ಅಖಂಡ ಭಾರತ ಪರಿಕಲ್ಪನೆಯ ಅನಾವರಣ
ಹನುಮಗಿರಿಯಲ್ಲೊಂದು ‘ಅಮರಗಿರಿ’
ಜಗದಗಲಕ್ಕೆ ತೆರೆದುಕೊಳ್ಳುವ ದಿನ ಫೆ.11

0

ವಿಶೇಷ ವರದಿ: ಸಿಶೇ ಕಜೆಮಾರ್

ಅಮರಗಿರಿ… ಹೆಸರೇ ಸೂಚಿಸುವಂತೆ ಇಲ್ಲೊಂದು ದೇಶಭಕ್ತಿಯ ದಿವ್ಯಾನುಭವ ಇದೆ. ದೇಶಾಭಿಮಾನದೊಂದಿಗೆ ಕಲಾರಾಧನೆ ಮತ್ತು ಪ್ರಕೃತಿಯಾರಾಧನೆಯ ಸೊಬಗಿದೆ. ಹನುಮಗಿರಿಯ ತಪ್ಪಲಲ್ಲಿರುವ ಈ ಅಮರಗಿರಿ ಅಖಂಡ ಭಾರತ ಪರಿಕಲ್ಪನೆಯ ಅನಾವರಣದೊಂದಿಗೆ ಫೆ.11 ರಂದು ಲೋಕಾರ್ಪಣೆಗೊಳ್ಳುತ್ತಿದೆ. ಬದುಕು ಸಮಾಜಕ್ಕಾಗಿ ಪ್ರಾಣ ದೇಶಕ್ಕಾಗಿ ಎಂಬ ದಿವ್ಯ ಸಂದೇಶದೊಂದಿಗೆ ಅಖಂಡ ಭಾರತ ಪರಿಕಲ್ಪನೆಯ ಶ್ರೀ ಭಾರತಿ ಅಮರಜ್ಯೋತಿ ಮಂದಿರಕ್ಕೆ ತೆರೆದುಕೊಳ್ಳುವ ಒಂದು ದಿವ್ಯಾನುಭವವನ್ನು ನೀಡುವ ಸ್ಥಳ ಇದಾಗಿದೆ. ಅಮರಗಿರಿಯ ದ್ವಾರವನ್ನು ಪ್ರವೇಶಿಸುತ್ತಿದ್ದಂತೆ ನಮ್ಮ ಮನಸ್ಸು ದೇಶಭಕ್ತಿಯ ಕಡೆಗೆ ತೆರೆದುಕೊಳ್ಳುತ್ತದೆ. ರಾಷ್ಟ್ರಧ್ವಜ, ರಾಷ್ಟ್ರಲಾಂಛನದೊಂದಿಗೆ ಪವಿತ್ರ ವಂದೇ ಮಾತರಂ ಗೀತೆಯ ಸಾಲುಗಳು ನಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತವೆ. ಎದುರಿಗೆ ಕಣ್ಣಾಡಿಸಿದರೆ ವಿಶಾಲವಾದ ಪಾರ್ಕ್, ಸೈನಿಕನ ಮುಷ್ಠಿ ಹಿಡಿದ ಕೈ, ಕೈಯಲ್ಲೊಂದು ಹಾರಾಡುತ್ತಿರುವ ತ್ರಿವರ್ಣ ಧ್ವಜ, ಎದುರಿಗೆ ದಿಬ್ಬವೊಂದರ ಮೇಲೆ ನಿರ್ಮಾಣಗೊಂಡ ಶ್ರೀ ಭಾರತಿ ಅಮರಜ್ಯೋತಿ ಮಂದಿರ, ಎದುರಿಗೆ ಪಾಕಿಸ್ತಾನ ಬಾರ್ಡರ್‌ನಲ್ಲಿ ಸೈನಿಕರು ಶಸ್ತ್ರಸಜ್ಜಿತರಾಗಿ ನಿಂತಿರುವುದು ಹೀಗೆ ಒಂದಲ್ಲ ಎರಡಲ್ಲ ಹಲವು ದೇಶಭಕ್ತಿಯ ಕಥಾನಕಗಳು ನಮ್ಮ ಮನಸ್ಸನ್ನು ತಟ್ಟುತ್ತವೆ. ಅದೆನೋ ಕಥೆ ಹೇಳುತ್ತವೆ. ಅಖಂಡ ಭಾರತ ಪರಿಕಲ್ಪನೆಯ ಹಲವು ರೋಚಕ ಅನುಭವಗಳನ್ನು ತೆರೆದಿಡುವ ಈ ಅಮರಗಿರಿ ಇರುವುದಾದರೂ ಎಲ್ಲಿ ಎಂಬ ಪ್ರಶ್ನೆಗೆ ಉತ್ತರವೇ ಹನುಮಗಿರಿ.

