ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪಿಗೆ ಅಸಮಾಧಾನ – ಪುತ್ತೂರು,ಕಡಬದಲ್ಲೂ ಮುಸ್ಲಿಮರಿಂದ ಸ್ವಯಂಪ್ರೇರಿತ ಬಂದ್

0

ಪುತ್ತೂರು:ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿಗೆ ಅಸಮಧಾನ ವ್ಯಕ್ತಪಡಿಸಿ ಕರ್ನಾಟಕ ಅಮೀರೇ ಎ ಶರೀಅತ್‌ನ ಮೌಲಾನಾ ಸಗೀರ್ ಅಹಮ್ಮದ್ ಅವರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲವಾಗಿ ಪುತ್ತೂರು, ಕಡಬ ತಾಲೂಕು ಮತ್ತು ವಿಟ್ಲ ವ್ಯಾಪ್ತಿಯಲ್ಲಿಯೂ ಮಾ.17ರಂದು ಮುಸ್ಲಿಮ್ ವರ್ತಕರು ವ್ಯವಹಾರ ಸ್ಥಗಿತ ಮಾಡಿ ಶಾಂತಿಯುತ ಬಂದ್ ಆಚರಿಸಿದ್ದರು.


ಮುಸ್ಲಿಮ್ ಸಮುದಾಯದವರಿಗೆ ಸೇರಿರುವ ಬಹುತೇಕ ಅಂಗಡಿ, ಮಳಿಗೆಗಳು, ಹೊಟೇಲ್‌ಗಳು ಹಾಗೂ ಹಸಿಮೀನು, ಒಣಮೀನು ಮತ್ತು ಚಿಕನ್, ಮಟನ್ ಮಾರುಕಟ್ಟೆಯನ್ನು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದರು.ಮುಸ್ಲಿಮ್ ಸಮುದಾಯದವರಿಗೆ ಸೇರಿದ ಅಟೋರಿಕ್ಷಾಗಳು ಹಾಗೂ ಇತರ ಟೂರಿಸ್ಟ್ ವಾಹನಗಳ ಪೈಕಿ ಬಹುತೇಕ ಓಡಾಟ ಸ್ಥಗಿತಗೊಳಿಸಿ ಬೆಂಬಲ ಸೂಚಿಸಿದ್ದರು.ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳು, ಮದರಸಗಳಿಗೆ ರಜೆ ಘೋಷಿಸಲಾಗಿತ್ತು. ಕೆಲವೆಡೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಶಾಲಾ,ಕಾಲೇಜುಗಳಿಗೆ ಗೈರು ಹಾಜರಾಗಿದ್ದರು.

ಬಂದ್‌ನಿಂದಾಗಿ ಪೇಟೆಯಲ್ಲಿ ಜನ-ವಾಹನ ಸಂಚಾರ ಎಂದಿನಂತೆ ಇರಲಿಲ್ಲ.ಉಪ್ಪಿನಂಗಡಿ, ಕಡಬ, ಕಾಣಿಯೂರು, ಸವಣೂರು, ಕುಂಬ್ರ, ಈಶ್ವರಮಂಗಲ,ನೆಲ್ಯಾಡಿ,ರಾಮಕುಂಜ, ಕೊಲ, ಆತೂರು ಸೇರಿದಂತೆ ಪುತ್ತೂರು ಮತ್ತು ಕಡಬ ವ್ಯಾಪ್ತಿ ಹಾಗೂ ವಿಟ್ಲ ವ್ಯಾಪ್ತಿಯಲ್ಲಿ ಮುಸ್ಲಿಮ್ ಸಮುದಾಯದವರು ಸ್ವಯಂಪ್ರೇರಿತ ಬಂದ್ ನಡೆಸುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದರು.ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.

LEAVE A REPLY

Please enter your comment!
Please enter your name here