ಪುತ್ತೂರು: ಇತಿಹಾಸ ಪ್ರಸಿದ್ದ ಗಾಳಿಮುಖ ಪುದಿಯವಳಪ್ಪ ಮಖಾಂ ಉರೂಸ್ ಫೆ.3ರಂದು ಪ್ರಾರಂಭಗೊಂಡಿತು. ಉರೂಸ್ ಕಾರ್ಯಕ್ರಮ ಉದ್ಘಾಟಿಸಿದ ಖಲೀಲ್ ಸಲಾಹ್ ಸಂಸ್ಥೆಯ ಚೇರ್‌ಮೆನ್ ಸಯ್ಯದ್ ಇಂಬಿಚ್ಚಿಕೋಯ ತಂಙಳ್ ಮಾತನಾಡಿ ಯಾವುದೇ ಸಮಸ್ಯೆ, ಕಷ್ಟಗಳು ಎದುರಾದಾಗ ಇಲ್ಲಿನ ಮಖಾಂನಲ್ಲಿ ಬಂದು ಪ್ರಾರ್ಥಿಸುವುದರಿಂದ ಪರಿಹಾರ ಕಂಡುಕೊಳ್ಳಬಹುದಾಗಿದ್ದು 9 ದಿನ ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಆಶಂಸ ಭಾಷಣ ಮಾಡಿದ ಸ್ವಾದಿಕ್ ಸಖಾಫಿಯವರು ಅಂತ್ಯ ವಿಶ್ರಮ ಹೊಂದುತ್ತಿರುವ ಮಹಾನುಭಾವರ ಸನ್ನಿಧಿಗೆ ಬರುವುದು, ಪ್ರಾರ್ಥಿಸುವುದು ಪುಣ್ಯದ ಕಾರ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಯ್ಯದ್ ಟಿ.ವಿ ಹಕಿಂ ತಂಙಳ್ ಆದೂರು ಮಾತನಾಡಿ ಇಲ್ಲಿನ ದರ್ಗಾಗೆ ಹಲವು ವರ್ಷಗಳಿಂದ ನಾನು ಬರುತ್ತಿದ್ದು ಸಂಪರ್ಕ ಇಟ್ಟುಕೊಂಡಿದ್ದೇನೆ. ಉರೂಸ್ ಕಾರ್ಯಕ್ರಮ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ಸಮಾಪ್ತಿಯಾಗಲಿ ಎಂದು ಶುಭ ಹಾರೈಸಿದರು.
ಪುಣ್ಯ ಕಾರ್ಯಗಳು ಮಾತ್ರ ನಮಗೆ ಶಾಶ್ವತ-ಫಾರೂಕ್ ದಾರಿಮಿ
ಮುಖ್ಯ ಪ್ರಭಾಷಣ ನಡೆಸಿದ ಗಾಳಿಮುಖ ಪುದಿಯವಳಪ್ಪ್ ಖತೀಬ್ ಉಮರುಲ್ ಫಾರೂಕ್ ದಾರಿಮಿ ಮಾತನಾಡಿ ಇಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಮಹಾನುಭಾವರ ಸನ್ನಿಧಿಯಲ್ಲಿ ಬಂದು ಪ್ರಾರ್ಥಿಸಿದ ಎಷ್ಟೋ ಮಂದಿ ತಮ್ಮ ಸಮಸ್ಯೆ, ಕಷ್ಟ, ರೋಗಗಳಿಗೆ ಪರಿಹಾರ ಕಂಡುಕೊಂಡ ಉದಾಹರಣೆಗಳಿವೆ. ಇಲ್ಲಿನ ಮಖಾಂ ನೊಂದವರ ಆಶಾ ಕೇಂದ್ರವಾಗಿದ್ದು ಅಲ್ಲಾಹನ ಔಲಿಯಾಗಳನ್ನು ಗೌರವಿಸುವುದು ನಮ್ಮ ಬಾಧ್ಯತೆಯಾಗಿದೆ ಎಂದು ಅವರು ಹೇಳಿದರು.
ಮನುಷ್ಯನ ಜೀವನ ಕ್ಷಣಿಕವಾಗಿದ್ದು ಜೀವಿತಾವಧಿಯಲ್ಲಿ ನಾವು ಮಾಡುವ ಪುಣ್ಯ ಕಾರ್ಯಗಳು ಮಾತ್ರ ನಮಗೆ ಶಾಶ್ವತವಾಗಿ ಸಿಗಲಿದೆ. ನಮಾಜನ್ನು ಕ್ರಮ ಬದ್ದವಾಗಿ ನಿರ್ವಹಿಸುವ ಮೂಲಕ ಇಸ್ಲಾಂ ಆಜ್ಞಾಪಿಸಿದ ರೀತಿಯಲ್ಲಿ ಜೀವನ ನಡೆಸಿದರೆ ಮಾತ್ರ ನಮಗೆ ರಕ್ಷೆ ಹೊಂದಲು ಸಾಧ್ಯ ಎಂದು ಅವರು ಹೇಳಿದರು.
ಜಮಾಅತ್ ಕಮಿಟಿ ಅಧ್ಯಕ್ಷ ಪಿ.ಎ ಅಬೂಬಕ್ಕರ್, ಕಾರ್ಯದರ್ಶಿ ಇಬ್ರಾಹಿಂ ಹಾಜಿ, ಸಂಶುದ್ದೀನ್ ದಾರಿಮಿ, ಶಾಫಿ ಅಝ್‌ಹರಿ ಅಬ್ದುಲ್ ಹಮೀದ್ ಅರ್ಷದಿ, ಸ್ಥಳೀಯ ಮದ್ರಸ ಸದರ್ ಮುಹಮ್ಮದ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಅಝೀರ್ ಖಿರಾಅತ್ ಪಠಿಸಿದರು. ಮುಹಮ್ಮದ್ ಕುಂಞಿ ಝುಹ್‌ರಿ ಸ್ವಾಗತಿಸಿದರು. ಜಮಾಅತ್ ಜೊತೆ ಕಾರ್ಯದರ್ಶಿ ಶಿಹಾಬ್ ನೆಯ್ಯಡ್ಕ ವಂದಿಸಿದರು. ಜಮಾಅತ್ ಕಮಿಟಿಯವರು, ಅನ್ಸಾರ್ ಕಮಿಟಿಯವರು ಸಹಕರಿಸಿದರು.