ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಏನಾಗಬೇಕೆನ್ನುವ ಸ್ಪಷ್ಟ ಗುರಿಯಿರಲಿ-ವಂ|ಸ್ಟ್ಯಾನಿ ಪಿಂಟೋ
ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಪಿಯುಸಿ ವಿದ್ಯಾಭ್ಯಾಸ ಎನ್ನುವುದು ಮುಂದಿನ ಉತ್ತಮ ಭವಿಷ್ಯದ ಕಾಲಘಟ್ಟವಾಗಿದೆ. ವಿದ್ಯಾರ್ಥಿಗಳು ಮುಂದೆ ಭವಿಷ್ಯದಲ್ಲಿ ಏನಾಗಬೇಕು ಎನ್ನುವ ಸ್ಪಷ್ಟ ಗುರಿಯೊಂದಿಗೆ ಮುಂದಡಿಯಿಡಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಸ್ಟ್ಯಾನಿ ಪಿಂಟೋರವರು ಹೇಳಿದರು.
ಫೆ.3ರಂದು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾಲೇಜಿನ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ನಡೆದ ಪೋಷಕ ವಿದ್ಯಾರ್ಥಿಗಳೊಂದಿಗೆ ಸಮಾಲೋಚನಾ ಸಭೆಯಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಕಷ್ಟು ಸವಾಲುಗಳಿವೆ. ಹಿರಿಯ ವಿದ್ಯಾರ್ಥಿಗಳು ಏನು ಆಭ್ಯಸಿಸಿರುತ್ತಾರೋ ತಾನೂ ಕೂಡ ಅದನ್ನೇ ಕಲಿಯಬೇಕು ಎಂಬಂತೆ ಜೋತು ಬೀಳುವುದಲ್ಲ. ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಾನು ಏನಾಗಬೇಕು ಎಂದು ಮೊದಲು ಅರ್ಥೈಸಿಕೊಳ್ಳಬೇಕು. ಆ ಮೂಲಕ ವಿದ್ಯಾರ್ಥಿಗಳು ಕಾಲಕಾಲಕ್ಕೆ ಅಪ್ ಡೇಟ್ ಆಗಬೇಕು. ವಾಟ್ಸಾಫ್ ನಲ್ಲಿ ನೋಟ್ಸ್ ಮಾಡುವುದಲ್ಲ. ಬರೆಯುವ ಅಭ್ಯಾಸ ಮಾಡಬೇಕು. ಕಷ್ಟಕರ ಎನಿಸಿದ ವಿಷಯಗಳನ್ನು ಗುರುತಿಸಿಕೊಂಡು ಆ ವಿಷಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಪೋಷಕರು ತಮ್ಮ ಮಕ್ಕಳ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ವಿದ್ಯೆ ಅಂದರೆ ಅದು ಜ್ಞಾನ ಮತ್ತು ಶಿಸ್ತು. ಜ್ಞಾನವು ಪುಸ್ತಕದಿಂದ ಸಿಗುತ್ತದೆ ಆದರೆ ಶಿಸ್ತು ಎಂಬುದು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಹುದು. ಇವೆರಡೂ ಇದ್ದಾಗ ಜೀವನದಲ್ಲಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಕಾಲೇಜಿನ ಪ್ರತಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಮುಂದೆ ಸಾಗಬೇಕು ಎನ್ನುವುದೇ ನಮ್ಮ ಉದ್ಧೇಶ. ಪ್ರಸ್ತುತ ಪರೀಕ್ಷಾ ಹಂತವಾಗಿರುವುದರಿಂದ ಮಕ್ಕಳನ್ನು ಕಾರ್ಯಕ್ರಮಗಳಿಗೆ, ಜಾತ್ರೆ, ಹಬ್ಬಗಳಿಗೆ ಕಳುಹಿಸಬೇಡಿ. ಉತ್ತಮ ಆಹಾರ ನೀಡಿ, ಉತ್ತಮ ನಿದ್ರೆ ಕೂಡ ಮಾಡುವಲ್ಲಿ ಗಮನ ಕೊಡುವಂತಾಗಲಿ. ತಾನು ಕಲಿತ ಸಂಸ್ಥೆಯ ಬಗ್ಗೆ ಅಭಿಮಾನ ಇರಲಿ, ಒಳ್ಳೆಯ ಮನುಷ್ಯರಾಗಿ ಬಾಳಬೇಕು ಎಂದರು.
