ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿ ಶಾಲೆಯ ಮರ್ಯಾದೆ ತೆಗೆದಿದ್ದಾರೆ
ಪ್ರವಾಸಕ್ಕೆ ಹೋದ ಮಕ್ಕಳ ಪೋಷಕರಿಂದ ಎಸ್‌ಡಿಎಂಸಿ ಅಧ್ಯಕ್ಷರ ವಿರುದ್ಧ ಆರೋಪ
ಪತ್ರಿಕೆಯವರು ಕೇಳಿದ್ದಕ್ಕೆ ನೈಜ ಮಾಹಿತಿ ನೀಡಿದ್ದೆನೆ- ಎಸ್‌ಡಿಎಂಸಿ ಅಧ್ಯಕ್ಷರಿಂದ ಲಿಖಿತ ಸ್ಪಷ್ಟನೆ
ಶಾಲೆಯ ಮೂಲಕ ಅಲ್ಲ-ನಮ್ಮ ಅನುಮತಿಯೊಂದಿಗೆ ಪ್ರವಾಸ :ಪೋಷಕರು
ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿಯವರಿಗಾಗಲೀ, ಮುಖ್ಯೋಪಾಧ್ಯಾಯರಿಗಾಗಲೀ, ಎಸ್‌ಡಿಎಂಸಿಯವರಿಗಾಗಲೀ ತಿಳಿಸದೆ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದಿದ್ದಾರೆ ಎಂದು ಸಹಶಿಕ್ಷಕಿಯೋರ್ವರ ಮೇಲೆ ಮಾಡಿರುವ ಆರೋಪ ಸುಳ್ಳು. ಶಾಲೆಗೆ ರಜೆ ಎಂದು ನಿರ್ಣಯ ಮಾಡಿದ ಬಳಿಕವೇ ನಮ್ಮ ಅನುಮತಿ ಪಡೆದು ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕಳುಹಿಸಿದ್ದೆವೆ.ಶಾಲೆಗೂ ಪ್ರವಾಸಕ್ಕೂ ಸಂಬಂಧವಿಲ್ಲ.ಎಸ್‌ಡಿಎಂಸಿ ಅಧ್ಯಕ್ಷರು ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿ ಶಾಲೆಯ ಮರ್ಯಾದೆಯನ್ನು ತೆಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪೋಷಕರು, ಈ ಸಂಬಂಧ ಎಸ್‌ಡಿಎಂಸಿ ಅಧ್ಯಕ್ಷರು ಕ್ಷಮೆ ಕೇಳಬೇಕು ಅಥವಾ ಸ್ಪಷ್ಟನೆ ನೀಡಬೇಕೆಂದು ಎಂದು ಆಗ್ರಹಿಸಿದ ಘಟನೆ ಫೆ. 6ರಂದು ಚಿಕ್ಕಮುಡ್ನೂರು ಬೀರ್‍ನಹಿತ್ಲು ಶಾಲೆಯಲ್ಲಿ ನಡೆದಿದೆ.

ಘಟನೆ ವಿವರ:
ಕ್ಷೇತ್ರ ಶಿಕ್ಷಣಾಧಿಕಾರಿಯವರಿಗಾಗಲೀ, ಮುಖ್ಯೋಪಾಧ್ಯಾಯರಿಗಾಗಲೀ, ಎಸ್‌ಡಿಎಂಸಿಯವರಿಗಾಗಲೀ ತಿಳಿಸದೆ ಶಿಕ್ಷಕಿ ಭಾರತಿ ಅವರು ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದಿರುವುದರಿಂದ ಪೋಷಕರಲ್ಲಿ ಆತಂಕ ಸೃಷ್ಠಿಯಾಗಿತ್ತು ಎನ್ನುವ ವಿಚಾರದಲ್ಲಿ ಫೆ.6ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸೂಚನೆಯಂತೆ ಶಾಲಾ ಮುಖ್ಯಗುರು ಪುಷ್ಪಾವತಿ ಅವರು ಮಧ್ಯಾಹ್ನ ಗಂಟೆ 2ಕ್ಕೆ ಎಸ್‌ಡಿಎಂಸಿ ಮತ್ತು ಗಂಟೆ 3ಕ್ಕೆ ಪೋಷಕರ ಸಭೆಯನ್ನು ಕರೆದಿದ್ದರು.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಎಸ್‌ಡಿಎಂಸಿ ಮತ್ತು ಪೋಷಕರ ಮಾಹಿತಿ ಪಡೆದುಕೊಳ್ಳಲು ಸಿ.ಆರ್.