ಕೊನೆಮಜಲುಗುತ್ತು: ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ-ಧಾರ್ಮಿಕ ಸಭೆ

0

ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಕೊನೆಮಜಲುಗುತ್ತು ಶ್ರೀದೇವಿ ಉಳ್ಳಾಲ್ತಿ ಉಳ್ಳಾಕುಲು ಹಾಗೂ ಸಹ ಪರಿವಾರ ದೈವಗಳ ದೈವಸ್ಥಾನದಲ್ಲಿ 10ನೇ ವರ್ಷದ ಶ್ರೀ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಇತ್ತಿಚೆಗೆ ನಡೆಯಿತು.


ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವಾಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಅವರು, ಜಗತ್ತಿಗೆ ಭಾರತ ದೇವರ ಕೋಣೆ, ಭಾರತಕ್ಕೆ ತುಳುನಾಡು ದೇವರ ಕೋಣೆ. ಸುಬ್ರಹ್ಮಣ್ಯ, ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರಗಳಿರುವ ತುಳುನಾಡಿಗೆ ಎಂದಿಗೂ ಪ್ರಾಕೃತಿಕ ವಿಕೋಪಗಳಿಂದ ಹಾನಿ ಸಂಭವಿಸಿಲ್ಲ. ಇಲ್ಲಿ ನೆಮ್ಮದಿಯ ಜೀವನವಿದೆ ಎಂದರು. ದೈವರಾಧನೆ, ನಾಗಾರಾಧನೆಗೆ ವೈಜ್ಞಾನಿಕ ಮಹತ್ವವಿದೆ. ದೈವ ಸಾನಿಧ್ಯ ಶಕ್ತಿ ನೈಸರ್ಗಿಕವಾಗಿರಬೇಕು. ದೈವದ ಮುಂದೆ ಕುಟುಂಬದ ಭಕ್ತಿಯೂ ಪ್ರಾಮುಖ್ಯವಾಗಿದೆ ಎಂದು ಕತ್ತಲ್‌ಸಾರ್ ಹೇಳಿದರು.


