ವಳಕಡಮ: ಗುಂಡಿಜೆ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ, ಚುನಾವಣಾ ಬಹಿಷ್ಕಾರ ನಿರ್ಧಾರ

0

ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ವಳಕಡಮ-ಗುಂಡಿಜೆ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಫೆ.5 ರಂದು ಬೆಳಿಗ್ಗೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಸದ್ರಿ ರಸ್ತೆಯನ್ನು ಸಂಪರ್ಕಕ್ಕೆ ಯೋಗ್ಯವಾದ ರಸ್ತೆಯನ್ನಾಗಿ ಮಾಡದೇ ಇದ್ದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ತೀರ್ಮಾನಿಸಿರುವ ಬ್ಯಾನರ್ ಅಳವಡಿಸಿದರು.


ಕೊಯಿಲ ಗ್ರಾಮದ ವಳಕಡಮ ಶ್ರೀದೇವಿ ಭಜನಾ ಮಂದಿರದಿಂದ ಗುಂಡಿಜೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಸುಮಾರು 40 ವರ್ಷ ಹಳೆಯ ರಸ್ತೆಯಾಗಿದೆ. ಈ ರಸ್ತೆಯು ಈ ಭಾಗದ 28 ಮನೆಗಳಿಗೆ ಸಂಪರ್ಕ ರಸ್ತೆಯಾಗಿದೆ. ಸದ್ರಿ ರಸ್ತೆಗೆ ಗ್ರಾಮ ಪಂಚಾಯತ್‌ನಿಂದ ಯಾವುದೇ ಅನುದಾನವೂ ದೊರೆತಿಲ್ಲ. 1.5 ಕಿ.ಮೀ.ಉದ್ದದ ಸದ್ರಿ ರಸ್ತೆ ಕಾಂಕ್ರಿಟೀಕರಣಗೊಳಿಸುವಂತೆ ಈ ಭಾಗದ ನಾಗರಿಕರು ಸುಳ್ಯ ಶಾಸಕ, ಸಚಿವರೂ ಆದ ಎಸ್.ಅಂಗಾರ ಅವರಿಗೆ ಮೂರ್‍ನಾಲ್ಕು ಸಲ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಸದ್ರಿ ರಸ್ತೆಯಲ್ಲಿ ಮಳೆಗಾಲದಲ್ಲಿ ಶಾಲಾ ಮಕ್ಕಳಿಗೆ ಮತ್ತು ನಾಗರಿಕರಿಗೆ ನಡೆದುಕೊಂಡು ಹೋಗಲು ತುಂಬಾ ಕಷ್ಟವಾಗಿದೆ. ಆದ್ದರಿಂದ ಈ ರಸ್ತೆಯನ್ನು ಜನರ ಸಂಪರ್ಕಕ್ಕೆ ಯೋಗ್ಯವಾದ ರಸ್ತೆಯನ್ನಾಗಿ ಮಾಡದೇ ಇದ್ದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಿ ವಳಕಡಮ ಶ್ರೀ ದೇವಿ ಭಜನಾ ಮಂದಿರದ ಬಳಿ ಸದ್ರಿ ರಸ್ತೆ ಬಳಕೆದಾರರು ಬ್ಯಾನರ್ ಅಳವಡಿಸಿದರು.

ಈ ಸಂದರ್ಭದಲ್ಲಿ ವಳಕಡಮ ಗಣೇಶೋತ್ಸವ ಸಮಿತಿ ಅಧ್ಯಕ್ಷ ಆನಂದ ಗೌಡ ಗುಂಡಿಜೆ ಮಾತನಾಡಿ, ಗುಂಡಿಜೆ ದರ್ಖಾಸು ಭಾಗದಲ್ಲಿ 25 ರಿಂದ 30 ಮನೆಗಳಿದ್ದು 150ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದೇವೆ. ಈ ಭಾಗಕ್ಕೆ ರಸ್ತೆ ನಿರ್ಮಿಸಿ 25 ವರ್ಷವಾದರೂ ಈಗ ಓಡಾಟಕ್ಕೆ ಯೋಗ್ಯವಾಗಿಲ್ಲ. ಮಳೆಗಾಲದಲ್ಲಿ ಸದ್ರಿ ರಸ್ತೆಯಲ್ಲಿ ವಾಹನ ಓಡಾಟಕ್ಕೆ ಹಾಗೂ ನಡೆದುಕೊಂಡು ಹೋಗಲು ಆಗದ ಪರಿಸ್ಥಿತಿ ಇದೆ. ಈ ಬಗ್ಗೆ ಸ್ಥಳೀಯ ಗ್ರಾ.ಪಂ.ಸದಸ್ಯರ ಮೂಲಕ ಮೂರ್‍ನಾಲ್ಕು ಸಲ ಸಚಿವ ಎಸ್.ಅಂಗಾರ ಅವರಿಗೆ ಮನವಿ ಮಾಡಿದ್ದೇವೆ. ಆದರೆ ಈ ತನಕ ನಮಗೆ ಯಾವುದೇ ರೀತಿಯ ಭರವಸೆ ಸಿಕ್ಕಿಲ್ಲ. ಇದರಿಂದ ನೊಂದು ಪ್ರತಿಭಟನೆಯಾಗಿ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದು ಬ್ಯಾನರ್ ಅಳವಡಿಸಿದ್ದೇವೆ. ಗ್ರಾ.ಪಂ.ಸದಸ್ಯರು ಸ್ಪಂದಿಸಿದರೂ ಅವರಿಗೆ ಇತರೇ ನಾಯಕರಿಂದ ಬೆಂಬಲ ಸಿಗುತ್ತಿಲ್ಲ. ಇನ್ನು ಮುಂದೆಯಾದರೂ ನಮ್ಮ ಅಹವಾಲು, ಮನವಿ ಸ್ವೀಕರಿಸಿ ಪ್ರಮುಖ ಬೇಡಿಕೆಯಾಗಿರುವ ರಸ್ತೆ ಕಾಂಕ್ರಿಟೀಕರಣಗೊಳಿಸಬೇಕೆಂದು ಒತ್ತಾಯಿಸುತ್ತೇವೆ ಎಂದರು.


