ರಾಷ್ಟ್ರಮಟ್ಟದ ಕಲೋತ್ಸವ, ಪರೀಕ್ಷಾ ಪೇ ಚರ್ಚಾ ಪ್ರತಿಭೆ, ತೇಜ ಚಿನ್ಮಯ ಹೊಳ್ಳರವರಿಗೆ ಸನ್ಮಾನ ಪ್ರತಿಭಾ ದೀಪ ಸಮ್ಮಾನನಮ್

0

ಪುತ್ತೂರು: ಪ್ರತಿಭೆ ಒಂದು ದೀಪದಂತೆ. ದೀಪ ಪ್ರಜ್ವಲಿಸಿದಾಗ ಅದಕ್ಕೆ ಪ್ರಾಮುಖ್ಯತೆ ಬರುತ್ತದೆ. ಪ್ರತಿಭೆಯನ್ನು ಗುರುತಿಸಿ ಗೌರವಿಸುವುದು ಒಂದು ಅವಿಸ್ಮರಣೀಯ ಅಮೃತ ಘಳಿಗೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾಕ್ಟರ್ ಕೆ.ಎಮ್. ಕೃಷ್ಣ ಭಟ್ ಹೇಳಿದರು.

ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ರಾಷ್ಟ್ರಮಟ್ಟದ ಕಲೋತ್ಸವ ವಿಜೇತ ಹಾಗೂ ಪ್ರಧಾನ ಮಂತ್ರಿಗಳ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಕುಮಾರ ತೇಜ ಚಿನ್ಮಯ ಹೊಳ್ಳ (ಹರೀಶ್ ಹೊಳ್ಳ ಹಾಗೂ ವಿದುಷಿ ಡಾ. ಸುಚಿತ್ರಾ ಹೊಳ್ಳ ದಂಪತಿ ಪುತ್ರ) ರವರ ಸನ್ಮಾನ ಸಮಾರಂಭ “ಪ್ರತಿಭಾ ದೀಪ ಸಮ್ಮಾನನಮ್”ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಮಾತನಾಡಿ ಪ್ರತಿಭೆಯ ಗುರುತಿಸುವಿಕೆ ಹಾಗೂ ಪೋಷಣೆಯಲ್ಲಿ ಹೆತ್ತವರ ಹಾಗೂ ಶಿಕ್ಷಕರ ಪಾತ್ರ ಮಹತ್ವವಾದದು ಎಂದು ಹೇಳಿದರು. ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ ಒಬ್ಬ ವಿದ್ಯಾರ್ಥಿಯ ಪ್ರತಿಭೆ ಇತರರಿಗೆ ಮಾದರಿ ಮತ್ತು ಗುರುತಿಸುವಿಕೆ ಪ್ರೇರಣಾದಾಯಿ ಎಂದು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ತೇಜಚಿನ್ಮಯ ಹೊಳ್ಳ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರನ್ನು ಸ್ಮರಿಸಿ, ಪ್ರಧಾನಿಗಳ ಭೇಟಿಯ ಅನುಭವವನ್ನು ಹಂಚಿಕೊಂಡರು. ವಿದುಷಿ ಡಾ. ಸುಚಿತ್ರ ಹೊಳ್ಳ ಮಾತನಾಡಿ ಅವಕಾಶ ಯಾವಾಗಲೂ ಸಿಗುವುದಿಲ್ಲ ಸಿಕ್ಕಾಗ ಸೂಕ್ತವಾಗಿ ಬಳಸಿಕೊಳ್ಳುವುದು ಜಾಣತನ ಎಂದು ಹೇಳಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಮುರಳಿಧರ್ ಕೆ. ಶುಭಹಾರೈಸಿದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್ ಎಂ.ಮಾತನಾಡಿ ತೇಜನ ಸಾಧನೆ ಇತರರಿಗೆ ಪ್ರೇರಣೆ ನೀಡಲಿ. ಸಂಸ್ಥೆಯಿಂದ ಇನ್ನೂ ಇಂತಹ ಹಲವು ಪ್ರತಿಭೆಗಳು ಹೊರಬರಲಿ ಎಂದು ನುಡಿದರು. ವೇದಿಕೆಯಲ್ಲಿ ತೇಜ ಚಿನ್ಮಯನ ಹೆತ್ತವರಾದ ಹರೀಶ್ ಹೊಳ್ಳ, ಡಾ.ಸುಚಿತ್ರ ಹೊಳ್ಳ, ಪುತ್ತೂರು ರೋಟರಿ ಪೂರ್ವದ ಅಧ್ಯಕ್ಷ ಶರತ್ ಕುಮಾರ್ ರೈ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಸತೀಶ್ ಕುಮಾರ್ ರೈ, ಮಮತಾ, ಸಂಧ್ಯಾ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶಾಂತಿ ಶೆಣೈ ಉಪಸ್ಥಿತರಿದ್ದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸಂಚಾಲಕ ರವಿ ನಾರಾಯಣ್ ಎಂ.ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಸದಸ್ಯರು ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಮುಖ್ಯಸ್ಥರು, ಪೋಷಕರು, ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸಹ ಶಿಕ್ಷಕಿಯರಾದ ಅನುರಾಧ ಹಾಗೂ ಯಶೋಧ ಸ್ವರಚಿತ ಕವನ ವಾಚಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸಹಪಾಠಿ ವಿದ್ಯಾರ್ಥಿಗಳು ಅಭಿನಂಧನಾ ಗೀತೆ ಹಾಡಿದರು. ಸಂಸ್ಕೃತ ಶಿಕ್ಷಕ ವೆಂಕಟೇಶ್ ಪ್ರಸಾದ್ ವಂದಿಸಿದರು.

LEAVE A REPLY

Please enter your comment!
Please enter your name here