`ಸಾಮರಸ್ಯ ಕೆಡದಂತೆ ಕಾನೂನಿನ ಚೌಕಟ್ಟಿನಲ್ಲಿ ಜಾತ್ರೋತ್ಸವ ನಡೆಸಬೇಕು’

0
  • ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಪೂರ್ವಭಾವಿ ಸಭೆಯಲ್ಲಿ ಶಾಸಕ ಮಠಂದೂರು

 

ಪುತ್ತೂರು: ಈ ವರ್ಷದ ಜಾತ್ರೆಗೆ ಕೋವಿಡ್ ಇಲ್ಲ, ಇನ್ನೊಂದು ಪೆಡಂಭೂತವಿದೆ. ಹಿಜಾಬ್ ವಿವಾದದ ಬಳಿಕ ಸಾಮರಸ್ಯ ಕೆಡುವ ವಾತಾವರಣವಿದೆ.ಅದರ ಮಧ್ಯದಲ್ಲಿ ಜಾತ್ರೆ ನಡೆಯಬೇಕು. ಜಾತ್ರೋತ್ಸವದಲ್ಲಿ ಯಾವುದೇ ರೀತಿಯಲ್ಲಿಯೂ ಸಾಮರಸ್ಯ ಕೆಡದಂತೆ ಕಾನೂನಿನ ಚೌಕಟ್ಟಿನಲ್ಲಿ ಜಾತ್ರೆ ನಡೆಯಬೇಕು.ಇದಕ್ಕೆ ಬೇಕಾದಂತೆ ಸಂಘಟನೆಗಳ ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಬೇಕು.ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳು ಉಲ್ಲಂಘನೆಯಾಗದ ರೀತಿಯಲ್ಲಿ ಜಾತ್ರೆ ನಡೆದು ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸೇವೆಯಲ್ಲಿ ನ್ಯೂನತೆಗಳು ಉಂಟಾಗದಂತೆ ಜಾತ್ರೋತ್ಸವ ನಡೆಸುವಂತೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಪೂರ್ವಭಾವಿಯಾಗಿ ನಡೆದ ಭಕ್ತರ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು ಸಲಹೆ ನೀಡಿದ್ದಾರೆ.

 

ಸಭೆಯು ಮಾ.೨೬ರಂದು ಸಂಜೆ ದೇವಸ್ಥಾನದ ಸಭಾಭವನದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರ ಅಧ್ಯಕ್ಷತೆಯಲ್ಲಿ ನಡೆಯಿತು.ಜಾತ್ರೆಗೆ ಬರುವವರಿಗೂ, ಸಂತೆಗೆ ಬರುವವರಿಗೂ ಸಂಭ್ರಮವಿರಬೇಕು.ಕಾನೂನು ಶೇ.100 ಪಾಲನೆ ಮಾಡಬೇಕು ಎಂದು ಹೇಳಿದ ಶಾಸಕರು,ಜಾತ್ರೋತ್ಸವ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖಾಽಕಾರಿಗಳ ಸಭೆ ನಡೆಸಿ, ಭಕ್ತಾದಿಗಳಿಂದ ಬಂದಿರುವ ಸಲಹೆ ಸೂಚನೆಗಳನ್ನು ಸಭೆಯಲ್ಲಿ ಮಂಡಿಸಿ ಅನುಷ್ಟಾನಗೊಳಿಸಲು ಪ್ರಯತ್ನಿಸಲಾಗುವುದು ಎಂದರು.ಜಾತ್ರೋತ್ಸವದಲ್ಲಿ ತಾಲೂಕಿನ ಎಲ್ಲಾ ಜಾತಿ ಸಂಘಟನೆಗಳನ್ನು ಸೇರಿಸಿಕೊಳ್ಳುವ ಮೂಲಕ ಅವರಿಗೂ ಜಾತ್ರೋತ್ಸವದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕು.ರಾಜ್ಯಕ್ಕೇ ಮಾದರಿಯಾಗಬೇಕು ಎಂಬ ದೃಷ್ಟಿಯಿಂದ ವ್ಯವಸ್ಥಾಪನಾ ಸಮಿತಿಯವರು ವಿವಿಧ ವಿಭಾಗ ಮಾಡಿ ಜವಾಬ್ದಾರಿ ಹಂಚಿಕೊಂಡಿದ್ದು ಅದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮಠಂದೂರು ತಿಳಿಸಿದರು.

