ನೆಲ್ಯಾಡಿ: ಗಣರಾಜ್ಯೋತ್ಸವ ಆಚರಣೆ-ಲಂಚ, ಭ್ರಷ್ಟಾಚಾರದ ಪ್ರತಿಕೃತಿ ದಹನ

0

ಭ್ರಷ್ಟಾಚಾರ ಮುಕ್ತ ಗ್ರಾಮ ನಿರ್ಮಾಣಕ್ಕೆ ಪಣ ತೊಡೋಣ: ಜಯಾನಂದ ಬಂಟ್ರಿಯಾಲ್

ನೆಲ್ಯಾಡಿ: ಗೆಳೆಯರ ಬಳಗ ಗಾಂಧಿ ಮೈದಾನ ನೆಲ್ಯಾಡಿ, ಜೆಸಿಐ ನೆಲ್ಯಾಡಿ ಹಾಗೂ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯ ಇದರ ವತಿಯಿಂದ ಗಣರಾಜ್ಯೋತ್ಸವ ಆಚರಣೆ ಹಾಗೂ ಲಂಚ, ಭ್ರಷ್ಟಾಚಾರದ ಪ್ರತಿಕೃತಿ ದಹನ ಕಾರ್ಯಕ್ರಮ ಜ.೨೬ರಂದು ಬೆಳಿಗ್ಗೆ ನೆಲ್ಯಾಡಿ ಗಾಂಧಿ ಮೈದಾನದಲ್ಲಿ ನಡೆಯಿತು.

ಗೆಳೆಯರ ಬಳಗದ ಗೌರವಾಧ್ಯಕ್ಷ ರಾಮಚಂದ್ರ ಆಚಾರ್ಯರವರು ಧ್ವಜಾರೋಹಣ ನೆರವೇರಿಸಿದರು. ಗೆಳೆಯರ ಬಳಗದ ಅಧ್ಯಕ್ಷ ರತ್ನಾಕರ ರೈ ಕೊಲ್ಯೊಟ್ಟುರವರು ಗಾಂಧಿಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಬಳಿಕ ಮಾತನಾಡಿದ ನೆಲ್ಯಾಡಿ ಗ್ರಾ.ಪಂ.ಸದಸ್ಯರೂ ಆದ ನೆಲ್ಯಾಡಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ರವರು ಲಂಚ, ಭ್ರಷ್ಟಾಚಾರ ನಿರ್ಮೂಲನೆಯ ಧ್ಯೇಯದೊಂದಿಗೆ ಸುದ್ದಿಬಿಡುಗಡೆ ಕೈಗೊಂಡಿರುವ ಆಂದೋಲನ ಒಳ್ಳೆಯ ಕಾರ್ಯಕ್ರಮವಾಗಿದೆ. ಈ ಹಿಂದೆ ಸುದ್ದಿ ಬಿಡುಗಡೆ ವತಿಯಿಂದ ನಡೆದ ಬಲಾತ್ಕಾರದ ಬಂದ್, ವೀಕೆಂಡ್ ಕರ್ಫ್ಯೂನಂತಹ ಆಂದೋಲನಗಳು ಯಶಸ್ವಿಯಾಗಿವೆ. ನಮ್ಮ ಗ್ರಾಮವನ್ನು ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮ ಮಾಡುವ ಪಣತೊಡೋಣ ಎಂದರು. ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಮುಂಡಾಳಗುತ್ತುರವರು ಮಾತನಾಡಿ, ಸುದ್ದಿ ಬಿಡುಗಡೆ ಸಂಸ್ಥೆಯು ಲಾಭದ ದೃಷ್ಟಿಯಿಂದ ಕೆಲಸ ಮಾಡದೆ ಸಮಾಜಮುಖಿ ಚಿಂತನೆಯೊಂದಿಗೆ ಕೆಲಸ ಮಾಡುತ್ತಿದೆ. ಈಗ ಭ್ರಷ್ಟಾಚಾರ ಮುಕ್ತ ರಾಜ್ಯವಾಗಬೇಕೆಂಬ ಪಣತೊಟ್ಟು ಸುದ್ದಿಬಿಡುಗಡೆ ಹಮ್ಮಿಕೊಂಡಿರುವ ಆಂದೋಲನವನ್ನು ಎಲ್ಲರೂ ಬೆಂಬಲಿಸೋಣ ಎಂದರು.

ಜನಜಾಗೃತಿ ವೇದಿಕೆ ಸದಸ್ಯ ತುಕಾರಾಮ ರೈ ಹೊಸಮನೆ, ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷರಾದ ಶಿವಪ್ರಸಾದ್, ಮೋಹನ ವಿ., ನೆಲ್ಯಾಡಿ ಗ್ರಾ.ಪಂ.ಸದಸ್ಯೆ ಉಷಾಜೋಯಿ, ಗೆಳೆಯರ ಬಳಗದ ಕಾರ್ಯದರ್ಶಿ ನಾರಾಯಣ ಪಿ.ಹೆಗ್ಡೆ, ಸದಸ್ಯರಾದ ವಿನ್ಯಾಸ್ ಬಂಟ್ರಿಯಾಲ್, ಅಬ್ದುಲ್ ರಹಿಮಾನ್, ಗಣೇಶಪೂಜಾರಿ ಪೊಸೊಳಿಗೆ, ವೆಂಕಟಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here