ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೆ.ಸೀತಾರಾಮ ರೈಯವರಿಗೆ ಸನ್ಮಾನ

0

  • ಸಹಕಾರ ಕ್ಷೇತ್ರದಲ್ಲಿ ಜಿಲ್ಲೆಗೆ ಹೆಚ್ಚು ಪ್ರಶಸ್ತಿ ಬರುವಂತೆ ಪ್ರಯತ್ನ ಮಾಡುತ್ತೇನೆ; ಡಾ| ಎಮ್.ಎನ್.ರಾಜೇಂದ್ರ ಕುಮಾರ್

 

ಪುತ್ತೂರು: ಈ ಬಾರಿ ದ.ಕ.ಜಿಲ್ಲೆಗೆ 3 ಸಹಕಾರಿ ರತ್ನ ಪ್ರಶಸ್ತಿ ಕೊಡಲಾಗಿದೆ. ಇದರಲ್ಲಿ ನನಗೂ ಅಧಿಕಾರ ಇದ್ದದರಿಂದ ಕೆ.ಸೀತಾರಾಮ ರೈ ಅವರಿಗೆ ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿ ಕೊಡಿಸಿದ್ದೇನೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಮ್.ಎನ್.ರಾಜೇಂದ್ರ ಕುಮಾರ್‌ರವರು ಹೇಳಿದರು.

ರಾಜ್ಯ ಮಟ್ಟದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ, ಹಿರಿಯ ಸಹಕಾರಿ ಕೆ.ಸೀತಾರಾಮ ರೈ ಸವಣೂರು ಅವರಿಗೆ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಹಯೋಗದಲ್ಲಿ ಪುತ್ತೂರು ದರ್ಬೆ ಪ್ರಶಾಂತ್ ಮಹಲ್‌ನಲ್ಲಿ ಮಾ.೨೧ರಂದು ಸಂಜೆ ನಡೆದ ಅಭಿನಂದನಾ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಕೆ.ಸೀತಾರಾಮ ರೈಯವರಿಗೆ ಹಾರ ಹಾಕಿ, ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಿ ಮಾತನಾಡಿದರು. ಕೆ.ಸೀತಾರಾಮ ರೈ ಸವಣೂರು ಅವರು ಹಿರಿಯ ಸಹಕಾರಿಯಾಗಿದ್ದು, ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಸಿಬ್ಬಂದಿಯಾಗಿ, ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, ಕೆಎಮ್‌ಎಫ್ ನಿರ್ದೇಶಕರಾಗಿ ಗುರುತಿಸಿಕೊಂಡವರು. ಅವರೊಬ್ಬ ಉತ್ತಮ ಸಹಕಾರಿಯಾಗಿದ್ದಾರೆ.

