ತಾ.ಯುವಜನ ಒಕ್ಕೂಟದ ಅಧ್ಯಕ್ಷ, ಬನ್ನೂರು ಸ್ಫೂರ್ತಿ ಯುವ ಸಂಸ್ಥೆ ಸಂಚಾಲಕ ದಿನೇಶ್ ಸಾಲಿಯಾನ್‌ರವರ ಹುಟ್ಟು ಹಬ್ಬದ ಸುವರ್ಣ ಸಂಭ್ರಮ

0

ಪುತ್ತೂರು: ಸ್ಫೂರ್ತಿ ಯುವ ಸಂಸ್ಥೆಗಳ ಸಂಚಾಲಕರು, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾಗಿರುವ ದಿನೇಶ್ ಸಾಲಿಯಾನ್‌ರವರ 50ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮವು ಫೆ.27ರಂದು ಬನ್ನೂರು ಸ್ಫೂರ್ತಿ ಮೈದಾನದಲ್ಲಿರುವ ಶನೀಶ್ವರ ದೇವರ ಸನ್ನಿಧಿಯಲ್ಲಿ ನಡೆಯಿತು.

 


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಮಾತನಾಡಿ, ಸಂಘಟನೆಗಳು ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಸಮಾಜದ ಕಷ್ಟಗಳಿಗೆ ಸ್ಪಂದನೆ ನೀಡುವ ಕೆಲಸವಾಗಬೇಕು. ಸಮಾಜದ ಕಟ್ಟ ಕಡೆಯ ಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದ ಅವರು, ದಿನೇಶ್ ಸಾಲಿಯಾನ್‌ರವರ ನೇತೃತ್ವದಲ್ಲಿ ಈ ಭಾಗದಲ್ಲಿ ಯುವಕರನ್ನು ಒಗ್ಗೂಡಿಸುವ ಕಾರ್ಯವಾಗುತ್ತಿದೆ ಎಂದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು ಮಾತನಾಡಿ, ಸಂಘಟನಾ ಚತುರತೆಯನ್ನು ಹೊಂದಿರುವ ದಿನೇಶ್ ಸಾಲಿಯಾನ್ ತಾಲೂಕಿನಲ್ಲಿ ಅವರ ನೇತೃತ್ವದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿದೆ. ೫೦ ವರ್ಷವಾದರೂ ಯುವಕರಿಗಿಂತ ಹೆಚ್ಚು ಕ್ರಿಯಾಶೀಲವಾಗಿದ್ದಾರೆ ಎಂದರು.

ಬನ್ನೂರು ರೈತರ ಸೇವ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ದಿನೇಶ್ ಸಾಲಿಯಾನ್‌ರವರ ನೇತೃತ್ವದಲ್ಲಿ ಯುವ ಸಂಘಟನೆಯೊಂದಿಗೆ ಧಾರ್ಮಿಕ ಹಾಗೂ ಸಾಮಾಜಿಕವಾಗಿ ಸೇವೆ ಸಲ್ಲಿಸುವ ಮೂಲಕ ಮಾದರಿಯಾದ ಸೇವೆಯಾಗುತ್ತಿದೆ ಎಂದರು.

ಉದ್ಯಮಿ ಡಾ| ರವಿ ಕಕ್ಕೆಪದವು ಮಾತನಾಡಿ, ಯುವ ಸಂಸ್ಥೆಯೊಂದಿಗೆ ಭಾಗದ ಹಲವು ಯುವಕ, ಯುವತಿಯನ್ನು ಸೇರಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನವನ್ನು ದೊರಕಿಸಿ ಕೊಡುವ ಕಾರ್ಯ ದಿನೇಶ್ ಸಾಲಿಯಾನ್‌ರವರಿಂದ ನಡೆದಿದೆ ಎಂದರು.

