ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆ

0

ಪುತ್ತೂರು:ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಎರಡನೇ ವಾರ್ಷಿಕ ಮಹಾಸಭೆಯು ಮಾ.13ರಂದು ಕೋ-ಆಪರೇಟಿವ್ ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ ಮಾತನಾಡಿ, ಇಲಾಖೆಯಲ್ಲಿ ನೊಂದಾಯಿಸಿಕೊಂಡ ಕಟ್ಟಡ ಕಾರ್ಮಿಕರಿಗೆ 60 ವರ್ಷ ಪೂರೈಸಿದ ಫಲಾನುಭವಿಗಳಿಗೆ ಮಾಸಿಕ ರೂ.2000 ಪಿಂಚಣಿ, ಕುಟುಂಬದ ಪಿಂಚಣಿ ಸೌಲಭ್ಯದಲ್ಲಿ ಮೃತ ಪಿಂಚಣಿದಾರರ ಪತ್ನಿಗೆ ಮಾಸಿಕ ರೂ.1000, ಖಾಯಿಲೆ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ/ಭಾಗಶಃ ಅಂಗವಿಕಲತೆಯಾದರೆ ಮಾಸಿಕ ರೂ.2ಸಾವಿರ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ ರೂ.೨ಲಕ್ಷ ದುರ್ಬಲತೆ ಪಿಂಚಣಿ, ರೂ.2 ಸಾವಿರದ ಟ್ರೈನಿಂಗ್ ಕಮ್ ಟೂಲ್ ಕಿಟ್, ಫಲಾನುಭವಿಯ ಅವಲಂಬಿತರಿಗೆ ಶ್ರಮ ಸಂಸಾರ ಸಾಮರ್ಥ್ಯ ತರಬೇತಿ ಸೌಲಭ್ಯ, ರೂ.2ಲಕ್ಷ ವಸತಿ ಸೌಲಭ್ಯ, ಮಹಿಳಾ ಫಲಾನುಭವಿಗಳಿದ್ದರೆ ಮೊದಲ ಎರಡು ಮಕ್ಕಳ ಹೆರಿಗೆಗೆ ಹೆಣ್ಣು ಮಗುವಿಗೆ ರೂ. 30 ಸಾವಿರ, ಗಂಡು ಮಗುವಿಗೆ ರೂ.20 ಸಾವಿರ, ಅಂತ್ಯಕ್ರಿಯೆಗೆ ರೂ.4000 ಹಾಗೂ ಅನುಗ್ರಹ ರಾಶಿ ರೂ.50ಸಾವಿರ, ಶಿಶು ವಿಹಾರದಿಂದ ಉನ್ನತ ವಿದ್ಯಾಭ್ಯಾಸದ ತನಕ ಶೃಕ್ಷಣಿಕ ಧನಸಹಾಯ, ಕಾರ್ಮಿಕರ ಆರೋಗ್ಯ ಭಾಗ್ಯದಲ್ಲಿ ವೈದ್ಯಕೀಯ ಸಹಾಯಧನ, ಅಪಘಾತದಲ್ಲಿ ಮರಣಹೊಂದಿದವರಿಗೆ ರೂ.5ಲಕ್ಷ, ಸಂಪೂರ್ಣ ಶಾಸ್ವತ ದುರ್ಬಲತೆಯಾದರೆ ರೂ.2ಲಕ್ಷ, ಭಾಗಶಃ ದುರ್ಬಲತೆಯಾದರೆ ರೂ.೧ಲಕ್ಷ, ಅಲ್ಲದೆ ಪ್ರಮುಖ ವೈದ್ಯಕೀಯ ವೆಚ್ಚ, ಫಲಾನುಭವಿ ಇಬ್ಬರು ಮಕ್ಕಳಿಗೆ ರೂ.50ಸಾವಿರ ಮದುವೆಗೆ ಸಹಾಯಧನ, ಬಸ್ ಪಾಸ್ ಸೌಲಭ್ಯ, ತಾಯಿಮಗು ಸಹಾಯ ಹಸ್ತದಲ್ಲಿ ಮಹಿಳಾ ಫಲಾನುಭವಿ ಮಗುವಿನ ಜನ್ಮ ನೀಡಿರೆ ಆಕೆ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಠಿಕತೆಗೆ ಮಗುವಿಗೆ ಮೂರು ವರ್ಷಗಳ ತನಕ ವಾರ್ಷಿಕ ರೂ.6ಸಾವಿರ ಸಹಾಯಧನ ಮೊದಲಾದ ಸೌಲಭ್ಯಗಳನ್ನು ಸರಕಾರ ನೀಡುತ್ತಿದ್ದು ಇವುಗಳನ್ನು ಸದುಪಯೋಗಪಡೆದುಕೊಳ್ಳುವಂತೆ ತಿಳಿಸಿದರು.


