ಶಾಲೆಯ ಆವರಣದಲ್ಲಿ ಬಾಯ್ದೆರೆದ ಮೋರಿಯಿಂದ ಅಪಾಯದ ಕರೆಗಂಟೆ

0

  • ದುರ್ನಾತದಲ್ಲಿ ಪಾಠ ಕೇಳಬೇಕಾದ ಅನಿವಾರ್ಯತೆಯಲ್ಲಿ ಮಕ್ಕಳು

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಆವರಣದಲ್ಲಿ ಕೊಳಚೆ ನೀರು ಹೋಗುವ ಮೋರಿಯೊಂದು ಎರಡು ಕಡೆ ಬಾಯ್ದೆರೆದು ನಿಂತಿದ್ದು, ಮಕ್ಕಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆಯಲ್ಲದೇ, ಶಾಲೆಯ ಆವರಣ ದುರ್ನಾತ ಬೀರುವಂತಾಗಿದೆ.


ಉಪ್ಪಿನಂಗಡಿಯ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದಲ್ಲೇ ರಸ್ತೆಯ ಇನ್ನೊಂದು ಬದಿ ಶಾಲೆಗೆ ಸೇರಿದ ಆಸ್ತಿಯಿದ್ದು, ಅಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗಳಿವೆ. ಇಲ್ಲಿ ಸುಮಾರು ೬೦ ಮಕ್ಕಳಿದ್ದಾರೆ. ಇದೇ ಜಾಗದ ಪಕ್ಕದಲ್ಲೇ ಅಂಗನವಾಡಿಗೆ ಸೇರಿದ ಜಾಗದಲ್ಲಿ ಅಂಗನವಾಡಿ ಕೇಂದ್ರವಿದ್ದು, ಅಲ್ಲಿ ಸುಮಾರು ೩೫ ಮಂದಿ ಮಕ್ಕಳಿದ್ದಾರೆ. ಇವೆರಡಕ್ಕೂ ಆವರಣ ಗೋಡೆ ಹಾಗೂ ಅಂಗಳ ಒಂದೇ ಆಗಿದೆ. ಇದರ ಸುತ್ತಮುತ್ತಲಿನ ಪ್ರದೇಶದ ವಸತಿ ಗೃಹ, ಮನೆಗಳಿಂದ ದುರ್ನಾತ ಬೀರುವ ಕೊಳಚೆ ನೀರು ಹರಿದು ಬರಲು ಶಾಲೆಯ ಅವರಣದಲ್ಲಿ ಮೋರಿ ಹಾಕಲಾಗಿದ್ದು, ಅದನ್ನು ಮಣ್ಣಿನಲ್ಲಿ ಹೂತು ಮುಚ್ಚಲಾಗಿದೆ. ಆದರೆ ಇದೀಗ ಈ ಮೋರಿ ಶಿಥಿಲಾವಸ್ಥೆ ತಲುಪಿದ್ದು, ಶಾಲಾ ಅಂಗಳದಲ್ಲಿ ಎರಡು ಕಡೆ ಮೋರಿ ಒಡೆದು ಹೋಗಿದ್ದು, ಮೋರಿಯ ಸರಳುಗಳು ಬಾಯ್ದೆರೆದು ನಿಲ್ಲುವ ಮೂಲಕ ಅಪಾಯದ ಗಂಟೆ ಬಾರಿಸುತ್ತಿವೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಮಕ್ಕಳ ಕಾಲು ಇದರೊಳಗೆ ಸಿಲುಕಿ ಅನಾಹುತ ಸಂಭವಿಸುವ ಸಾಧ್ಯತೆಯಿದೆ.
ದುರ್ನಾತ ಪರಿಸರ: ಶಾಲೆಯ ಆವರಣದ ಮೂಲಕ ಮೋರಿಯೊಳಗಿಂದ ಬರುವ ಕೊಳಚೆ ನೀರು ಶಾಲೆಯ ಆವರಣಗೋಡೆಗೆ ತಾಗಿಕೊಂಡೇ ಇರುವ ರಸ್ತೆ ಬದಿಯ ತೆರೆದ ಚರಂಡಿಗೆ ಬಂದು ಬೀಳುತ್ತಿದ್ದು, ಮುಂದೆ ಹರಿದು ಅದು ನದಿಯನ್ನು ಸೇರುತ್ತದೆ. ಇದರಲ್ಲಿ ಸಂಪೂರ್ಣ ಕಪ್ಪಡರಿದ ಕೊಳಚೆ ನೀರು ಬರುತ್ತಿದ್ದು, ಮೋರಿ ಒಡೆದು ಹೋಗಿದ್ದರಿಂದ ಹಾಗೂ ಶಾಲೆಯ ಆವರಣ ಗೋಡೆಯ ಬಳಿ ತೆರೆದ ಚರಂಡಿ ಇರುವುದರಿಂದ ಇಲ್ಲಿರುವ ಪುಟಾಣಿಗಳು ದುರ್ನಾತದ ನಡುವೆ ಪಾಠ ಕೇಳುವಂತಾಗಿದೆ. ಸಾಂಕ್ರಾಮಿಕ ರೋಗ ಭೀತಿಯೂ ಆವರಿಸಿದೆ. ಇನ್ನೊಂದೆಡೆ ಶಾಲಾ ಅಂಗಳದಲ್ಲಿಯೇ ಮೋರಿ ಒಡೆದು ಅಪಾಯವಿರುವುದರಿಂದ ಆಡಲು ಹೋಗದಂತ ಸ್ಥಿತಿ ಎದುರಾಗಿದೆ.