ಗ್ರಾಮಸ್ಥ ಭುವನೇಶ್‌ರವರು ಮಾತನಾಡಿ, ಪ್ರತಿವರ್ಷವೂ ಗ್ರಾಮಸ್ಥರೇ ಸೇರಿಕೊಂಡು ಸದ್ರಿ ರಸ್ತೆ ದುರಸ್ತಿಗೊಳಿಸುತ್ತಿದ್ದೇವೆ. ಈ ವರ್ಷವೂ 60 ರಿಂದ 70 ಸಾವಿರ ರೂ.ಖರ್ಚು ಮಾಡಿ ಅರ್ಥ್ ವರ್ಕ್ ಕೆಲಸ ಮಾಡಲಾಗಿದೆ. ಪಂಚಾಯತ್ ರಸ್ತೆಯಾಗಿದ್ದರೂ ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ. ಕಳೆದ ಬಾರಿ ಅರ್ಥ್ ವರ್ಕ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪಕ್ಕದ ಭಜನಾ ಮಂದಿರಕ್ಕೆ ಅಧಿಕಾರಿಗಳು ಬಂದಿದ್ದ ವೇಳೆ ರಸ್ತೆ ವೀಕ್ಷಣೆಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ದೂರಿದರು. ಧನಂಜಯ ಯು.ಡಿ.ವಳಕಡಮ ಮಾತನಾಡಿ, ವಳಕಡಮದಲ್ಲಿ ಬಿಜೆಪಿ ಎಂಬ ಪದ ಹುಟ್ಟಿಹಾಕದವರೇ ಗುಂಡಿಜೆ ಭಾಗದ ಗ್ರಾಮಸ್ಥರು. ಈಗ ಬಿಜೆಪಿಗೆ ಸೇರಿದವರೇ ಇಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಮನನೊಂದು ಚುನಾವಣೆ ಬಹಿಷ್ಕಾರ ನಿರ್ಧಾರ ಕೈಗೊಂಡಿದ್ದೇವೆ ಎಂದರು.


ಗ್ರಾಮಸ್ಥರಾದ ಹೊನ್ನಪ್ಪ ಗೌಡ ಗುಂಡಿಜೆ, ಗಿರಿಧರ ಗೌಡ ಗುಂಡಿಜೆ, ವಸಂತ ಗೌಡ ಗುಂಡಿಜೆ, ಯತೀಶ ಗೌಡ ಗುಂಡಿಜೆ, ನೋಣಯ್ಯ ಗೌಡ ಗುಂಡಿಜೆ. ಕುಂಞಣ್ಣ ಗೌಡ ಬಿರ್ಮಿಜಾಲ್, ಮೇದಪ್ಪ ಗೌಡ, ಸೀತಾರಾಮ ಗೌಡ ದರ್ಖಾಸು, ಕುಸುಮ ಧನಂಜಯ, ಜಯಮಾಲಾ ಸೀತಾರಾಮ, ಮಧುಶ್ರೀ ಆನಂದ್, ಅನಿತಾ ವಸಂತ್, ಕುಶಾಲಪ್ಪ ಗೌಡ, ರಾಮಚಂದ್ರ ಗೌಡ, ಲೋಕೇಶ ಕುಂಬಾರ, ಪ್ರವೀಣ್ ಕುಂಬಾರ, ಮೋಹಿತ್ ಗೌಡ ದರ್ಖಾಸು, ಶ್ರೀಹಾನ್ ಗೌಡ ಗುಂಡಿಜೆ, ಗುರುತೇಜ ಗುಂಡಿಜೆ, ಪ್ರಾಪ್ತಿ ವಿ.ಜಿ. ಗುಂಡಿಜೆ, ಸಾತ್ವಿ ವಿ.ಜಿ. ಗುಂಡಿಜೆ, ಶೋಬಿತ್ ದರ್ಖಾಸು, ಅನ್ವಿತಾ ಗುಂಡಿಜೆ, ಲಿಕಿತ್ ಗುಂಡಿಜೆ, ಯಶೋಧ ಬಿರ್ಮಿಜಾಲ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here