ಕೋಡಿಂಬಾಡಿ ಗ್ರಾ.ಪಂ ಸಾಮಾನ್ಯ ಸಭೆ

0

  • ಒಂದು ವಾರದಲ್ಲಿ ಮನೆ ನಿವೇಶನ ವಿತರಣೆಗೆ ಕ್ರಮ-ಅಧ್ಯಕ್ಷ ರಾಮಚಂದ್ರ ಪೂಜಾರಿ

ಪುತ್ತೂರು:ಮನೆ ನಿವೇಶನಕ್ಕೆ ಕಾದಿರಿಸಿದ ಮನೆ ನಿವೇಶನಗಳನ್ನು ಒಂದು ವಾರದೊಳಗೆ ಅಳತೆ ಮಾಡಿಸಿ, ಅದರ ನಕ್ಷೆ ತಯಾರಿಸಿ ನಿವೇಶನ ರಹಿತರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ ಶಾಂತಿನಗರ ಸಾಮಾನ್ಯ ಸಭೆಯಲ್ಲಿ ಭರವಸೆ ನೀಡಿದ್ದಾರೆ.


ಸಭೆಯು ಫೆ.2ರಂದು ನಡೆಯಿತು. ಸಭೆಯಲ್ಲಿ ಸದಸ್ಯ ಜಯಪ್ರಕಾಶ್ ಬದಿನಾರು ಮಾತನಾಡಿ, ಪಂಚಾಯತ್‌ನಿಂದ ಮನೆ ನಿವೇಶನಕ್ಕೆ ಕಾದಿರಿಸಿದ ಬಗ್ಗೆ ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ರಾಮಚಂದ್ರ ಪೂಜಾರಿಯವರು ಮನೆ ನಿವೇಶನಗಳನ್ನು ಒಂದು ವಾರದೊಳಗೆ 3 ಸೆಂಟ್ಸ್‌ನಂತೆ ಅಳತೆ ನಡೆಸಿ, ಗಡಿಗುರುತು ಮಾಡಿಕೊಡಲಾಗುವುದು ಎಂದು ತಿಳಿಸಿದರು. ಕಳೆದ 5-6 ವರ್ಷಗಳಿಂದ ಹಲವು ಭಾರಿ ಪ್ರಸ್ತಾಪಿಸುತ್ತಾ ಬಂದಿದ್ದೇವೆ. ಆದರೂ ಈ ತನಕ ಆಗಿಲ್ಲ. ಇನ್ನು ಒಂದು ವಾರದಲ್ಲಿ ಹೇಗೆ ನೀಡುವುದು ಎಂದು ಜಯಪ್ರಕಾಶ್ ತಿಳಿಸಿದರು. ನಿವೇಶನಕ್ಕೆ ಕಾದಿರಿಸಿದ ಜಾಗದಲ್ಲಿ ಮರಗಳಿದ್ದು ಅವುಗಳನ್ನು ತೆರವುಗೊಳಿಸದೇ ಇರುವುದರಿಂದ ವಿಳಂಭವಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. ಜಾಗ ಇದ್ದವರಿಗೆ, ಶ್ರೀಮಂತರಿಗೆ ಹಾಗೂ ಬೇರೆ ಗ್ರಾಮದವರಿಗೆ ಮನೆ ನಿವೇಶನವನ್ನು ನೀಡಬಾರದು ಎಂದು ಜಯಪ್ರಕಾಶ್ ತಿಳಿಸಿದರು. ನಿವೇಶನದ ಕುರಿತು ನಾವು ಕಳೆದ ಐದು ವರ್ಷಗಳಿಂದ ಪ್ರಯತ್ನಿಸಿದ್ದೇವೆ. ಕಾನೂನಿನ ತೊಡಕುಗಳಿರುವುದರಿಂದ ಸಾಧ್ಯವಾಗಿಲ್ಲ. ಗ್ರಾಮದ ಹೊರಗಿನವರಿಗೆ ನಿವೇಶನ ನೀಡಲಾಗುವುದಿಲ್ಲ. ಜಾಗವನ್ನು ಅಳತೆ ಮಾಡಿ ನಕ್ಷೆ ತಯಾರಿಸಿ ನಿವೇಶನವನ್ನು ನೀಡಲಾಗುವುದು ಎಂದು ಅಧ್ಯಕ್ಷ ರಾಮಚಂದ್ರ ಪೂಜಾರಿ ತಿಳಿಸಿದರು.