ಪಿ ಮೊಹಮ್ಮದ್ ಅಶ್ರಫ್ ಮತ್ತು ಬಿ.ಆರ್‌ಪಿ ನವೀನ್ ಸ್ಟೀಫನ್ ವೇಗಸ್ ಅವರು ಆಗಮಿಸಿದ್ದರು. ಸಭೆಯ ಆರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರ ಮಾಹಿತಿ ಪಡೆಯಲಾಯಿತು.ಎಸ್‌ಡಿಎಂಸಿ ಅಧ್ಯಕ್ಷೆ ನಳಿನಿ ರಾಜೇಶ್ ಮಾತನಾಡಿ ಊರ ಜಾತ್ರೆಗೆ ಶಾಲೆಯಿಂದ ರಜೆ ಕೊಡುವ ಅವಕಾಶವಿದೆ.ಆದರೆ ಫೆ.4 ಶನಿವಾರ ಆದ್ದರಿಂದ ಮಧ್ಯಾಹ್ನದ ತನಕ ಶಾಲೆ ಇದ್ದುದರಿಂದ ಆ ದಿನ ಬೆಳಿಗ್ಗೆ 11 ಗಂಟೆ ಸುಮಾರಿಗೆ ಶಾಲೆ ಬಿಡುವುದಾಗಿ ಶುಕ್ರವಾರ ಸಂಜೆ ಮಕ್ಕಳಿಗೆ ತಿಳಿಸಿದ್ದೆವು.ಈ ಹಿಂದೆ ಒಂದು ರಜೆಯನ್ನು ಗ್ರಾಮದ ದೈವದ ಕಾರ್ಯಕ್ರಮಕ್ಕೆ ನೀಡಲಾಗಿತ್ತು.ಹಾಗಾಗಿ ರಜೆ ನಿರ್ಣಯ ಮಾಡಿರಲಿಲ್ಲ.ಆದರೆ ಮರುದಿನ ಕೆಲವು ವಿದ್ಯಾರ್ಥಿಗಳು ಶಾಲೆಗೆ ರಜೆ ಎಂದು ಪ್ರವಾಸಕ್ಕೆ ಹೋಗಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಕುರಿತು ಮುಖ್ಯಗುರುಗಳಲ್ಲಿ ವಿಚಾರಿಸಿದಾಗ ಅವರಿಗೂ ಪ್ರವಾಸದ ಕುರಿತು ಮಾಹಿತಿಯಿರಲಿಲ್ಲ ಎಂದರು.
ಶಾಲೆಯ ಮೂಲಕ ಅಲ್ಲ ಪೋಷಕರ ಅನುಮತಿಯಿಂದ ಪ್ರವಾಸ:
ಪೋಷಕರ ಪರವಾಗಿ ಹರೀಶ್ ಎಂಬವರು ಮಾತನಾಡಿ ಇಷ್ಟು ವರ್ಷ ಗ್ರಾಮದ ದೇವಸ್ಥಾನದ ಜಾತ್ರೆಗೆ ರಜೆ ನೀಡಲಾಗುತ್ತಿತ್ತು. ಈ ವರ್ಷ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದರು.ಎಸ್‌ಡಿಎಂಸಿ ಮೀಟಿಂಗ್‌ನಲ್ಲಿ ಫೆ.4 ರಂದು ರಜೆ ಎಂದು ನಿರ್ಣಯ ಆಗಿದೆ.ಆದರೆ ಮತ್ತೆ ರಜೆ ಬಗ್ಗೆ ತಿದ್ದುಪಡಿ ಆಗಬೇಕಾದರೂ ಮೀಟಿಂಗ್ ಕರೆದಿಲ್ಲ. ಏಕಾಏಕಿ ರಾತ್ರಿ, ರಜೆ ಇಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಅವರು ಹೇಳಿದರು.ಇತರ ಪೋಷಕರು ಕೂಡಾ ಧ್ವನಿಗೂಡಿಸಿ ನಾವು ನಮ್ಮ ಮಕ್ಕಳನ್ನು ಶಾಲೆಯ ಮೂಲಕ ಪ್ರವಾಸಕ್ಕೆ ಕಳುಹಿಸಿದ್ದಲ್ಲ.ನಮ್ಮ ಅನುಮತಿಯಿಂದಲೇ ಕಳುಹಿಸಿದ್ದು, ಶಾಲೆಗೆ ರಜೆ ಎಂದಾದ ಮೇಲೆ ಪ್ರವಾಸಕ್ಕೂ ಶಾಲೆಗೂ ಸಂಬಂಧವಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಪ್ರವಾಸದಿಂದ ಗೊಂದಲ ಆಗಿದೆ ಎಂದು ಮಾಧ್ಯಮಗಳಿಗೆ ಸುಳ್ಳು ಮಾಹಿತಿಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷರೇ ನೀಡಿದ್ದೀರಿ ಎಂದು ಆರೋಪಿಸಿ, ನೀವು ತಪ್ಪಾಯಿತೆಂದು ಒಪ್ಪಿಕೊಳ್ಳುವಂತೆ ಪಟ್ಟು ಹಿಡಿದರು.