ಕಟ್ಟಡ ಕಾರ್ಮಿಕರೂ ಇ-ಶ್ರಮ್‌ನಲ್ಲಿ ನೋಂದಾಯಿಸಿಕೊಳ್ಳಬಹುದು:
ಕಟ್ಟಡ ಕಾರ್ಮಿಕರಿಗೆ ಇ ಶ್ರಮ್ ಯೋಜನೆಯಲ್ಲಿ ನೋಂದಾವಣೆಯ ಬಗ್ಗೆ ಬಹಳಷ್ಟು ಗೊಂದಲವಿದೆ. ಕಟ್ಟಡ ಕಾರ್ಮಿಕರಾಗಿ ನೋಂದಾವಣೆ ಮಾಡಿಸಿದವರೂ ಇ-ಶ್ರಮ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ೧೪ ವರ್ಷದಿಂದ ೫೯ ವರ್ಷದ ವರೆಗಿನ ಪ್ರತಿಯೊಬ್ಬ ಕಾರ್ಮಿಕರು ಇ ಶ್ರಮ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಆದಾಯ ತೆರಿಗೆ, ಇಎಸ್‌ಐ, ಪಿಎಫ್, ಸರಕಾರಿ ನೌಕರರಿಗೆ ಅವಕಾಶವಿಲ್ಲ. ನೋಂದಾವನೆ ಮಾಡುವಾಗ ಪ್ರತಿಯಬ್ಬರು ಕನ್‌ಸ್ಟ್ರಕ್ಷನ್ ವರ್ಕರ್ ಎಂದು ಗೊತ್ತಪಡಿಸಬೇಕು. ಈ ಯೋಜನೆಯಲ್ಲಿ ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು ಇ ಶ್ರಮ್ ಮೂಲಕ ನೋಂದಾಯಿಸಿಕೊಳ್ಳಬಹುದು. ಒಂದು ಬಾರಿ ನೋಂದಾಯಿಸಿದರೆ ಮತ್ತೆ ನವೀಕರಣ ಮಾಡಬೇಕಾದ ಆವಶ್ಯಕತೆಗಳಿಲ್ಲ ಎಂದು ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ ಹೇಳಿದರು.


ಮುಖ್ಯ ಅತಿಥಿಯಾಗಿದ್ದ ಸಂಘದ ಗೌರವಾಧ್ಯಕ್ಷ ಬಿ. ಪುರಂದರ ಭಟ್ ಮಾತನಾಡಿ, ಕಾರ್ಮಿಕರು ದೇಹದಲ್ಲಿ ರಕ್ತ ಚಲನೆಯಿದ್ದಂತೆ. ರಕ್ತ ಚಲಾವಣೆಯಿಲ್ಲದಿದ್ದರೆ ದೇಹ ಆರೋಗ್ಯದಿಂದ ಇರಲು ಸಾಧ್ಯವಿಲ್ಲದಂತೆ ಕಾರ್ಮಿಕರಿಲ್ಲದೆ ದೇಶ ಮುನ್ನಡೆಯಲು ಸಾಧ್ಯವಿಲ್ಲ. ಕಾರ್ಮಿಕರು ಆರೋಗ್ಯ ವಂತರಾಗಿದ್ದರೆ ದೇಶ ಆರೋಗ್ಯವಂತವಾಗಿರಲು ಸಾಧ್ಯ. ಕಾರ್ಮಿಕರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆಯುವಲ್ಲಿ ಸಂಘವು ಜಯಪ್ರಕಾಶ್ ನಾರಾಯಣ್‌ರವರ ಮಾದರಿಯಲ್ಲಿ ಮುನ್ನಡೆಯಬೇಕು. ಇದಕ್ಕೆ ಸದಸ್ಯರು ಮಾನಸಿಕ ದೈಹಿಕ ಶಕ್ತಿ ನೀಡಬೇಕು ಎಂದರು.