ಜಾತ್ರಾ ಗದ್ದೆಯಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು: ಧಾರ್ಮಿಕ ದತ್ತಿ ಇಲಾಖೆಯ ತಿದ್ದುಪಡಿಯಂತೆ,ದೇವಸ್ಥಾನದ ಆವರಣ ಹಾಗೂ ಆಸುಪಾಸಿನಲ್ಲಿ ವ್ಯವಹಾರ ನಡೆಸಲು ಅನ್ಯಮತೀಯರಿಗೆ ಏಲಂನಲ್ಲಿ ಪಡೆದುಕೊಳ್ಳದಂತೆ ನಿಯಮವಿದೆ.ಇದುಪ್ರಸ್ತುತ ಚರ್ಚೆಯಲ್ಲಿರುವ ವಿಷಯವೂ ಆಗಿದ್ದು,ಜಾತ್ರೋತ್ಸವದಲ್ಲಿ ಸಮಿತಿ ಯಾವ ಕ್ರಮಕೈಗೊಳ್ಳಲಿದೆ ಎಂದು ಶಾಸಕರು ಪ್ರಶ್ನಿಸಿದರು.ಈ ಬಗ್ಗೆ ಸಭೆಯಲ್ಲಿ ಭಕ್ತಾದಿಗಳಿಂದ ಸಲಹೆ ಸೂಚನೆಗಳು ವ್ಯಕ್ತವಾಯಿತು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಜಾತ್ರಾ ಗದ್ದೆಯ ಏಲಂನಲ್ಲಿ ಭಾಗವಹಿಸಲು ಹಿಂದು ಬಾಂಧವರಿಗೆ ಮಾತ್ರ ಅವಕಾಶ ಎಂದು ಈಗಾಗಲೇ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ.ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು.ಟೆಂಡರ್ ವಹಿಸಿಕೊಳ್ಳುವವರು ಅವರ ಗುರುತಿನ ಚೀಟಿ, ಆಧಾರ ಕಾರ್ಡ್ ಸಲ್ಲಿಸಬೇಕು. ಟೆಂಡರ್ ಪಡೆದುಕೊಂಡವರಿಗೆ ಗುರುತಿನ ಚೀಟಿ ನೀಡಲಾಗುತ್ತಿದ್ದು ಅದನ್ನು ಧರಿಸಿಕೊಂಡೇ ಅವರು ವ್ಯವಹಾರದಲ್ಲಿ ತೊಡಗಿಸಿಕೊಳ್ಳಬೇಕು.ಮಳಿಗೆಯಲ್ಲಿರುವ ಪ್ರತಿಯೊಬ್ಬರ ಮಾಹಿತಿಯನ್ನು ದೇವಸ್ಥಾನಕ್ಕೆ ನೀಡಬೇಕು.ಮಳಿಗೆಯಲ್ಲಿರುವ ಪ್ರತಿಯೊಬ್ಬ ಸೇಲ್ಸ್‌ಮೆನ್‌ಗಳಿಗೂ ಗುರುತಿನ ಚೀಟಿ ನೀಡಲಾಗುವುದು. ಟ್ರೇಡ್ ಫೇರ್‌ನಲ್ಲಿ ಬ್ಯಾಂಕ್, ಇಲಾಖೆಗಳು ಭಾಗವಹಿಸಲಿದ್ದು ಹಿಂದು ಬಾಂಧವರನ್ನೇ ಕಳುಹಿಸಿಕೊಡುವಂತೆ ಅವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.ಜಾತ್ರಾ ಗದ್ದೆಯಲ್ಲಿ ಜೈಂಟ್ ವ್ಹೀಲ್‌ಗಳು ಪ್ರಮುಖವಾಗಿದ್ದು ಅದನ್ನು ಗುತ್ತಿಗೆ ಪಡೆದವರು ಹಿಂದುಗಳಾಗಿದ್ದರೂ ಅದನ್ನು ನಡೆಸುವವರು ಅನ್ಯಧರ್ಮೀಯರಾಗಿರುತ್ತಾರೆ.ಜೈಂಟ್ ವ್ಹೀಲ್ ಇಲ್ಲದೆಯೂ ಜಾತ್ರೋತ್ಸವಗಳು ನಡೆದಿದೆ.ಅದಿಲ್ಲದೆ ಆದಾಯಕ್ಕೆ ಸ್ವಲ್ಪ ಹಿನ್ನಡೆಯಾಗಬಹುದು. ಹಾಗಿದ್ದರೂ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಭಿಪ್ರಾಯ ವ್ಯಕ್ತವಾಯಿತು.

