ಉಪ್ಪಿನಂಗಡಿ: ಕಂಬಳವು ತುಳುನಾಡಿನ ಜನಪದ ಕ್ರೀಡೆಯಾಗಿದ್ದು, ಇದಕ್ಕೆ ರಾಜಕೀಯ ಬಣ್ಣ ಕೊಡುವುದು ಸರಿಯಲ್ಲ. ಎಲ್ಲರೂ ಕ್ರೀಡಾ ಮನೋಭಾವದಿಂದ ಪರಸ್ಪರ ಸಹಕಾರ ನೀಡಿದಾಗ ಮಾತ್ರ ಕಂಬಳ ಕ್ರೀಡೆಯು ಯಶಸ್ವಿಯಾಗಿ ನಡೆಯುವುದರೊಂದಿಗೆ ಈ ಮಣ್ಣಿನ ಕ್ರೀಡೆಯು ಉಳಿದು ಬೆಳೆಯಲು ಸಾಧ್ಯ ಎಂದು ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಬಯಲು ಕಂಬಳ ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ ತಿಳಿಸಿದರು.
ಹಳೆಗೇಟು ಬಳಿಯ ನೇತ್ರಾವತಿ ನದಿ ಕಿನಾರೆಯ ಕಂಬಳ ಕರೆಯ ಬಳಿ ಫೆ.2ರಂದು ನಡೆದ ಕಂಬಳ ಸಮಿತಿಯ ಸಭೆಯಲ್ಲಿ, ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಪಪ್ರಚಾರಕ್ಕೆ ಸಂಬಂಧಿಸಿ ಮಾತನಾಡಿದ ಉಮೇಶ್ ಶೆಣೈ ಅವರು, ನಿಂತು ಹೋಗಿದ್ದ ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಹೊಸ ಚೈತನ್ಯ ನೀಡಿ ಮರು ಆರಂಭವಾಗಲು ಕಾರಣರಾದವರು ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು. ಅವರ ಅಧ್ಯಕ್ಷತೆಯಲ್ಲಿ ಅಂದಿನಿಂದ ಇಂದಿನವರೆಗೆ ಸುಸೂತ್ರವಾಗಿ ಕಂಬಳ ನಡೆದುಕೊಂಡು ಬರುತ್ತಿದೆ. ಬೆಳ್ಳಿ ಹಬ್ಬ ಆಚರಣೆಯ ಬಳಿಕ ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳ ಒಂದು ವರ್ಷ ನಿಂತು ಹೋಗಿತ್ತು. ಬಳಿಕ ಉದ್ಯಮಿ ಕುಶಾಲಪ್ಪ ಗೌಡ ಪೂವಾಜೆಯವರು ನನ್ನಲ್ಲಿಗೆ ಬಂದು ಕಂಬಳ ನಿಲ್ಲಿಸಬಾರದು ಎಂದರಲ್ಲದೆ, ಅವರದ್ದೇ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆ ಮಾಡಿ ಎರಡು ವರ್ಷ ಕಂಬಳ ನಡೆಸಿದರು. ಬಳಿಕ ಸಮಿತಿಯ ಅಧ್ಯಕ್ಷರನ್ನು ಬದಲಾಯಿಸೋಣ ಎಂಬ ಪ್ರಸ್ತಾಪ ಕುಶಾಲಪ್ಪ ಗೌಡರಿಂದ ಬಂದಾಗ ನಾವೆಲ್ಲರೂ ಒಮ್ಮತದಿಂದ ಅಶೋಕ್ ಕುಮಾರ್ ರೈಯವರನ್ನು ಕಂಬಳ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದೆವು. ಅಂದಿನಿಂದ ಇಂದಿನವರೆಗೆ ಸುಸೂತ್ರವಾಗಿ ಕಂಬಳ ನಡೆದುಕೊಂಡು ಬರುತ್ತಿದೆ. ಇಲ್ಲಿಯವರೆಗೆ ನಮ್ಮೊಳಗೆ ಯಾವುದೇ ಭಿನ್ನಾಭಿಪ್ರಾಯಗಳಾಗಲಿ, ರಾಜಕೀಯ ಭೇದಗಳಾಗಲಿ ಬಂದಿಲ್ಲ. ಮುಂದೆಯೂ ಬರುವುದಿಲ್ಲ ಎಂಬ ವಿಶ್ವಾಸವಿದೆ. ಕಂಬಳಾಭಿಮಾನಿಗಳ, ಊರಿನವರ ಸಹಕಾರ, ನಾವೆಲ್ಲ ಒಂದೇ ಎನ್ನುವ ಮನೋಭಾವದಿಂದ ಒಟ್ಟು ಸೇರಿ ಪರಸ್ಪರ ಕೈಜೋಡಿಸಿರುವುದರಿಂದ ಉಪ್ಪಿನಂಗಡಿ ಕಂಬಳ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಮುಂದೆಯೂ ಕಂಬಳಾಭಿಮಾನಿಗಳು, ಊರವರು, ಕೋಣಗಳ ಯಜಮಾನರು ಇದೇ ರೀತಿಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರಲ್ಲದೆ, ಈ ಬಗ್ಗೆ ಅಪಪ್ರಚಾರವಾಗಲಿ, ತಲೆಬಿಸಿಯಾಗಲಿ ಯಾರಿಗೂ ಬೇಡ. ರಾಜಕೀಯದಿಂದ ದೂರವಿಟ್ಟು ಕಂಬಳ ಕ್ರೀಡೆಯನ್ನು ಉಳಿಸಿ, ಬೆಳೆಸಲು ಎಲ್ಲರೂ ಪ್ರೋತ್ಸಾಹಿಸಿ ಎಂದರು.
ಮಾ.11 ಮತ್ತು 12ರಂದು ಉಪ್ಪಿನಂಗಡಿ ಕಂಬಳ ನಡೆಯಲಿದ್ದು, ಮುಂದಿನ ವಾರದಿಂದಲೇ ಕರೆ ನಿರ್ಮಾಣ ಕೆಲಸಗಳಿಗೆ ಚಾಲನೆ ನೀಡಲು ಹಾಗೂ ಅತಿಥಿಗಳ ಪಟ್ಟಿ ತಯಾರಿಸಲು ಹಾಗೂ ಕಂಬಳಕ್ಕೆ ಪೂರ್ವಭಾವಿಯಾಗಿ ನಡೆಯಬೇಕಾದ ಕೆಲಸಗಳನ್ನು ಮುಂದಿನ ವಾರದಿಂದಲೇ ಆರಂಭಿಸಲು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಉಪಾಧ್ಯಕ್ಷ ರಾಮಚಂದ್ರ ಮಣಿಯಾಣಿ, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗ್ವೆ, ಪದಾಧಿಕಾರಿಗಳಾದ ಯೊಗೀಶ್ ಸಾಮಾನಿ ಸಂಪಿಗೆದಡಿ, ಜಯಂತ ಪೊರೋಳಿ, ವಿದ್ಯಾಧರ ಜೈನ್, ಕೃಷ್ಣಪ್ರಸಾದ್, ಕೆ. ಜಯರಾಮ ಶೆಟ್ಟಿ ಕಜೆಕ್ಕಾರು, ಶಿವರಾಮ ಶೆಟ್ಟಿ ಗೋಳ್ತಮಜಲು, ಯತೀಶ್ ಶೆಟ್ಟಿ ಕೋಡಿಂಬಾಡಿ, ದಾಮೋದರ ಶೆಟ್ಟಿ ಮಠಂತಬೆಟ್ಟು, ವಿಜಯಕುಮಾರ್ ಚೀಮುಳ್ಳು, ರಾಕೇಶ್ ಶೆಟ್ಟಿ ಕೆಮ್ಮಾರ, ಬಿ. ಜಗದೀಶ್ ಕುಮಾರ್ ಪರಕ್ಕಜೆ ಮತ್ತಿತರರು ಉಪಸ್ಥಿತರಿದ್ದರು.
Home ಚಿತ್ರ ವರದಿ ಕಂಬಳಕ್ಕೆ ರಾಜಕೀಯ ಬಣ್ಣ ಸರಿಯಲ್ಲ. ಅಶೋಕ್ ಕುಮಾರ್ ರೈಯವರ ಅಧ್ಯಕ್ಷತೆಯಲ್ಲಿ ಸುಸೂತ್ರವಾಗಿ ಕಂಬಳ ನಡೆದಿದೆ :...