ಪುತ್ತೂರು: ಕೊಂಬೆಟ್ಟಿನಲ್ಲಿರುವ ದ್ರಾವಿಡ ಬ್ರಾಹ್ಮಣರ ವಿದ್ಯಾರ್ಥಿ ಭವನ ಮತ್ತು ಕ್ಷೇಮಾಭಿವೃದ್ಧಿ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭವು ಫೆ. 5ರಂದು ಜರುಗಲಿದೆ ಎಂದು ಸಂಸ್ಥೆಯ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಸತ್ಯನಾರಾಯಣ ಭಟ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
1923ರಂದು ದಿ.ಎಚ್ ವಾಸುದೇವ ರಾವ್ ಅವರು ಸ್ಥಾಪಿಸಿದ ಈ ಸಂಸ್ಥೆಯು ಕೋ ಓಪರೇಟಿವ್ ಹಾಸ್ಟೆಲ್ ಸಂಘವಾಗಿ ನೋಂದಾವಣಿಯಾಗಿ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಬೆಳವಣಿಗೆಯಲ್ಲಿ1985ರ ತನಕ ಹಾಸ್ಟೆಲ್ ಚೆನ್ನಾಗಿ ನಡೆಯುತ್ತಿದ್ದು, ಬಳಿಕ ಮಕ್ಕಳ ಅಭಾವದಿಂದ ಹಾಸ್ಟೇಲ್ ಮುಚ್ಚಬೇಕಾಯಿತು. ಕೊನೆಗೆ ಸಂಘದ ಕಟ್ಟಡವನ್ನು ಸದಸ್ಯರಿಗೆ, ಸಮಾಜ ಬಾಂಧವರಿಗೆ ಶುಭ ಸಮಾರಂಭಗಳಿಗೆ ಕೊಡಲು ಪ್ರಾರಂಭಿಸಲಾಯಿತು. ಇದೀಗ ಸಂಘವು ಶತಮಾನೋತ್ಸವ ಸಂಭ್ರಮದಲ್ಲಿದ್ದು, ಅದರ ಉದ್ಘಾಟನಾ ಕಾರ್ಯಕ್ರಮ ಫೆ. 5ರಂದು ನಡೆಯಲಿದ್ದು, ಕಟೀಲು ಶ್ರೀ ಹರಿನಾರಾಯಣ ಅಸ್ರಣ್ಣರು ದೀಪ ಪ್ರಜ್ವಲನೆ ಮತ್ತು ಆಶೀರ್ವಚನ ನೀಡಲಿದ್ದಾರೆ. ಶಾಸಕ ಸಂಜೀವ ಮಠಂದೂರು, ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ವಿ.ನಾರಾಯಣ, ನ್ಯಾಯವಾದಿ ರಾಮಮೋಹನ್ ರಾವ್, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ ಚಂಡಿಕಾಯಾಗ ನಡೆಯಲಿದೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಚ್.ಕೃಷ್ಣಪ್ರಸಾದ್ ರಾವ್, ನಿರ್ದೇಶಕರಾದ ಪ್ರೇಮಲತಾ ರಾವ್, ಸಲಹಾ ಸಮಿತಿಯ ರಂಗನಾಥ ರಾವ್ ಉಪಸ್ಥಿತರಿದ್ದರು.