ಹೌದು…ಶ್ರೀರಾಮಾಂಜನೇಯರ ಪುಣ್ಯ ಕ್ಷೇತ್ರವಾಗಿ ರಾಜ್ಯದಾದ್ಯಂತ ಹಲವು ಭಕ್ತರನ್ನು ಹೊಂದಿರುವ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಹನುಮಗಿರಿಯಲ್ಲಿದೆ ಈ ಅಮರಗಿರಿ. ದೇವ ಭಕ್ತಿಯೊಂದಿಗೆ ದೇಶ ಭಕ್ತಿಯನ್ನು ಉಣಬಡಿಸುವ ಕೆಲಸ ಇಲ್ಲಿ ಆಗಿದೆ. ನಾವು ಹನುಮಗಿರಿಯ ದ್ವಾರದೊಂದಿಗೆ ಮುಂದೆ ನಡೆದರೆ ನಮಗೆ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ದರ್ಶನವಾಗುತ್ತದೆ. ಅಲ್ಲಿಂದ ಮುಂದೆ ಸಾಗಿದರೆ ರಾಮಗಿರಿಯಲ್ಲಿ ನೆಲೆಯಾಗಿರುವ ಭವ್ಯವಾದ ಶ್ರೀ ಕೋದಂಡರಾಮನ ದರ್ಶನವಾಗುತ್ತದೆ. ಅಲ್ಲಿಂದ ಮುಂದೆ ಸಾಗಿದರೆ ನಮಗೆ ದೇಶ ಭಕ್ತಿಯ ಅಮರಗಿರಿ ಕಾಣಸಿಗುತ್ತದೆ. ಹನುಮಗಿರಿ, ರಾಮಗಿರಿ ಹಾಗು ಅಮರಗಿರಿ. ಪ್ರಕೃತಿಯ ಮಡಿಲಿನಲ್ಲಿ ನಿರ್ಮಾಣಗೊಂಡ ಥೀಮ್‌ಪಾರ್ಕ್‌ಗಳಾಗಿವೆ. ಹನುಮಗಿರಿಯ ಬಗ್ಗೆ ನಮಗೆಲ್ಲರಿಗೂ ಗೊತ್ತು ಹಾಗಾದರೆ ಅಮರಗಿರಿಯಲ್ಲೇನಿದೆ…?

