ವಿಟ್ಲ : ಬಂಟ್ಬಾಳ ತಾಲೂಕು ಮಾಣಿ ಗ್ರಾಮದ ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ಫೆ.5ರಂದು ನಡೆಯಲಿರುವ ಮೆಚ್ಚಿ ಜಾತ್ರೆಯ ಪ್ರಯುಕ್ತ ಪೂರ್ವಭಾವಿ ಯಾಗಿ ಮಾಣಿ ಉಳ್ಳಾಲ್ತಿ ದೈವಸ್ಥಾನದ ಅಂಗಣಕ್ಕೆ ಚಪ್ಪರ ಮುಹೂರ್ತ ಫೆ.3ರಂದು ನಡೆಯಿತು.
ಪಳನೀರು ಅನಂತ ಭಟ್ ಅವರು ವಿಧಿವಿಧಾನ ನೆರವೇರಿಸಿದರು. ಚಪ್ಪರ ಮೂಹೂರ್ತ ನಡೆದ ಬಳಿಕ ಮಾಣಿ ಉಳ್ಳಾಲ್ತಿ ಮೆಚ್ಚಿ ಗೆ ಅಣಿ ಕಟ್ಟಲು ಬೇಕಾಗುವ ಅಡಿಕೆ ಹಾಳೆಗಳನ್ನು ತರಲು ಸಂಪ್ರದಾಯದಂತೆ ಕೆದಿಲ ಮನೆಗೆ ತೆರಳಿ, ಅಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ ಬಳಿಕ ಹಿಂಗಾರ, ಹಾಳೆ, ಅಡಿಕೆ ತರಲಾಯಿತು.
ಹಾಳೆಯನ್ನು ತರಲು ಕೆದಿಲಕ್ಕೆ ಹೋದವರು ಮರಳಿ ಬಂದ ಬಳಿಕ ಬಾಕಿಮಾರು ಗದ್ದೆಯಲ್ಲಿ ಪ್ರಥಮ ಚೆಂಡು ನಡೆಯಿತು. ಬಳಿಕದ ಮೂರು ದಿನಗಳ ಕಾಲ ಬಾಕಿಮಾರು ಗದ್ದೆಯಲ್ಲಿ ಚೆಂಡು ಹಾಕುವ ಕಾರ್ಯ ಕ್ರಮ ಸಂಪ್ರದಾಯದಂತೆ ನಡೆಯುತ್ತದೆ.
ಈ ಸಂದರ್ಭದಲ್ಲಿ ಮಾಣಿಗುತ್ತು ಸಚಿನ್ ರೈ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ನೇರಳಕಟ್ಟೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ ಬದಿಗುಡ್ಡೆ, ಗುಡ್ಡ ಶೆಟ್ಟಿ ಯಾನೇ ರತ್ನಾಕರ ಭಂಡಾರಿ ಅರೆಬೆಟ್ಟು ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.