ಬ್ರಹ್ಮಕಲಶೋತ್ಸವದ ಮಾದರಿಯಲ್ಲಿ ಜಾತ್ರೆ: ಜಾತ್ರೋತ್ಸವವನ್ನು ಯೋಜನಾ ಬದ್ದವಾಗಿ ನಡೆಸಲಾಗುವುದು.ಸೀಮೆಯ ಎಲ್ಲಾ ಗ್ರಾಮ ದೇವಸ್ಥಾನಗಳನ್ನು, ಬಂಧುಗಳನ್ನು ಸೇರಿಸಿಕೊಂಡು ಬ್ರಹ್ಮಕಲಶೋತ್ಸವದ ಮಾದರಿಯಲ್ಲಿ ಜಾತ್ರೋತ್ಸವವನ್ನು ವೈಭವವದಿಂದ ನಡೆಸುವ ಯೋಜನೆಯಿದೆ.ಜಾತ್ರೋತ್ಸವವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಿಗೆ ವಿವಿಧ ಜವಾಬ್ದಾರಿಗಳನ್ನು ಹಂಚಲಾಗಿದೆ. ಶಾಸಕರ ಮಾರ್ಗದರ್ಶನದಲ್ಲಿ ಜಾತ್ರೋತ್ಸವಗಳು ನಡೆಯಲಿದೆ ಎಂದು ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಹೇಳಿದರು.

ಮಾ.29:ಜಾತ್ರಾ ಗದ್ದೆ ಏಲಂ: ಜಾತ್ರಾ ಗದ್ದೆಯಲ್ಲಿ ಸಂತೆ ವ್ಯಾಪಾರಕ್ಕೆ ಸಂಬಂಧಿಸಿ ಮಾ.29ರಂದು ಸಭಾಭವನದಲ್ಲಿ ಏಲಂ ಪ್ರಕ್ರಿಯೆ ನಡೆಯಲಿದೆ.ಏಲಂ ಪ್ರಕ್ರಿಯೆ ಸರಕಾರದ ಮಾರ್ಗದರ್ಶನದಂತೆ ನಡೆಯಲಿದೆ ಎಂದು ನಗರ ಸಭಾ ಸದಸ್ಯ ಜಗನ್ನಿವಾಸ ರಾವ್ ತಿಳಿಸಿದರು.

ಮಾ.30:ಕಟ್ಟೆಪೂಜಾ ಸಮಿತಿಗಳ ಸಭೆ: ಜಾತ್ರೋತ್ಸವದಲ್ಲಿ ಕಟ್ಟೆಪೂಜೆಗೆ ಮಹತ್ವವಿದೆ.ಒಟ್ಟು ೧೫೨ ಕಟ್ಟೆಗಳಲ್ಲಿ ದೇವರು ಪೂಜೆ ಸ್ವೀಕರಿಸಲಿದ್ದಾರೆ.ಪೇಟೆ ಸವಾರಿ, ಕಟ್ಟೆಪೂಜೆಯ ಸಂದರ್ಭದಲ್ಲಿ ಯಾವ ರೀತಿ ಸಿದ್ದತೆಗಳಿರಬೇಕು ಎಂದು ನಿಯಮಗಳ ಬಗ್ಗೆ ತಿಳಿಸಲು ಮಾ.೩೦ರಂದು ಕಟ್ಟೆಪೂಜಾ ಸಮಿತಿಗಳ ಸಭೆ ನಡೆಸಲಾಗುವುದು ಎಂದು ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ ತಿಳಿಸಿದರು.

