ಪುತ್ತೂರು ಕಂಬಳದ ಕುರಿತು ಅಪಸ್ವರ ಮಾಡಿದವರಿಗೆ ಮಹಾಲಿಂಗೇಶ್ವರನೇ ಬುದ್ಧಿ ಕೊಡಲಿ !

0

ಏಕಾದಶರುದ್ರ ಸೇವೆ ಸಂಕಲ್ಪ ಮಾಡಿ ನೋವಿನಿಂದ ಪ್ರಾರ್ಥಿಸಿದ್ದೇವೆ – ಶಕುಂತಳಾ ಶೆಟ್ಟಿ, ಚಂದ್ರಹಾಸ ಶೆಟ್ಟಿ

ಪುತ್ತೂರು: 30ನೇ ವರ್ಷದ ಕಂಬಳ ಬಹಳ ಐತಿಹಾಸಿಕವಾಗಿ ನಡೆದಿದೆ. ಆದರೆ ಮರುದಿನದಿಂದ ಕಂಬಳದ ಕುರಿತು ಅಪಸ್ವರಗಳು ಮತ್ತು ಅಶ್ಲೀಲವಾಗಿ ಬರೆದಿದ್ದಾರೆ. ಅತಿಥಿಯಾಗಿ ಬಂದವರನ್ನು ಸುರಕ್ಷಿತವಾಗಿ ಕಳುಹಿಸಿ ಊಟ ಮಾಡಿಸಿ ಬಿಟ್ಟು ಬಂದಿದ್ದೇವೆ. ಇದು ಕಂಬಳ ಸಮಿತಿ ಜವಾಬ್ದಾರಿ ಅದನ್ನು ಸರಿಯಾಗಿ ನಿಭಾಯಿಸಿದ್ದೇವೆ. ಕಂಬಳದಲ್ಲಿ ನಡೆದ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಅಪಸ್ವರ ಮಾಡಿದವರಿಗೆ ಮಹಾಲಿಂಗೇಶ್ವರ ದೇವರು ಬುದ್ದಿ ಕೊಡಲಿ ಎಂದು ಏಕಾದಶರುದ್ರ ಸೇವೆಯ ಸಂಕಲ್ಪದೊಂದಿಗೆ ನೋವಿನಿಂದ ಪ್ರಾರ್ಥಿಸಿದ್ದೇವೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರು ತಿಳಿಸಿದ್ದಾರೆ.

ಫೆ. 2ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಕಾದಶರುದ್ರ ಸೇವೆ ಮಾಡಿಸಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವಳದ ಹೊರಾಂಗಣದಲ್ಲಿ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಕಂಬಳ ಸಮಾರಂಭಕ್ಕೆ ಅತಿಥಿಯಾಗಿ ಬಂದಿರುವವರನ್ನು ಸುರಕ್ಷಿತವಾಗಿ ಕಳುಹಿಸಿ ಊಟ ಮಾಡಿಸಿ ಬರುವ ತನಕ ಕಂಬಳ ಸಮಿತಿ ಜವಾಬ್ದಾರಿಯನ್ನು ಸರಿಯಾಗಿ ಮಾಡಿದ್ದೇವೆ. ಅದರ ಮೇಲೆ ಏನೋ ಆಗಿದೆ ಎಂಬುದನ್ನು ಮರುದಿನ ತಿಳಿದು ಬಂದಿದೆ. ಆದರೆ ಇಲ್ಲಿ ಯಾವುದೋ ಉದ್ದೇಶವಿಟ್ಟು ಮಾಡಿದ ಹಾಗೆ ಕಾಣುತ್ತಿದೆ. ಪುತ್ತೂರಿನ ದೇವರ ಮಾರು ಗದ್ದೆಯಲ್ಲಿ ಜಗಳ ಆದರೆ ಅಥವಾ ಅಸಭ್ಯವಾಗಿ ನಡೆದರೆ ಅವರಿಗೆ ಕ್ಷೇಮವಿಲ್ಲ ಎಂದು ಎಲ್ಲಾ ಜನರಿಂದ ಕೇಳಿ ಬರುವ ಮಾತು. ಹಾಗಾಗಿ ಕಂಬಳ ಆರಂಭದಲ್ಲೇ ಮಹಾಲಿಂಗೇಶ್ವರ ದೇವರಿಗೆ ಪ್ರಾರ್ಥನೆ ಮಾಡಿ, ಉಳ್ಳಾಲ್ತಿ, ಕಾನತ್ತೂರು, ಧರ್ಮಸ್ಥಳ ಕ್ಷೇತ್ರದ ಪ್ರಸಾದವನ್ನು ಕರೆಗೆ ಹಾಕಿ ಕಂಬಳ ಆರಂಭಿಸಿದ್ದೇವೆ. ಆದರೆ ಕಂಬಳವನ್ನು ಅವಮಾನ ಮಾಡುವುದಕ್ಕಾಗಿ ಕಂಬಳ ಸಮಿತಿಯನ್ನು ಅದಕ್ಕೆ ಜೋಡಿಸಿ ಯಾರು ಅಪಪ್ರಚಾರ ಮಾಡುತ್ತಾರೋ ಅವರಿಗೆ ಒಳ್ಳೆಯ ಬುದ್ದಿಯನ್ನು ದೇವರು ಕೊಡಲಿ ಅಥವಾ ಅವರಿಗೆ ಮಹಾಲಿಂಗೇಶ್ವರನೇ ಏನಾದರೂ ಮಾಡಲಿ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಪೊಲೀಸ್ ತನಿಖೆಯಾಗಲಿ:

ಕಂಬಳದಲ್ಲಿನ ಘಟನೆ ಕುರಿತು ಯಾರು ದೂರು ನೀಡಿಲ್ಲ. ಯಾರೂ ದೂರ ನೀಡದೆ ನಾವು ಏನು ಮಾಡುವಂತಿಲ್ಲ. ಅದರಲ್ಲಿ ಧರ್ಮಗಳನ್ನು ಎಳೆದು ತರುವ ಪ್ರಯತ್ನ ನಡೆದಿದೆ. ಯಾರು ಬರೆದಿದ್ದಾರೋ ಯಾರೂ ಹೇಳಿದ್ದಾರೋ ಅದನ್ನು ಪೊಲೀಸರು ತನಿಖೆ ಮಾಡಲಿ ಎಂದು ನಮ್ಮ ಅಪೇಕ್ಷೆ. ಕಂಬಳ ಕೋಣಗಳಿಗೆ, ಮಾಲಕರಿಗೆ, ಓಡಿಸಿದವರಿಗೆ ಮತ್ತು ನಮಗೇನಾದರೂ ಆದರೆ ನಾವು ಜಾವಾಬ್ದಾರರು. ಹಾಗಾಗಿ ನಮಗೆ ಏನು ಆಗಿಲ್ಲ. ಎಲ್ಲಾ ವಿಚಾರದಲ್ಲೂ ತೀರ್ಪು ಕೊಡುವವ ಮಹಾಲಿಂಗೇಶ್ವರ. ಅವನೇ ನೋಡಿಕೊಳ್ಳಲಿ. ಇಲ್ಲಿ ಮುಖ್ಯ ಉದ್ದೇಶವಾಗಿ ಚಂದ್ರಹಾಸ ಶೆಟ್ಟಿಯವರನ್ನು ಡೌನ್ ಮಾಡುವುದು ಮತ್ತು ಉದ್ದೇಶ ಪೂರ್ವಕವಾಗಿ ಶಕುಂತಳಾ ಶೆಟ್ಟಿಯವರನ್ನು ಎಳೆದು ತರುವ ಪ್ರಯತ್ನ ಆಗಿದೆ ಎಂದು ಅನಿಸುತ್ತದೆ. ಒಳ್ಳೆಯ ಮನಸ್ಸಿನಿಂದ ಮಾಡಿದರೆ ಕ್ಷಮ ಇರಲಿ. ಕೆಟ್ಟ ಉದ್ದೇಶ ಇರಿಸಿದ್ದರೆ ಅವರಿಗೆ ಕೆಟ್ಟದು ಆಗಬಹುದೆಂದು ನೆನೆಸಿಕೊಂಡು ಮಹಾಲಿಂಗೇಶ್ವರನಲ್ಲಿ ಪ್ರಾರ್ಥನೆ ಮಾಡಿದ್ದೇವೆ. ಘಟನೆ ಕುರಿತು ಅನ್ಯ ಧರ್ಮಿಯರ ವಿಚಾರವು ಬಂದಿತ್ತು. ಹಾಗಿದ್ದಲ್ಲಿ ಯಾರೆ ಆಗಲಿ ಅವರನ್ನು ಹುಡುಕಿ ಮೇಲಾಧಿಕಾರಿಗಳಿಗೆ ತಿಳಿಸಿದರು ಎಂದು ಶಕುಂತಳಾ ಶೆಟ್ಟಿ ಹೇಳಿದರು.

