ನೆಲ್ಯಾಡಿ: ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕಾರ್ಯಕರ್ತರ ಬಹಿರಂಗ ಸಭೆ

0

ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆ ಜಾರಿ ಖಚಿತ: ಬಿ.ಕೆ.ಹರಿಪ್ರಸಾದ್

ದೇಶದಲ್ಲಿ ಭಯದ ವಾತಾವರಣ: ದೇಶಪಾಂಡೆ
ಬಿಜೆಪಿ ಕ್ಷಮೆ ಯಾತ್ರೆ ಮಾಡಲಿ: ಸಲೀಂ ಅಹ್ಮದ್
ಬ್ಯುಸಿನೆಸ್ ಸರಕಾರ: ಮಧು ಬಂಗಾರಪ್ಪ
ಲೂಟಿ ಸರಕಾರ: ಯು.ಟಿ.ಖಾದರ್
ಕಾಂಗ್ರೆಸ್ ಬಡವರ ಪಕ್ಷ: ರಮಾನಾಥ ರೈ
ಸರಕಾರದ ದ್ವೇಷ ಸಾಧನೆ: ಐವನ್ ಡಿ ಸೋಜ
ಕಾಂಗ್ರೆಸ್ ಪತಾಕೆ ಹಾರಾಡಬೇಕು: ಮಮತಾ ಗಟ್ಟಿ

ನೆಲ್ಯಾಡಿ: ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕರಾವಳಿ ಜಿಲ್ಲೆಗಳ ಪ್ರಜಾಧ್ವನಿ ಯಾತ್ರೆ ಉದ್ಘಾಟನೆ ಮತ್ತು ಕಡಬ ಹಾಗೂ ನೆಲ್ಯಾಡಿ ಜಿ.ಪಂ.ಕ್ಷೇತ್ರಗಳ ಕಾರ್ಯಕರ್ತರ ಬಹಿರಂಗ ಸಭೆ ಫೆ.5 ರಂದು ಬೆಳಿಗ್ಗೆ ನೆಲ್ಯಾಡಿ ಡಿಯೋನ್ ಸ್ಕ್ವೇರ್ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ನಡೆಯಿತು.


ವಿಧಾನಪರಿಷತ್‌ನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಮಾತನಾಡಿ, ರಾಜ್ಯ ಕಾಂಗ್ರೆಸ್ ಈಗಾಗಲೇ ಘೋಷಿಸಿರುವ ಪ್ರತಿ ಮನೆಗೂ ೨೦೦ ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಹಾಗೂ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ.,ನೀಡುವ ಗೃಹ ಲಕ್ಷ್ಮೀ ಯೋಜನೆಗೆ ಎಪಿಎಲ್, ಬಿಪಿಎಲ್ ಮಾನದಂಡ ಇಲ್ಲ. ಇದು ಎಲ್ಲರಿಗೂ ಅನ್ವಯಿಸಲಿದೆ. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಯೋಜನೆ ಜಾರಿಗೊಳಿಸುವುದು ಖಚಿತ. ಜೊತೆಗೆ ಅಡಿಕೆ, ರಬ್ಬರ್‌ಗೆ ಸರಿಯಾದ ಬೆಲೆ, ಕುಮ್ಕಿ ಹಕ್ಕು, ಪೋಡಿ ಸಮಸ್ಯೆಗೆ ಮುಕ್ತಿ. ತೆಂಗು, ಅಡಿಕೆ ಕೊಳೆ ರೋಗಕ್ಕೂ ಪರಿಹಾರ ನೀಡುವುದನ್ನು ಮುಖ್ಯ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಹೇಳಿದರು. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಎಲ್ಲದಕ್ಕೂ ಜಿಎಸ್‌ಟಿ ವಿಧಿಸುತ್ತಿದೆ. ಯೋಜನೆ ಘೋಷಣೆ ಮಾತ್ರ ಮಾಡುತ್ತಿದೆ. ಅನುಷ್ಠಾನಕ್ಕೆ ತರುತ್ತಿಲ್ಲ. ಚುನಾವಣೆ ಸಮೀಪಿಸುತ್ತಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕಾಂಗ್ರೆಸ್ ಕಾರ್ಯಕರ್ತರು ಇನ್ನು ಮುಂದೆ ದಿನದಲ್ಲಿ 2 ಗಂಟೆ ಕೆಲಸ ಮಾಡಬೇಕು. ಕೋಮು ಸಾಮರಸ್ಯ, ಸಹಬಾಳ್ವೆಗೆ ಹೆಸರಾದ ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರ ಆಯ್ಕೆಯಾಗಬೇಕೆಂದು ಅವರು ಹೇಳಿದರು.