ಸಂಘದ ಕಾನೂನು ಸಲಹೆಗಾರ ದೇವಾನಂದ ಕೋಡಿಂಬಾಡಿ ಮಾತನಾಡಿ, ಕಟ್ಟಡ ಕಾರ್ಮಿಕ ಮಗಳಾಗಿ ಹಸ್ತಾ ಶೆಟ್ಟಿ ಎಸಿಎಫ್ ಆಗುವ ಮೂಲಕ ಇಂದು ಬಹುದೊಡ್ಡ ಹುದ್ದೆ ಪಡೆದುಕೊಂಡಿದ್ದಾರೆ. ಇವರ ಸಾಧನೆ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದು ಇದೇ ರೀತಿಯಲ್ಲಿ ಪ್ರತಿಯೊಬ್ಬ ಕಾರ್ಮಿಕರು ತಮ್ಮ ಮಕ್ಕಳನ್ನು ಬೆಳೆಸಬೇಕು. ವಿದ್ಯಾಭ್ಯಾಸ ಪಡೆಯಲು ಸಾಕಷ್ಟು ಅವಕಾಶಗಳಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅದಕ್ಕಾಗಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಸೇಸಪ್ಪ ಕುಲಾಲ್ ಸರಕಾರ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ಸಂಘವು ಶ್ರಮಿಸುತ್ತಿದೆ. ಸಂಘದ ಮುಖಾಂತರ ಸದಸ್ಯರಿಗೆ ವಿವಿಧ ಆರೋಗ್ಯ ಮಾಹಿತಿ ಶಿಬಿರಗಳು, ಸರಕಾದ ಸೌಲಭ್ಯಗಳ ಕುರಿತ ಮಾಹಿತಿ ಶಿಬಿರಗಳನ್ನು ನಡೆಸಿ ಮಾಹಿತಿಳನ್ನು ನೀಡಲಾಗಿದೆ. ಸಂಘವು ಶಕ್ತಿಯುತವಾಗಿ ಬೆಳೆಯುವಲ್ಲಿ ಪ್ರತಿಯೊಬ್ಬರು ಸಹಕರಿಸುವಂತೆ ಅವರು ಮನವಿ ಮಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಮ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ೧೩ ವರ್ಷಗಳಿಂದ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿರುವ ನಮ್ಮ ಸಂಘವು ಕಾರ್ಮಿಕರ ಆಗುತ್ತಿರುವ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ಸಂಘವನ್ನು ನೋಂದಾಯಿಸಿಕೊಳ್ಳಲಾಗಿದೆ. ಸಂಘದಲ್ಲಿ ೪೫೦ ಮಂದಿ ಸದಸ್ಯರ ಸೇರ್ಪಡೆಯಾಗಿದೆ. ಲಾಕ್‌ಡೌನ್ ಸಮಯದಲ್ಲಿ ಕಿಟ್ ವಿತರಣೆ ಸಂಘದ ಪದಾಧಿಕಾರಿಗಳು ಶ್ರಮಿಸಿದ್ದಾರೆ. ಸರಕಾರದ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಕಟ್ಟಡ ಕಾರ್ಮಿಕರಾಗಿ ನೋಂದಾಯಿಸಿಕೊಂಡು ದುರುಪಯೋಗ ಪಡಿಸುವುದನ್ನು ತಪ್ಪಿಸಲು ಸಂಘದ ಮೂಲಕ ಕ್ರಮವಹಿಸಲಾಗುತ್ತಿದೆ. ಇದಕ್ಕಾಗಿ ಸದಸ್ಯರಿಗೆ ಗುರುತು ಚೀಟಿ ವಿತರಿಸಲಾಗಿದೆ ಎಂದರು.

ಸನ್ಮಾನ:
ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಕವಾದ, ಕಟ್ಟಡ ಕಾರ್ಮಿಕ ಪುರಂದರ ಶೆಟ್ಟಿ ಮುಡಾಲರವರ ಪುತ್ರಿ ಹಸ್ತಾ ಶೆಟ್ಟಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ಈ ಸಂದರ್ಭದಲ್ಲಿ ಪುಸ್ತಕ ವಿತರಿಸಲಾಯಿತು.

ಧನ್ಯಾ ಬೆಳ್ಳಿಪ್ಪಾಡಿ ಹಾಗೂ ಸಾನ್ವಿ ಬನ್ನೂರು ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಮ ಕುಲಾಲ್ ಸ್ವಾಗತಿಸಿದರು. ಮೋಹನ ಆಚಾರ್ಯ, ಈಶ್ವರ ನಾಯ್ಕ ಅಜಲಾಡಿ, ಚೆನ್ನಪ್ಪ ಮಚ್ಚಿಮಲೆ, ವಿಶ್ವನಾಥ ಬೆಳ್ಳಪ್ಪಾಡಿ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಕೋಶಾಧಿಕಾರಿ ರಾಜೇಶ್ ಪೂಜಾರಿ ಮುಕ್ವೆ ಲೆಕ್ಕಪತ್ರ ಮಂಡಿಸಿ, ವಂದಿಸಿದರು. ತೇಜಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here