ಆರ್‌ಟಿಓ ಡಿಜಿಟಲೈಸ್: ಲಂಚಕ್ಕೆ ಬ್ರೇಕ್! – ಪುತ್ತೂರಿನಲ್ಲಿ ಬಿಎಚ್ (ಭಾರತ) ಸರಣಿಯ ನಂಬರ್ ಫ್ಲೇಟ್

0

  • ಆನ್‌ಲೈನ್ ಸೇವೆಗಳಿಗೆ ಉತ್ತಮ ಸ್ಪಂದನೆ
  • ಬಿಗಿ ತಪಾಸಣೆ- ದಂಡ ವಸೂಲಿ, ರಾಜಸ್ವ ಸಂಗ್ರಹದಲ್ಲಿ ದಾಖಲೆ

ಪುತ್ತೂರು: ಸಾರಿಗೆ ಇಲಾಖೆಯನ್ನು ಡಿಜಿಟಲೈಸ್ ಮಾಡಲಾಗಿದೆ. ವಾಹನ ಚಾಲನಾ ಪರವಾನಗಿ ನವೀಕರಣ, ವಾಹನ ನೋಂದಣಿ, ಚಾಲನೆ ಕಲಿಕಾ ಪರವಾನಗಿ ಸೇರಿದಂತೆ 27 ಸೇವೆಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಅಂದರೆ ಆರ್‌ಟಿಒ ಕಚೇರಿಗೆ ಭೇಟಿ ನೀಡದೇ ಆಧಾರ್ ದೃಢೀಕರಣದ ಮೂಲಕ ಪಡೆಯಲು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಅನುವು ಮಾಡಿಕೊಟ್ಟಿದೆ. ದೇಶದ ಎಲ್ಲಾ ಸಾರಿಗೆ ಕಚೇರಿಗಳಲ್ಲಿ ಜನವರಿಯಿಂದಲೇ ಇದು ಅನ್ವಯವಾಗಿ ಜಾರಿಗೆ ಬಂದಿದೆ. ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲೂ ಅನುಷ್ಠಾನಗೊಂಡಿದೆ. ಆನ್‌ಲೈನ್ ಸೇವೆಗಳಿಗೆ ಉತ್ತಮ ಸ್ಪಂದನೆ ಜನತೆಯಿಂದ ವ್ಯಕ್ತವಾಗಿದೆ. ಜೊತೆಗೆ ಪ್ರಸಕ್ತ ಸಾಲಿನಲ್ಲಿ ಪುತ್ತೂರು ಸಾರಿಗೆ ಕಚೇರಿಯು ಹಲವು ಹೊಸತನಗಳಿಗೆ ನಾಂದಿ ಹಾಡಿ ತೆರಿಗೆ ಸಂಗ್ರಹದಲ್ಲೂ ದಾಖಲೆಯತ್ತ ದಾಪುಗಾಲಿಡುತ್ತಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಇದು ನೆರವಾಗಬಲ್ಲದು ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.

 

 