ದೇಶದಲ್ಲಿ ಭಯದ ವಾತಾವರಣ:

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ರಾಜ್ಯದಲ್ಲಿ 2013ರಿಂದ 2018ರ ತನಕ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ಇಂದಿರಾ ಕ್ಯಾಂಟಿನ್ ಸೇರಿದಂತೆ ಬಡವರ ಪರ ಹಲವು ಯೋಜನೆ ಜಾರಿಗೊಳಿಸಿದೆ. ಆದರೆ ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಅಭಿವೃದ್ಧಿ ಪರ ಇಲ್ಲ. ಘೋಷಣೆ ಮಾತ್ರ ಮಾಡುತ್ತಿದೆ. ದೇಶದಲ್ಲಿ ಭಯದ ವಾತಾವರಣವಿದೆ. ಬಿಜೆಪಿ ಜಾತಿ, ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದೆ ಎಂದರು. ಕಾಂಗ್ರೆಸ್‌ಗೆ ಈಗ ಪರೀಕ್ಷೆ ಕಾಲ. ಈ ಸಂದರ್ಭದಲ್ಲಿ ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು, ಒಗ್ಗಟ್ಟು ಪ್ರದರ್ಶಿಸಬೇಕು. ಪಕ್ಷದ ಹೈಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿ ಕೆಲಸ ಮಾಡಬೇಕು. ಪಕ್ಷಕ್ಕೆ ನಿಷ್ಠೆ, ತ್ಯಾಗ ಪ್ರದರ್ಶಿಸಬೇಕೆಂದು ಹೇಳಿದರು.


ಬಿಜೆಪಿ ‘ಕ್ಷಮೆಯಾತ್ರೆ ‘ ಮಾಡಲಿ:

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ರವರು ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಡಬಲ್ ಇಂಜಿನ್ ಸರಕಾರ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲವಾಗಿದೆ. ಡಬ್ಬ ಸರಕಾರದ ಇಂಜಿನ್ ಹಳಿತಪ್ಪಿದೆ. ಇದೊಂದು ಬ್ರೋಕರ್ ಸರಕಾರವಾಗಿದ್ದು ಜನರಲ್ಲಿ ಮತ ಕೇಳುವ ನೈತಿಕ ಹಕ್ಕು ಕಳೆದುಕೊಂಡಿದೆ. ಆದ್ದರಿಂದ ಬಿಜೆಪಿಯವರು ರಾಜ್ಯದಲ್ಲಿ ವಿಜಯಯಾತ್ರೆ ಮಾಡುವ ಬದಲು ‘ಕ್ಷಮೆ ಯಾತ್ರೆ’ಮಾಡಲಿ ಎಂದರು. ಸರಕಾರದ ಆಯುಷ್ಯ ಮುಗಿದಿದೆ. ದೇಶ, ರಾಜ್ಯದ ಅಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ೧೫೦ ಸೀಟು ಗೆಲ್ಲುವ ವಿಶ್ವಾಸವಿದೆ ಎಂದರು.


ಬ್ಯುಸಿನೆಸ್ ಸರಕಾರ:

ಚುನಾವಣೆ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷರೂ ಆಗಿರುವ ಕಾಂಗ್ರೆಸ್ ಹಿಂದುಳಿದ ವಿಭಾಗಗಳ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಈಗ ಬ್ರಿಟಿಷರ ಮಾದರಿಯಲ್ಲಿ ಆಡಳಿತ ನಡೆಯುತ್ತಿದೆ. ಇದೊಂದು ‘ಬ್ಯುಸಿನೆಸ್’ ಸರಕಾರ ಆಗಿದೆ. ಈ ಸರಕಾರವನ್ನು ಕಿತ್ತೊಗೆಯಬೇಕಾಗಿದೆ. ಕಾಂಗ್ರೆಸ್‌ನಿಂದ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕಕ್ಕೆ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಕಾಂಗ್ರೆಸ್ ಯೋಜನೆ, ಭರವಸೆಯನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು. ತಾವೇ ಅಭ್ಯರ್ಥಿ ಎಂಬ ನೆಲೆಯಲ್ಲಿ ಕೆಲಸ ಮಾಡಬೇಕು ಎಂದರು.


