ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನಿವೃತ್ತ ಅಧಿಕಾರಿ, ಆರ್ಯಾಪು ಮೇರ್ಲ `ಸ್ವರ್ಣ ಕುಟೀರ’ ನಿವಾಸಿಯಾಗಿದ್ದ ಪಿ.ರಮೇಶ ಸುವರ್ಣ(70ವ.)ರವರು ಫೆ.2ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
1977ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಗೊಂಡು, ತಾನು ವಿದ್ಯಾಭ್ಯಾಸ ಪಡೆದಿದ್ದ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಯೇ ಶಿಕ್ಷಕ ವೃತ್ತಿಗೆ ನೇಮಕಗೊಂಡಿದ್ದ ಇವರು ಸುಮಾರು 17 ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡಿದ್ದರು.ಅಲ್ಲಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿ 2000ದಲ್ಲಿ ಕುಂಬ್ರ ಸರಕಾರಿ ಪ.ಪೂ.ಕಾಲೇಜಿಗೆ ವರ್ಗಾವಣೆಯಾಗಿದ್ದರು.ಅಲ್ಲಿಯೂ 6 ವರ್ಷ ಸೇವೆ ಸಲ್ಲಿಸಿ ಮತ್ತೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ವರ್ಗಾವಣೆ ಹೊಂದಿ 7 ವರ್ಷಗಳ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ್ದರು.ಇವರು ವೃತ್ತಿಯಲ್ಲಿ ಮಾಡಿರುವ ಸೇವೆ, ಸಾಧನೆಗಾಗಿ ಹಲವು ಕಡೆಗಳಲ್ಲಿ ಸನ್ಮಾನಿಸಿ, ಅಭಿನಂದಿಸಲಾಗಿತ್ತು.ಮೃತರು ಪತ್ನಿ ಹೇಮಾವತಿ, ಪುತ್ರ ದೀಪಕ್, ಸೊಸೆ ಸುಶ್ಮಿತಾ, ಸಹೋದರರಾದ ಸುಧಾಕರ ಸುವರ್ಣ, ಕೇಶವ ಸುವರ್ಣ, ವಿಠಲ ಸುವರ್ಣ, ಬಾಲಕೃಷ್ಣ ಸುವರ್ಣ, ಸಹೋದರಿ ಜಯಶ್ರೀ ಸಂಜೀವರವರನ್ನು ಅಗಲಿದ್ದಾರೆ.ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.
ಪುತ್ರ ಕಾರ್ತಿಕ್ ಕೊಲೆಯಾಗಿದ್ದರು:
ಮೃತ ರಮೇಶ್ ಸುವರ್ಣ ಅವರ ಹಿರಿಯ ಪುತ್ರ, ಹಿಂದೂ ಜಾಗರಣ ವೇದಿಕೆ ಮುಖಂಡರಾಗಿದ್ದ ಕಾರ್ತಿಕ್ ಸುವರ್ಣ ಮೇರ್ಲ ಅವರನ್ನು 2019ರಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.
ಇಂದು ಅಂತ್ಯಕ್ರಿಯೆ:
ಮೃತ ರಮೇಶ್ ಸುವರ್ಣ ಅವರ ಅಂತ್ಯಕ್ರಿಯೆ ಫೆ.3ರಂದು ಬೆಳಿಗ್ಗೆ 10 ಗಂಟೆಗೆ ಮೇರ್ಲ ಮನೆಯಲ್ಲಿ ನಡೆಯಲಿದೆ ಎಂದು ಮೃತರ ಸಹೋದರ ಕೇಶವ ಸುವರ್ಣ ತಿಳಿಸಿದ್ದಾರೆ.