ಸಂಜೀವಿನಿ ಒಕ್ಕೂಟಕ್ಕೆ ನೇಮಕ-ಕಾನೂನಿನಂತೆ ತನಿಖೆಯಾಗಲಿ:
ಸಂಜೀವಿನಿ ಒಕ್ಕೂಟಕ್ಕೆ ಎಂಬಿಕೆ, ಎಲ್‌ಸಿಆರ್‌ಪಿಗಳ ನೇಮಕದ ಕುರಿತು ಪಂಚಾಯತ್‌ಗೆ ಎಲ್‌ಸಿಆರ್‌ಪಿ ಭವಾನಿಯವರು ನೀಡಿದ ಸ್ಪಷ್ಟೀಕರಣವನ್ನು ಪಿಡಿಓ ಸಭೆಯ ಮುಂದಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ರಾಮಚಂದ್ರ ಪೂಜಾರಿಯವರು, ನಾವು ಯಾರ ವಿರುದ್ಧವೂ, ಯಾರಿಗೂ ದೂರು ನೀಡಿಲ್ಲ. ಅದಕ್ಕೆ ಸಂಬಂಧಪಟ್ಟವರೇ ಕಾನೂನು ಕ್ರಮಕೈಗೊಳ್ಳಲಿ ಎಂದು ತಿಳಿಸಿದರು. ಸದಸ್ಯ ರಾಮಣ್ಣ ಗೌಡ ಗುಂಡೋಳೆ ಮಾತನಾಡಿ, ಸಂಜೀವಿನ ಒಕ್ಕೂಟದಲ್ಲಿ ಎಂಬಿಕೆಯಾಗಿ ಸಂಧ್ಯಾ ಹಾಗೂ ಎಲ್‌ಸಿಆರ್‌ಪಿಯಾಗಿ ಕಾವಯ ಮತ್ತು ಭವಾನಿಯವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಉತ್ತಮ ರೀತಿಯಲ್ಲಿ ಪರಿವರ್ತನೆ ಕಂಡು ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಅಭಿವೃದ್ಧಿಗೆ ಸಹಕರಿಸಿದ ಅವರಿಗೆ ನಮ್ಮ ಪಂಚಾಯತ್‌ನಿಂದ ಸಂಪೂರ್ಣ ಸಹಕಾರ ನೀಡುವುದಾಗಿ ನಿರ್ಣಯಕೈಗೊಳ್ಳುವಂತೆ ನಿರ್ಣಯ ಕೈಗೊಳ್ಳವಂತೆ ಆಗ್ರಹಿಸಿದರು. ಅವರ ಕಾರ್ಯನಿರ್ವಹಣೆಯ ಬಗ್ಗೆ ನಾವು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಅವರ ನೇಮಕಾತಿ ವಿಚಾರದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದು ಸದಸ್ಯ ಜಯಪ್ರಕಾಶ್ ತಿಳಿಸಿದರು. ಪಂಚಾಯತ್‌ನಲ್ಲಿ 11 ಮಂದಿ ಸದಸ್ಯರಿದ್ದು ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರು ಕೋಡಿಂಬಾಡಿ ಗ್ರಾ.ಪಂ ಸದಸ್ಯರು ಎಂದು ಉಲ್ಲೇಖಿಸಿದ್ದಾರೆ. ಇದು ಸರಿಯಲ್ಲ. ಅವರು ದೂರು ನೀಡಿದವರ ಹೆಸರು ಉಲ್ಲೇಖ ಮಾಡಬೇಕಿತ್ತು. ಹೀಗಾಗಿ ಕಾರ್ಯನಿರ್ವಹಣಾಧಿಕಾರಿಯವರ ವಿರುದ್ಧ ಖಂಡನಾ ನಿರ್ಣಯಮಾಡುವಂತೆ ಒತ್ತಾಯಿಸಿದರು. ದೂರು ನೀಡಿದಲ್ಲಿ ೫ ಮಂದಿ ಸದಸ್ಯರಿದ್ದು, ಅವರು ಸದಸ್ಯರು ಎಂದು ಉಲ್ಲೇಖ ಮಾಡಿದ್ದಾರೆ ಎಂದು ಜಯಪ್ರಕಾಶ್ ತಿಳಿಸಿದರು. ನೇಮಕಕ್ಕೆ ವಿದ್ಯಾರ್ಹತೆ, ಮೀಸಲಾತಿ ಹಾಗೂ ಅವರ ಮೇಲೆ ಒಂದು ಆರೋಪವಿರುವ ಬಗ್ಗೆ ತನಿಖೆ ನಡೆಸುವಂತೆ ನಾವು ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದು ಜಯಪ್ರಕಾಶ್ ತಿಳಿಸಿದರು. ಕಾನೂನು ಪ್ರಕಾರ ತನಿಖೆ ನಡೆಸಲಿ. ಇದಕ್ಕೆ ನಮ್ಮ ಆಕ್ಷೇಪವಿಲ್ಲ ಎಂದು ಅಧ್ಯಕ್ಷರು ತಿಳಿಸಿದರು. ದೂರು ನೀಡಿದವರ ಬಗ್ಗೆ ಸ್ಪಷ್ಟಣೆ ಬೇಕು. ಗ್ರಾಮದ ಅಭಿವೃದ್ಧಿಗೆ ಸಹಕರಿಸುತ್ತಿರುವ ಸಂಜೀವಿನಿ ಒಕೂಟಕ್ಕೆ ಪಂಚಾಯತ್‌ನ ಸಹಕಾರ ನೀಡುವುದಾಗಿ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು. ಓಲೈಕೆಯ ರಾಜಕಾರಣ ಮಾಡುವುದು ಬೇಡ ಎಂದು ಜಯಪ್ರಕಾಶ್ ತಿಳಿಸಿದರು. ಸಂಜೀವಿನಿ ಒಕ್ಕೂಟಕ್ಕೆ ನೇಮಕ ಸರಿಯಾ ತಪ್ಪಾ ಎನ್ನುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅವರಿಂದ ಪಂಚಾಯತ್‌ಗೆ ಯಾವುದೇ ತೊಂದರೆಯಾಗಿಲ್ಲ. ವಿಚಾರದಲ್ಲಿ ಕಾನೂನಿನಂತೆ ತನಿಖೆಯಾಗಲಿ. ಆಯ್ಕೆ ಪ್ರಕ್ರಿಯೆ ಅವರ ಒಕ್ಕೂಟಕ್ಕೆ ಸಂಬಂಧಿಸಿದ ವಿಚಾರ ಅವರೇ ಕ್ರಮಕೈಗೊಳ್ಳುತ್ತಾರೆ ಎಂದು ಅಧ್ಯಕ್ಷರು ತಿಳಿಸಿದರು.

