ಪುತ್ತೂರಿಗೆ ಬರುವ ಅಮಿತ್ ಶಾ ಅವರು ಕ್ಯಾಂಪ್ಕೋವನ್ನು ಗುಜರಾತಿನ ಬಂಡವಾಳ ಶಾಹಿಗಳಿಗೆ ಮರ್ಜ್ ಮಾಡದಿದ್ದರೆ ಸಾಕು – ಬ್ಲಾಕ್ ಕಾಂಗ್ರೆಸ್ ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ.ವಿಶ್ವನಾಥ ರೈ

0

ಪುತ್ತೂರು: ಕೇಂದ್ರ ಗೃಹ ಸಚಿವರು, ಕೇಂದ್ರದ ಪ್ರಥಮ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಅವರು ಇತ್ತೀಚೆಗೆ ಮಂಡ್ಯಕ್ಕೆ ಭೇಟಿ ಸಂದರ್ಭ ಕೆಎಂಎಫ್ ಅನ್ನು ಅಮೂಲ್ ನೊಂದಿಗೆ ಮರ್ಜ್ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಇನ್ನು ಫೆ.11ಕ್ಕೆ ಪುತ್ತೂರಿಗೆ ಬಂದು ಕ್ಯಾಂಪ್ಕೋವನ್ನು ಗುಜರಾತಿನ ಅಡಿಕೆ ಬಂಡವಾಳ ಶಾಹಿಗಳಿಗೆ ಮರ್ಜ್ ಮಾಡದಿದ್ದರೆ ಸಾಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಪುತ್ತೂರಿನ ಕ್ಯಾಂಪ್ಕೋವನ್ನು ಗುಜರಾತಿನ ಅಡಿಕೆ ಬಂಡವಾಳ ಶಾಹಿಗಳಿಗೆ ಮರ್ಜ್ ಮಾಡಿದರೆ ಮತ್ತೆ ಅಡಿಕೆ ಬೆಳೆಗಾರರು ಬದುಕುವ ಸ್ಥಿತಿ ಇರಲಿಕ್ಕಿಲ್ಲ. ಹಾಗಾಗಿ ಕ್ಯಾಂಪ್ಕೋವನ್ನು ಗುಜರಾತಿನ ಅಡಿಕೆ ಬಂಡವಾಳ ಶಾಹಿಗಳಿಗೆ ಮರ್ಜ್ ಮಾಡಬಾರದು ಎಂದು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದ ಅವರು ಅಡಿಕೆ ಕೊಳೆರೋಗ, ಎಲೆಚುಕ್ಕಿ ರೋಗದಿಂದ ತೊಂದರೆಯಲ್ಲಿರುವ ಅಡಿಕೆ ಬೆಳೆಗಾರರಿಗೆ ವ್ಯವಸ್ಥಿತ ಪರಿಹಾರ, ಘೋಷಣೆ ಮಾಡಿರುವ ಕುಮ್ಕಿ ಹಕ್ಕನ್ನು ಕೊಡಿಸಬೇಕು, ಪುತ್ತೂರಿಗೆ ಸರಕಾರ ವೈದ್ಯಕೀಯ ಕಾಲೇಜು ಸ್ಥಾಪನೆಯನ್ನು ಅವರು ಮಾಡುವಂತೆ ತಿಳಿಸಬೇಕೆಂದು ಹೇಳಿದರು.

ಅಮಿತ್ ಶಾ ಭದ್ರತೆ ಆರ್‌ಎಸ್‌ಎಸ್ ಅವಮಾನ:

ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಅವರು ಮಾತನಾಡಿ ಆರ್‌ಎಸ್‌ಎಸ್‌ನ ಮೂಲ ನೆಲದಲ್ಲಿ ಅಮಿತ್ ಶಾ ಅವರಿಗೆ ವಿಪರೀತ ಭದ್ರತೆಯ ಅಗತ್ಯವಿಲ್ಲ. ಈಗಾಗಲೇ ಸುಮಾರು ಮೂರುವರೆ ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇಷ್ಟೊಂದು ಭದ್ರತೆ ಆರ್‌ಎಸ್‌ಎಸ್ ಮೂಲ ನೆಲದಲ್ಲಿ ಯಾಕೆ. ಇಲ್ಲಿ ಭದ್ರತೆ ಸಂಘ ಪರಿವಾರದ್ದೇ ಸಾಕು. ಅವರಿದ್ದರೆ ಈ ಜಿಲ್ಲೆಗೆ ಟೆರರಿಸ್ಟ್ ಬರುವುದಿಲ್ಲ. ಅಂತಹ ಸ್ಟ್ರಾಂಗ್ ಜಿಲ್ಲೆಯಲ್ಲಿ ಮೂರುವೆರೆ ಸಾವಿರ ಪೊಲೀಸರನ್ನು ನಿಯೋಜನೆ ಮಾಡುವುದು ಸಂಘ ಪರಿವಾರಕ್ಕೆ ಮಾಡುವ ಅವಮಾನ. ಇಲ್ಲಿ ಸೆಕ್ಯೂರಿಟಿ ಬೇಕು. ಆದರೆ ಅದು ವಿಪರೀತ ಆಗಬಾರದು. ಅಮಿತ್ ಶಾ ಬರುತ್ತಾರೆ ಎಂದಾಗ ನಾಳೆ ಮಾರ್ಕೆಟ್‌ಗೆ ಜನ ಇಳಿಯದ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರೋಶನ್ ರೈ, ನಗರ ಕಾಂಗ್ರೆಸ್‌ನ ಉಪಾಧ್ಯಕ್ಷ ಮೌರೀಸ್ ಮಸ್ಕರೇನ್ಹಸ್, ನಗರಸಭೆ ಮಾಜಿ ಸದಸ್ಯ ಮುಕೇಶ್ ಕೆಮ್ಮಿಂಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here