ಹುಟ್ಟು ಹಬ್ಬದ ಅಭಿನಂದನೆ ಸ್ವೀಕರಿಸಿದ ದಿನೇಶ್ ಸಾಲಿಯಾನ್ ಮಾತನಾಡಿ, ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಮನೆಯಲ್ಲಿ ನಡೆಸುವ ಯೋಚನೆಯಿತ್ತು. ಆದರೆ ಯುವ ಸಂಸ್ಥೆಗಳ ಸದಸ್ಯರ ಒತ್ತಾಸೆಯ ಮೇರೆಗೆ ಸ್ಫೂರ್ತಿ ವೇದಿಕೆಯಲ್ಲಿ ನಡೆಸಲಾಗುತ್ತಿದೆ. ಸ್ಫೂರ್ತಿ ಯುವ ಸಂಸ್ಥೆಯು ನನ್ನ ಜೀವನದ ಬೆಳವಣಿಗೆಯಲ್ಲಿ ಬೆನ್ನೆಲುಬಾಗಿ ನಿಂತಿದೆ. ಯುವ ಸಂಸ್ಥೆಯ ಕಾರ್ಯದಲ್ಲಿ ಜಾತಿ, ರಾಜಕೀಯಗಳನ್ನು ನಿರ್ಬಂದಿಸಲಾಗಿದೆ. ಇಲ್ಲಿ ಸರ್ವದರ್ಮಿಯರಿಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕರ ಸಹಕಾರದಿಂದ ಯುವ ಸಂಸ್ಥೆಯ ಮೂಲಕ ಉತ್ತಮ ಸೇವೆ ನೀಡಲು ಸಹಕಾರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಗ್ರೂಪ್‌ನ ಮ್ಹಾಲಕ ಜಯಂತ ನಡುಬೈಲು ಮಾತನಾಡಿ, ಸ್ಫೂರ್ತಿ ಯುವಕ ಮಂಡಲದ ಮುಖಾಂತರ ವ್ಯವಸ್ಥಿತವಾಗಿ ಸಂಘಟನೆಯನ್ನು ರೂಪಿಸಿರುವ ದಿನೇಶ್ ಸಾಲಿಯಾನ್ ತನ್ನ ಜೊತೆಗೆ ಇತರರಿಗೂ ನಾಯಕತ್ವ ನೀಡುವ ಕೆಲಸ ಮಾಡಿಕೊಂಡು ತನ್ನ ಬದುಕಿನ ೫೦ನೇ ವರ್ಷದಲ್ಲಿ ಸಾರ್ಥಕತೆ ಕಾಣುತ್ತಿದ್ದಾರೆ. ತನ್ನ ತಂದೆ-ತಾಯಿಯವರಿಗೆ ಗೌರವಾರ್ಪಣೆ, ಗುರುಗಳಿಗೆ ವಂದನೆ ಮಾಡಿ ಮಾದರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡು ಎಲ್ಲರಿಗೂ ಸ್ಫೂರ್ತಿ ನೀಡುವ ಕೆಲಸವಾಗಿದೆ ಎಂದರು. ಸ್ಫೂರ್ತಿ ಯುವಕ ಮಂಡಲದ ಅಧ್ಯಕ್ಷ ಸೂರ್ಯ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗುರುವಂದನೆ:
ದಿನೇಶ್ ಸಾಲಿಯಾನ್‌ರವರ ಗುರುಗಳಾದ ಶಾಂಭವಿ ಶೆಟ್ಟಿ, ಕುಸುಮಾ ಹಾಗೂ ಗೀತಾಮಣಿಯವರಿಗೆ ಈ ಕಾರ್ಯಕ್ರಮದಲ್ಲಿ ಗುರುವಂದನೆ, ದಿನೇಶ್ ಸಾಲಿಯಾನ್‌ರವರ ತಂದೆ ಸಂಜೀವ ಪೂಜಾರಿ ತಾಯಿ ಮೋನಮ್ಮರವನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಸ್ಫೂರ್ತಿ ಯುವ ಸಂಸ್ಥೆಯ ಲಾಂಛನ ತಯಾರಿಸಿದ ನಾಗೇಶ್ ಕುಮಾರ್‌ರವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

ಅಮರನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಶಲ, ಪ್ರೀತಮ್ ರೈ, ನಾಗೇಶ್, ಪ್ರಮೋದ್ ಕುಮಾರ್, ಉದಯ ಕುಮಾರ್, ವಿಶ್ವನಾಥ ನಾಯ್ಕ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಶಿಕ್ಷಕಿ ದೇವಿಕಾ ಕಾರ್ಯಕ್ರಮ ನಿರೂಪಿಸಿ, ಸ್ಫೂರ್ತಿ ಯುವಕ ಮಂಡಲದ ಅಧ್ಯಕ್ಷ ಆದರ್ಶ ಸಾಲಿಯಾನ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಾಪು ರಂಗತರಂಗ ಕಲಾವಿದರಿಂದ `ಅಧ್ಯಕ್ಷೆರ್’ ಎಂಬ ತುಳು ಹಾಸ್ಯಮಯ ಸಾಂಸಾರಿಕ ನಾಟಕ ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here