ಪ್ರತಿದಿನ ವಿವಿಧ ಬಣ್ಣಗಳ ಅಲಂಕಾರ: ಜಾತ್ರೋತ್ಸವದಲ್ಲಿ ದೇವರ ಗರ್ಭಗುಡಿ, ಇತರ ಗುಡಿಗಳು ಹಾಗೂ ದೇವಸ್ಥಾನದಲ್ಲಿ ಪ್ರತಿದಿನ ವಿವಿಧ ಜಾತಿಯ, ವಿವಿಧ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗುವುದು.ವಿಷು ಹಬ್ಬದ ದಿನ ವಿಶೇಷವಾಗಿ ಹಿಂಗಾರದಿಂದ ಅಲಂಕಾರ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.ಹೂವಿನ ಅಲಂಕಾರ ಸೇವೆ, ಈ ವರ್ಷ ವಿಶೇಷವಾಗಿ ಪುಷ್ಪ ಕನ್ನಡ ಸೇವೆಯನ್ನು ನಡೆಸಲಾಗುವುದು.ಶಿವರಾತ್ರಿ ದಿನದಂತೆ ಪ್ರಸಾದ ವಿತರಣೆಗೆ ಕ್ರಮಕೈಗೊಳ್ಳುವುದಾಗಿ ವ್ಯವಸ್ಥಾಪನಾ ಸಮಿತಿ ಸದಸ್ಯೆ ಸುಧಾ ಎಸ್.ರಾವ್ ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಉಪನ್ಯಾಸ: ಜಾತ್ರೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಏ.೧೦ರಂದು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.ಎ.13ರಂದು ಸಂಜೆ ೫ ಗಂಟೆಯಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ.ಪ್ರತಿದಿನ ೫ ಗಂಟೆಯಿಂದ ೬ರ ತನಕ ಕುಣಿತ ಭಜನೆ, ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ೩೫ ತಂಡಗಳು ಹೆಸರು ನೋಂದಾಯಿಸಿವೆ ಎಂದು ಸದಸ್ಯ ಐತ್ತಪ್ಪ ನಾಯ್ಕ ತಿಳಿಸಿದರು.

ಮೂರು ದಿನ ವಿಶೇಷ ಕಾರ್ಯಕ್ರಮ: ಸಾಂಸ್ಕೃತಿಕ ಕಾರ್ಯಕ್ರಮಗಳು ಸೇವಾ ರೂಪದಲ್ಲಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಶೇಷವಾಗಿ ಎ.೧೧ರಂದು ಸಂಸ್ಕಾರ ಭಾರತಿಯಿಂದ ಜಾಗೋ ಭಾರತ್, ಎ.೧೪ರಂದು ಪಟ್ಲ -ಂಡೇಶನ್‌ನ ಪ್ರಾಯೋಜಕತ್ವದಲ್ಲಿ ವಿಶೇಷ ಕಾರ್ಯಕ್ರಮ ಹಾಗೂ ಎ.೧೬ರಂದು ಶಾಸಕರ ನೇತತ್ವದಲ್ಲಿ ಸ್ವರಸಂಗಮ ವಿಶೇಷವಾಗಿ ನಡೆಯಲಿದೆ ಎಂದು ಅಧ್ಯಕ್ಷ ಕೇಶವ ಪ್ರಸಾದ್ ತಿಳಿಸಿದರು.

