ಪುತ್ತೂರು: ಕೊರೋನಾ ಹಾಗೂ ಓಮಿಕ್ರಾನ್ ಸೊಂಕಿನ ಪ್ರಕರಣಗಳು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜ.8ರಂದು ಕೆಎಸ್‌ಆರ್‌ಟಿಸಿಯ ಪುತ್ತೂರು ವಿಭಾಗದಲ್ಲಿ ಯಾವುದೇ ತೊಂದರೆ ಆಗದಂತೆ ಪ್ರಯಾಣಿಕರ ಲಭ್ಯತೆಯ ಆಧಾರದಲ್ಲಿ ಬಸ್ ಸೌಲಭ್ಯವನ್ನು ಕಲ್ಪಿಸಿದೆ. ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿ ದೂರದ ಊರುಗಳನ್ನು ಹೊರತು ಪಡಿಸಿ ಸ್ಥಳೀಯವಾಗಿಯೇ 100-125 ಬಸ್‌ಗಳು ಕಾರ್ಯಾಚರಣೆ ನಡೆಸಿದೆ.
ಜ.7ರಂದು ಸಂಜೆ ಘಟಕಗಳಿಗೆ ಹೊಂದಿಕೊಂಡಂತೆ ವಿವಿಧ ಕಡೆಗಳಲ್ಲಿ ಹಾಲ್ಟ್‌ಗೆ ತೆರಳಿದ್ದ ಬಸ್‌ಗಳು ಬೆಳಿಗ್ಗೆ ಎಂದಿನಂತೆ ಆಯಾ ರೂಟ್‌ಗಳಿಂದ ಬಸ್ ನಿಲ್ದಾಣಗಳಿಗೆ ಆಗಮಿಸಿದೆ. ಬೆಳಿಗ್ಗೆಯ ಅವಧಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಿತ್ತು. ಈ ಸಂದರ್ಭದಲ್ಲಿ ಮಂಗಳೂರಿಗೆ 15 ನಿಮಿಷಕ್ಕೊಂದರಂತೆ, ಬಳಿಕ ಅರ್ಧ ತಾಸಿಗೊಂಡು ಬಸ್ ಕಾರ್ಯಾಚರಿಸಿದೆ. ಸುಳ್ಯಕ್ಕೆ ಪ್ರತಿ ತಾಸಿಗೊಂದು ಹಾಗೂ ಉಪ್ಪಿನಂಗಡಿಗೆ ಅರ್ಧ ತಾಸಿಗೊಂದರಂತೆ ಬಸ್ ಸಂಚರಿಸಿದೆ. ಉಳಿದ ರೂಟ್‌ಗಳಲ್ಲಿ ಪ್ರಯಾಣಿಕರ ಬೇಡಿಕೆಗೆ ಹೊಂದಿಕೊಂಡು ಬಸ್‌ಗಳು ಕಾರ್ಯಾಚರಿಸಿದೆ. ನಂತರ ಪ್ರಯಾಣಿಕರ ಲಭ್ಯತೆಗೆ ಹೊಂದಿಕೊಂಡಂತೆ ವಿವಿಧ ಪ್ರದೇಶಗಳಿಗೆ ಬಸ್ ಸಂಚಾರ ನಡೆಸಿದೆ.
ಜ.10ರಂದು ಎಂದಿನಂತೆ ಬಸ್:
ಎರಡು ದಿನದ ವಾರಾಂತ್ಯ ಕರ್ಫ್ಯೂ ಮುಗಿದು ಜ.10ರಂದು ಬೆಳಗ್ಗಿನಿಂದಲೇ ಎಂದಿನಂತೆ ಬಸ್‌ಗಳು ಕಾರ್ಯಾಚರಿಸಲಿದೆ. ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಜ.೯ರ ಸಂಜೆ ಬಸ್‌ಗಳು ಆಯಾ ಘಟಕಗಳ ವ್ಯಾಪ್ತಿಯಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ಬಸ್‌ಗಳು ತೆರಳಲಿದೆ. ಬೆಳಿಗ್ಗೆ ಎಂದಿನಂತೆ ಎಲ್ಲಾ ರೂಟ್‌ಗಳಲ್ಲಿ ಬಸ್‌ಗಳು ಕಾರ್ಯಾಚರಿಸಲಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.