ಕೌಕ್ರಾಡಿ ಗ್ರಾ.ಪಂ.ಗ್ರಾಮಸಭೆ

0

ಇಚ್ಲಂಪಾಡಿ ಮೂಲಕವೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಬೇಕು; ಹೆದ್ದಾರಿ ಪ್ರಾಧಿಕಾರ, ಡಿಸಿಗೆ ಪತ್ರ ಬರೆಯಲು ನಿರ್ಣಯ

ನೆಲ್ಯಾಡಿ: ಸುಬ್ರಹ್ಮಣ್ಯದಿಂದ ಕಾರ್ಕಳದ ತನಕದ ರಾಷ್ಟ್ರೀಯ ಹೆದ್ದಾರಿ ಇಚ್ಲಂಪಾಡಿ ಮೂಲಕವೇ ಹಾದು ಹೋಗಬೇಕು. ಯಾವುದೇ ಕಾರಣಕ್ಕೂ ಬದಲಾವಣೆಗೆ ಅವಕಾಶ ನೀಡಬಾರದು ಎಂಬ ಗ್ರಾಮಸ್ಥರ ಬೇಡಿಕೆಯಂತೆ ನಿರ್ಣಯ ಕೈಗೊಂಡು ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆಯಲು ಕೌಕ್ರಾಡಿ ಗ್ರಾ.ಪಂ.ಗ್ರಾಮಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಭೆ ಗ್ರಾ.ಪಂ.ಅಧ್ಯಕ್ಷೆ ವನಿತಾ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅಜಿತ್ ಅವರು ಮಾರ್ಗದರ್ಶಿ ಅಧಿಕಾರಿಯಾಗಿದ್ದರು.


ಧೂಳಿನಿಂತ ಆವೃತ್ತ:


ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮರಿಗಾರಿ ನಡೆಯುತ್ತಿರುವುದರಿಂದ ನೆಲ್ಯಾಡಿ ಪೇಟೆಯಲ್ಲಿ ವಿಪರೀತ ಧೂಳಿನಿಂದಾಗಿ ಶಾಲಾ ಮಕ್ಕಳಿಗೆ ತೊಂದರೆಯಾಗಿದೆ. ಶಾಲಾ ಮಕ್ಕಳಿಗೆ ಪಾಠ ಕೇಳಲು ಹಾಗೂ ಬೆಳಿಗ್ಗೆ, ಸಂಜೆ ಹೆದ್ದಾರಿಯಲ್ಲಿ ಸಂಚಾರಕ್ಕೆ ಕಷ್ಟವಾಗುತ್ತಿದೆ. ಮಕ್ಕಳ ಆರೋಗ್ಯದಲ್ಲೂ ಸಮಸ್ಯೆಯಾಗಿದೆ ಎಂದು ಸಿಆರ್‌ಪಿ ಪ್ರಕಾಶ್ ಬಾಕಿಲ ಸಭೆಯ ಗಮನಕ್ಕೆ ತಂದರು. ನೆಲ್ಯಾಡಿ ಭಾಗದಲ್ಲಿ ಹೆದ್ದಾರಿ ಕಾಮಗಾರಿಗೆ ವೇಗ ಹೆಚ್ಚಿಸಬೇಕು. ಕಾಮಗಾರಿ ವೇಳೆ ಧೂಳು ಬರದಂತೆ ನೀರು ಹಾಯಿಸಿ ಕಾಮಗಾರಿ ನಡೆಸುವಂತೆ ಪಂಚಾಯಿತಿನಿಂದ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.


ಹೆದ್ದಾರಿ ಬದಿಯ ಅಂಗಡಿಗಳನ್ನು ತೆರೆವುಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಅರಣ್ಯ ಇಲಾಖೆಯಿಂದ ರೈತರಿಗೆ ನೀಡುವ ಗಿಡಗಳನ್ನು ಸಂಬಂಧಪಟ್ಟ ನರ್ಸರಿಗಳಿಂದ ತರಲು ರೈತರಿಗೆ ಅಧಿಕ ವೆಚ್ಚ ಆಗುತ್ತಿರುವುದರಿಂದ ಅರಣ್ಯ ಇಲಾಖೆಯವರೇ ಗ್ರಾಮ ಪಂಚಾಯತ್‌ಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಅರಣ್ಯ ಇಲಾಖೆಯಿಂದ ಹಿಂದೆ ಗ್ಯಾಸ್, ಸೋಲಾರ್ ನೀಡಲಾಗುತಿತ್ತು. ಇದನ್ನು ಮುಂದುವರಿಸಲು ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.

