ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಸಂಭ್ರಮ

0

  • ಇತಿಹಾಸ ಸೃಷ್ಟಿಸಿದ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ, ವಿವಿಧ ಕಾಮಗಾರಿಗಳ ಉದ್ಘಾಟನೆ

 

ಪುತ್ತೂರು: ಸುಮಾರು ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಪುತ್ತೂರು ತಾಲೂಕು ಸರ್ವೆ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವರ ಶಿಲಾಮಯ ದೇವಸ್ಥಾನದಲ್ಲಿ ಶ್ರೀ ದೇವರ ಪುನಃ ಪ್ರತಿಷ್ಠೆ, ಅಷ್ಠಬಂಧ ಬ್ರಹ್ಮಕಲಶಾಭಿಷೇಕ ಹಾಗೂ ಉತ್ಸವ ಕಾರ್ಯಕ್ರಮಗಳು ಸಾಮೂಹಿಕ ಪ್ರಾರ್ಥನೆಯೊಂದಿಗೆ ಫೆ.೦೧ ರಂದು ಆರಂಭಗೊಂಡಿತು. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಲಿದ್ದು, ಫೆ.೦೬ ರಂದು ಶ್ರೀ ದೇವರ ಪುನಃಪ್ರತಿಷ್ಠೆ ಅಷ್ಠಬಂಧ ಬ್ರಹ್ಮಕಲಶಾಭಿಷೇಕ ನಡೆಯಲಿದೆ.ಫೆ.೦೧ ರಂದು ದೇವಸ್ಥಾನದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಉಗ್ರಾಣ ಮುಹೂರ್ತ, ಹಸಿರುವಾಣಿ ಸಮರ್ಪಣಾ ಮೆರವಣಿಗೆ ನಡೆಯಿತು.

ವಿವಿಧ ಕಾಮಗಾರಿಗಳ ಉದ್ಘಾಟನೆ
ಸರ್ವೆ,ಮುಂಡೂರು,ಕೆದಂಬಾಡಿ ಹಾಗೂ ಕೆಯ್ಯೂರು ಗ್ರಾಮದ ಭಕ್ತಾಧಿಗಳು ಸೇರಿದಂತೆ ಊರಪರವೂರ ದಾನಿಗಳ ಸಹಕಾರದೊಂದಿಗೆ ವರ್ಷದೊಳಗೆ ನಿರ್ಮಾಣಗೊಂಡ ಶ್ರೀ ವಿಷ್ಣುಮೂರ್ತಿ ದೇವಸ್ಥಾನವು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಸಂಪೂರ್ಣ ಶಿಲಾಮಯ ದೇವಸ್ಥಾನವಾಗಿದ್ದು ಪ್ರಕೃತಿರಮಣೀಯ ಪ್ರದೇಶದಲ್ಲಿದೆ. ದೇವಸ್ಥಾನದಲ್ಲಿ ಸರಕಾರ ಮತ್ತು ದಾನಿಗಳ ನೆರವಿನೊಂದಿದೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಅದರ ಉದ್ಘಾಟನೆ ನಡೆಯಿತು. ದೇವಸ್ಥಾನಕ್ಕೆ ಎದುರುಭಾಗದಿಂದ ಬರಲು ಅನುಕೂಲವಾಗುವಂತೆ ಸುಂದರ ಶಿಲಾಮಯ ಮೆಟ್ಟಿಲುಗಳನ್ನು ರಚನೆ ಮಾಡಲಾಗಿದ್ದು ಇದನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಸ್.ನಾಗೇಶ್ ರಾವ್ ದೀಪ ಬೆಳಗಿಸಿ, ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಶಾಸಕರ ಅನುದಾನದಲ್ಲಿ ದೇವಳದ ಹೊರಾಂಗಣಕ್ಕೆ ಸಂಪೂರ್ಣ ಇಂಟರ್‌ಲಾಕ್ ಅಳವಡಿಕೆ ಮಾಡಲಾಗಿದ್ದು ಇದನ್ನು ಅಜಲಾಡಿಬೀಡು ಸದಾಶಿವ ರೈ ಸೋಂಪಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ದೇವಳದಲ್ಲಿ ಹೊರಾಂಗಣದಲ್ಲಿ ನಡೆಯುವ ಭಜನಾ ಕಾರ್ಯಕ್ರಮವನ್ನು ಅಶೋಕ್ ರೈ ಸೊರಕೆ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಪ್ರತಿದಿನ ಅನ್ನದಾನ ನಡೆಯಲಿದ್ದು ಇದರ ಪಾಕಶಾಲೆಯಲ್ಲಿ ಶಿವರಾಮ ರೈ ಸೊರಕೆ ಮತ್ತು ಮೀರಾ ಎಸ್.ರೈ ದೀಪ ಬೆಳಗಿಸಿ ಉದ್ಘಾಟಿಸಿದರು. ಸಾಂಸ್ಕೃತಿಕ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿರುವ ಮುಖ್ಯವೇದಿಕೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ದೀಪ ಬೆಳಗಿಸಿ ಉದ್ಘಾಟಿಸಿದರು. ದೇವಸ್ಥಾನದ ನವೀಕೃತ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ದಾನಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರು ಸ್ವಿಚ್ ಆನ್ ಮಾಡುವ ಮೂಲಕ ಉದ್ಘಾಟಿಸಿದರು. ದೇವಳದ ಕೊಳವೆಬಾವಿಯನ್ನು ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು ದೀಪ ಬೆಳಗಿಸಿ ಉದ್ಘಾಟಿಸಿದರು. ಬ್ರಹ್ಮಕಲಶೋತ್ಸವದ ಕಾರ್ಯಾಲಯವನ್ನು ವೈ.ಹರೀಶ್ ಎಲಿಯತ್ತಾಯ ಬೆಂಗಳೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಂಡೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಪ್ರಾಯೋಜಿತ ಭದ್ರತಾ ಕೊಠಡಿಯ ಲಾಕರ್ ಅನ್ನು ಜಯಪ್ರಕಾಶ್ ರೈ ಚೆಲ್ಯಡ್ಕ ಉದ್ಘಾಟಿಸಿದರು.