ಪತ್ರಿಕೆಗೆ ನೈಜ ಮಾಹಿತಿ ನೀಡಿದ್ದೆನೆ:
ಫೆ.4 ರಂದು ಸುದ್ದಿ ಪತ್ರಿಕೆಯವರು ದೂರವಾಣಿ ಕರೆಯ ಮೂಲಕ ನನ್ನನ್ನು ಸಂಪರ್ಕಿಸಿ ಆ ದಿನ ಕೈಗೊಂಡ ಪ್ರವಾಸದ ಬಗ್ಗೆ ಮಾಹಿತಿ ಕೇಳಿರುತ್ತಾರೆ.ನಾನು ನೈಜ ಮಾಹಿತಿಯನ್ನು ನೀಡಿರುತ್ತೇನೆ.ಆದರೆ ಪತ್ರಿಕೆಯಲ್ಲಿ ಪ್ರಕಟವಾದ ಬಾಕಿ ಮಾಹಿತಿಗೂ ನನಗೂ ಯಾವುದೇ ಸಂಬಂಧವಿಲ್ಲ' ಎಂದು ಈ ಮೂಲಕ ತಿಳಿಯ ಪಡಿಸುತ್ತೇನೆ ಎಂದು ಎಸ್‌ಡಿಎಂಸಿ ಅಧ್ಯಕ್ಷೆ ನಳಿನಿ ರಾಜೇಶ್ ಅವರು ಪೋಷಕರಿಗೆ ಲಿಖಿತವಾಗಿ ನೀಡಿ ಸ್ಪಷ್ಟಪಡಿಸಿದರು.
ನಿಮ್ಮ ವಿಚಾರಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಿದ್ದೆವೆ:
ಎಸ್‌ಡಿಎಂಸಿ ಮತ್ತು ಪೋಷಕರ ಸಭೆಯ ಬಳಿಕ ಶಾಲಾ ಕಚೇರಿಯ ಮುಂದೆ, ಶಾಲೆ ವಿಚಾರದಲ್ಲಿ ಗೊಂದಲ ಸೃಷ್ಟಿಸಿದ ಕಾರಣಕ್ಕೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ ಪೋಷಕರನ್ನು ಉದ್ದೆಶಿಸಿ ಮಾತನಾಡಿದ ಬಿಆರ್‌ಪಿ ನವೀನ್ ಸ್ಟೀಫನ್ ವೇಗಸ್ ಅವರು ನಿಮ್ಮ ಎಲ್ಲಾ ವಿಚಾರಗಳಿಗೆ ನಾವು ಯಾವುದೇ ನಿರ್ಣಯ ಕೈಗೊಳ್ಳಲು ಆಗುವುದಿಲ್ಲ.ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಿದ್ದೆವೆ ಎಂದು ಹೇಳಿದರು.