ಲೂಟಿ ಸರಕಾರ:

ಶಾಸಕ, ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್‌ರವರು ಮಾತನಾಡಿ, ರಾಜ್ಯದಲ್ಲಿ ಈಗ ಲೂಟಿ ಸರಕಾರವಿದೆ. ಜಾನುವಾರುಗಳ ಚಿಕಿತ್ಸೆಗೆ ಆಂಬುಲೆನ್ಸ್ ಖರೀದಿಸಿದ್ದರೂ ಅದಕ್ಕೆ ಚಾಲಕರ, ಸಿಬ್ಬಂದಿಗಳ ನೇಮಕ ಮಾಡದೇ ಇರುವುದರಿಂದ ವಾಹನ ತುಕ್ಕು ಹಿಡಿಯುತ್ತಿದೆ. ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯ, ಕೇಂದ್ರದಲ್ಲಿ ಬಿ.ಆರ್.ಅಂಬೇಡ್ಕರ್ ಸಂವಿಧಾನದ ಸರಕಾರ ಜಾರಿಗೆ ತರುವ ಕೆಲಸ ಆಗಬೇಕು. ಇಂದಿರಾ ಗಾಂಧಿ ಆಡಳಿತ ವೈಭವ ಮತ್ತೆ ಮರುಕಳಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಆದ್ದರಿಂದ ಕಾರ್ಯಕರ್ತರು ಗುಂಪುಗಾರಿಕೆ ಬದಿಗಿಟ್ಟು ಬೂತ್ ಮಟ್ಟದಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂದು ಹೇಳಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ ಒಳ ಒಪ್ಪಂದ ಮಾಡಿಕೊಂಡು ಕೋಮುವಾದಿಗಳು ಕೋಮುವಾದಿಗಳಿಗೇ ಬೆಂಬಲ ನೀಡಿದ್ದರಿಂದ ಪಕ್ಷದ ಅಭ್ಯರ್ಥಿ ಪರಾಜಯಗೊಂಡಿದ್ದಾರೆ ಎಂದವರು ಹೇಳಿದರು.


ಕಾಂಗ್ರೆಸ್ ಬಡವರ ಪಕ್ಷ:

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಯೋಜನೆಗಳ ಅತ್ಯಂತ ಹೆಚ್ಚು ಫಲಾನುಭವಿಗಳು ಇರುವ ಜಿಲ್ಲೆ ದ.ಕ.ಆಗಿದೆ. ಕಾಂಗ್ರೆಸ್ ಬಡವರ ಪಕ್ಷ ಪಕ್ಷವಾಗಿದೆ. ಈ ಹಿಂದೆ ಆಡಳಿತ ನಡೆಸಿದಾಗ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆ ಈಡೇರಿಸಲಾಗಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಪಶ್ಚಿಮವಾಹಿನಿ ಯೋಜನೆ ಜಾರಿಗೆ ತರಲಾಗಿದೆ. ಕಡಬ ತಾಲೂಕು ರಚಿಸಲಾಗಿದೆ. ಕೊಲ ಪಶುವೈದ್ಯಕೀಯ ಕಾಲೇಜು, ನಿರಾಶ್ರಿತರಿಗೆ ಜಾತಿ ಪ್ರಮಾಣ ಪತ್ರ, ಇಚ್ಲಂಪಾಡಿ, ಉದನೆ ಸೇತುವೆ ನಿರ್ಮಾಣ ಕೆಲಸ ಆಗಿದೆ ಎಂದರು.


ಸರಕಾರದ ದ್ವೇಷ ಸಾಧನೆ:

ವಿಧಾನಪರಿಷ್ ಮಾಜಿ ಸದಸ್ಯ ಐವನ್ ಡಿ.ಸೋಜ ಅವರು ಮಾತನಾಡಿ, ಬಿಜೆಪಿ ಸರಕಾರ ದ್ವೇಷ ಸಾಧಿಸುತ್ತಿದೆ. ಕಾಂಗ್ರೆಸ್ ಪಕ್ಷದ ಭರವಸೆ ಹಾಗೂ ಕರಾವಳಿ ಪ್ರದೇಶದ ಅಭಿವೃದ್ಧಿಗೆ ಘೋಷಿಸಿರುವ ಅಂಶಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಬೂತ್ ಮಟ್ಟದಲ್ಲಿ ಕಾರ್ಯಕರ್ತರಿಂದ ಆಗಬೇಕು. ರಾಜ್ಯದಲ್ಲಿ ಜಾರಿಯಲ್ಲಿರುವ 40% ಸರಕಾರ ತೊಲಗಿಸಬೇಕೆಂದು ಹೇಳಿದರು.