ಇತಿಹಾಸ ಸೃಷ್ಟಿಸಿದ ಹೊರೆಕಾಣಿಕೆ ಸಮರ್ಪಣೆ
ಎಲಿಯ ಶ್ರೀ ಕ್ಷೇತ್ರಕ್ಕೆ ಬೃಹತ್ ಹಸಿರುವಾಣಿ ಮೆರವಣಿಗೆಯು ಹೊರೆಕಾಣಿಕೆ ಸಮಿತಿಯ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತುರವರ ನೇತೃತ್ವದಲ್ಲಿ ತಿಂಗಳಾಡಿ ದೇವತಾ ಭಜನಾ ಮಂದಿರದಿಂದ ಆರಂಭಗೊಂಡಿತು. ದೇವಗಿರಿಯ ಶ್ರೀ ದೇವತಾ ಭಜನಾ ಮಂದಿರದಲ್ಲಿ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು ಬಳಿಕ ತೆಂಗಿನ ಕಾಯಿ ಒಡೆಯುವ ಮೂಲಕ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ವಿದ್ಯಾರಶ್ಮೀ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರುರವರು ಜೀರ್ಣೋದ್ದಾರ ಸಮಿತಿಗೆ ಧ್ವಜ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಿದರು. ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ಭಾವಚಿತ್ರಕ್ಕೆ ಸೀತಾರಾಮ ರೈ ಕೆದಂಬಾಡಿಗುತ್ತುರವರು ತುಳಸಿ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.

 

ಅದ್ದೂರಿ ಮರವಣಿಗೆ
ದೇವಗಿರಿಯಿಂದ ಎಲಿಯ ದೇವಸ್ಥಾನದ ತನಕ ಕಾಲ್ನಡಿಗೆಯ ಮೂಲಕ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿಶೇಷವಾಗಿ ಕುಣಿತ ಭಜನೆ, ನಾಸಿಕ್ ಬ್ಯಾಂಡ್, ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸ್ಥಳೀಯ ಸ್ತ್ರೀಯರಿಂದ ಕಲಶ ಮರವಣಿಗೆ, ಗೊಂಬೆ ಕುಣಿತ, ಕೊಂಬುವಾಳಗ, ಕೇರಳ ಶೈಲಿಯ ಚೆಂಡೆ, ಸಿಡಿಮದ್ದು ಪ್ರದರ್ಶನ ಗಮನಸೆಳೆಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಶ್ರೀ ಕ್ಷೇತ್ರ ಸೌತಡ್ಕ, ಶ್ರಿ ಮಠಂತಬೆಟ್ಟು ದೇವಸ್ಥಾನ, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಅಲ್ಲದೆ ಮೂಡಬಿದ್ರೆ, ಸುಳ್ಯ, ಬಂಟ್ವಾಳ ಇತ್ಯಾದಿ ತಾಲೂಕುಗಳಿಂದ ಹಾಗೂ ಊರಪರವೂರ ಭಕ್ತಾಧಿಗಳಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಒಟ್ಟಿನಲ್ಲಿ ಇದೊಂದು ಅಭೂತಪೂರ್ವ ಹೊರೆಕಾಣಿಕೆ ಮೆರವಣಿಗೆಯಾಗಿ ಇತಿಹಾಸ ಸೃಷ್ಟಿಸಿದೆ.

 

LEAVE A REPLY

Please enter your comment!
Please enter your name here