ಉಪ್ಪಿನಂಗಡಿ ಹಿಂದೂ ರುದ್ರಭೂಮಿಯಲ್ಲಿ ಹಿರಿಯ ಪತ್ರಕರ್ತ ಬಿ.ಟಿ ರಂಜನ್‌ ರವರ ಅಂತ್ಯ ಸಂಸ್ಕಾರ

0

ಉಪ್ಪಿನಂಗಡಿ: ಸುದೀರ್ಘ ಮೂವತ್ತಾರು ವರ್ಷಗಳ ಕಾಲ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿ ಫೆ.5ರಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುವ ಪುತ್ತೂರಿನ ಹಿರಿಯ ಪತ್ರಕರ್ತ ಬಿ. ಟಿ. ರಂಜನ್ ಶೆಣೈ (60ವ)ರವರ ಅಂತ್ಯ ಸಂಸ್ಕಾರ ಉಪ್ಪಿನಂಗಡಿಯ ಹಿಂದೂ ರುದ್ರಭೂಮಿಯಲ್ಲಿ ಫೆ.5ರಂದು 11 ಗಂಟೆ ವೇಳೆಗೆ ನಡೆಯಿತು.

ಮೂರು ದಿನಗಳಿಂದ ಜ್ವರ ಹಾಗೂ ಕೆಮ್ಮು ಸಮಸ್ಯೆಯಿಂದ ಬಳಲುತ್ತಿದ್ದ ಬಿ.ಟಿ.ರಂಜನ್ ಅವರು ಗುರುವಾರ ರಾತ್ರಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಬೆಳಗ್ಗೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮಧ್ಯಾಹ್ನ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಶನಿವಾರ ನಸುಕಿನ ಜಾವ ಅವರು ಇಹಲೋಕ ತ್ಯಜಿಸಿದರು. 

ಬಿ.ಟಿ. ವಿಠಲ ಶೆಣೈ ಹಾಗೂ ಬಿ.ಟಿ. ರಮಾ ಶೆಣೈ ದಂಪತಿಯ ಪುತ್ರನಾಗಿ ಬಿ.ಟಿ. ರಂಜನ್ ಅವರು 27-07-1962ರಂದು ಕೇರಳದ ಕಣ್ಣಾನೂರು ಎಂಬಲ್ಲಿ ಜನಿಸಿದ್ದು, ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಉಪ್ಪಿನಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದ್ದರು. ಪಿಯುಸಿ ಶಿಕ್ಷಣವನ್ನು ಒಂದು ವರ್ಷಗಳ ಕಾಲ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಹಾಗೂ ಉಳಿದ ಒಂದು ವರ್ಷವನ್ನು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದ ಇವರು ಪದವಿ ಶಿಕ್ಷಣವನ್ನು ವಿವೇಕಾನಂದ ಪದವಿ ಕಾಲೇಜಿನಲ್ಲಿ ಮುಗಿಸಿ, ಬಳಿಕ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಪದವಿ ಪಡೆದುಕೊಂಡಿದ್ದರು.

1985ರಲ್ಲಿ ಪತ್ರಿಕಾ ರಂಗಕ್ಕೆ ಪ್ರವೇಶಿಸಿದ ಇವರು ಮುಂಗಾರು, ಹೊಸದಿಗಂತ, ಮಂಗಳೂರು ಮಿತ್ರ ಹಾಗೂ ಉದಯವಾಣಿ ಪತ್ರಿಕೆಗಳಲ್ಲಿ ವರದಿಗಾರರಾಗಿ ಸುದೀರ್ಘ 36 ವರ್ಷಗಳ ಕಾಲ ಕೆಲಸವನ್ನು ಮಾಡಿದ್ದಾರೆ. ಪತ್ರಿಕಾ ಲೇಖನಗಳ ಮೂಲಕ ಜಿಲ್ಲೆಯ ಪ್ರಮುಖ ಬೆಳೆಯಾದ ಅಡಿಕೆಗೆ ಉತ್ತಮ ಧಾರಣೆ ರೂಪಿಸುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿರುವ ಇವರು ಅಡಿಕೆ ಬೆಳೆಗಾರರಿಗೆ ನ್ಯಾಯವನ್ನು ಒದಗಿಸಲು ಪ್ರಯತ್ನಿಸಿದ್ದರು. ಅಲ್ಲದೇ, ಅಪರಾಧ ಪ್ರಕರಣಗಳ ವರದಿಗಾರಿಕೆಯಲ್ಲೂ ಎತ್ತಿದ ಕೈ ಇವರದ್ದಾಗಿತ್ತು. ಪ್ರಸ್ತುತ ಬಿ.ಟಿ.ರಂಜನ್ ಅವರು ಹೊಸದಿಗಂತ ಪತ್ರಿಕೆಯ ಪುತ್ತೂರು ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಉಪ್ಪಿನಂಗಡಿಯ ರಥಬೀದಿ ನಿವಾಸಿಯಾಗಿರುವ ಇವರು ಪತ್ನಿ ಬಿ.ಟಿ. ಗೀತಾ ಶೆಣೈ, ಪುತ್ರಿ ಬಿ.ಟಿ. ಸೌಮ್ಯ ಶೆಣೈಯವರನ್ನು ಅಗಲಿದ್ದಾರೆ.