ಹಾಳೆತಟ್ಟೆ ನೀಡಿ ಸಹಕರಿಸಿ: ಗದ್ದೆಯಲ್ಲಿ ಸ್ವಚ್ಚತೆ ಹಾಗೂ ಭದ್ರತೆಗಾಗಿ ವಿಶೇಷ ನಿಗಾ ವಹಿಸಲಾಗುವುದು.ಹಸಿಕಸಗಳನ್ನು ಸಂಗ್ರಹಿಸಿ ಕಾಂಪೋಸ್ಟ್ ಗೊಬ್ಬರ ತಯಾರಿಸಲಾಗುವುದು.ಹಾಳೆ ತಟ್ಟೆಯಲ್ಲಿ ಅನ್ನದಾನ ನಡೆಯಲಿದ್ದು ಹೊರೆಕಾಣಿಕೆಯಲ್ಲಿ ಹಾಳೆತಟ್ಟೆ ನೀಡಿ ಸಹಕರಿಸುವಂತೆ ಸದಸ್ಯ ರಾಮದಾಸ್ ತಿಳಿಸಿದರು.
ಎ.9ರಂದು ಹೊರೆಕಾಣಿಕೆ: ದೇವಸ್ಥಾನದ ಜಾತ್ರೋತ್ಸವಕ್ಕೆ ಪೂರಕವಾಗಿ ಎ.9ರಂದು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.ಸಂಘ-ಸಂಸ್ಥೆಗಳು, ಭಜನಾ ಮಂದಿರಗಳು, ದೇವಸ್ಥಾನಗಳ ಮೂಲಕ ತಾಲೂಕಿನ ವಿವಿಧ ಭಾಗಗಳಿಂದ ಸಂಗ್ರಹಿಸಿದ ಹೊರೆಕಾಣಿಕೆಯು ದರ್ಬೆ ಹಾಗೂ ಬೊಳುವಾರಿನಿಂದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಲಿದೆ. ಜಾತ್ರೋತ್ಸವದ ಪ್ರತಿದಿನವೂ ಭಕ್ತರಿಗೆ ಅನ್ನದಾನ ನಡೆಯಲಿದೆ.ಅನ್ನದಾನ ಸೇವೆಗೆ ಪ್ರತಿಯೊಬ್ಬರು ಸಹಕರಿಸುವಂತೆ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು ತಿಳಿಸಿದರು.ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್.ಭಟ್‌ರವರು ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ, ವೈದಿಕ ಕಾರ್ಯಕ್ರಮಗಳು ಕುರಿತು ಮಾಹಿತಿ ನೀಡಿದರು.

ಕಟ್ಟೆಪೂಜೆ ನಡೆಸುವವರಿಂದಲೇ ಅನ್ನದಾನ ನಡೆಯಲಿ: ದೇವರು ಪೇಟೆ ಸವಾರಿಯ ಮೂಲಕ ಕಟ್ಟೆಪೂಜೆ ನಡೆಯುತ್ತಿದ್ದು ದೇವಸ್ಥಾನದಲ್ಲಿ ಜಾತ್ರೋತ್ಸವದ ಸಂದರ್ಭದಲ್ಲಿ ನಡೆಯುವ ಅನ್ನದಾನ ಸೇವೆ ಆಯಾ ದಿನದ ಕಟ್ಟೆಪೂಜೆ ನಡೆಸುವವರ ಮುಖಾಂತರ ನಡೆಯಲಿ ಎಂದು ಕಿಟ್ಟಣ್ಣ ಗೌಡ ಬಪ್ಪಳಿಗೆ ಸಲಹೆ ನೀಡಿದರು.

ಸಿಡಿಮದ್ದು ಗುತ್ತಿಗೆ ಹಿಂದುಗಳಿಗೆ: ಈ ವರ್ಷದ ಜಾತ್ರೋತ್ಸವದಲ್ಲಿ ಸಿಡಿಮದ್ದು ಪ್ರದರ್ಶಕ್ಕೆ ಅನ್ಯ ಧರ್ಮದವರಿಗೆ ಅವಕಾಶ ನೀಡದೇ ಹಿಂದುಗಳಿಗೇ ನೀಡಲಾಗುವುದು.ಇದಕ್ಕಾಗಿ ಉಪ ಸಮಿತಿಯನ್ನು ರಚಿಸಿಕೊಳ್ಳಲಾಗಿದೆ. ಅದರ ಮೂಲಕ ನಿರ್ವಹಣೆ ನಡೆಯಲಿದೆ.ವಿದ್ಯುತ್ ಮೂಲಕ ಸಿಡಿಸುವ ಚಿಂತನೆ ನಡೆಯುತ್ತಿದೆ ಎಂದು ಅಧ್ಯಕ್ಷ ಕೇಶವ ಪ್ರಸಾದ್ ತಿಳಿಸಿದರು.

ಸ್ವಚ್ಛತೆಗೆ ಆದ್ಯತೆ, ವಾಹನ ಪಾರ್ಕಿಂಗ್‌ಗೆ ಖಾಸಗಿಯವರಿಗೆ ಮನವಿ: ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಜಾತ್ರಾ ಸಮಯದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.ಜಾತ್ರಾ ಸಮಯದಲ್ಲಿ ವಾಹನ ಪಾರ್ಕಿಂಗ್‌ಗೆ ಅವಕಾಶ ಕೊಡುವಂತೆ ಖಾಸಗಿ ಜಾಗದ ಮ್ಹಾಲಕರಿಗೆ ಮನವಿ ಮಾಡಲಾಗುವುದು.ಸ್ವಚ್ಚತೆ ಹಾಗೂ ಕುದ್ರೋಳಿ ಮಾದರಿಯಲ್ಲಿ ದೀಪಾಲಂಕಾರ ಮಾಡುವ ಬಗ್ಗೆ ವರ್ತಕರ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಜಾತ್ರೋತ್ಸವದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ತೀರ್ಥ ಪ್ರಸಾದಕ್ಕೆ ಹೆಚ್ಚುವರಿ ವಿಭಾಗವನ್ನು ತೆರೆಯಬೇಕು. ದೇವರ ಪೇಟೆ ಸವಾರಿ, ಕಟ್ಟೆಯ ಪೂಜೆ ಸಂದರ್ಭದಲ್ಲಿ ರಸ್ತೆಯಲ್ಲಿ ಪಟಾಕಿ ಸಿಡಿಸಲು ಅವಕಾಶ ನೀಡಬಾರದು.ಜಾತ್ರಾ ಗದ್ದೆಯಲ್ಲಿ ಭಿಕ್ಷುಕರಿಗೆ ಅವಕಾಶ ನೀಡಬಾರದು. ಕಳೆದ ವರ್ಷ ಸೂತ್ರಬೆಟ್ಟು, ಹೆಬ್ಬಾರಬೈಲು ಸವಾರಿ ಸಂದರ್ಭದಲ್ಲಿ ರೈಲು ಬಂದು ದೇವರು ಕಾಯಬೇಕಾದ ಪರಿಸ್ಥಿತಿ ಬಂದಿತ್ತು.ಈ ಬಾರಿ ರೈಲು ಸಂಚರಿಸುವ ಸಮಯದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು.ಸಂಚಾರಿ ನಿಯಮಕ್ಕೆ ಆದ್ಯತೆ ನೀಡಬೇಕು.ರಥೋತ್ಸವ ಸೇವೆಯಲ್ಲಿ ವಿಶೇಷ ಸೇವೆಗಳು ಮಾತ್ರವೇ ಇದ್ದು ಜನ ಸಾಮಾನ್ಯರಿಗೂ ಸಣ್ಣಪುಟ್ಟ ಸೇವೆಗೆ ಅವಕಾಶ ನೀಡಬೇಕು ಮೊದಲಾದ ಸಲಹೆ, ಸೂಚನೆಗಳನ್ನು ಭಕ್ತಾದಿಗಳು ನೀಡಿದರು.ರಾಧಾಕೃಷ್ಣ ನಂದಿಲ, ಮಾಜಿ ಮೊಕ್ತೇಸರ ನ್ಯಾಯವಾದಿ ಚಿದಾನಂದ ಬೈಲಾಡಿ,ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ್ ರಾವ್ ಆರ್ಯಾಪು, ಆರ್.ಸಿ.ನಾರಾಯಣ, ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಗೋಪಾಲ್ ಎಂ.ಯು., ಡಾ|ರಾಜೇಶ್ ಬೆಜ್ಜಂಗಳ, ಸುದರ್ಶನ್, ಅಣ್ಣಪ್ಪ ಕಾರೆಕ್ಕಾಡು, ಶ್ಯಾಮಸುದರ್ಶನ, ನಯನಾ ರೈ, ಎ.ಜೆ.ರೈ, ಪ್ರಮೀತಾ ಸಿ.ಹಾಸ್ ಮೊದಲಾದವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ವೀಣಾ ಬಿ.ಕೆ , ದೇವಳದ ವಾಸ್ತು ತಜ್ಞ  ಇಂಜಿನಿಯರ್  ಪಿ.ಜಿ ಜಗನ್ನಿವಾಸ್ ರಾವ್  ಉಪಸ್ಥಿತರಿದ್ದರು. ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು, ಉದ್ಯಮಿಗಳಾದ ದೇವಪ್ಪ ನೋಂಡ, ಸೀತಾರಾಮ ರೈ ಕೆದಂಬಾಡಿಗುತ್ತು, ಸುರೇಶ್ ಶೆಟ್ಟಿ, ರೋಹಿಣಿ ರಾಘವ ಆಚಾರ್ಯ, ರಾಧಾಕೃಷ್ಣ ನಾಕ್, ಸತೀಶ್ ನಾಕ್, ಹರಿಣಿ ಪುತ್ತೂರಾಯ, ಪದ್ಮಾ ಆಚಾರ್ಯ ಸೇರಿದಂತೆ ಹಲವು ಮಂದಿ ಭಕ್ತರು ಸಭೆಯಲ್ಲಿ ಭಾಗವಹಿಸಿದ್ದರು. ಓಂಕಾರ ನಾದದೊಂದಿಗೆ ಸಭೆಯು ಪ್ರಾರಂಭಗೊಂಡಿತು.ದೇವಸ್ಥಾನದ ಕಾರ್ಯನಿರ್ಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು.