ಮುಖ್ಯ ಅತಿಥಿಯಾಗಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ದೈವರಾಧನೆ, ದೇವತಾರಾಧನೆ ಮೂಲಕ ಭಗವಂತನ ಅನುಗ್ರಹ ಪಡೆಯಲು ಸಾಧ್ಯವಿದೆ. ದೈವರಾಧನೆ ಬಗ್ಗೆ ತುಳುನಾಡಿನ ಜನರಲ್ಲಿರುವ ಭಕ್ತಿ, ಶ್ರದ್ಧೆಯನ್ನು ಕಾಂತಾರ ಸಿನಿಮಾದ ಮೂಲಕ ತೋರಿಸುವ ಕೆಲಸ ಆಗಿದೆ. ದೈವನರ್ತನ ಸೇವೆ ಮಾಡುವವರಲ್ಲಿಯೂ ದೈವದ ಪ್ರತಿರೂಪ ಕಾಣುತ್ತೇವೆ. ಭಜನೆ, ದೈವರಾಧನೆಯಲ್ಲಿ ಯುವ ಪೀಳಿಗೆಯೂ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಕೊಯಿಲ ಬರಮೇಲು ಶಿರಾಡಿ ದೈವಸ್ಥಾನದ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ ಮಾತನಾಡಿ, ಧಾರ್ಮಿಕ ಉಪನ್ಯಾಸದಲ್ಲಿನ ವಿಚಾರಗಳನ್ನು ಜೀವನದಲ್ಲಿ ಅನುಷ್ಠಾನ ಮಾಡಿಕೊಂಡಲ್ಲಿ ಮಾತ್ರ ಧಾರ್ಮಿಕ ಸಭೆಗಳಿಗೆ ಬೆಲೆ ಸಿಗಲಿದೆ. ಕೊನೆಮಜಲುಗುತ್ತು ಕ್ಷೇತ್ರ ಇನ್ನಷ್ಟೂ ಅಭಿವೃದ್ಧಿ ಹೊಂದಲಿ ಎಂದರು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಯಿಲ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಭಾರತೀಯ ಸಂಸ್ಕೃತಿಗೆ ಮಾಡುವ ಅಪಹಾಸ್ಯವಾಗಿದೆ. ಪಾಶ್ಚಾತ್ಯ ಸಂಸ್ಕೃತಿ ಹೋಗಲಾಡಿಸಲು ಕೊಯಿಲ ಗ್ರಾಮದ ಜನರೆಲ್ಲರೂ ಕೈ ಜೋಡಿಸಬೇಕು. ಈ ನಿಟ್ಟಿನಲ್ಲಿ ಕೊಯಿಲ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯೂ ಕಾರ್ಯಕ್ರಮ ಆಯೋಜಿಸಿದೆ. ಇತ್ತೀಚೆಗೆ 12 ಬೈಲುವಾರುಗಳಲ್ಲಿ 12 ಕುಟುಂಬದವರಂತೆ ಭಜನೆ ಆಯೋಜಿಸಲಾಗಿತ್ತು. ಇನ್ನಷ್ಟೂ ಇಂತಹ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಕೊಯಿಲ ಗ್ರಾ.ಪಂ.ಅಧ್ಯಕ್ಷ ಹರ್ಷಿತ್ ಕುಮಾರ್, ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ದಯಾನಂದ ದಾಸ್, ಕಾರ್ಯದರ್ಶಿ ಕೆ.ಸಂಜೀವ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೇಶವ ಗೌಡ ಕೊನೆಮಜಲು, ಸಂಜೀವ ಗೌಡ ಕೊನೆಮಜಲು, ಸೋಮಪ್ಪ ಗೌಡ ಕೊನೆಮಜಲು, ಬಾಲಕೃಷ್ಣ ಶೆಟ್ಟಿ ಕಾರಗುಡ್ಡೆ ಅವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಧಾರ್ಮಿಕ ಉಪನ್ಯಾಸ ನೀಡಿದ ದಯಾನಂದ ಜಿ ಕತ್ತಲ್‌ಸಾರ್, ಕಿನ್ನಿಗೊಳ್ಳಿ ವಿಜಯ ಕಲಾವಿದರು ತಂಡದ ಕಲಾವಿದರಾದ ರತನ್‌ಕುಮಾರ್ ಸಸಿಹಿತ್ಲು, ಲಕ್ಷ್ಮಣ ಬಿ., ಅವರನ್ನು ಸನ್ಮಾನಿಸಲಾಯಿತು. ಆಡಳಿತ ಸಮಿತಿ ಸದಸ್ಯ ವಿನೋದರ ಮಾಳ ಸ್ವಾಗತಿಸಿದರು. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರಾಮಚಂದ್ರ ಏಣಿತ್ತಡ್ಕ ವಂದಿಸಿದರು. ಪತ್ರಕರ್ತ ಬಾಲಕೃಷ್ಣ ಕೊಯಿಲ ಕಾರ್ಯಕ್ರಮ ನಿರೂಪಿಸಿದರು. ಪೂರ್ವಿ, ವೇದಿಕಾ ಪ್ರಾರ್ಥಿಸಿದರು.

ದುರ್ಗಾಪೂಜೆ, ಭಜನೆ:

ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ನವಕಕಲಶ ತಂಬಿಲ, ಆಶ್ಲೇಷ ಬಲಿ, ಮಹಾಪೂಜೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ದುರ್ಗಾಪೂಜೆ, ಪಾಣೆಮಂಗಳೂರು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ಧಾರ್ಮಿಕ ಸಭೆಯ ಬಳಿಕ ವಿಜಯಾ ಕಲಾವಿದರಿಂದ ‘ಪಂಚ ಜೀಟಿಗೆ’ ತುಳುನಾಟಕ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here