ನೆಲ್ಯಾಡಿ ಬಸ್‌ನಿಲ್ದಾಣದ ಸಮೀಪ ಕೆಎಸ್‌ಆರ್‌ಟಿಸಿ ಮತ್ತು ಪೊಲೀಸ್ ಸ್ಟೇಷನ್‌ಗೆ ಕಾದಿರಿಸಿದ ಜಾಗದ ಮಧ್ಯೆ ಶಾಂತಿಬೆಟ್ಟು ಕಡೆಗೆ ರಸ್ತೆ ಇದೆ. ಇದು ನಕ್ಷೆಯಲ್ಲಿಯೂ ನಮೂದಾಗಿದೆ. ಆದ್ದರಿಂದ ಈ ರಸ್ತೆಯನ್ನು ಯಥಾ ಪ್ರಕಾರ ಕಾಯ್ದಿರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಕುಂಡಡ್ಕ ಸಂಪರ್ಕಿಸುವ ರಸ್ತೆಯು ಅತ್ಯಂತ ಕಿರಿದಾಗಿದ್ದು ಈ ಬಗ್ಗೆ ಈಗಾಗಲೇ ಮನವಿ ನೀಡಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ರಸ್ತೆ ಅಗಲೀಕರಣದಿಂದಾಗಿ ನೆಲ್ಯಾಡಿಯಲ್ಲಿ ಆಟೋ ರಿಕ್ಷಾಗಳಿಗೆ ತಂಗುದಾಣ ಇಲ್ಲದಂತಾಗಿದೆ. ಆದ್ದರಿಂದ ಆಟೋ ರಿಕ್ಷಾ ತಂಗುದಾಣಕ್ಕೆ ಜಾಗ ಕಾದಿರಿಸುವಂತೆಯೂ ರಿಕ್ಷಾ ಚಾಲಕರು ಮನವಿ ಮಾಡಿದರು.

ಕಲ್ಲಡ್ಕ ಎಂಬಲ್ಲಿ ನೀರಿನ ಟ್ಯಾಂಕ್ ರಚನೆಗೆ ಸ್ಥಳ ಗುರುತು ಮಾಡಿಕೊಡುವಂತೆಯೂ ಮನವಿ ಮಾಡಲಾಯಿತು. ಇಚ್ಲಂಪಾಡಿ ಗ್ರಾಮದ ಸರ್ವೆ ನಂಬರ್ 98ರಲ್ಲಿ ಆಶ್ರಮ, ಸ್ಮಶಾನ ನಿರ್ಮಾಣಕ್ಕೆ, ಸಾರ್ವಜನಿಕ ಆಟದ ಮೈದಾನಕ್ಕೆ ಜಾಗ ನೀಡುವಂತೆ ನಿರ್ಣಯ ಕೈಗೊಳ್ಳಲು ಒತ್ತಾಯಿಸಲಾಯಿತು.


ಆರೋಗ್ಯ, ಲೋಕೋಪಯೋಗಿ, ಮೆಸ್ಕಾಂ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ, ಕಂದಾಯ, ಶಿಕ್ಷಣ, ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಉಪಾಧ್ಯಕ್ಷೆ ಜಿ.ಭವಾನಿ, ಇಲಾಖೆಯ ಅಧಿಕಾರಿಗಳು, ಗ್ರಾ.ಪಂ.ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಮಹೇಶ್ ಜಿ.ಎನ್.ಸ್ವಾಗತಿಸಿ, ವರದಿ ಮಂಡಿಸಿದರು. ಸದಸ್ಯ ಲೋಕೇಶ್ ಬಾಣಜಾಲು ವಂದಿಸಿದರು.

LEAVE A REPLY

Please enter your comment!
Please enter your name here