ಆನ್‌ಲೈನ್‌ನಲ್ಲೇ ಲಭ್ಯವಿರುವ ಸೇವೆಗಳು: *ಕಲಿಕಾ ಚಾಲನಾ ಅನುಜ್ಞಾ ಪತ್ರ ಮತ್ತು ಹೊಸ ವರ್ಗಗಳನ್ನು ಸೇರ್ಪಡೆಗೊಳಿಸುವಿಕೆ (ಲರ್ನರ್ಸ್ ಲೈಸನ್ಸ್)
*ಕಲಿಕಾ ಚಾಲನಾ ಅನುಜ್ಞಾ ಪತ್ರದಲ್ಲಿ ಹೆಸರು ಬದಲಾವಣೆ *ಕಲಿಕಾ ಚಾಲನಾ ಅನುಜ್ಞಾ ಪತ್ರದಲ್ಲಿ ವಿಳಾಸ ಬದಲಾವಣೆ *ನಕಲು ಕಲಿಕಾ ಚಾಲನಾ ಅನುಜ್ಞಾ ಪತ್ರ *ಅಂತಾರಾಷ್ಟ್ರೀಯ ಚಾಲನಾ ಪರವಾನಗಿ *ಚಾಲನಾ ಅನುಜ್ಞಾ ಪತ್ರ ವಹಿ *ಚಾಲನಾ ಅನುಜ್ಞಾ ಪತ್ರ ನವೀಕರಣ *ನಕಲು ಚಾಲನಾ ಅನುಜ್ಞಾ ಪತ್ರ *ಚಾಲನಾ ಅನುಜ್ಞಾ ಪತ್ರದಲ್ಲಿ ವಿಳಾಸ ಬದಲಾವಣೆ *ಚಾಲನಾ ಅನುಜ್ಞಾ ಪತ್ರದಲ್ಲಿ ಹೆಸರು ಬದಲಾವಣೆ *ಮಾರಾಟಗಾರರ ಹಂತದಲ್ಲಿ ಹೊಸ ವಾಹನಗಳ ನೋಂದಣಿ(ಸಾರಿಗೇತರ ವಾಹನ) *ವಾಹನ ಮಾಲೀಕತ್ವ ವರ್ಗಾವಣೆ *ನೋಂದಣಿ ಪ್ರಮಾಣಪತ್ರದಲ್ಲಿ ವಿಳಾಸ ಬದಲಾವಣೆ *ನಕಲು ನೋಂದಣಿ ಪ್ರಮಾಣ ಪತ್ರ *ವಾಹನದ ಕಂತು-ಕರಾರು ಒಪ್ಪಂದ ನಮೂದು *ವಾಹನದ ಕಂತು-ಕರಾರು ಮುಂದುವರಿಕೆ *ತಾತ್ಕಾಲಿಕ ನೋಂದಣಿ ಪ್ರಮಾಣಪತ್ರ *ಆಕ್ಷೇಪಣಾ ರಹಿತ ಪ್ರಮಾಣ ಪತ್ರ ನೀಡುವಿಕೆ (ಎನ್‌ಒಸಿ/ಸಿಸಿ) *ವಾಹನ `ಬಿ’ ವಹಿ *ಮೋಟಾರು ಕ್ಯಾಬ್/ಸರಕು ಸಾಗಣೆ ವಾಹನ ರಹದಾರಿ ನೀಡುವಿಕೆ *ಮೋಟಾರು ಕ್ಯಾಬ್/ಸರಕು ಸಾಗಣೆ ವಾಹನ ರಹದಾರಿ ನವೀಕರಣ *ಆಟೋರಿಕ್ಷಾ ಕ್ಯಾಬ್ ರಹದಾರಿ ನವೀಕರಣ *ನಕಲು ರಹದಾರಿ ನೀಡುವಿಕೆ (ಸರಕು ಸಾಗಣೆ ಮತ್ತು ಮೋಟಾರು ಕ್ಯಾಬ್) *ಆಟೋರಿಕ್ಷಾ ಕ್ಯಾಬ್ ನಕಲು ರಹದಾರಿ ನೀಡುವಿಕೆ *ರಹದಾರಿ ಪದ್ಧತಿ (ರಹದಾರಿ ಅಧ್ಯರ್ಪಣ) *ಸರಕು ವಾಹನಗಳಿಗೆ ರಾಷ್ಟ್ರೀಯ ರಹದಾರಿ (NP) ಅಧಿಕಾರಿತ ಪತ್ರ ನವೀಕರಣ

ತೆರಿಗೆ ಸಂಗ್ರಹದಲ್ಲಿ ಏರಿಕೆ: ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕು ವ್ಯಾಪ್ತಿಯನ್ನು ಹೊಂದಿರುವ ಪುತ್ತೂರು ಸಾರಿಗೆ ಕಚೇರಿಯಲ್ಲಿ ಈ ವರ್ಷ 1,82,074 ವಾಹನಗಳು ನೋಂದಣಿಯಾಗಿವೆ. ವಾರ್ಷಿಕ 51,91,00,000 ರೂ. ರಾಜಸ್ವ ಸಂಗ್ರಹದ ಗುರಿಯನ್ನು ಕಚೇರಿಗೆ ನೀಡಲಾಗಿದೆ. ಆರಂಭದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ರಾಜಸ್ವ ಸಂಗ್ರಹದಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಆದರೂ ಸಿಬ್ಬಂದಿಯ ಶಕ್ತಿ ಮೀರಿದ ಪ್ರಯತ್ನದಿಂದ ಕಳೆದ ಮೂರು ತಿಂಗಳಿನಿಂದ 102% ಸಂಗ್ರಹವಾಗಿದೆ. ಮಾರ್ಚ್ ತಿಂಗಳಲ್ಲಿ 15 ದಿನಗಳಲ್ಲಿ 2,72,63,147 ರೂ. ಸಂಗ್ರಹವಾಗಿದೆ. ಸರಾಸರಿ90% ಸಂಗ್ರಹವಾಗುತ್ತಿದ್ದು, ಈ ತಿಂಗಳಲ್ಲಿ 95-98% ಗುರಿಯನ್ನು ತಲುಪಬಹುದು ಎನ್ನುವುದು ಆರ್‌ಟಿಒ ಆನಂದ ಗೌಡ ಅವರ ಮಾತು.

