ಪ್ರಸ್ತಾವನೆ ಕಳುಹಿಸಿರುವುದನ್ನೇ ತನ್ನ ಸಾಧನೆ ಎಂದು ಹೇಳುವ ಕಾಂಗ್ರೆಸ್ ನಾಯಕರದ್ದು ಹತಾಶೆಯ ಕೀಳು ಮಟ್ಟದ ರಾಜಕೀಯ-ಕಿರಣ್ ಶೆಟ್ಟಿ

0

ಉಪ್ಪಿನಂಗಡಿ: ಬಿಳಿಯೂರಿನಲ್ಲಿ 47 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಣೆಕಟ್ಟು ಸಹಿತ ಸಂಪರ್ಕ ಸೇತುವೆ ಪುತ್ತೂರು ಶಾಸಕ ಸಂಜೀವ ಮಠಂದೂರು ಯತ್ನದ ಫಲವಾಗಿದೆ. ಈ ಹಿಂದಿನ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಪ್ರಸ್ತಾವನೆ ಕಳುಹಿಸಿರುವುದನ್ನೇ ತನ್ನ ಸಾಧನೆ ಎಂದು ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರು ಹತಾಶೆಯ ಕೀಳು ಮಟ್ಟದ ರಾಜಕೀಯ ಹೇಳಿಕೆ ನೀಡಿದ್ದು, ಕಾಂಗ್ರೆಸ್‌ನವರು ತಮ್ಮ ಕನಸನ್ನು ಬಿಜೆಪಿ ಸರಕಾರ ನನಸಾಗಿಸಿದೆ ಎಂದು ಸಂತಸ ಪಡಬೇಕೆ ವಿನಃ ಸುಳ್ಳು ಮಾಹಿತಿ ಹರಡಿ ವಿನಾ ಕಾರಣ ವಿವಾದವನ್ನು ಹುಟ್ಟು ಹಾಕುವುದು ಸರಿಅಲ್ಲ ಎಂದು ಪೆರ್ನೆ ಬಿಜೆಪಿ ಶಕ್ತಿ ಕೇಂದ್ರದ ಮುಂದಾಳು ಕಿರಣ್ ಶೆಟ್ಟಿ ಹೇಳಿದರು.

ಅವರು ಪೆರ್ನೆಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಹುಗ್ರಾಮದ ಜನತೆಗೆ ಕುಡಿಯುವ ನೀರು ಒದಗಿಸುವ, ಕೃಷಿ ಕಾರ್ಯಕ್ಕೆ ನೀರುಣಿಸುವ ಹಾಗೂ ಸರ್ವ ಋತು ಸಂಪರ್ಕ ರಸ್ತೆಗೆ ಸೇತುವೆಯನ್ನು ಒಳಗೊಂಡ ಬೃಹತ್ ಕಿಂಡಿ ಅಣೆಕಟ್ಟು ನಿರ್ಮಾಣ ಕಾರ್ಯ ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ಭರದಿಂದ ನಡೆಯುತ್ತಿರುವಾಗ ಕಾಂಗ್ರೆಸ್ ಅನಗತ್ಯ ವಿವಾದವನ್ನು ಹುಟ್ಟು ಹಾಕುತ್ತಿದೆ. ಬಹು ಉಪಯೋಗಿ ಕಾಮಗಾರಿಯೊಂದು ಶೀಘ್ರವಾಗಿ ನಡೆಯುತ್ತಿರುವಾಗ ಜವಾಬ್ದಾರಿಯುತ ನಾಯಕರಾಗಿ ಶ್ಲಾಘನೆಯ ನುಡಿಗಳನ್ನಾಡಬೇಕಾಗಿತ್ತು. ಬದಲಾಗಿ ಸುಳ್ಳು ಮಾಹಿತಿ ಹರಡಿ ವಿವಾದವನ್ನು ಉಂಟು ಮಾಡುತ್ತಿದ್ದಾರೆ. ತಮ್ಮ ಕಾಲದಲ್ಲಿ ಪ್ರಸ್ತಾವನೆ ಸಲ್ಲಿಸಿರುವುದೇ ಸಾಧನೆ ಎಂಬಂತೆ ವರ್ತಿಸುತ್ತಿದ್ದಾರೆಂದು ಅವರು ಆಪಾದಿಸಿದರು.

ಪೆರ್ನೆ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಕುಮಾರ್ ಪದಬರಿ ಮಾತನಾಡಿ ಕಾಂಗ್ರೆಸ್ ನಾಯಕರು ಕಳೆದ ಹಲವು ವರ್ಷಗಳಿಂದ ಪೆರ್ನೆ ಗ್ರಾಮ ಪಂಚಾಯಿತಿ ಆಡಳಿತ ನಡೆಸಿ ಹಲವಾರು ಭ್ರಷ್ಠಾಚಾರ ಕೃತ್ಯಗಳನ್ನು ಎಸಗಿದ ಹಿನ್ನೆಲೆಯುಳ್ಳವರೆಂದು ಆಪಾದಿಸಿದರು. ಉದ್ಯೋಗ ಖಾತರಿ ಯೋಜನೆಯಲ್ಲಿ, ಬಸವ ವಸತಿ ಯೋಜನೆಯಲ್ಲಿ ಹಣದ ಅವ್ಯವಹಾರ ನಡೆದಿದೆ. ಸುಳ್ಳು ದಾಖಲೆಯನ್ನು ಸೃಷ್ಠಿಸಿ ಸರಕಾರಿ ಭೂಮಿಯನ್ನು ತನ್ನ ಭೂಮಿ ಎಂದು ಬಿಂಬಿಸಿ ಹೆದ್ದಾರಿ ಅಗಲೀಕರಣ ಪ್ರಾಧಿಕಾರದಿಂದ ಲಕ್ಷಾಂತರ ರೂಪಾಯಿ ಹಣವನ್ನು ಕಬಳೀಸಲು ಯತ್ನಿಸಿದ ಹಿನ್ನೆಲೆಯೂ ಕಾಂಗ್ರೆಸ್ ನಾಯಕರದ್ದಾಗಿದೆ ಎಂದು ಆಪಾದಿಸಿದರು.

ಪರಿಸರದೆಲ್ಲೆಡೆ ನಡೆಯುತ್ತಿರುವ ಅಡಕೆ ಕಳ್ಳತನ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕೆಂದು ವಿನಂತಿಸಿದ ಅವರು ಹನ್ನೊಂದು ಗೋಣಿ ಚೀಲ ಅಡಕೆಯನ್ನು ಅಟೋ ರಿಕ್ಷಾದಲ್ಲಿ ಸಾಗಿಸಲಾಗಿದೆ ಎಂಬ ಕಳ್ಳರ ಮಾತನ್ನು ನಂಬದೇ ಅಡಕೆ ಕಳ್ಳತನಕ್ಕೆ ಸಹಕರಿಸಿದ ಜಾಲವನ್ನು ಹಿಡಿಯಲು ಇಚ್ಚಾಶಕ್ತಿಯನ್ನು ಪೊಲೀಸ್ ಇಲಾಖೆ ಪ್ರದರ್ಶಿಸಬೇಕು ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ. ಮುಂದಾಳುಗಳಾದ ಪ್ರಕಾಶ್ ನಾಯಕ್ ಮೈರಾ, ಕೇಶವ ಸುಗ್ರಾಣ, ಮುತ್ತಪ್ಪ ಸಾಲಿಯಾನ್, ಶಿವಪ್ಪ ನಾಯ್ಕ್, ಗಂಗಾಧರ ರೈ, ಗೋಪಾಲ ಸಪಲ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here