ಘಟಕ ನಿರ್ಮಿಸಲು ನಮಗೂ ಬಿಟ್ಟಿಲ್ಲ….ನೀವೂ ನಿರ್ಮಿಸಿಲ್ಲ:
ಒಣಕಸಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ನಮ್ಮ ವಾರ್ಡ್‌ಗಳಲ್ಲಿ ನಾವೇ ಘಟಕ ನಿರ್ಮಿಸುವುದಾಗಿ ತಿಳಿಸಿದಾಗ ಅದಕ್ಕೆ ಅಡ್ಡ ಕಾಲಿಡಲಾಗಿದೆ. ಈಗ ಪಂಚಾಯತ್‌ನಿಂದಲೂ ಘಟಕ ನಿರ್ಮಿಸಿಲ್ಲ ಎಂದು ಸದಸ್ಯ ಜಯಪ್ರಕಾಶ್ ಬದಿನಾರು ತಿಳಿಸಿದರು. ಘಟಕ ನಿರ್ಮಾಣಕ್ಕೆ ಸರಿಯಾದ ಜಾಗ ಲಭ್ಯವಾಗಿಲ್ಲ. ಹೀಗಾಗಿ ನೆಕ್ಕಿಲಾಡಿ ಪಂಚಾಯತ್‌ನೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿನ ಘಟಕಕ್ಕೆ ತಾತ್ಕಾಲಿಕವಾಗಿ ವಿಲೇವಾರಿ ಮಾಡುವುದಾಗಿ ಅಧ್ಯಕ್ಷ ರಾಮಚಂದ್ರ ಪೂಜಾರಿ ತಿಳಿಸಿದರು. ಘಟಕ ನಿರ್ಮಾಣಕ್ಕೆ ಬೆಳ್ಳಿಪ್ಪಾಡಿಯಲ್ಲಿ ಪರಿಶಿಷ್ಟ ಜಾತಿ ಕಾಲೊನಿ ಹಾಗೂ ಬಸ್ ನಿಲ್ದಾಣದ ಬಳಿಯಲ್ಲಿಯೇ ಕಂದಾಯ ಇಲಾಖೆಯವರು ಜಾಗ ಗುರುತಿಸಿದ್ದಾರೆ. ಇದು ಎಷ್ಟು ಸರಿ ಎಂದು ಸದಸ್ಯ ರಾಮಣ್ಣ ಗೌಡ ಪ್ರಶ್ನಿಸಿದರು.

