ಅಮಿತ್ ಶಾ ಆಗಮನ ಐತಿಹಾಸಿಕ ಕಾರ್ಯಕ್ರಮವಾಗಲಿದೆ-ಜಿಲ್ಲೆಯ 8 ಕ್ಷೇತ್ರವನ್ನೂ ಗೆಲ್ಲುವ ಸಂದೇಶ ಜನರಿಗೆ ತಲುಪಲಿದೆ : ಶಾಸಕ ಸಂಜೀವ ಮಠಂದೂರು ಸುದ್ದಿಗೋಷ್ಠಿ

0

ಮಳೆಗಾಲ ಬಂದಾಗ ಅಣಬೆ ಹುಟ್ಟಿಕೊಳ್ಳುತ್ತದೆ….

ಅಮಿತ್ ಶಾ ಸ್ವಾಗತಕ್ಕೆ ಕೆಲವು ಮುಖಂಡರಿಂದ ಪ್ರತ್ಯೇಕ ಅಲಂಕಾರ ನಡೆಯುತ್ತಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಚುನಾವಣೆ ಬಂದಾಗ ಇದೆಲ್ಲ ಇರುತ್ತದೆ.ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಎಲ್ಲ ಅವಕಾಶ ಇದೆ. ಹೊಸ ಹೊಸ ವ್ಯಕ್ತಿಗಳು ಬರುತ್ತಾರೆ. ಮಳೆಗಾಲ ಬಂದಾಗ ಅಣಬೆಗಳು ಹುಟ್ಟಿಕೊಳ್ಳುತ್ತವೆ.ಮಳೆ ಹೋದಾಗ ಅಣಬೆ ಕೂಡ ಇರುವುದಿಲ್ಲ.ಯಾರೇ ಪ್ರತ್ಯೇಕ ಅಲಂಕಾರ, ಸ್ವಾಗತ ಮಾಡಲಿ ಬಿಜೆಪಿ ಅದನ್ನು ಸ್ವಾಗತಿಸುತ್ತದೆ. ಬಿಜೆಪಿಗೆ ಇದನ್ನೆಲ್ಲ ಜೀರ್ಣಿಸುವ ಶಕ್ತಿ ಇದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್:

ಅಮಿತ್ ಶಾ ಅವರಿಗೆ ಸ್ವಾಗತ ಕೋರಿ ಅರುಣ್‌ಕುಮಾರ್ ಪುತ್ತಿಲ ಅವರ ಹೆಸರಲ್ಲಿ ಹಾಕಿರುವ ಬ್ಯಾನರ್ ಉದ್ದೇಶಿಸಿ ಶಾಸಕರು ಈ ಮಾತನ್ನು ಹೇಳಿದ್ದಾರೆ ಎಂದು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಅಭಿಪ್ರಾಯಗಳು ಹರಿದಾಡುತ್ತಿವೆ.