ಬಿಗಿ ತಪಾಸಣೆ- `ದಂಡಂ ದಶಗುಣಂ’: ಈ ನಡುವೆ ವಾಹನಗಳ ತಪಾಸಣೆಯನ್ನೂ ಮಾಡಲಾಗುತ್ತಿದೆ. ಡಿ-ಕ್ಟಿವ್ ನಂಬರ್ ಪ್ಲೇಟ್, ನ್ಯೂನ್ಯತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ೧,೭೮೫ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಮದ್ಯಪಾನ ಮಾಡಿ ಚಾಲನೆ, ಚಾಲನೆಯ ವೇಳೆ ಮೊಬೈಲ್ ಬಳಕೆ, ಅಪಘಾತ ಪ್ರಕರಣಗಳಲ್ಲಿ ಭಾಗಿಯಾದವರ ಪೈಕಿ ಸುಮಾರು ೧,೩೦೦ ಚಾಲನಾ ಪರವಾನಿಗೆಗಳನ್ನು ಅಮಾನತು ಮಾಡಲಾಗಿದೆ. ೯೫೦ ಕೇಸ್‌ಗಳು ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಲಾವಣೆಯ ಪ್ರಕರಣಗಳು ದಾಖಲಾಗಿವೆ. ಜೊತೆಗೆ ತುಂಬಾ ವರ್ಷಗಳಿಂದ ವಾಹನ ತೆರಿಗೆ ಕಟ್ಟುವುದನ್ನು ಬಾಕಿ ಉಳಿಸಿಕೊಂಡಿದ್ದ ವಾಹನ ಮಾಲಕರ ಮೇಲೆ ಕ್ರಮ ಜರುಗಿಸಿದ್ದೇವೆ. ೨೯೨ ಚಾರ್ಜ್‌ಶೀಟ್‌ಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ. ಇದರಿಂದ ಅನೇಕರು ಸ್ವಯಂಪ್ರೇರಿತರಾಗಿ ಬಂದು ತೆರಿಗೆ ಕಟ್ಟುತ್ತಿದ್ದಾರೆ. ಕಟ್ಟದೇ ಇರುವ ಪೈಕಿ ೪ ಬಸ್‌ಗಳನ್ನು ಹರಾಜಿಗಿಟ್ಟಿದ್ದೇವೆ. ಹರಾಜಿನಲ್ಲಿ ಬಂದ ಮೊತ್ತ ಟ್ಯಾಕ್ಸ್‌ಗಿಂತ ಕಡಿಮೆ ಇರುವ ಕಾರಣ ಅವರ ಜಾಗವನ್ನೂ ಅಟ್ಯಾಚ್ ಮಾಡಲು ಸಂಬಂಧಪಟ್ಟ ತಹಶೀಲ್ದಾರ್‌ಗಳಿಗೂ ಪತ್ರ ಬರೆದಿದ್ದೇವೆ. ಒಂದೇ ತಿಂಗಳಲ್ಲಿ ೧೦ ಲಕ್ಷ ರೂ. ದಂಡ ವಸೂಲಾಗಿದೆ. ಈ ಮೂಲಕ ಒಟ್ಟು ೩೮,೬೨,೫೬೫ ರೂ. ದಂಡ ಮತ್ತು ತೆರಿಗೆಯನ್ನು ವಸೂಲಿ ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಽಕಾರಿ ಆನಂದ ಗೌಡ ಮತ್ತು ಸೂಪರಿಟೆಂಡೆಂಟ್ ದೀಪಕ್ `ಸುದ್ದಿ’ಗೆ ಮಾಹಿತಿ ನೀಡಿದ್ದಾರೆ.

