ಪುತ್ತೂರು: ಹಲವು ವರ್ಷಗಳ ಇತಿಹಾಸವಿರುವ ಕಾರಣಿಕ ದೈವ ಕಲ್ಲಕಟ್ಟ ಶ್ರೀ ರಾಜಗುಳಿಗ ದೈವದ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ಫೆ.೦೨ ರಂದು ನಡೆಯಿತು. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರಿನಿಂದ ೭ ಕಿ.ಮೀ ದೂರದ ಸಂಟ್ಯಾರು ಸೇತುವೆ ಬಳಿಯ ಕಲ್ಲಕಟ್ಟ ಪ್ರದೇಶದಲ್ಲಿ ನೆಲೆನಿಂತಿರುವ ವಿಶೇಷ ಕಾರಣಿಕತೆಯನ್ನು ಹೊಂದಿರುವ ಶ್ರೀ ರಾಜಗುಳಿಗ ದೈವವು ಕುರಿಯ, ಒಳಮೊಗ್ರು, ಆರ್ಯಾಪು ಗ್ರಾಮ ಸೇರಿದಂತೆ ಊರಪರವೂರ ಅನೇಕ ಭಕ್ತರನ್ನು ಹೊಂದಿದೆ. ಶ್ರೀ ದೈವದ ಸಾನ್ನಿಧ್ಯವು ಸಂಪೂರ್ಣ ಜೀರ್ಣೋದ್ಧಾರಗೊಂಡು ಸುಂದರ ಕಟ್ಟೆ ನಿರ್ಮಾಣಗೊಂಡು ಈ ಕಟ್ಟೆಯಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ರಾಜಗುಳಿಗನ ಪ್ರತಿಷ್ಠೆ ನಡೆದು ಬ್ರಹ್ಮಕಲಶಾಭಿಷೇಕ ನಡೆಯಿತು. ಬೆಳಿಗ್ಗೆ ಮಹಾಗಣಪತಿ ಹೋಮ, ಪಂಚವಿಂಶತಿ ಕಲಶ ಪೂಜೆ ನಡೆದು ೯.೨೧ ರಿಂದ ೧೦.೦೪ ರ ಮೀನಾ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ರಾಜಗುಳಿಗನ ಪ್ರತಿಷ್ಠೆ ಮಾಡಲಾಯಿತು ಬಳಿಕ ಪಂಚವಿಂಶತಿ ಸಾನಿಧ್ಯ ಕಲಶಾಭಿಷೇಕ ನಡೆದು ತಂಬಿಲ ಸೇವೆ ಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಊರಪರವೂರ ನೂರಾರು ಭಕ್ತಾಧಿಗಳು ಅನ್ನಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ಕುರಿಯಏಳ್ನಾಡುಗುತ್ತು, ಕಾರ್ಯಕಾರಿ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ಮಲಾರು ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರುಗಳು, ಊರಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು. ಮಧ್ಯಾಹ್ನ ಗಂಟೆ ೧ ರಿಂದ ಶ್ರೀ ರಾಜಗುಳಿಗ ದೈವದ ಕೋಲ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾಗುವಂತೆ ಸಾನಿಧ್ಯದ ಪ್ರಕಟಣೆ ತಿಳಿಸಿದೆ.
ನಾಳೆ(ಫೆ.3) ಗುಳಿಗನ ಹರಕೆ ಕೋಲ
ಫೆ.3 ರಂದು ಮಧ್ಯಾಹ್ನ ಅನ್ನಸಂತರ್ಪಣೆ ಬಳಿಕ 1ಗಂಟೆಯಿಂದ ಯಶೋಧಾ ಗೋಪಾಲ ಮಣಿಯಾಣಿ ಮತ್ತು ಮನೆಯವರ ಸೇವಾ ರೂಪದಲ್ಲಿ ಶ್ರೀ ರಾಜಗುಳಿಗ ದೈವದ ಹರಕೆಯ ಕೋಲ ನಡೆಯಲಿದೆ.