ಎನ್.ಎಸ್.ಯು.ಐಯಿಂದ ಉಕ್ರೇನ್ ನಲ್ಲಿ ಮೃತಪಟ್ಟ ವಿದ್ಯಾರ್ಥಿಗೆ ಶ್ರದ್ಧಾಂಜಲಿ,ಅಲ್ಲಿರುವ ವಿದ್ಯಾರ್ಥಿಗಳನ್ನು ಶೀಘ್ರವೇ ಕರೆತರುವಂತೆ ಆಗ್ರಹಿಸಿ ಪ್ರತಿಭಟನೆ

0

ಪುತ್ತೂರು; ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಮೃತಪಟ್ಟ ಕರ್ನಾಟಕದ ವಿದ್ಯಾರ್ಥಿ ನವೀನ್ ಶೇಖರಪ್ಪರವರಿಗೆ ಶ್ರದ್ಧಾಂಜಲಿ ಸಭೆ ಮತ್ತು ಭಾರತೀಯ ವಿದ್ಯಾರ್ಥಿಗಳನ್ನು ಶೀಘ್ರವೇ ದೇಶಕ್ಕೆ ಕರೆತರುವಂತೆ ಆಗ್ರಹಿಸಿ ಎನ್.ಎಸ್.ಯು.ಐಯಿಂದ ಮಾ.4ರಂದು ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಯವರು, ರಷ್ಯಾ-ಉಕ್ರೇನ್ ಮಧ್ಯೆ ನಡೆಯುವ ಯುದ್ದದಲ್ಲಿ ಉಕ್ರೇನ್ ದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವಿಗೆ ಹಾಗೂ ವಿದ್ಯಾರ್ಥಿಗಳು ಸಂಕಷ್ಟದಲ್ಲಿರಲು ಕೇಂದ್ರ ಸರಕಾರದ ನಿರ್ಲಕ್ಷ್ಯವೇ ಕಾರಣವಾಗಿವೆ. ಅಲ್ಲಿ ವಿದ್ಯಾರ್ಥಿಗಳು ಜೀವ ಭಯದಿಂದ ಆತಂಕದಲ್ಲಿದ್ದರೆ ಇಲ್ಲಿ ಪೋಷಕರು ನಿರಂತರವಾಗಿ ಕಣ್ಣೀರು ಸುರಿಸುತ್ತಿದ್ದಾರೆ. ಅಲ್ಲಿರುವ ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆತರುವಲ್ಲಿ ಕೇಂದ್ರ ಸರಕಾರ ದೊಡ್ಡ ಮಟ್ಟದ ಪ್ರಯತ್ನ ಮಾಡುತ್ತಿಲ್ಲ. ಉಕ್ರೇನ್ ನಿಂದ ವಿಮಾನದಲ್ಲಿ ಬಂದವರನ್ನು ಸ್ವಾಗತಿಸುವ ಮೂಲಕ ಸುಳ್ಳು ಪ್ರಚಾರ ಮಾಡುತ್ತಿದೆ. ದೇಶದ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಧಾನಿ, ವಿದೇಶಾಂಗ ಸಚಿವರು, ಗೃಹ ಸಚವರರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿ ಕರೆತರಯವಲ್ಲಿ ಸಂಪೂರ್ಣವಾಗಿ ವಿಫಲಾಗಿದ್ದಾರೆ. ಈ ದೇಶದ ಸಂಸದರು, ಸಚಿವರು ಎಲ್ಲಿದ್ದಾರೆ. ಅವರ್ಯಾರು ಅಲ್ಲಿಗೆ ಉಕ್ರೇನ್ ಗೆ ಹೋಗಿಲ್ಲ. ರಾಜ್ಯದ ಇಪ್ಪತ್ತೈದು ಮಂದಿ ಸಂಸದರು ಏನೂ ಮಾಡಿಲ್ಲ. ಮಾನವೀಯತೆ ಇಲ್ಲದ ಬಿಜೆಪಿ ಶಾಸಕರು ವಿದ್ಯಾರ್ಥಿಗಳ ಸಮಸ್ಯೆಗೆ ಹೇಗೆ ಸ್ಪಂಧಿಸುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಜವಾಬ್ದಾರಿ ಅರಿತು ವಿದ್ಯಾರ್ಥಿಗಳನ್ನು ರಕ್ಷಿಸಿ ಕರೆತರುವಂತೆ ಅವರು ಆಗ್ರಹಿಸಿದರು.

ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಮಾತನಾಡಿ, ಭಾರತದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆಯಲು ಕೋಟ್ಯಾಂತರ ರೂಪಾಯಿಯ ಆವಶ್ಯಕತೆ ಇದೆ. ಆದರೆ ಉಕ್ರೇನ್ ನಲ್ಲಿ ಕಡಿಮೆ ಖರ್ಚಿನಲ್ಲಿ ವಿದ್ಯಾಭ್ಯಾಸ ಪಡೆಯಲು ಅವಕಾಶವಿದ್ದು ವಿದ್ಯಾರ್ಥಿಗಳು ಅಲ್ಲಿಗೆ ತೆರಳುತ್ತಾರೆ. ಇದನ್ನು ಕೇಂದ್ರ ಸರಕಾರ ಅರಿತುಕೊಳ್ಳಬೇಕು. ಆಪರೇಶನ್ ಗಂಗಾ ಯೋಜನೆಯು ಯಶಸ್ವಿಯಾಗಿಲ್ಲ ಎಂದು ಆರೋಪಿಸಿದರು.

ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್ ಮಾತನಾಡಿ, ರೈತ ವಿರೊಧಿ ಕಾಯಿದೆ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಿರತ ರೈತರನ್ನು ನಿರ್ಲಕ್ಷ್ಯ ಮಾಡಿದಂತೆ ಕೇಂದ್ರ ಸರಕಾರ ಉಕ್ರೇನ್ ನಲ್ಲಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಆಪಾದನೆ ಮಾಡಿದರು.

ಎನ್.ಎಸ್.ಯು.ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ ಮಾತನಾಡಿ, ಉಕ್ರೇನ್ ನಲ್ಲಿ ಮೃತಪಟ್ಟ ಕರ್ನಾಟಕದ ರಾಣಿಬೆನ್ನೂರಿನ ವಿದ್ಯಾರ್ಥಿ ನವೀನ್ ಶೇಖರಪ್ಪರವರಿಗೆ ದೊಡ್ಡ ಮೊತ್ತದ ಪರಿಹಾರ ನೀಡಬೇಕು ಹಾಗೂ ಅಲ್ಲಿರುವ ಸಾವಿರಾರು ವಿದ್ಯಾರ್ಥಿಗಳನ್ನು ಶೀಘ್ರವೇ ಭಾರತಕ್ಕೆ ಕರೆತರುವಂತೆ ಆಗ್ರಹಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಪ್ರಮುಖರಾದ ವಲೇರಿಯನ್ ಥೋರಸ್, ಗಂಗಾಧರ ಶೆಟ್ಟಿ ಎಲಿಕ, ರವಿಪ್ರಸಾದ್ ಶೆಟ್ಟಿ ಬನ್ನೂರು, ಎನ್.ಎಸ್.ಯು.ಐ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಕೌಶಿಕ್ ಗೌಡ, ಬಶೀರ್ ಪರ್ಲಡ್ಕ, ಎಂ.ಬಿ ಇಸ್ಮಾಯಿಲ್, ಅಸಾಹಿಲ್, ಭವಿಷ್ ವಿ ಸುವರ್ಣ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಕಾಂಗ್ರೆಸ್ ಮುಖಂಡ ಇಸಾಖ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here