- ಸರ್ವೆ ಮಾಡಲು ಸಂಬಂಧ ಪಟ್ಟ ಇಲಾಖೆಗೆ ಸೂಚನೆ
ಕಾಣಿಯೂರು: ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನಕ್ಕೆ ಸಂಬಂಧ ಪಟ್ಟ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವ ಬಗ್ಗೆ ಶಾಲಾ ಎಸ್.ಡಿ.ಎಂ.ಸಿಯವರು ನೀಡಿರುವ ದೂರಿನ ಹಿನ್ನಲೆಯಲ್ಲಿ ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಜ 24ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಸರ್ವೆ ಮಾಡಲು ಸೂಚಿಸಲಾಗಿದ್ದು, 15 ದಿನಗಳೊಳಗೆ ಸರ್ವೆ ನಡೆಸಲಿದ್ದಾರೆ ಎಂದು ನವೀನ್ ಭಂಡಾರಿ ತಿಳಿಸಿದ್ದಾರೆ. ಅಕ್ರಮ ಕಟ್ಟಡ ನಿರ್ಮಾಣದ ಕುರಿತು ಶಾಲಾ ಎ.ಎಸ್.ಡಿ.ಎಂ.ವತಿಯಿಂದ ಕಾಣಿಯೂರು ಗ್ರಾಮ ಪಂಚಾಯತ್ ಮತ್ತು ಬೆಳಂದೂರು ಗ್ರಾಮ ಪಂಚಾಯತ್ ಗೆ ದೂರು ನೀಡಿದ್ದರು.
ಅಲ್ಲದೆ ಶಾಲಾ ಆಟದ ಮೈದಾನದಲ್ಲಿಯೇ ರಸ್ತೆ ನಿರ್ಮಾಣ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಗೆ ನೀಡಿರುವ ಮನವಿಯಲ್ಲಿ ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ತಾ.ಪಂ.ಇ.ಓ ನವೀನ್ ಭಂಡಾರಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ಪ್ರಭಾರ ಪಿಡಿಓ ನಾರಾಯಣ, ಕಾಣಿಯೂರು ಗ್ರಾಮ ಪಂಚಾಯತ್ ಪಿಡಿಓ ಕಮಲ್ ರಾಜ್, ಕಾರ್ಯದರ್ಶಿ ದೇವರಾಜ್, ಕಡಬ ತಾ.ಪಂ. ಸಹಾಯಕ ನಿರ್ದೇಶಕ ಚೆನ್ನಪ್ಪ, ಬೆಳಂದೂರು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಕಾಣಿಯೂರು ಗ್ರಾ.ಪಂ.ಸದಸ್ಯ ರಾಮಣ್ಣ ಗೌಡ ಮುಗರಂಜ, ಕಾಣಿಯೂರು ಸ.ಹಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ, ಮಾಜಿ ಅಧ್ಯಕ್ಷರಾದ ನಾರಾಯಣ ಭಟ್ ಕಾಣಿಯೂರು. ಸದಸ್ಯರಾದ ಚಂದ್ರಶೇಖರ ಬೈತಡ್ಕ, ಶಾಲಾ ಮುಖ್ಯಗುರು ಪುಂಡಲೀಕ ಪೂಜಾರ, ಲಕ್ಷ್ಮಣ ಗೌಡ ಮುಗರಂಜ ಮತ್ತಿತರರು ಉಪಸ್ಥಿತರಿದ್ದರು.