ಎಲೆಕ್ಟ್ರಿಕ್ ವಾಹನ ಖರೀದಿಸಿ-ತೆರಿಗೆ ಉಳಿಸಿ: ಈಗ ಸರ್ಕಾರ ಇಲೆಕ್ಟ್ರಿಕ್ ವಾಹನಗಳಿಗೆ ವಿಶೇಷ ಉತ್ತೇಜನ ನೀಡುತ್ತಿದೆ. ಈ ನಿಟ್ಟಿನಲ್ಲಿ ನೋಂದಣಿ ವೇಳೆ ಬಹಳಷ್ಟು ಕೊಡುಗೆಗಳನ್ನು ನೀಡುತ್ತಿದೆ. ಎಲೆಕ್ಟ್ರಿಕ್ ವಾಹನಗಳ ನೋಂದಣಿಯ ಸಂದರ್ಭ ಕೇವಲ ರೋಡ್ ಸೇಫ್ಟಿ ಸೆಸ್ ಮಾತ್ರ ಪಾವತಿಸಿದರೆ ಸಾಕು. ಉಳಿದಂತೆ ನೋಂದಣಿ ಶುಲ್ಕ ಸೇರಿದಂತೆ ಯಾವುದೇ ತೆರಿಗೆ ಕಟ್ಟಬೇಕಾದ ಅವಶ್ಯಕತೆ ಇಲ್ಲ. ಇದಕ್ಕೆ ಗ್ರೀನ್ ನಂಬರ್ ಪ್ಲೇಟ್ ಲಭಿಸುತ್ತದೆ. ಈ ಮೂಲಕ ಜನತೆ ಇಂಧನ ಖರ್ಚನ್ನು ಉಳಿಸುವ ಜೊತೆಗೆ ತೆರಿಗೆಯ ಹೊರೆಯನ್ನೂ ಕಡಿಮೆ ಮಾಡಿಕೊಳ್ಳಬಹುದು.

ಏನಿದು `ಬಿಎಚ್’ ಸಿರೀಸ್?

ಒಂದು ರಾಜ್ಯದಲ್ಲಿ ಒಬ್ಬ ಉದ್ಯೋಗಿ ವಾಹನ ಖರೀದಿ ಮಾಡಿ, ಆ ರಾಜ್ಯಕ್ಕೆ ತೆರಿಗೆ ಕಟ್ಟಿ ನೋಂದಣಿ ಮಾಡಿಕೊಂಡಿದ್ದರೆ, ಆತ ಇನ್ನೊಂದು ರಾಜ್ಯಕ್ಕೆ ವರ್ಗಾವಣೆಯಾಗಿ ಹೋದಾಗ ಆ ರಾಜ್ಯದ ತೆರಿಗೆಯನ್ನೂ ಕಟ್ಟಬೇಕಿತ್ತು. ಜೊತೆಗೆ ಅಲ್ಲಿ ಪುನಃ ನೋಂದಣಿಯನ್ನೂ ಮಾಡಬೇಕಿತ್ತು. ಪದೇ ಪದೇ ವರ್ಗಾವಣೆಗೊಳ್ಳುವ ನೌಕರರಿಗೆ ಇದರಿಂದ ಬಹಳ ತೊಂದರೆ, ಹೊರೆಯಾಗುತ್ತಿತ್ತು. ಈ ತೊಂದರೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ದೇಶಾದ್ಯಂತ ಈ ನೋಂದಣಿ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಇಂತಹ ಉದ್ಯೋಗಿಗಳು ಈ ನೋಂದಣಿ ಸಂಖ್ಯೆ ಇದ್ದರೆ ಯಾವ ರಾಜ್ಯಕ್ಕೂ ಹೋಗಬಹುದು. ಪದೇ ಪದೇ ತೆರಿಗೆ ಕಟ್ಟಬೇಕಾದ ಅವಶ್ಯಕತೆ ಇಲ್ಲ.

 