ಗ್ರಾ.ಪಂ ಅಧ್ಯಕ್ಷೆ ಜಯ ಏಕ ಅವರು ಮಾತನಾಡಿ ಮುಂದಿನ ಕ್ರಮ ಮೇಲಾಧಿಕಾರಿಯವರ ಮೂಲಕ ನಡೆಯಬೇಕಾಗಿದೆ ಎಂದರು.ಕೊನೆಗೆ ಸಂಜೆ ಗಂಟೆ ೬ಕ್ಕೆ ಮುಖ್ಯ ಶಿಕ್ಷಕರು ಕಚೇರಿಗೆ ಬೀಗ ಹಾಕಿದರು.ಶಿಕ್ಷಣ ಇಲಾಖೆಯಿಂದ ಅಧಿಕಾರಿಗಳು, ಮುಖ್ಯಶಿಕ್ಷಕರು ಕಾರಿನಲ್ಲಿ ತೆರಳಿದರು. ಸಹ ಶಿಕ್ಷಕಿ ಮತ್ತು ಮಕ್ಕಳ ಪೋಷಕರು ಕೂಡಾ ಕೊನೆಗೆ ತೆರಳಿದರು.ಗ್ರಾ.ಪಂ ಅಧ್ಯಕ್ಷೆ ಜಯ ಏಕ, ಸದಸ್ಯರಾದ ಸ್ಮಿತಾ, ರಾಘವೇಂದ್ರ, ತಿಮ್ಮಪ್ಪ ಪೂಜಾರಿ, ಎಸ್‌ಡಿಎಂಸಿ ಉಪಾಧ್ಯಕ್ಷ ಬಾಲಕೃಷ್ಣ ಮತ್ತು ಸದಸ್ಯರುಗಳು, ವಿದ್ಯಾರ್ಥಿಗಳ ಪೋಷಕರು ಮತ್ತು ಹಿರಿಯ ವಿದ್ಯಾರ್ಥಿಗಳಾದ ಅಣ್ಣಿ ಪೂಜಾರಿ, ಪ್ರಶಾಂತ್, ಹರೀಶ್, ಶೀನಪ್ಪ, ಸುಂದರ, ಉಸ್ಮಾನ್, ಸುಂದರ ಬಿ, ಲೀಲಾ, ನಳಿನಿ, ಚಂದ್ರಾವತಿ, ಸರೋಜಿನಿ, ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.ಸಂಜೆ ಪೋಷಕರ ಆಕ್ರೋಶದ ವಿಚಾರ ತಿಳಿದು ಸ್ಥಳಕ್ಕೆ
112′ ಪೊಲೀಸರು ಆಗಮಿಸಿ ಮಾಹಿತಿ ಪಡೆದು ತೆರಳಿದರು.
ಶಿಸ್ತು ಕ್ರಮ ಏಕೆ ಕೈಗೊಳ್ಳಬಾರದು-ಶಿಕ್ಷಕಿ ಭಾರತಿಯವರಿಗೆ ನೋಟೀಸ್
ಚಿಕ್ಕಮುಡ್ನೂರು ಗ್ರಾಮದ ಬೀರ್‍ನಹಿತ್ಲು ಶಾಲೆಯ ಸಹ ಶಿಕ್ಷಕಿ ಭಾರತಿ ಅವರು ಮೇಲಾಧಿಕಾರಿಗಳ ಅನುಮತಿ ಪಡೆಯದೆ, ಎಸ್‌ಡಿಎಂಸಿ ನಿರ್ಣಯ ಇಲ್ಲದೆ, ಮುಖ್ಯಶಿಕ್ಷಕರ ಗಮನಕ್ಕೆ ತಾರದೆ ಶಾಲಾ ಮಕ್ಕಳನ್ನು ಅನಧಿಕೃತವಾಗಿ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವುದು ಕಂಡು ಬಂದಿದೆ. ಅಲ್ಲದೆ ಡೆಕ್ಕನ್ ಹೆರಾಲ್ಡ್, ಸುದ್ದಿ ದಿನ ಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ವರದಿ ಪ್ರಕಟವಾಗಿರುವುದು ಇಲಾಖೆಯು ಮುಜುಗರದ ಸನ್ನಿವೇಶವನ್ನು ಎದುರಿಸುವಂತಾಗಿದೆ.