ನಗರದ ಮೂಲಭೂತ ಸೌಲಭ್ಯಗಳಿಗೆ ರೂ.30ಕೋಟಿ ಅನುದಾನ – ಚಿಣ್ಣರ ಪಾರ್ಕ್‌ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು

0

ಪುತ್ತೂರು: ಮೇಲ್ದರ್ಜೆಗೇರಿದ ಪುತ್ತೂರು ನಗರ ಸಭೆಯು ಆಧುನಿಕತೆಯನ್ನು ಅಳವಡಿಸಿಕೊಂಡು ಮೂಲಭೂತ ಸೌಲಭ್ಯಗಳನ್ನು ಈಡೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರೂ.30 ಕೋಟಿ ವಿಶೇಷ ಅನುದಾನ ನೀಡಿದ್ದಾರೆ. ಈ ಅನುದಾನವನ್ನು ಎಲ್ಲಾವಾರ್ಡ್‌ಗಳ ಮೂಲಭೂತ ಸೌಲಭ್ಯಗಳನ್ನು ಪೂರೈಸಲು ಒತ್ತು ನೀಡಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ನಗರ ಸಭೆಯ 14 ಮತ್ತು15ನೇ ಹಣಕಾಸು ಯೋಜನೆಯ ರೂ.25 ಲಕ್ಷ ಅನುದಾನದಲ್ಲಿ ಆಧುನೀಕರಣಗೊಂಡ ಚಿಣ್ಣರ ಪಾರ್ಕ್ ನ್ನು ಫೆ.7 ರಂದು ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು. ನಗರ ಸಭಾ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳ ಪೂರೈಸಲು ಆದ್ಯತೆ ನೀಡಲಾಗುತ್ತಿದೆ. ಡಂಪಿಂಗ್ ಯಾರ್ಡ್‌ನಲ್ಲಿ ದುರ್ಗಂಧದಿಂದ ಸುಗಂಧದೆಡೆಗೆ ಎಂಬ ಹೊಸ ಯೋಜನೆ ಪ್ರಾರಂಭಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಸೌಂದರ್ಯಕ್ಕೆ ಅನುದಾನ ನೀಡಲಾಗುವುದು ಎಂದು ಶಾಸಕರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್‌ರವರು ಮಾತನಾಡಿ, ನಾವು ಪ್ರಾರಂಭದಲ್ಲಿ ನೀಡಿದ ಆಶ್ವಾಸನೆ ಈಡೇರಿಸಿದ್ದೇವೆ. ಕೊಂಬೆಟ್ಟು ಅಟಲ್ ಉದ್ಯಾನವನ, ಚಿಣ್ಣರ ಪಾರ್ಕ್ ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಲಾಗಿದೆ. ಸಾಮೆತ್ತಡ್ಕ ಪಾರ್ಕ್ ಅಭಿವೃದ್ಧಿ ಮಾಡಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು. ಡಂಪಿಂಗ್ ಯಾರ್ಡ್ ನಲ್ಲಿ ಮುಂದಿನ ಮೂರು ತಿಂಗಳಲ್ಲಿ ಸಣ್ಣ ಪ್ರಮಾಣದ ಬಯೋಗ್ಯಾಸ್ ಪ್ಲಾಂಟ್ ನಿರ್ಮಾಣ ಮಾಡಲಾಗುವುದು ಎಂದರು.

ಸನ್ಮಾನ ಸ್ವೀಕರಿಸಿದ ಪದ್ಮಶ್ರೀ ಮಹಾಲಿಂಗ ನಾಯ್ಕ ಮಾತನಾಡಿ, ಕೃಷಿ ಅಭಿವೃದ್ಧಿಪಡಿಸಲು ನೀರಿಗಾಗಿ ಬಹಳಷ್ಟು ಪ್ರಯತ್ನಿಸಿದ್ದೇನೆ. ನೀರು ಉಳಿಸಲು ಎಲ್ಲರೂ ಪ್ರಯತ್ನಿಸಬೇಕು. ಹಳ್ಳಿಯಲ್ಲಿ ಕೃಷಿ ಬೆಳೆದರಷ್ಟೇ ನಗರದ ಜನರಿಗೆ ಆಹಾರ ದೊರೆಯಲು ಸಾಧ್ಯ ಎಂದರು.
ನಗರ ಸಭಾ ಉಪಾಧ್ಯಕ್ಷೆ ವಿದ್ಯಾಗೌರಿ, ಪೂಡದ ಅಧ್ಯಕ್ಷ ಬಾಮಿ ಅಶೋಕ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ; ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪಾರ್ಕ್‌ನ ಗುತ್ತಿಗೆದಾರ ರಾಮಕೃಷ್ಣ ಭಟ್, ಇಂಜಿನಿಯರ್ ಶ್ರೀಧರ್ ರವರನ್ನು ಗೌರವಿಸಲಾಯಿತು.

ನಗರ ಸಭಾ ಸದಸ್ಯರಾದ ದೀಕ್ಷಾ ಪೈ, ಪೂರ್ಣಿಮಾ, ಇಂದಿರಾ ಪುರುಷೋತ್ತಮ, ಶಕ್ತಿಸಿನ್ಹ, ಶಿವರಾಮ ಸಪಲ್ಯ, ಪ್ರೇಮ್ ಕುಮಾರ್, ಯೂಸುಫ್ ಡ್ರೀಮ್, ಐತ್ತಪ್ಪ ನಾಯ್ಕ, ಪ್ರೇಮಲತಾ ನಂದಿಲ, ಮನೋಹರ್ ಕಲ್ಲಾರೆ, ಬಾಲಚಂದ್ರ, ಪದ್ಮನಾಭ, ಶಶಿಕಲಾ ಸಿ.ಎಸ್., ಯಶೋಧ ಹರೀಶ್, ಪೌರಾಯುಕ್ತ ಮಧು ಎಸ್. ಮನೋಹರ್, ಮಾಜಿ ಸದಸ್ಯ ವಿನಯ ಭಂಡಾರಿ, ತಾ.ಪಂ ಮಾಜಿ ಸದಸ್ಯರಾದ ಮೀನಾಕ್ಷಿ ಮಂಜುನಾಥ, ಲಕ್ಷ್ಮಣ ಗೌಡ, ನ್ಯಾಯವಾದಿ ಮಂಜುನಾಥ ಎನ್. ಎಸ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಸಹಿತ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಗರ ಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್ ಸ್ವಾಗತಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು ವಂದಿಸಿದರು. ವಿಸಾಖ್ ರೈ ಕಾರ್ಯಕ್ರಮ ನಿರೂಪಿಸಿದರು. ಪಾರ್ಕ್‌ನ ಅಭಿವೃದ್ಧಿಗೆ ಸಲಹೆ ನೀಡುತ್ತಿದ್ದ ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ಬಿ.ಟಿ ರಂಜನ್‌ರವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here