ಬೆಟ್ಟಂಪಾಡಿ ಬಿಲ್ವಗಿರಿಯಲ್ಲಿ ಕುಡಿಯುವ ನೀರಿನ ಪಂಪ್ ಉದ್ಘಾಟನೆ

0

  • ಮೂಲಭೂತ ಅವಶ್ಯಕತೆಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಯ ಕರ್ತವ್ಯ – ರಾಧಾಕೃಷ್ಣ ಬೋರ್ಕರ್

ಪುತ್ತೂರು: ಬೆಟ್ಟಂಪಾಡಿ ನವೋದಯ ಪ್ರೌಢಶಾಲಾ ಕ್ರಿಡಾಂಗಣದ ಬಳಿ ಸುಮಾರು 3.25 ಲಕ್ಷ ರೂ. ವೆಚ್ಚದಲ್ಲಿ ತಾಲೂಕು ಪಂಚಾಯತ್ ಅನುದಾನದಿಂದ‌ ಮಾಡಲ್ಪಟ್ಟ ಕುಡಿಯುವ ನೀರಿನ ಬೋರ್‌ವೆಲ್‌ ಮತ್ತು ವಿದ್ಯುತ್ ಪಂಪ್‌ ನ್ನು ಫೆ. 14 ರಂದು ತಾ.ಪಂ. ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ರವರ ಸಮ್ಮುಖದಲ್ಲಿ ನಿಡ್ಪಳ್ಳಿ ಗ್ರಾ.ಪಂ. ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ತಾ.ಪಂ. ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ರವರು ‘ನಾನು ಅಧ್ಯಕ್ಷನಾಗಿ ಕೆಲಸ‌ ಮಾಡಿದ್ದೇನೆ ಎಂದು ಎಲ್ಲೂ ಹೇಳಲ್ಲ. ಜನರ ಸೇವೆ ಮಾಡಲು ಅವಕಾಶ, ಯೋಗ ಭಾಗ್ಯ ದೊರಕಿದೆ‌ ಎಂದು ಭಾವಿಸಿದ್ದೇನೆ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ನವೋದಯ ಶಾಲೆಗೆ ಏನಾದರೂ ಮಾಡಬೇಕೆಂಬ ಹಂಬಲ ಇತ್ತು. ಹಾಗಾಗಿ ಇಲ್ಲಿನ ಕ್ರಿಡಾಂಗಣ, ಸಾರ್ವಜನಿಕರು ಮತ್ತು ಶಾಲೆಗೂ ಉಪಯೋಗವಾಗುವ ರೀತಿಯಲ್ಲಿ ನೀರಿನ ವ್ಯವಸ್ಥೆಗೆ ತಾ.ಪಂ. ನಿಂದ ಅನುದಾನ ಇಡಲಾಗಿತ್ತು. ವಿದ್ಯಾರ್ಥಿಗಳ ಕಲಿಕೆಗೆ ನೀರು ಕೂಡಾ ಪೂರಕ ವ್ಯವಸ್ಥೆಯಾಗಿರುವುದರಿಂದ ಇದರ ಸದ್ಬಳಕೆಯಾಗಲಿ. ಈ ಕ್ರೀಡಾಂಗಣದ ಅಭಿವೃದ್ಧಿಯ ಕಾರ್ಯವೂ ನಮ್ಮಿಂದ ನಡೆಯಲು ದೇವರು ಅನುಗ್ರಹಿಸಲಿ ಎಂದು ಹೇಳಿ ಇದರ ಹಿಂದೆ ಶ್ರಮಿಸಿದ ಶಾಲೆಯ ದೈಹಿಕ ಶಿಕ್ಷಣ‌ ಶಿಕ್ಷಕ ದಯಾನಂದ ರೈಯವರಿಗೆ ಅಭಿನಂದನೆ ಸಲ್ಲಿಸಿದರು.

ರಿಬ್ಬನ್ ಕತ್ತರಿಸಿ ಪಂಪ್ ಸ್ವಿಚ್ ಅದುಮಿ ಉದ್ಘಾಟಿಸಿದ ನಿಡ್ಪಳ್ಳಿ ಗ್ರಾ.ಪಂ. ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್ ರವರು ಮಾತನಾಡಿ ‘ನವೋದಯ ಶಾಲೆಯ ಹಿರಿಯ ವಿದ್ಯಾರ್ಥಿ ಎನಿಸಿಕೊಳ್ಳಲು ಹೆಮ್ಮೆಯಿದೆ. ಅಂತಹ ಶಾಲೆಗೆ ಕುಡಿಯುವ‌ ನೀರಿನ ಪಂಪ್‌ ಚಾಲನೆ ನೀಡಲು ಸಿಕ್ಕಿರುವ ಅವಕಾಶ ನನ್ನ ಭಾಗ್ಯ ಎಂದುಕೊಂಡಿದ್ದೇನೆ ಎಂದರು. ನವೋದಯ ವಿದ್ಯಾ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಭಟ್ ಘಾಟೆ, ಕೋಶಾಧಿಕಾರಿ ಆರ್.ಸಿ.‌ ನಾರಾಯಣ ರೆಂಜ ಶುಭ ಹಾರೈಸಿದರು.

ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯ ಪ್ರಕಾಶ್ ರೈ ಬೈಲಾಡಿ, ನವೋದಯ ವಿದ್ಯಾ ಸಮಿತಿಯ ಕಾರ್ಯದರ್ಶಿ ನಾರಾಯಣ ಭಟ್, ಕೇಶವ ಆಚಾರ್ಯ ನಿಡ್ಪಳ್ಳಿ, ಶಾಲಾ ಶಿಕ್ಷಕರು, ಸಿಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಸ್ವಾಗತಿಸಿ, ಮುಖ್ಯಗುರು ಪುಷ್ಪಾವತಿ ಎಸ್. ವಂದಿಸಿದರು.

LEAVE A REPLY

Please enter your comment!
Please enter your name here