ಮನವಿಗಿಲ್ಲ ಸ್ಪಂದನೆ: ಇಲ್ಲಿನ ಸಮಸ್ಯೆಯ ಬಗ್ಗೆ ಉಪ್ಪಿನಂಗಡಿ ಗ್ರಾ.ಪಂ. ಸೇರಿದಂತೆ ಜಿಲ್ಲಾಧಿಕಾರಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಗೆ ಶಾಲಾ ಮುಖ್ಯಗುರುಗಳು ಹಾಗೂ ಶಾಲಾ ಎಸ್‌ಡಿಎಂಸಿ ಈ ಹಿಂದೆಯೇ ಮನವಿ ಸಲ್ಲಿಸಿದೆ. ಮೋರಿಯನ್ನು ಶಾಲಾ ಆವರಣದಿಂದ ತೆರವುಗೊಳಿಸಬೇಕೆಂದೂ ಮನವಿ ಮಾಡಿದೆ. ಆದರೆ ಈ ಮನವಿಗೆ ಸ್ಪಂದನೆ ಮಾತ್ರ ಶೂನ್ಯವಾಗಿದೆ.

ಆದ್ದರಿಂದ ಸ್ಥಳೀಯ ಗ್ರಾ.ಪಂ. ಈ ಬಗ್ಗೆ ಕಾಳಜಿ ವಹಿಸಿ, ಶಾಲಾ ಆವರಣದಲ್ಲಿರುವ ಮೋರಿಯನ್ನು ತೆರವುಗೊಳಿಸುವುದರೊಂದಿಗೆ ಕೊಳಚೆ ನೀರನ್ನು ನದಿಗೆ ಬಿಡುವುದನ್ನು ತಡೆಯುವ ಮೂಲಕ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ ಮಕ್ಕಳ ಹಾಗೂ ಸಮಾಜದ ಆರೋಗ್ಯ ಕಾಪಾಡಬೇಕೆಂಬುದೇ ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.

ಮೋರಿ ಒಡೆದು ಹೋಗಿ ಬಾಯ್ಬಿಟ್ಟಿರುವುದರಿಂದ ಅಪಾಯವನ್ನು ಬಗಲಲ್ಲಿಟ್ಟುಕೊಂಡೇ ಮಕ್ಕಳು ಶಾಲಾ ಆವರಣದಲ್ಲಿ ನಡೆಯುವಂತಹ ಪರಿಸ್ಥಿತಿ ಎದುರಾಗಿದೆ. ಅಲ್ಲದೇ, ಈಗ ಕೋವಿಡ್ ಭೀತಿಯಿಂದಲೇ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದು, ಅದರ ನಡುವೆ ಈ ಶಾಲಾ ಪರಿಸರ ಮಾತ್ರ ಕೊಳಚೆ ನೀರಿನಿಂದಾಗಿ ದುರ್ನಾತ ಬೀರುತ್ತಿದ್ದು, ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಇದು ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯನ್ನು ಉಂಟು ಮಾಡಿದೆ ಕಲಂದರ್ ಶಾಫಿ ಸದಸ್ಯರು, ಎಸ್‌ಡಿಎಂಸಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಂಗಡಿ

LEAVE A REPLY

Please enter your comment!
Please enter your name here