ಡಿಸಿಸಿ ಬ್ಯಾಂಕ್‌ನಲ್ಲಿ ಇವತ್ತಿಗೂ ನನ್ನ ಮೇಲೆ ಗೌರವ ಇರುವುದು ಸೌಭಾಗ್ಯ: ಸನ್ಮಾನ ಸ್ವೀಕರಿಸಿದ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೆ.ಸೀತಾರಾಮ ರೈ ಸವಣೂರು ಅವರು ಮಾತನಾಡಿ, ಇವತ್ತಿನ ಈ ಕಾರ್ಯಕ್ರಮಕ್ಕೆ ಕಾರಣ ನನ್ನ ಆತ್ಮೀಯರಾದ ಡಾ. ಎಮ್.ಎನ್.ರಾಜೇಂದ್ರ ಕುಮಾರ್ ಅವರು. ನಾವು ಎಷ್ಟೋ ವರ್ಷದಿಂದ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದವರು. ಕಳೆದ ವರ್ಷ ನನಗೆ ಸಹಕಾರಿ ಪ್ರಶಸ್ತಿಯನ್ನು ಕೊಡಿಸಲು ಪ್ರಯತ್ನಿಸಿದರು. ಈ ವರ್ಷ ಅವರೇ ಫೋನ್ ಮಾಡಿ ಪ್ರಶಸ್ತಿ ಬಂದಿರುವ ಬಗ್ಗೆ ಮಾಹಿತಿ ನೀಡಿದರು. ಇದು ಎಸ್‌ಸಿಡಿಸಿಸಿ ಬ್ಯಾಂಕ್ ಇವತ್ತಿಗೂ ನನ್ನ ಮೇಲಿಟ್ಟ ಗೌರವಕ್ಕೆ ಸಾಕ್ಷಿಯಾಗಿದೆ ಎಂದರು. 18 ವರ್ಷಗಳ ಕಾಲ ಉದ್ಯೋಗಿಯಾಗಿ, 10 ವರ್ಷಗಳ ಕಾಲ ನಿರ್ದೇಶಕನಾಗಿ, 6 ವರ್ಷಗಳ ಕಾಲ ಉಪಾಧ್ಯಕ್ಷನಾಗಿ ಸೇರಿ ಒಟ್ಟು 28 ವರ್ಷ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿದ್ದೇನೆ. ಬ್ಯಾಂಕ್‌ನಲ್ಲಿ ಎಂಕ್ಲೆನ ದುಂಬುದ ಪರಾ ಸೂಪರ್‌ವೈಸರ್ ಬತ್ತೆರ್ ಎಂದು ಹೇಳುವ ಮಾತನ್ನು ಇಂದಿಗೂ ಉಳಿಸಿಕೊಂಡಿದ್ದೇನೆ. ಇಂತಹ ಸಂದರ್ಭದಲ್ಲಿ ನನಗೆ ಸನ್ಮಾನ ಮಾಡಿದ್ದಕ್ಕೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿ, ವಂದಿಸಿದರು. ಪುತ್ತೂರು ಮತ್ತು ಸುಳ್ಯ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ಸಿಇಒಗಳು ಸಭೆಯಲ್ಲಿ ಭಾಗವಹಿಸಿದ್ದರು. ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಸಹಕಾರ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಾನಿರುವ ತನಕ ಸಿಸಿಎ ತರಲು ಬಿಡುವುದಿಲ್ಲ:

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿ ಮತ್ತು ಸಿಬ್ಬಂದಿಗಳ ಮೇಲೆ ನಿಯಂತ್ರಣ ಹೊಂದುವ ನಿಟ್ಟಿನಲ್ಲಿ ಸಿಸಿಎ ಕಾಯ್ದೆ ಜಾರಿಗೆ ತರಲು ಇಲಾಖೆ ಮುಂದಾಗಿದೆ. ಇದರಿಂದ ರಾಜ್ಯದಲ್ಲಿ ನಮ್ಮನ್ನು ಎಲ್ಲಿಗಾದರು ವರ್ಗಾವಣೆ ಮಾಡುತ್ತಾರೆಂಬ ಭಯ ಸಂಘದ ಸಿಇಒ ಮತ್ತು ಸಿಬ್ಬಂದಿಗಳಿಗೆ ಇರಬಹುದು. ಆದರೆ ನಮ್ಮ ರಾಜ್ಯದಲ್ಲಿ ವೈದ್ಯನಾಥನ್ ವರದಿ ಬರುವ ಮೊದಲು ಕೂಡಾ ನಾವು ಇಲ್ಲಿ ಸಿಸಿಎ ಅಳವಡಿಸಲು ಬಿಡಲಿಲ್ಲ. ಈಗ ಸಹ ರಾಜ್ಯದಲ್ಲಿ ಸಿಸಿಎ ಬಂದರೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸಿಸಿಎ ಬರಲು ಬಿಡುವುದಿಲ್ಲ. ನಮ್ಮಲ್ಲಿ ಸಹಕಾರಿ ಸಂಘಗಳ ವ್ಯವಸ್ಥೆ ಬಹಳ ಅಚ್ಚುಕಟ್ಟಾಗಿ ಇರುವುದರಿಂದ ನಮಗೆ ಬೇಕಾದ ಸಿಬ್ಬಂದಿಗಳನ್ನು ನೇಮಿಸುವ ನಿಟ್ಟಿನಲ್ಲಿ ಸಿಸಿಎ ಅಳವಡಿಸುವ ಪ್ರಶ್ನೆ ಬರುವುದಿಲ್ಲ. ನಾನಿರುವ ತನಕ ಸಿಸಿಎ ತರಲು ಬಿಡುವುದಿಲ್ಲ.- ಡಾ| ಎಮ್.ಎನ್.ರಾಜೇಂದ್ರ ಕುಮಾರ್, ಅಧ್ಯಕ್ಷರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್

LEAVE A REPLY

Please enter your comment!
Please enter your name here