1996ರಲ್ಲಿ ಸ್ಥಾಪನೆಯಾದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ನಿರಂತರ ಸಂಘದ ಗೌರವ ಸಲಹೆಗಾರರಾಗಿದ್ದ ಬಿ.ಟಿ. ರಂಜನ್ ಅವರ ಪತ್ರಿಕಾ ಸೇವೆಯನ್ನು ಗುರುತಿಸಿ 2021ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2021ರ ಪುತ್ತೂರು ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ‘ಬಾಲವನ ಪತ್ರಿಕೋದ್ಯಮ ಜೀವಮಾನ ಸಾಧನ ಪ್ರಶಸ್ತಿ, ಪಟ್ಲ ಫೌಂಡೇಶನ್‌ನಿಂದ ಸನ್ಮಾನ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ, ಗೌರವಿಸಿವೆ.

ಅಂತ್ಯಸಂಸ್ಕಾರ:
ಮೃತರ ಪಾರ್ಥಿವ ಶರೀರವನ್ನು ಶನಿವಾರ ಬೆಳಗ್ಗೆ 10.15ರ ವೇಳೆಗೆ ಮಂಗಳೂರು ಆಸ್ಪತ್ರೆಯಿಂದ ಉಪ್ಪಿನಂಗಡಿಯ ಹಿಂದೂ ರುದ್ರಭೂಮಿಗೆ ತರಲಾಗಿದ್ದು, ಅಲ್ಲಿ ಕೋವಿಡ್ ನಿಯಮಾವಳಿಯಂತೆ ಮೃತರ ಅಂತಿಮ ದರ್ಶನ ನಡೆದು, ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.

ಈ ಸಂದರ್ಭ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ, ಉಪ್ಪಿನಂಗಡಿ ಶ್ರೀ ರಾಮ ವಿದ್ಯಾಕೇಂದ್ರದ ಸಂಚಾಲಕ ಯು.ಜಿ. ರಾಧಾ ಶಾಂತಿನಗರ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯ ಜಯಂತ ಪೊರೋಳಿ, ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಛಾದ ಜಿಲ್ಲಾಧ್ಯಕ್ಷ ಆರ್.ಸಿ. ನಾರಾಯಣ,‌ ಪುತ್ತೂರು ಗ್ರಾಮಾಂತರ ವೃತ್ತ  ನಿರೀಕ್ಷಕ ಉಮೇಶ್‌ ಉಪ್ಪಳಿಕೆ, ಉಪ್ಪಿನಂಗಡಿ ಠಾಣಾ  ಉಪನಿರೀಕ್ಷಕ ಕುಮಾರ್ ಕಾಂಬ್ಳೆ, ಪ್ರಮುಖರಾದ ಸುನೀಲ್ ದಡ್ಡು, ಜಗದೀಶ್ ಶೆಟ್ಟಿ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಡಾ. ಯತೀಶ್ ಶೆಟ್ಟಿ, ಕಂಗ್ವೆ ವಿಶ್ವನಾಥ ಶೆಟ್ಟಿ, ರಾಧಾಕೃಷ್ಣ ಭಟ್ ಬೊಳ್ಳಾವು, ಸುದ್ದಿ ಬಿಡುಗಡೆ ಹಿರಿಯ ಪ್ರತಿನಿಧಿ ಲೋಕಯ್ಯ ಸಂಪ್ಯಾಡಿ, ಜಿಎಸ್‌ಬಿ ಸಮಾಜದ ಪ್ರಮುಖರು ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದರು.

 

ಹಿರಿಯ ಪತ್ರಕರ್ತ ಬಿ.ಟಿ.ರಂಜನ್ ನಿಧನ

LEAVE A REPLY

Please enter your comment!
Please enter your name here