ಉಪನ್ಯಾಸಕರಾದ ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿ ಯಶ್ವಂತ್ ಎಂ.ಡಿ ಸ್ವಾಗತಿಸಿ, ಕೋಶಾಧಿಕಾರಿ ಸಂಜಯ್ ವಂದಿಸಿದರು. ಉಪನ್ಯಾಸಕಿ ಸುಮನಾ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧಾತ್ಮಕ ಯುಗದಲ್ಲಿ ಸಾಕಷ್ಟು ಸವಾಲುಗಳಿವೆ…
ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಘಟ್ಟ ಎಂಬುದು ಆರಂಭವಷ್ಟೇ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಆತಂಕ ಹಾಗೂ ಒತ್ತಡ ಇರುತ್ತದೆ. ಪೋಷಕರಲ್ಲಿ ಆಶಾಭಾವನೆ ಮೂಡುತ್ತದೆ. ಕೆಲವು ಹೆತ್ತವರು ತಮ್ಮ ಕಷ್ಟದ ಬದುಕಿನಲ್ಲಿಯೂ ತಮ್ಮ ಮಕ್ಕಳು ವಿದ್ಯಾವಂತರಾಗಬೇಕು ಎನ್ನುವ ಆಶಯದಿಂದ ಕಾಲೇಜಿಗೆ ಕಳುಹಿಸುತ್ತಾರೆ ಎಂಬ ಅರಿವು ವಿದ್ಯಾರ್ಥಿಗಳಲ್ಲಿರಬೇಕಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆಗಳನ್ನು ಯಾವ ರೀತಿ ಎದುರಿಸಬೇಕು, ಹೊಸ ಶಿಕ್ಷಣ ನೀತಿಯಿಂದ ಏನೆಲ್ಲಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಸಾಮಾನ್ಯ ಜ್ಞಾನದ ಅರಿವು ನಮ್ಮದಾಗಬೇಕು. ಮಕ್ಕಳ ಬದುಕು ಸದೃಢವಾಗಬೇಕು ಎನ್ನುವ ಆಶಾಭಾವನೆ ನಮ್ಮದಾಗಲಿ.
-ಮಾಮಚ್ಚನ್ ಎಂ, ಅಧ್ಯಕ್ಷರು, ರಕ್ಚಕ-ಶಿಕ್ಷಕ ಸಂಘ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು
ಫಿಲೋಮಿನಾ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ|ಗಣೇಶ್ ಭಟ್ ರವರು ಫಿಲೋಮಿನಾ ಕಾಲೇಜಿನಲ್ಲಿನ ಶೈಕ್ಷಣಿಕ ಕಲಿಕಾ ಮಟ್ಟ, ಆಯ್ಕೆ ವಿಷಯ (ಕೋರ್ಸ್)ಗಳ ಬಗ್ಗೆ, ಮೂಲಭೂತ ಸೌಕರ್ಯಗಳ ಬಗ್ಗೆ ಬೆಳಕು ಚೆಲ್ಲಿ ಪಿಯುಸಿ ವಿದ್ಯಾರ್ಥಿಗಳು ಪದವಿ ಕಾಲೇಜಿನ ವಿದ್ಯಾಭ್ಯಾಸಕ್ಕೆ ದಾಖಲಾತಿ ಪಡೆಯುವರಾಗಿ ಎಂದರು.