ಕಂಬಳ ಸಮಿತಿ ಇನ್ವಾಲ್ ಇಲ್ಲ:

ಕಂಬಳದಲ್ಲಿ ಲಕ್ಷ ಗಟ್ಟಲೆ ಜನ ಸೇರಿದಾಗ ಅಲ್ಲಿ ಬೇಕಾದಷ್ಟು ಪೊಲೀಸರಿದ್ದರು. ಒಂದು ವೇಳೆ ಯಾರು ಅತಿಥಿಗಳಿದ್ದಾರೋ ಅವರು ಕಂಬಳ ನೋಡಲು ಸಮಿತಿಯವರಲ್ಲಿ ತಿಳಿಸಿದರೆ ನಮ್ಮ ಸ್ವಯಂ ಸೇವಕರೇ ಅವರಿಗೆ ಸುರಕ್ಷಿತವಾಗಿ ಕಂಬಳ ತೋರಿಸುವ ಕೆಲಸ ಮಾಡುತ್ತಿದ್ದರು. ಆದರೆ ಅವರು ನಮಗೆ ತಿಳಿಸದೇ ಬಂದಿರಬಹುದು. ಇಲ್ಲಿ ಕಂಬಳ ಸಮಿತಿ ಎಲ್ಲೂ ಇನ್ವಾಲ್ ಇಲ್ಲ. ಅವರು ಘಟನೆ ಕುರಿತು ದೂರು ನೀಡಿದ್ರೆ ಅದಕ್ಕೆ ನ್ಯಾಯ ಒದಗಿಸುವ ಪ್ರಯತ್ನ ನಾವು ಮಾಡುತ್ತೇವೆ ಎಂದ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರು ಕೋಣದ ಮಾಲಕರು ಕೆಲವು ಬಾರಿ ನಮ್ಮೊಂದಿಗೆ ಕಿರಿಕಿರಿ ಮಾಡಿದ್ದ ಘಟನೆ ಇದೆ. ಆದರೆ ಬಳಿಕ ಅವರು ಮಹಾಲಿಂಗೇಶ್ವರನಿಗೆ ತಪ್ಪು ಕಾಣಿಕೆ ಹಾಕಿದ್ದ ದೃಷ್ಟಾಂತವೂ ಇದೆ. ಹಾಗಾಗಿ ಮಹಾಲಿಂಗೇಶ್ವರ ಮಣ್ಣಿನಲ್ಲಿ ಆದ ಕಂಬಳದಲ್ಲಿ ಮಹಾಲಿಂಗೇಶ್ವರನೇ ನೋಡಿಕೊಳ್ಳುತ್ತಾನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ, ಕೋಶಾಧಿಕಾರಿ ಪಂಜಿಗುಡ್ಡೆ ಈಶ್ವರ ಭಟ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ದೇವಳದಲ್ಲಿ ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಪ್ರಾರ್ಥನೆ ಮಾಡಿದರು.