ಶಾಲಾ ಪ್ರವಾಸವನ್ನು ಡಿಸೆಂಬರ್ ಅಂತ್ಯದೊಳಗೆ ಮೇಲಾಧಿಕಾರಿಯವರ ಅನುಮತಿಯನ್ನು ಪಡೆದು ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಬದಲು ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ನಿಯಮ ಬಾಹಿರವಾಗಿ ಪ್ರವಾಸ ಕೈಗೊಂಡಿರುವುದು ಉಪನಿಯಮಗಳನ್ನು ಉಲ್ಲಂಸಿದಂತಾಗಿದೆ. ಹಾಗಾಗಿ ಬೇಜವಾಬ್ದಾರಿಯಿಂದ ಕರ್ತವ್ಯ ಲೋಪ ಎಸಗಿರುವುದರಿಂದ ನಿಮ್ಮ ಮೇಲೆ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬ ಬಗ್ಗೆ ಮತ್ತು ಈ ಜ್ಞಾಪನೆ ತಲುಪಿದ ಮೂರು ದಿನದೊಳಗೆ ಲಿಖಿತ ಉತ್ತರ ನೀಡುವಂತೆ, ಗ್ರಾ.ಪಂ ಅಧ್ಯಕ್ಷರ ಮೌಖಿಕ ದೂರಿನನ್ವಯ ಸಹಶಿಕ್ಷಕಿ ಭಾರತಿ ಅವರಿಗೆ ನೋಟೀಸ್ ಜಾರಿ ಮಾಡಲಾಗಿದೆ.ಈ ನೋಟೀಸ್ ಅನ್ನು ಬಿ.ಆರ್.ಪಿ ಅವರು ಮುಖ್ಯ ಶಿಕ್ಷಕರ ಮೂಲಕ ಭಾರತಿ ಅವರಿಗೆ ನೀಡಿದರು.ಶಾಲಾ ಮಕ್ಕಳ ಪೋಷಕರು ನನ್ನ ಪರವಾಗಿದ್ದಾರೆ.ಯಾರು ಕೂಡಾ ನನ್ನ ಮೇಲೆ ಲಿಖಿತ ದೂರು ನೀಡದೇ ಇದ್ದರೂ ಕೇವಲ ಫೋನ್‌ನಲ್ಲಿ ನೀಡಿರುವ ಮೌಖಿಕ ದೂರಿಗೆ ತನಗೆ ಇಲಾಖೆ ನೋಟೀಸ್ ನೀಡಿರುವುದಕ್ಕೆ ಸಹಶಿಕ್ಷಕಿ ಭಾರತಿ ಅವರು ಮಾಧ್ಯಮಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.
ನಿರ್ಣಯ ಪುಸ್ತಕ ಓದಲು ಬಿಟ್ಟಿಲ್ಲ
ಶಾಲಾ ಶಿಕ್ಷಕಿ ಭಾರತಿ ಅವರು ನಿರ್ಣಯ ಪುಸ್ತಕವನ್ನು ಸಭೆಯಲ್ಲಿ ಓದುವ ಸಂದರ್ಭದಲ್ಲಿ ಅದನ್ನು ಓದದಂತೆ ಬಿ.ಆರ್‌ಸಿ ಅವರು ತೆಗೆದುಕೊಂಡು ಕಚೇರಿಗೆ ಕೊಂಡೊಯ್ದರು.ಅದಾದ ಬಳಿಕ ಪೋಷಕರು ನಿರ್ಣಯ ಪುಸ್ತಕ ಕೇಳಿದಾಗ ಅದು ಗೋದ್ರೇಜ್‌ನಲ್ಲಿದೆ.ಅದರ ಕೀ ನನ್ನಲ್ಲಿ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಪೋಷಕರು ಆರೋಪ ವ್ಯಕ್ತಪಡಿಸಿದರು.ರಜೆ ನಿರ್ಣಯ ಸಭೆಯಲ್ಲಿ ನಾನು ಇದ್ದೆ.ಸಭಾ ನಿರ್ಣಯಕ್ಕೆ ನನ್ನ ಸಹಿ ಕೂಡಾ ಅದರಲ್ಲಿ ಇದೆ.ಈಗ ಅದನ್ನು ತಿದ್ದುಪಡಿ ಮಾಡಿ ರಜೆ ಇಲ್ಲವೆಂದು ಮಾಡಿದ್ದಾರೆ.ಅದರಲ್ಲಿ ನನ್ನ ಸಹಿ ಇಲ್ಲ ಎಂದು ಶಿಕ್ಷಕಿ ಭಾರತಿ ಅವರು ತಿಳಿಸಿದ್ದಾರೆ.