ಕೊರಗ ಸಮುದಾಯದ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದ ಶಾಸಕ ಅಶೋಕ್ ರೈ

0

ಕೊರಗ ಅಭಿವೃದ್ದಿ ನಿಗಮದ ಬೇಡಿಕೆ ಮುಂದಿಟ್ಟ ಜಿಲ್ಲಾ ಕೊರಗ ಸಂಘ


ಪುತ್ತೂರು:ದ ಕ ಜಿಲ್ಲಾ ಕೊರಗ ಹಾಗೂ ಜೇನು ಕುರುಬ ಸಂಘದ ವಿವಿಧ ಪದಾಧಿಕಾರಿಗಳು ಶುಕ್ರವಾರ ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.


ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ದ ಕ ಜಿಲ್ಲಾ ಕೊರಗ ಹಾಗೂ ಜೇನು ಕುರುಬರ ಸಂಘದ ಪ್ರಮುಖರು ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿದ್ದಾರೆ. ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿರುವ ಕೊರಗ ಸಮುದಾಯದ ಶೈಕ್ಷಣಿಕ, ಉದ್ಯೋಗ ಹಾಗೂ ಕೊರಗ ಸಮುದಾಯದ ಅಭಿವೃದ್ದಿಗಾಗಿ ಕೊರಗ ಅಭಿವೃದ್ದಿ ನಿಗಮವನ್ನು ಪ್ರಾರಂಭಿಸಬೇಕು ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದರು. ದ ಕ ಜಿಲ್ಲೆ ಹಾಗೂ ಉಳಿದ ಜಿಲ್ಲೆಗಳಲ್ಲಿ ಕನಿಷ್ಠ ಸಂಖ್ಯೆಯಲ್ಲಿರುವ ಕೊರಗ ಸಮುದಾಯದ ಒಟ್ಟು ಸಮಸ್ಯೆಯ ಬಗ್ಗೆ ಮತ್ತು ಬೇಡಿಕೆಗಳ ಬಗ್ಗೆ ಶಾಸಕ ಅಶೋಕ್ ರೈ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಬೇಡಿಕೆಗಳು:
ಕೊರಗ ಮತ್ತು ಜೇನುಕುರುಬ ಸಮುದಾಯಕ್ಕೆ ಅಭಿವೃದ್ದಿ ನಿಗಮವನ್ನು ಸ್ಥಾಪನೆ ಮಾಡುವುದು,ಪ್ರತೀ ಕೊರಗ ಕುಟುಂಬಗಳಿಗೆ ಸರಕಾರ 2 ಎಕ್ರೆ ಕೃಷಿಭೂಮಿ ನೀಡುವುದು ಮತ್ತು ಕೊರಗ ಸಮುದಾಯಕ್ಕೆ ಪುನರ್ವಸತಿ ಕಲ್ಪಿಸುವುದು,ಬುಡಕಟ್ಟು ಸಮುದಾಯಗಳಿಗೆ ಭೂಮಿ ಒದಗಿಸಲು ವಿಶೇಷ ಭೂ ಒಡೆತನದ ಹಕ್ಕು ಕಾಯಿದೆಯನ್ನು ರೂಪಿಸುವುದು,ಕೊರಗ ಸಮುದಾಯದ ಯುವಕರಿಗೆ ವಿಶೇಷ ನೇರನೇಮಕಾತಿಯಲ್ಲಿ 100 ಶೇ. ಉದ್ಯೋಗ ಕೊಡಿಸುವುದು, ವಿಶೇಷ ಉದ್ಯೋಗ ಹಕ್ಕು ಕಾಯಿದೆಯನ್ನು ರೂಪಿಸುವುದು,ಇಲಾಖಾವಾರು ಸಮಿತಿಯಲ್ಲಿ ಪ್ರಾತಿನಿಧ್ಯ ಕಲ್ಪಿಸುವುದು ಮತ್ತು ಸ್ಥಳೀಯ ಆಡಳಿತ ಚುನಾವಣೆಯಲ್ಲಿ ವಿಶೇಷ ಮೀಸಲಾತಿ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಕೊರಗ ಸಮುದಾಯದ ಮಂದಿ ಸ್ಥಳೀಯ ಆಡಳಿತದಲ್ಲಿ ಚುನಾಯಿತ ಸದಸ್ಯರ ಆಯ್ಕೆಯಾಗಲು ಕ್ರಮ ವಹಿಸುವುದು ಸೇರಿದಂತೆ ಕೆಲವೊಂದು ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.


ದ ಕ ಜಿಲ್ಲಾ ಕೊರಗ ಮತ್ತು ಜೇನು ಕುರುಬ ಸಂಘದ ಪ್ರಮುಖರು ಇಂದು ಬೆಳಗಾವಿ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ಕೊರಗ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿ ಗುರುತಿಸಲ್ಪಟ್ಟಿದ್ದು ಈ ಸಮುದಾಯದ ಅಭಿವೃದ್ದಿಗೆ ಸರಕಾರದಿಂದ ವಿಶೇಷ ಯೋಜನೆಯನ್ನು ರೂಪಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಲಾಗಿದೆ. ಅಭಿವೃದ್ದಿ ನಿಗಮ ಸ್ಥಾಪನೆ ಮಾಡುವ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಕೊರಗ ಸಮುದಾಯವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ , ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮೇಲೆ ತರುವ ಕೆಲಸ ಆಗಬೇಕಿದೆ. ಕೊರಗ ಸಮುದಾಯದ ಪರವಾಗಿ ಸಿ ಎಂ ಜೊತೆ ಮಾತುಕತೆ ನಡೆಸಿದ್ದೇನೆ. ಅಧಿವೇಶನ ಮುಗಿದ ಬಳಿಕ ಬೇಡಿಕೆಗಳ ಬಗ್ಗೆ ಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಅಶೋಕ್ ರೈ, ಶಾಸಕರು, ಪುತ್ತೂರು

LEAVE A REPLY

Please enter your comment!
Please enter your name here