ಸುದ್ದಿ ಬಳಗದ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಸಂಪೂರ್ಣ ಸಹಕಾರದ ಭರವಸೆ

0

  • ಭ್ರಷ್ಟಾಚಾರ ವಿರೋಧಿ ಫಲಕ ಬಿಡುಗಡೆಗೊಳಿಸಿದ ಶಾಸಕ ಸಂಜೀವ ಮಠಂದೂರು
  • ಪ್ರತಿಯೊಬ್ಬರೂ ಭ್ರಷ್ಟಾಚಾರ ವಿರೋಧಿ ಸ್ಟಿಕ್ಕರ್ ಅಂಟಿಸಲು ಮನವಿ

ಪುತ್ತೂರು: ಸುದ್ದಿ ಬಿಡುಗಡೆ ಪತ್ರಿಕಾ ಬಳಗ ಹಮ್ಮಿಕೊಂಡಿರುವ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ. ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ಹೊರ ತರಲಾಗಿರುವ ‘ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ-ಉತ್ತಮ ಸೇವೆಗೆ ಪುರಸ್ಕಾರ’ ಸ್ಟಿಕ್ಕರನ್ನು ಜ.9ರಂದು ಹಿರೇಬಂಡಾಡಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕರು, ಇಂದು ಇಡೀ ದೇಶವನ್ನು ಆವರಿಸಿರುವ ಲಂಚ ಮತ್ತು ಭ್ರಷ್ಟಾಚಾರ ಜನರಿಗೆ ಮಾರಕವಾಗಿ ಪರಿಣಮಿಸಿದೆ. ಈ ಸಂದರ್ಭದಲ್ಲಿ ಪುತ್ತೂರಿನ ನಗರಸಭೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಭ್ರಷ್ಟಾಚಾರ, ಲಂಚ ಮುಕ್ತವಾದ ವಾತಾವರಣ ಇರಬೇಕೆಂಬ ನಿಟ್ಟಿನಲ್ಲಿ ಸುದ್ದಿ ಮಾಧ್ಯಮವು ಡಾ. ಯು.ಪಿ. ಶಿವಾನಂದರವರ ನೇತೃತ್ವದಲ್ಲಿ ಒಂದು ಹಂತದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಿದೆ.

ಜ.10ರಂದು ಪುತ್ತೂರಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಲಂಚ ಮತ್ತು ಭ್ರಷ್ಟಾಚಾರದ ಪ್ರತಿಕೃತಿ ದಹನ ಮಾಡುವ ಅಂದರೆ, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ ಬೆಂಕಿಗಾಹುತಿ ಮಾಡುತ್ತೇವೆ ಎನ್ನುವ ತೀರ್ಮಾನವನ್ನು ತೆಗೆದುಕೊಳ್ಳುವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳಬೇಕಿತ್ತು. ಆದರೆ ಬೆಂಗಳೂರಿನಲ್ಲಿ ಅನಿವಾರ್ಯ ಕಾರ್ಯಕ್ರಮವಿರುವ ಕಾರಣ ಕಾರ್ಯಕ್ರಮಕ್ಕೆ ಗೈರು ಹಾಜರಾಗುತ್ತಿದ್ದೇನೆ. ಇದಕ್ಕೆ ಸಂಬಂಧಿಸಿದ ಏನೆಲ್ಲಾ ಕಾರ್ಯಕ್ರಮಗಳಿವೆಯೋ ಅದಕ್ಕೆಲ್ಲಾ ಪೂರ್ತಿ ಸಹಕಾರ ನೀಡಿ, ಭ್ರಷ್ಟಾಚಾರ ಮುಕ್ತ ಪುತ್ತೂರು ಮಾಡಲು ನಾನು ಸುದ್ದಿ ಮಾಧ್ಯಮಕ್ಕೆ, ಡಾ| ಯು.ಪಿ. ಶಿವಾನಂದರಿಗೆ ಮತ್ತು ಅವರ ಬಳಗಕ್ಕೆ ಪೂರ್ತಿ ಸಹಕಾರ ನೀಡುತ್ತೇನೆ ಎಂದರು. ಭ್ರಷ್ಟಾಚಾರ ವಿರೋಧಿ ಸ್ಟಿಕ್ಕರ್ ಬಿಡುಗಡೆಗೊಳಿಸುವ ಮೂಲಕ ಜಾಗೃತಿ ಮಾಡುವಂತಹ ಕೆಲಸಕ್ಕೆ ಚಾಲನೆ ನೀಡಿದ್ದೇ ವೆ. ಈ ರೀತಿಯ ಸ್ಟಿಕ್ಕರ್‌ನ್ನು ಜನರು ಗ್ರಾಮ ಗ್ರಾಮಗಳಲ್ಲಿ, ತಮ್ಮ ಮನೆಗಳಲ್ಲಿ, ವಾಹನಗಳಲ್ಲಿ ಅಳವಡಿಸಿ ದಿನನಿತ್ಯ ಭ್ರಷ್ಟಾಚಾರ ಮತ್ತು ಲಂಚಕ್ಕೆ ಇತಿಶ್ರೀ ಹಾಕುವ ಕೆಲಸವನ್ನು ಮಾಡಬೇಕು ಎಂದು ಆಶಿಸುತ್ತಾ ಸ್ಟಿಕರ್‌ನ್ನು ಬಿಡುಗಡೆಗೊಳಿಸುತ್ತಿದ್ದೇನೆ ಎಂದು ಶಾಸಕರು ಹೇಳಿದರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಸುದ್ದಿ ಬಿಡುಗಡೆಯ ಪ್ರಧಾನ ಸಂಪಾದಕ ಡಾ.ಯು.ಪಿ.ಶಿವಾನಂದ, ಸುದ್ದಿ ಬಿಡುಗಡೆ ಸಿಇಓ ಸೃಜನ್ ಊರುಬೈಲು, ಮುಖ್ಯ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಮತ್ತು ಹಿರೇಬಂಡಾಡಿ ಗ್ರಾ.ಪಂ. ಸದಸ್ಯ ಶೌಕತ್ ಆಲಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here