ಮನೆ ನಿರ್ಮಿಸದಿದ್ದರೆ ಹಣ ರಿಟರ್ನ್:
2013-14೪ರಲ್ಲಿ ಮಂಜೂರಾದ ಮನೆಗಳ ಪೈಕಿ 4 ಮನೆಗಳು ಇನ್ನೂ ಪೂರ್ಣವಾಗಿಲ್ಲ. ಹಲವು ಬಾರಿ ಅವರ ಗಮನಕ್ಕೆ ತಂದರೂ ಅವರಿಂದ ಯಾವುದೇ ಸ್ಪಂಧನೆಯಿಲ್ಲ. ಮನೆ ನಿರ್ಮಾಣ ಮಾಡದಿದ್ದರೆ ಮಂಜೂರುಗೊಂಡ ಹಣ ನಿಗಮಕ್ಕೆ ಮರುಪಾವತಿ ಮಾಡಬೇಕು ಎಂದು ಪಿಡಿಓ ಚಿತ್ರಾವತಿ ತಿಳಿಸಿದರು.
ಉಪಾಧ್ಯಕ್ಷೆ ಉಷಾ ಲಕ್ಷ್ಮಣ ಪೂಜಾರಿ, ಸದಸ್ಯರಾದ ಮಲ್ಲಿಕಾ ಅಶೋಕ್, ಗೀತಾ, ಪೂರ್ಣಿಮಾ, ವಿಶ್ವನಾಥ, ಪುಷ್ಪಾ, ಮೋಹಿನಿ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಚಿತ್ರಾವತಿ ಸ್ವಾಗತಿಸಿದರು. ಕಾರ್ಯದರ್ಶಿ ರಮೇಶ್ ವಂದಿಸಿದರು.

LEAVE A REPLY

Please enter your comment!
Please enter your name here