ವೀರ ಪುರುಷರ ಆದರ್ಶವೇ ನಮಗೆ ಸ್ಪೂರ್ತಿ: ಮಾಣಿಲ ಶ್ರೀ
ವಿಟ್ಲ: ನಮ್ಮ ಹಿರಿಯರ ಆದರ್ಶದಲ್ಲಿ ನಾವು ಬದುಕು ಕಟ್ಟಬೇಕು. ಭಾರೀ ಇತಿಹಾಸ ವಿರುವ ಸಮಾಜ ಬಿಲ್ಲವ ಸಮಾಜ. ಬಾಕಿಲದ ಮಣ್ಣಿಗೆ ಅದರದೇ ಆದ ಪಾವಿತ್ರ್ಯವಿದೆ. ಬೈದೇರುಗಳ ಮಹಿಮೆ ಅಪಾರ. ಉತ್ತಮ ಬದುಕು ಕಟ್ಟಲು ವೀರ ಪುರುಷರ ಆದರ್ಶವೇ ನಮಗೆ ಸ್ಪೂರ್ತಿ . ಕ್ಷೇತ್ರದ ಶಕ್ತಿಯಿಂದ ಬಾಕಿಲ ಗುತ್ತು ಇನ್ನಷ್ಟು ಬೆಳಗಲಿ ಎಂದು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಫೆ.2ರಂದು ಬಾಕಿಲ ಗುತ್ತುವಿನಲ್ಲಿ ಬೈದೇರುಗಳ ನೇಮೋತ್ಸವದ ಸಂದರ್ಭದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ನಾವು ನಡೆದು ಬಂದ ಹಾದಿಯನ್ನು ತಿಳಿದುಕೊಳ್ಳಬೇಕಾದ ಕಾಲಘಟ್ಟವಿದು. ಇತಿಹಾಸವನ್ನು ತಿಳಿದು ಬದುಕುವ ಮನಸ್ಸು ನಮ್ಮದಾಗಬೇಕು. ನಾವು ಒಗ್ಗಟ್ಟಾಗಿ ನಮ್ಮ ತನವನ್ನು ಉಳಿಸಬೇಕು. ನಮ್ಮ ಮಕ್ಕಳಿಗೆ ನಮ್ಮ ಆರಾಧನೆಯನ್ನು ತಿಳಿಸುವ ಪ್ರಯತ್ನವಾಗಬೇಕು. ಕೆಡುಕಲ್ಲಿ ಒಳಿತನ್ನು ಕಾಣುವ ಮನಸ್ಸು ನಮ್ಮದಾಗಬೇಕು. ಧ್ವೇಷ ಬಿಟ್ಟು ಎಲ್ಲರನ್ನೂ ಸೇರಿಸಿಕೊಂಡು ಮುಂದುವರಿಯುವ ಮನಸ್ಸು ನಮ್ಮದಾಗಬೇಕು. ಗ್ರಾಮ ಇನ್ನಷ್ಟು ಬೆಳಗಲಿ ಎಂದು ಶ್ರೀಗಳು ಹಾರೈಸಿದರು.
ಮಾಜಿ ಶಾಸಕ ರುಕ್ಮಯ ಪೂಜಾರಿ, ಬಾಕಿಲಗುತ್ತು ಆಡಳಿತ ಟ್ರಸ್ಟ್ ನ ಅಧ್ಯಕ್ಷರಾದ ವಸಂತ ಪೂಜಾರಿ ಎ. , ಕಂಕನಾಡಿ ಗರಡಿ ಕ್ಷೇತ್ರದ 150ನೇ ಸಂಭ್ರಮ ಸಮಿತಿ ಪ್ರಧಾನ ಸಂಚಾಲಕ ಮೋಹನ ಉಜ್ಜೋಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಮಲರಾಯಿ ದೈವದ ಪಾತ್ರಿ ರಾಮಣ್ಣ ಗೌಡ, ಅಂಚೆ ಇಲಾಖೆಯ ನಿವೃತ್ತ ಸಿಬ್ಬಂದಿ ಸಂಕಪ್ಪ ಪೂಜಾರಿ ಮಾಡಾವು, ನಿವೃತ್ತ ಎಇಒ ರಾಧಾಕೃಷ್ಣ ಕೆಂಗುಡೇಲು ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಇತ್ತೀಚೆಗೆ ನಿಧನರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿ. ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕರವರಿಗೆ ಇದೇ ಸಂದರ್ಭದಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ ಮಂಗಳೂರು ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ 150 ನೇ ವರ್ಷದ ಸಂಭ್ರಮದ ಆಮಂತ್ರಣ ಪತ್ರವನ್ನು ಶ್ರೀಗಳು ಬಿಡುಗಡೆ ಮಾಡಿದರು. ದಿನೇಶ್ ರಾಯಿ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವನ್ನು ನಿರೂಪಿಸಿದರು. ಯಶಸ್ವಿನಿ ಬಾಕಿಲ, ಭವಿಷ್ಯ ಬಾಕಿಲ, ರಕ್ಷಿತಾ ಬಾಕಿಲ ಸನ್ಮಾನ ಪತ್ರ ವಾಚಿಸಿದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಹರೀಶ್ ಸಾಲ್ಯಾನ್ ಮಂಗಳೂರು, ಟ್ರಸ್ಟಿ ಸುರೇಶ್ ಸಾಲ್ಯಾನ್ ಬಾಕಿಲಗುತ್ತುರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಧನ್ಯ ಬಾಕಿಲ ಪ್ರಾರ್ಥಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಬಾಕಿಲಗುತ್ತು ಆಡಳಿತ ಟ್ರಸ್ಟ್ ನ ಅಧ್ಯಕ್ಷರಾದ ವಸಂತ ಪೂಜಾರಿ ಎ. ವಂದಿಸಿದರು.