ಕಾಂಗ್ರೆಸ್ ಪತಾಕೆ ಹಾರಾಡಬೇಕು:

ಜಿ.ಪಂ.ಮಾಜಿ ಅಧ್ಯಕ್ಷೆ ಮಮತಾಗಟ್ಟಿ ಮಾತನಾಡಿ, ದೇಶ, ರಾಜ್ಯದಲ್ಲಿ ಪಕ್ಷ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ಪಕ್ಷದ ಪರ ನಿಂತು ಕೆಲಸ ಮಾಡಬೇಕಾಗಿದೆ. ಜನರ ಮಧ್ಯೆ ವಿಷಬೀಜ ಭಿತ್ತಿ ಅಧಿಕಾರಕ್ಕೆ ಬಂದ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಗೋ ರಕ್ಷಣೆ ಮಾಡುವುದಾಗಿ ಹೇಳುತ್ತಿರುವ ಕೇಂದ್ರ ಸರಕಾರವೇ ಗೋ ಮಾಂಸ ರಫ್ತು ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಸೌಹಾರ್ದ, ಸಹಬಾಳ್ವೆಯಿಂದ ಬದುಕಲು ಸಾಧ್ಯವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪತಾಕೆ ಮತ್ತೆ ಹಾರಾಟ ಆಗಬೇಕೆಂದರು. ಕಾಂಗ್ರೆಸ್ ಮುಖಂಡ ಭರತ್ ಮುಂಡೋಡಿ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.


ವಿಧಾನಪರಿಷತ್ ಸದಸ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಹರೀಶ್‌ಕುಮಾರ್, ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಪ್ರಜಾಧ್ವನಿ ಯಾತ್ರೆಯ ಸುಳ್ಯ ಕ್ಷೇತ್ರದ ಉಸ್ತುವಾರಿಯಾಗಿರುವ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕೆಪಿಸಿಸಿ ಸದಸ್ಯ ಡಾ.ರಘು, ಕೆಪಿಸಿಸಿ ಸುಳ್ಯ ಉಸ್ತುವಾರಿ ಕೃಷ್ಣಪ್ಪ, ಕಡಬ ಉಸ್ತುವಾರಿ ನಂದಕುಮಾರ್, ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್, ಮಾಜಿ ಮೇಯರ್ ಸವಿತಾ ಸನಿಲ್, ಕಾಂಗ್ರೆಸ್ ಮುಖಂಡರಾದ ಅಶೋಕ್‌ಕುಮಾರ್ ರೈ ಕೋಡಿಂಬಾಡಿ, ಮೋಹನ್, ಶಾಹುಲ್ ಹಮೀದ್, ಧನಂಜಯ ಅಡ್ಪಂಗಾಯ, ಸತೀಶ್‌ಕುಮಾರ್ ಕೆಡೆಂಜಿ, ಎಂ.ಎಸ್.ಮಹಮ್ಮದ್, ಅಪ್ಪಿ ಮಂಗಳೂರು ಮತ್ತಿತರ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಸ್ವಾಗತಿಸಿ, ನೆಲ್ಯಾಡಿ ಕ್ಷೇತ್ರದ ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ ವಂದಿಸಿದರು. ಕಡಬ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ಪೂವಪ್ಪ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಜಿ.ಪಂ.ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ಕಾಂಗ್ರೆಸ್ ಮುಖಂಡ ಕೆ.ಪಿ.ತೋಮಸ್ ಸೇರಿದಂತೆ ನೆಲ್ಯಾಡಿಯ ಇತರೇ ಕಾಂಗ್ರೆಸ್ ಮುಖಂಡರು ಸಹಕರಿಸಿದರು. ಕಡಬ, ನೆಲ್ಯಾಡಿ ಜಿ.ಪಂ.ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

ಸುಳ್ಯದಲ್ಲಿ 35 ವರ್ಷದಿಂದ ವನವಾಸ

ಸುಳ್ಯ ವಿಧಾನಸಭಾ ಕ್ಷೇತ್ರ 35 ವರ್ಷದ ವನವಾಸದಿಂದ ಮುಕ್ತವಾಗಲು ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಿಸಬೇಕು. ಈ ಭಾಗದ ಅಭಿವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಘೋಷಿಸಿರುವ ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಯನ್ನು ಮನೆ ಮನೆಗೆ ಮುಟ್ಟಿಸಬೇಕು. ಪ್ರಣಾಳಿಕೆಯಲ್ಲಿ ಸರಕಾರ ಇನ್ನಷ್ಟೂ ಯೋಜನೆಗಳನ್ನು ಜಾರಿಗೊಳಿಸಲಿದೆ.

-ಆರ್.ವಿ.ದೇಶಪಾಂಡೆ, ಮಾಜಿ ಸಚಿವರು

LEAVE A REPLY

Please enter your comment!
Please enter your name here