ಮಂಗಳೂರಿನಲ್ಲಿ ನಡೆದ ಸಾರ್ವಜನಿಕ ಭಾಷಣ ಸ್ಪರ್ಧೆಯಲ್ಲಿ ಫಿಲೋಮಿನಾದ ಶ್ರೀದೇವಿರವರಿಗೆ ಪ್ರಥಮ ಸ್ಥಾನ

0

ಪುತ್ತೂರು: ಮಂಗಳೂರು ಮಹಾನಗರ ಪಾಲಿಕೆ, ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಥಾನ ಆಯೋಜಿಸಿದ `ನಮ್ಮ ಅಬ್ಬಕ್ಕ ೨೦೨೨’ ಕಾರ್ಯಕ್ರಮದ ಪ್ರಯುಕ್ತ ನಡೆದ ಸಾರ್ವಜನಿಕ ಭಾಷಣ ಸ್ಪರ್ಧೆಯಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿನಿ ಕು|ಶ್ರೀದೇವಿ ಕೆ.ರವರು ಪ್ರಥಮ ಸ್ಥಾನ ಪಡೆದಿದ್ದು, ಮಂಗಳೂರು ವಿವಿ ಕುಲಪತಿಯಾಗಿರುವ ಪ್ರೊ|ಎಡಪಡಿತ್ತಾಯರವರು ಸಾಧಕಿ ಶ್ರೀದೇವಿಯವರಿಗೆ ಬಹುಮಾನವನ್ನು ಹಸ್ತಾಂತರಿಸಿದರು.

ಶ್ರೀದೇವಿಯವರು ಸಾಂಸ್ಕೃತಿಕ ಮತ್ತು ಸಾಹಿತ್ಯಕ ಕ್ಷೇತ್ರಗಳಲ್ಲಿ ರಾಜ್ಯ ಮಟ್ಟದ ಸಾಧನೆಯನ್ನು ಮಾಡಿರುತ್ತಾರೆ. ಜಿಲ್ಲೆಯ ಹಲವಾರು ಕಡೆಗಳಲ್ಲಿ ನಡೆದ ಭಾಷಣ, ಪ್ರಬಂಧ, ಚರ್ಚಾ ಸ್ಪರ್ಧೆ ಹಾಗೂ ಆಶುಭಾಷಣ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಪಡೆದ ಬಹುಮುಖ ಪ್ರತಿಭೆ ಎನಿಸಿಕೊಂಡಿರುವವರು ಶ್ರೀದೇವಿಯವರು. ಮಾತ್ರವಲ್ಲದೆ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ, ಆ ವರ್ಷದ ಬಹುಮುಖ ಪ್ರತಿಭಾವಂತ ವಿದ್ಯಾರ್ಥಿನಿ ಎಂಬ ಬಿರುದಿಗೂ ಪಾತ್ರರೆನಿಸಿಕೊಂಡಿದ್ದರು. ಯಾವುದೇ ಪೂರ್ವಾಭ್ಯಾಸ ಮಾಡದೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಾವಭಾವದೊಂದಿಗೆ ನಿರರ್ಗಳವಾಗಿ ಮಾತನಾಡುವ ಕಲೆ ಶ್ರೀದೇವಿಯವರಲ್ಲಿದೆ. ನಗುಮುಖದ ವ್ಯಕ್ತಿತ್ವದ ಶ್ರೀದೇವಿಯವರು ಕೇವಲ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಸ್ಪರ್ಧೆಗಳಲ್ಲಿ ಮಾತ್ರ ಮುಂಚೂಣಿಯಲ್ಲಿರದೆ ಓದಿನಲ್ಲಿ ಹಾಗೂ ನೃತ್ಯದಲ್ಲಿಯೂ ತನ್ನ ಪಾರಮ್ಯ ಮೆರೆದಿರುವ ಶ್ರೀದೇವಿಯವರು ಕಲ್ಲಾರೆ ನಿವಾಸಿ ಮಹಾಬಲ ಭಟ್ ಹಾಗೂ ಸಂತ ಫಿಲೋಮಿನಾ ಕಾಲೇಜ್‌ನಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುವ ಪ್ರೇಮಲತಾರವರ ಸುಪುತ್ರಿಯಾಗಿರುತ್ತಾರೆ.

LEAVE A REPLY

Please enter your comment!
Please enter your name here