ಕಂಬಳ ಸಮಿತಿಯವರು ಚೆನ್ನಾಗಿ ನೋಡಿಕೊಂಡಿದ್ದಾರೆ
`ಸುದ್ದಿ’ಗೆ ಸಾನ್ಯಾ ಅಯ್ಯರ್ ಹೇಳಿಕೆ

ಕಂಬಳಕ್ಕೆ ಅತಿಥಿಯಾಗಿ ಬಂದಿದ್ದ ಬಿಗ್‌ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ ಜೊತೆ ಯುವಕನೋರ್ವ ಅನುಚಿತವಾಗಿ ವರ್ತಿಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿತ್ತು. ಈ ಬಗ್ಗೆ ಫೋನ್‌ನಲ್ಲಿ `ಸುದ್ದಿ’ಗೆ ಪ್ರತಿಕ್ರಿಯೆ ನೀಡಿರುವ ಸಾನ್ಯಾ ಅಯ್ಯರ್ ಅವರು, ಪುತ್ತೂರು ಕಂಬಳದಲ್ಲಿ ಅತಿಥಿಯಾಗಿ ಭಾಗವಹಿಸಿದ್ದೆ. ನನ್ನ ನಿರೀಕ್ಷೆಗೆ ಮೀರಿದ ಕಾರ್ಯಕ್ರಮವಾಗಿತ್ತು. ನೋಡಿ ಬೆರಗಾಗಿದ್ದೆ. ಮುಖ್ಯ ಆಯೋಜಕರಾದ ಚಂದ್ರಹಾಸ ಶೆಟ್ಟಿ, ಶಕುಂತಳಾ ಶೆಟ್ಟಿ, ಅಜಿತ್ ಶೆಟ್ಟಿಯವರು ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಂಡು ಹೋಗಿದ್ದರು, ಮನೆಮಗಳು ಎನ್ನುವ ಭಾವನೆ ನೀಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಕಂಬಳವನ್ನು ನೋಡೋಣ ಎಂದು ಆಯೋಜಕರಿಗೆ ತಿಳಿಸದೆ ನನ್ನ ತಾಯಿ ಮತ್ತು ಇಬ್ಬರು ಸ್ನೇಹಿತೆಯರ ಜೊತೆಗೆ ಮತ್ತೆ ಬಂದಿದ್ದೆವು. ಕೆಲವೊಂದು ಸ್ವಯಂಸೇವಕರು ನಮ್ಮ ರಕ್ಷಣೆಗೆ ಇದ್ದರು. ನೋಡಿಕೊಂಡು ವಾಪಸ್ ಹೊರಡುವ ವೇಳೆ ನಶೆಯಲ್ಲಿದ್ದ ಓರ್ವ ಯುವಕ ಬಂದು, ನನ್ನ ಇಬ್ಬರು ಸ್ನೇಹಿತೆಯರ ಮೈಮೇಲೆ ಬಿದ್ದು ಕಿರುಕುಳ ನೀಡಲು ಯತ್ನಿಸಿದ. ಈ ವೇಳೆ ನಾವು ಕಿರುಚಿಕೊಂಡಾಗ ಸುತ್ತಮುತ್ತ ಇದ್ದ ಜನರು ಸೇರಿದರು. ಜನ ಸೇರಿದ ತಕ್ಷಣ ನಮಗೆ ಕಿರುಕುಳ ನೀಡಿದ ಯುವಕ ತಪ್ಪಿಸಿಕೊಂಡುಬಿಟ್ಟ. ಇದು ಆಯೋಜಕರಿಗೆ ಗೊತ್ತಾಗಿ ಕೂಡಲೇ ಅವರು ನಮ್ಮನ್ನು ಮುಖ್ಯವೇದಿಕೆಗೆ ಕರೆದುಕೊಂಡು ಹೋದರು. ಅಂತಹ ಘಟನೆಗಳಾದಾಗ ಹೆಣ್ಣುಮಕ್ಕಳಿಗೆ ಪ್ರತಿಕ್ರಿಯೆ ನೀಡದೆ ಇರುವುದಕ್ಕಾಗುವುದಿಲ್ಲ. ಇಲ್ಲಿ ನನಗೆ ಏನೂ ಆಗಿಲ್ಲ. ನನ್ನ ಸ್ನೇಹಿತೆಯರ ಮೇಲೆ ಆಗಿದೆ. ನನ್ನಲ್ಲಿ ನಾರೀಶಕ್ತಿ ಜಾಸ್ತಿ ಹರಿಯುತ್ತಿದೆ ಎಂದೇ ಅಂದುಕೊಳ್ಳಿ. ನಾವು ಇಂದು ಪಿತೃಪ್ರಧಾನ ವ್ಯವಸ್ಥೆಯಲ್ಲಿ ಬದುಕುತ್ತಿದ್ದೆವೆ. ಇಲ್ಲಿ ಸ್ತ್ರೀಯರಿಗೆ ಅವಕಾಶ ಕಡಿಮೆ. ಹೀಗಾಗಿಯೇ ಆವತ್ತು ಧ್ವನಿಯೆತ್ತಿ ಮಾತನಾಡಿದ್ದೆ. ನಾನು ಮಾತನಾಡಿರುವುದಕ್ಕೆ ನನಗೆ ಬೇಜಾರಿಲ್ಲ. ಕಂಬಳ ಆಯೋಜಕರು ತುಂಬಾ ಕಾಳಜಿಯಿಂದ ನಮ್ಮ ಬೆಂಬಲಕ್ಕೆ ನಿಂತು ಆ ಯುವಕನನ್ನು