ಎ.3:ಮಹಾ ಸ್ವಚ್ಚತಾ ಅಭಿಯಾನ

ಜಾತ್ರೋತ್ಸವದಲ್ಲಿಪ್ರತಿದಿನ ಸುಮಾರು 300ಸ್ವಯಂ ಸೇವಕರ ಅವಶ್ಯಕತೆಯಿದೆ.ತಂಡವಾಗಿ ಸ್ವಯಂ ಸೇವಕರಾಗಿ ಭಾಗವಹಿಸುವವವರಿಗೆ ಆದ್ಯತೆ ನೀಡಲಾಗುವುದು. ಕಳೆದ ವರ್ಷದಂತೆ ಈ ವರ್ಷವೂ ಎ.3ರಂದು ದೇವಸ್ಥಾನದ ಆವರಣದಲ್ಲಿ ಮಹಾ ಸ್ವಚ್ಚತಾ ಅಭಿಯಾನ ನಡೆಸಲಾಗುವುದು ಎಂದು ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಚಂದ್ರ ಕಾಮತ್ ತಿಳಿಸಿದರು.

ಬ್ರಹ್ಮಕಲಶೋತ್ಸವದ ಮಾದರಿಯಲ್ಲಿ ಜಾತ್ರೆ

ಎ.3:ಮಹಾ ಸ್ವಚ್ಚತಾ ಅಭಿಯಾನ

ಮಾ.29:ಜಾತ್ರಾ ಗದ್ದೆ ಏಲಂ

ಮಾ.30:ಕಟ್ಟೆಪೂಜಾ ಸಮಿತಿಗಳ ಸಭೆ

ಎ.9ರಂದು ಹೊರೆಕಾಣಿಕೆ:

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 35 ತಂಡಗಳಿಂದ ನೋಂದಣಿ

ಮೂರು ದಿನ ವಿಶೇಷ ಕಾರ್ಯಕ್ರಮ

ಪ್ರತಿದಿನ ವಿವಿಧ ಬಣ್ಣಗಳ ಅಲಂಕಾರ

ಹೊರೆಕಾಣಿಕೆಯಲ್ಲಿ ಹಾಳೆತಟ್ಟೆ ನೀಡಿ ಸಹಕರಿಸಿ

ಕಟ್ಟೆಪೂಜೆ ನಡೆಸುವವರಿಂದಲೇ ಅನ್ನದಾನ ನಡೆಯಲಿ

ಜಾತ್ರಾ ಗದ್ದೆಯಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು

ಸಿಡಿಮದ್ದು ಗುತ್ತಿಗೆ ಹಿಂದುಗಳಿಗೆ

ಸ್ವಚ್ಛತೆಗೆ ಆದ್ಯತೆ, ವಾಹನ ಪಾರ್ಕಿಂಗ್‌ಗೆ ಖಾಸಗಿಯವರಿಗೆ ಮನವಿ

LEAVE A REPLY

Please enter your comment!
Please enter your name here