ಬದುಕು ಸಮಾಜಕ್ಕಾಗಿ, ಪ್ರಾಣ ದೇಶಕ್ಕಾಗಿ ಒಂದು ಅದ್ಭುತವಾದ ಸಾಲುಗಳಿಂದ ಆರಂಭಗೊಳ್ಳುತ್ತದೆ ಅಮರಗಿರಿಯ ದರ್ಶನ. ಅಮರಗಿರಿಯ ನಿರ್ಮಾಣ ಹೇಗೆ ಆಗಿದೆ ಎಂದರೆ ನಮಗೆ ಕಲ್ಪನೆಗೆ ಸಿಗದ ರೀತಿಯಲ್ಲಿದೆ. ಪ್ರಕೃತಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪ್ರಕೃತಿಯನ್ನೇ ಬಳಸಿಕೊಂಡು ಅಮರಗಿರಿ ನಿರ್ಮಿಸಲಾಗಿದೆ. ಅಖಂಡ ಭಾರತದ ಎರಡೂ ಗಡಿ ಪ್ರದೇಶಗಳನ್ನು ಇಲ್ಲಿ ಬಹಳ ಸೊಗಸಾಗಿ ಚಿತ್ರಿಸಲಾಗಿದೆ. ಈ ಅಮರಜ್ಯೋತಿ ಮಂದಿರ ಎಂಟು ಪಟ್ಟಿ (ಅಷ್ಠಭುಜಾಕೃತಿ)ಯ ವಿನ್ಯಾಸದಲ್ಲಿ ನಿರ್ಮಾಣಗೊಂಡಿದೆ. ಮಂದಿರದ ಒಳಗಡೆ ಪ್ರವೇಶಿಸುತ್ತಿದ್ದಂತೆ ನಾವು ಅಖಂಡ ಭಾರತದ ಚಿತ್ರಣವನ್ನು ಕಾಣಬಹುದಾಗಿದೆ. ತಾಯಿ ಭಾರತ ಮಾತೆಯು ಸಿಂಹವಾಹಿನಿಯಾಗಿ ಇಲ್ಲಿ ಅಮೃತ ಶಿಲೆಯಲ್ಲಿ ಕಂಗೊಳಿಸುತ್ತಿದ್ದಾಳೆ. ಭಾರತ ಮಾತೆಯ ಮೇಲ್ಭಾಗದಲ್ಲಿ ಹಿಮಾಲಯ ಪರ್ವತವಿದೆ. ಅಲ್ಲಿ ಈಶ್ವರ ಪಾರ್ವತಿ ಇದ್ದರೆ ಆಂಜನೇಯ ಧ್ಯಾನದಲ್ಲಿ ನಿರತನಾಗಿದ್ದಾನೆ. ಭಾರತ ಮಾತೆಯ ಎರಡು ಬದಿಗಳಲ್ಲಿ ಜೈ ಜವಾನ್, ಜೈ ಕಿಸಾನ್ ಎಂಬಂತೆ ರೈತ ಮತ್ತು ಸೈನಿಕನ ಅಮೃತ ಶಿಲೆಯ ಕಲಾಕೃತಿಗಳಿವೆ. ಭಾರತ ಮಾತೆಯ ಸರಿ ಎದುರು ಭಾಗದಲ್ಲಿ ಯೋಧರ ಸ್ಮಾರಕವಿದೆ. ಮೇಲ್ಭಾಗದಲ್ಲಿ ಉದಯ ಸೂರ್ಯನ ಚಿತ್ರಣವಿದೆ. ಇನ್ನೂ ಮಂದಿರ ಮೇಲ್ಭಾಗದಲ್ಲಿ ಸುತ್ತಲೂ ದೇಶದ ಚರಿತ್ರೆ ಸಾರುವ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಸುಮಾರು 14 ಹುತಾತ್ಮರ ಚಿತ್ರಗಳನ್ನು ಕಾಣಬಹುದಾಗಿದೆ. ನಾವು ಕೇಳದೆ ಇರುವ ನೋಡದೆ ಇರುವ ಹುತಾತ್ಮರ ಚಿತ್ರಗಳೂ ಇಲ್ಲಿವೆ. ಮಧ್ಯದಲ್ಲಿ ಅಮೃತ ಶಿಲೆಯಿಂದ ನಿರ್ಮಿಸಿದ ಧ್ವಜಸ್ತಂಭ ಇದೆ. ಮಂದಿರದ ಹಿಂಬದಿಯಲ್ಲಿ ಚೀನಾ ಗಡಿಯ ಚಿತ್ರಣ ಇದೆ. ನಾವು ಅಮರಜ್ಯೋತಿ ಮಂದಿರದ ಎದುರು ನಿಂತು ಕಣ್ಣಾಡಿಸಿದರೆ ಎದುರಿನ ಕಛೇರಿಯ ಗೋಡೆಯಲ್ಲಿ ಗೀತೋಪದೇಶದ ಚಿತ್ರಣವನ್ನು ಪೈಟಿಂಗ್‌ನಲ್ಲಿ ಬರೆಯಲಾಗಿದೆ.

ಸುಮಾರು ಅರ್ಧ ಎಕರೆ ಪ್ರದೇಶದಲ್ಲಿರುವ ಅಮರಗಿರಿಯ ವೈಭವನ್ನು ಅನುಭವಿಸಿಯೇ ಹೇಳಬೇಕಾಗಿದೆ. ಕೇವಲ ಕಣ್ಣಿನಿಂದ ನೋಡಿದರೆ ಸಾಲದು ಅಲ್ಲಿರುವ ಪ್ರತಿಯೊಂದು ಆಕೃತಿ, ಚಿತ್ರಗಳಲ್ಲಿ ಒಂದೊಂದು ಕಲ್ಪನೆಯನ್ನು ಕಾಣಬಹುದಾಗಿದೆ. ಅಮರಗಿರಿಯ ಒಳಗೆ ಪ್ರವೇಶಿಸಿದರೆ ನಮ್ಮಲ್ಲಿ ದೇಶ ಭಕ್ತಿ ಮೂಡದೇ ಇರಲು ಸಾಧ್ಯವೇ ಇಲ್ಲ. ಅಖಂಡ ಭಾರತ ಪರಿಕಲ್ಪನೆ ಅನಾವರಣಗೊಂಡಿರುವ ಅಮರಗಿರಿ ಫೆ.11 ರಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ.ರವರಿಂದ ಲೋಕಾರ್ಪಣೆಗೊಳ್ಳುತ್ತಿದೆ.

LEAVE A REPLY

Please enter your comment!
Please enter your name here