ಹುಡುಕಲು ಪ್ರಯತ್ನಪಟ್ಟರು. ನೀವು ಸಮಯ ತೆಗೆದುಕೊಂಡು ನಿಮಗೆ ಪೊಲೀಸ್ ದೂರು ಕೊಡಬೇಕೆನ್ನುವುದು ಇದ್ದರೆ ನೀವು ದೂರು ನೀಡಿ ಎಂದು ನನ್ನ ಸ್ನೇಹಿತೆಯರಿಗೆ ಸಮಯ ನೀಡಿದ್ದೆವು. ಆದರೆ ಅವರು ಧೈರ್ಯ ಮಾಡಲಿಲ್ಲ. ಇದನ್ನು ನೋಡಿ ನನಗೇ ಬೇಜಾರಾಗಿ ಹೋಯ್ತು. ನಾನು ಕಂಬಳಕ್ಕೆ ಬಂದಾಗ ರುದ್ರಾಕ್ಷಿ ಧರಿಸಿದ್ದೆ. ರುದ್ರಾಕ್ಷಿ ಧರಿಸಿದಾಗ ಧೂಮಪಾನ, ಮದ್ಯಪಾನದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದಿಲ್ಲ. ನಾವು ಬಂದಿದ್ದು ದೇವರ ಗದ್ದೆಯ ಕಾರ್ಯಕ್ರಮಕ್ಕೆ. ಅಂತಹ ಜಾಗಕ್ಕೆ ಬರುವಾಗ ನಾವು ಹಾಗೆ ಬರಲು ಸಾಧ್ಯವೂ ಇಲ್ಲ. ಈಗ ನಾನು ಡಯೆಟ್‌ನಲ್ಲಿದ್ದು ಶುಗರ್ ಸೇವಿಸುವುದಿಲ್ಲ. ನಾನು ಅಲ್ಲಿಗೆ ಅತಿಥಿಯಾಗಿ ಬಂದಿರುವುದು. ಹೀಗಾಗಿ ಪಾರ್ಟಿ ಮಾಡಿ ಬಂದಿದ್ದೆವು, ಮದ್ಯಪಾನ ಮಾಡಿದ್ದೆವು ಎನ್ನುವ ಪ್ರಶ್ನೆಯೇ ಬರುವುದಿಲ್ಲ. ಘಟನೆಗೆ ಮುಂಚೆ ಕಂಬಳವನ್ನು ನೋಡಿದ್ದೆನೆ . ಕಂಬಳದಿಂದ ಸುಂದರವಾದ ಜೀವನ ಪಾಠವನ್ನು ಕಲಿತಿದ್ದೆನೆ. ಕಂಬಳದ ಸಮಯದಲ್ಲಿ ಯಾರೋ ಅಭಿಮಾನಿಗೆ ನಾನು ಕೈಯೆತ್ತಿದೆ, ಕಪಾಳಕ್ಕೆ ಹೊಡೆದೆ, ಅವರು ನನ್ನ ಕಪಾಳಕ್ಕೆ ಹೊಡೆದರು ಇತ್ಯಾದಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ನನಗೆ ಕಿಂಚಿತ್ತೂ ಏಟಾಗಿಲ್ಲ. ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಪುತ್ತೂರಿನ ಜನತೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಇಷ್ಟೆಲ್ಲ ಆದರೂ ಪುತ್ತೂರು ಕಂಬಳದ ಗೌರವ ಕೆಳಗೆ ಇಳಿಯಲು ಸಾಧ್ಯವೇ ಇಲ್ಲ. ಇಂತಹ ಘಟನೆಗಳು ಎಲ್ಲೋ ಒಂದಿಬ್ಬರು ಬೇಕು ಎಂದೇ ಮಾಡುವುದು. ಪುತ್ತೂರು ಕಂಬಳದ ಗೌರವ ಕೆಳಗೆ ಇಳಿಯಲು ಸಾಧ್ಯವೇ ಇಲ್ಲ. ಇಂತಹ ಘಟನೆಗಳಿಂದ ಅದು ಕುಂದಲು ಸಾಧ್ಯವಿಲ್ಲ ಪುತ್ತೂರಿನ ಜನತೆ ನನಗೆ ತುಂಬಾ ಪ್ರೀತಿ ನೀಡಿದ್ದೀರಿ. ಅತಿಥಿ ಸತ್ಕಾರದಲ್ಲಿ ಪುತ್ತೂರಿನ ಜನತೆ ಎತ್ತಿದ ಕೈ ಎನ್ನುವುದನ್ನು ಕಂಬಳದ ಮೂಲಕ ತಿಳಿದುಕೊಂಡಿದ್ದೆನೆಎಂದು ಹೇಳಿದರು. ಸಾನ್ಯಾ ಅಯ್ಯರ್ ಅವರೊಂದಿಗಿನ ದೂರವಾಣಿ ಮಾತುಕತೆ ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್‌ನಲ್ಲಿದೆ.

LEAVE A REPLY

Please enter your comment!
Please enter your name here