್ ಹಬೀಬ್ ಮಾಣಿ, ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ರೈ, ಉದ್ಯಮಿ ರಝಾಕ್ ಬಿ.ಎಚ್, ರಫೀಕ್ ಎಂ.ಕೆ, ಸದಾಶಿವ ಶೆಟ್ಟಿ ಪಟ್ಟೆ, ಬಿಪಿನ್ ಶೆಟ್ಟಿ, ಅಜಿತ್ ಶೆಟ್ಟಿ ಕಡಬ, ಪ್ರವೀಣ್ ಶೆಟ್ಟಿ ಅಳಕೆಮಜಲು, ಗಂಗಾಧರ್ ಶೆಟ್ಟಿ ಕೈಕಾರ, ಸಂದೀಪ್ ರೈ ಚಿಲ್ಮೆತ್ತಾರು, ರಾಧಾಕೃಷ್ಣ ರೈ, ಬ್ಯಾಂಕ್ ಆಫ್ ಬರೋಡಾದ ಉದ್ಯೋಗಿಗಳಾದ ಪ್ರವೀಣ್ ರೈ, ಧನಂಜಯ ರೈರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಏಕಲವ್ಯ ಪ್ರಶಸ್ತಿ ಪುತ್ತೂರಿಗೆ ಗೌರವ…
ನನ್ನ ಕಬಡ್ಡಿ ಆಟದ ಪಯಣದಲ್ಲಿ ಸಾಕಷ್ಟು ಎಡರು-ತೊಡರುಗಳನ್ನು ಅನುಭವಿಸಿ ಮುಂದೆ ಸಾಗಿದ್ದೇನೆ. ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾದಾಗ ನನಗೆ ಬಹಳ ಸಂತಸ ತಂದಿದೆ. ನಾನು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಚಂದ್ರಣ್ಣ, ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಸರ್ ಹಾಗೂ ಕೋಚ್ ಹಬೀಬ್ ಸರ್. ಎಲ್ಯಾಸ್ ಸರ್ ಇಲ್ಲದಿರುತ್ತಿದ್ದರೆ ನಾನು ಕಾಲೇಜಿಗೆ ಬರ‍್ತಾನೇ ಇರ್ಲಿಲ್ಲ. ಹಳ್ಳಿ ಪ್ರದೇಶದಿಂದ ಬಂದ ನನಗೆ ಸಾಧನೆಗೈಯಲು ಎಲ್ಲರ ಪ್ರೀತ್ಯಾದರ, ಆಶೀರ್ವಾದ ಕಾರಣವಾಗಿದೆ. ನನಗೆ ಒಲಿದಿರುವ ಈ ಏಕಲವ್ಯ ಪ್ರಶಸ್ತಿ ಪುತ್ತೂರಿಗೆ ದಕ್ಕಿದಂತಹ ಗೌರವವಾಗಿದೆ. ಪ್ರಶಾಂತ್ ರೈ ಕೈಕಾರ, ಏಕಲವ್ಯ ಪ್ರಶಸ್ತಿ ಪುರಸ್ಕೃತರು

LEAVE A REPLY

Please enter your comment!
Please enter your name here