ಬಿಎಚ್ ಸಿರೀಸ್ ನೋಂದಣಿ ಶುರು

ಈ ವರ್ಷದಿಂದ ಬಿಎಚ್ ಸಿರೀಸ್‌ನ ನೋಂದಣಿ ಸಂಖ್ಯೆಯನ್ನು ಕೂಡ ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿ ಮಾಡಲಾಗಿದೆ. ಇದು ಅಂತರ್‌ರಾಜ್ಯಗಳ ನಡುವೆ ವರ್ಗಾವಣೆಗೊಳ್ಳುವಂತಹ ನೌಕರರಿಗೆ ಅನುಕೂಲವಾಗುವಂತಹ ನೋಂದಣಿ ಸಂಖ್ಯೆ. ಇದು ಒಟ್ಟು ೯ ಡಿಜಿಟ್‌ಗಳನ್ನು ಹೊಂದಿರುವಂತಹ ನಂಬರ್ ಪ್ಲೇಟ್. ಇಲ್ಲಿ ಪ್ರಥಮ ಎರಡು ಸಂಖ್ಯೆಗಳು ವಾಹನವು ನೋಂದಣಿಯಾದ ವರ್ಷವನ್ನು ಸೂಚಿಸುತ್ತವೆ. ಬಳಿಕ `ಬಿಎಚ್’ ಎಂದರೆ ನಮ್ಮ ದೇಶ ಭಾರತದ ಸಂಕೇತ. ಬಳಿಕ ನಾಲ್ಕು ಡಿಜಿಟ್‌ನ ಸಂಖ್ಯೆ ವಾಹನದ ನೋಂದಣಿ ಸಂಖ್ಯೆಯಾಗಿರುತ್ತದೆ. ಕೊನೆಯಲ್ಲಿ ಬರುವ ಆಲಬೆಟ್ ಅಕ್ಷರವು ಸಿರೀಸ್ ಕೋಡ್ ಆಗಿರುತ್ತದೆ. ಇದನ್ನು ಮುಖ್ಯವಾಗಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವರ್ಗವಾಗಿ ತೆರಳುವ ಕೇಂದ್ರ ಸರ್ಕಾರದ ನೌಕರರಿಗೆ ಅನುಕೂಲವಾಗಲೆಂದು ಕೇಂದ್ರ ಸರಕಾರವು ತಂದಿದೆ. ಈ ಮೂಲಕ ಲಕ್ಷಾಂತರ ಮಂದಿ ಕೇಂದ್ರ ಸರ್ಕಾರಿ ನೌಕರರಿಗೆ ಅನುಕೂಲವಾಗುತ್ತಿದೆ. ಜೊತೆಗೆ ಖಾಸಗಿ ಭಾಗದ ಉದ್ಯೋಗಿಗಳಿಗೂ ಈ ನೋಂದಣಿ ಸಂಖ್ಯೆ ಲಭಿಸುತ್ತದೆ. ಆದರೆ ಅವರು ಕೆಲಸ ಮಾಡುವ ಖಾಸಗಿ ಕಂಪನಿಯ ಶಾಖೆಗಳು ಕನಿಷ್ಠ ೪ ರಾಜ್ಯಗಳಲ್ಲಿ ಇರಬೇಕಾಗುತ್ತದೆ. ಅವರು ಯಾವ ರಾಜ್ಯಕ್ಕೆ ಹೋದರೂ ಹೆಚ್ಚುವರಿ ತೆರಿಗೆ ಕಟ್ಟಬೇಕಿಲ್ಲ.

 

ಸುದ್ದಿಯ ಆಂದೋಲನ ಉತ್ತಮ ವಿಚಾರ: ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎನ್ನುವ ಆಂದೋಲನವನ್ನು ಸುದ್ದಿ ಬಳಗ ಮಾಡುತ್ತಿದೆ. ಇದು ನಿಜಕ್ಕೂ ಒಂದು ಉತ್ತಮ ವಿಚಾರ. ಇದಕ್ಕೆ ಪೂರಕವಾಗಿ ಈಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಮೋಟಾರು ವಾಹನ ಕಾಯ್ದೆಗೆ ಅಮೂಲಾಗ್ರ ತಿದ್ದುಪಡಿಯನ್ನು ತಂದು ಒಟ್ಟು ೨೭ ಸೇವೆಗಳನ್ನು ಕಾಂಟ್ಯಾಕ್ಟ್‌ಲೆಸ್ ಅಂದರೆ ಸಂಪರ್ಕರಹಿತವನ್ನಾಗಿ ಮಾಡಿದ್ದಾರೆ. ಅಂದರೆ ಈ ಸೇವೆಗಳನ್ನು ಪಡೆಯಲು ಆರ್‌ಟಿಒ ಕಚೇರಿಗೆ ಜನರು ಬರಬೇಕೆಂದಿಲ್ಲ. ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಫೀಸ್ ಕಟ್ಟಿ ಆನ್‌ಲೈನ್‌ನಲ್ಲೇ ಟೆಸ್ಟ್ ಪಡೆದುಕೊಂಡು ಮಾಡಬಹುದು. ಆನ್‌ಲೈನ್ ಸೇವೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಆನಂದ ಗೌಡ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪುತ್ತೂರು

 

 

 

LEAVE A REPLY

Please enter your comment!
Please enter your name here