- ವಿಶೇಷ ಸರಕಾರಿ ಅಭಿಯೋಜಕರಾಗಿ ಶಿವಪ್ರಸಾದ್ ಆಳ್ವ ನೇಮಕ
ಪುತ್ತೂರು: ಕೌಕ್ರಾಡಿಯಲ್ಲಿ ಮನೆಗೆ ನುಗ್ಗಿ ಚೂರಿಯಿಂದ ತಿವಿದು ದರೋಡೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳ ಸೂಕ್ತ ವಿಚಾರಣೆಗಾಗಿ ಹಿರಿಯ ಕಾನೂನು ಅಧಿಕಾರಿ ಕೆ. ಶಿವಪ್ರಸಾದ್ ಆಳ್ವರನ್ನು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ನಿಯೋಜಿಸಿ ಸರಕಾರ ಆದೇಶ ಹೊರಡಿಸಿದೆ.
೨೦೨೦ರ ಡಿಸೆಂಬರ್ ೨೦ರಂದು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೌಕ್ರಾಡಿ ಗ್ರಾಮದ ನೂಜಿ ಮನೆ ನಿವಾಸಿ, ವಿಶ್ವಹಿಂದೂ ಪರಿಷದ್ ಸಹಿತ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಉದ್ಯಮಿ ತುಕ್ರಪ್ಪ ಶೆಟ್ಟಿಯವರ ಮನೆಗೆ ನುಗ್ಗಿದ್ದ ೧೭ ಜನ ದರೋಡೆಕೋರರ ತಂಡ ತುಕ್ರಪ್ಪ ಶೆಟ್ಟಿಯವರ ಪತ್ನಿಗೆ ಚೂರಿಯಿಂದ ತಿವಿದು, ನಗ ನಗದನ್ನು ದೋಚಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳ ಸೂಕ್ತ ವಿಚಾರಣೆ ನಡೆಸಲು ಹಿರಿಯ ಕಾನೂನು ಅಧಿಕಾರಿಯಾಗಿರುವ ಪುತ್ತೂರು ದರ್ಬೆ ಕಾವೇರಿಕಟ್ಟೆ ನಿವಾಸಿ ಕೆ. ಶಿವಪ್ರಸಾದ್ ಆಳ್ವರವರನ್ನು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ನಿಯೋಜಿಸಿ ಸರಕಾರ ಆದೇಶ ಹೊರಡಿಸಿದೆ. ಘಟನೆ ನಡೆದ ದಿನ ದರೋಡೆಕೋರರು ಯೋಜಿತ ರೀತಿಯಲ್ಲಿ ಮನೆಗೆ ಲಗ್ಗೆಯಿಟ್ಟು ತುಕ್ರಪ್ಪ ಶೆಟ್ಟಿಯವರನ್ನು ಕಟ್ಟಿ ಹಾಕಿ ಅವರ ಪತ್ನಿಗೆ ಚೂರಿಯಿಂದ ತಿವಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅಪಾರ ಪ್ರಮಾಣದ ನಗ ನಗದನ್ನು ದೋಚಿ ಪರಾರಿಯಾಗಿತ್ತು. ಈ ಸಂಬಂಧ ಭಾರತೀಯ ದಂಡ ಸಂಹಿತೆ ಕಲಂ ೪೫೦, ೩೯೭ ಮತ್ತು ೩೯೬ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ದ.ಕ. ಜಿಲ್ಲಾ ಪೊಲೀಸರು ೧೭ ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಂಧಿತ ಆರೋಪಿಗಳು ೩೦ಕ್ಕೂ ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ ಹೊಂದಿದ್ದರಾದರೂ ಜಾಮೀನು ಮೇಲೆ ಕೆಲ ಆರೋಪಿಗಳು ಬಿಡುಗಡೆಗೊಂಡಿದ್ದರು.
ಈ ಬಗ್ಗೆ ಕಳವಳಗೊಂಡ ತುಕ್ರಪ್ಪ ಶೆಟ್ಟಿಯವರು ಪ್ರಕರಣದ ಗಂಭೀರತೆ ಅರಿತು ಆರೋಪಿಗಳ ಸೂಕ್ತ ವಿಚಾರಣೆಗೆ ಸರಕಾರಿ ಅಭಿಯೋಜಕರನ್ನು ನೇಮಿಸುವಂತೆ ಸರಕಾರಕ್ಕೆ ಒತ್ತಾಯಿಸಿದ್ದರು. ಸರಕಾರವು ತುಕ್ರಪ್ಪ ಶೆಟ್ಟಿಯವರ ಮನವಿಯನ್ನು ಪುರಸ್ಕರಿಸಿದ್ದು ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆ. ಶಿವಪ್ರಸಾದ್ ಆಳ್ವರವರನ್ನು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ನಿಯೋಜಿಸಿ ಆದೇಶ ಹೊರಡಿಸಿದೆ. ಶಿವಪ್ರಸಾದ್ ಆಳ್ವರವರು ಪುತ್ತೂರು ನ್ಯಾಯಾಲಯ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿ, ಸರಕಾರಿ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿದ್ದು ಪ್ರಸ್ತುತ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕಾರವಾರ ವ್ಯಾಪ್ತಿಯನ್ನು ಒಳಗೊಂಡ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವು ಕ್ಲಿಷ್ಟಕರ ಕೇಸುಗಳಲ್ಲಿ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿರುವ ಶಿವಪ್ರಸಾದ್ ಆಳ್ವರವರು ತನ್ನ ತರ್ಕಬದ್ಧ ವಾದ ಮಂಡನೆ ಮೂಲಕ ಅಪರಾಧಿಗಳಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.