ಪುತ್ತೂರು:ದಕ್ಷಿಣ ಕನ್ನಡ ಜಿಲ್ಲೆ ಒಂದಷ್ಟು ಮತೀಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.ಕಾಸರಗೋಡು, ಕೇರಳದಿಂದ ಒಂದಷ್ಟು ವ್ಯಕ್ತಿಗಳು ಬಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ.ಆ ಸಂಘಟನೆಯನ್ನು ಎನ್‌ಐಎ ಮೂಲಕ ಮಟ್ಟ ಹಾಕುವ ದಿಟ್ಟ ನಿರ್ಧಾರ ತೆಗೆದುಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತೀಯವಾದಿಗಳಿಗೆ ಸಿಂಹ ಸ್ವಪ್ನರಾಗಿದ್ದಾರೆ.ರೈತರಿಗೆ ಆಶಾದಾಯಕವಾಗಿರುವ, ಅಮಾಯಕರ ಹತ್ಯೆ ಮಾಡುವ ಜನರಿಗೆ ಎಚ್ಚರಿಕೆಯ ಮತ್ತು ರಾಜಕೀಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರವನ್ನು ಗೆಲ್ಲುವ ಸಂದೇಶ ಅಮಿತ್ ಶಾ ಪುತ್ತೂರು ಭೇಟಿ ಕಾರ್ಯಕ್ರಮದ ಮೂಲಕ ಜನರಿಗೆ ತಲುಪಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಪುತ್ತೂರು ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಮತೀಯ ಸಂಘರ್ಷ ಮಾಡುವ ಸಂಘಟನೆಯನ್ನು ಮಟ್ಟ ಹಾಕುವ ಮೂಲಕ ದೇಶದ ಗೃಹ ಸಚಿವರು ದಕ್ಷಿಣ ಕನ್ನಡ ಜಿಲ್ಲೆಯ ಜನರ ಪ್ರೀತಿ ವಿಶ್ವಾಸ ಪಡೆದಿದ್ದಾರೆ.ಇವತ್ತು ಆರ್ಟಿಕಲ್ 370 ತಂದು ಕಾಶ್ಮೀರದ ಸಮಸ್ಯೆ ಶಾಶ್ವತವಾಗಿ ಬಗೆ ಹರಿಸಿದ್ದಾರೆ.ಪೌರತ್ವ ಕಾಯ್ದೆ ತಂದು ದೇಶದ ಸುತ್ತಮುತ್ತ ಇರುವ, ಬೇರೆ ಬೇರೆ ಸಮುದಾಯದವರಿಗೆ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ.ಅಂತಹ ಅಮಿತ್ ಶಾ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಬಾರಿಗೆ ಬರುತ್ತಿದ್ದಾರೆ.ಬರುವಂತಹ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜನ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡುತ್ತಾರೆ.ಅಡಿಕೆ ಬೆಳೆಗಾರರಿಗೆ ಉತ್ತಮ ಸಂದೇಶ ಕೊಡುವ ಜೊತೆಗೆ ಪುತ್ತೂರು ಕೇಂದ್ರವನ್ನಾಗಿಟ್ಟುಕೊಂಡು, ಚುನಾವಣೆ ಬರುವ ಸಂದರ್ಭದಲ್ಲಿ ಚುನಾವಣೆಯ ಸಂದೇಶ ಕೂಡಾ ಇಲ್ಲಿಂದ ಹೋಗಲಿದೆ.ಈ ವಿಚಾರವಿಟ್ಟು ಕೊಂಡು ಸಹಕಾರಿಗಳು, ರೈತರು, ಸರಕಾರದ ಸವಲತ್ತು ಪಡೆದ ಬಹಳಷ್ಟು ಫಲಾನುಭವಿಗಳು ಸೇರಿಕೊಂಡು ಬೃಹತ್ ಸಮಾವೇಶ ಫೆ.11ರಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ನಡೆಯಲಿದೆ.ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ.ಈ ಸಮಾವೇಶಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಾರಣಕರ್ತರು.ಸಂಸದರ ನೇತೃತ್ವದಲ್ಲಿ ಕ್ಯಾಂಪ್ಕೋ ಅಧ್ಯಕ್ಷರ ಆಯೋಜನೆಯಲ್ಲಿ ಬಿಜೆಪಿಯ ಅಭೂತಪೂರ್ವ ಸ್ವಾಗತದೊಂದಿಗೆ ಸಮಾವೇಶ ನಡೆಯಲಿದೆ.ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಗೃಹಸಚಿವ ಅರಗ ಜ್ಞಾನೇಂದ್ರ, ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ದ.ಕ.ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲೆಯ ನಾಲ್ವರು ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಠಂದೂರು ಹೇಳಿದರು.

ಕ್ಯಾಂಪ್ಕೋ ಉದ್ಘಾಟನೆಗೆ ಜೈಲ್ ಸಿಂಗ್ ಸುವರ್ಣ ಮಹೋತ್ಸವಕ್ಕೆ ಅಮಿತ್ ಶಾ:

ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಯನ್ನು 1986ರಲ್ಲಿ ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಉದ್ಘಾಟಿಸಿದ್ದರು.ಅಡಿಕೆ ಬೆಳೆಗಾರರಿಗೆ ಬೆನ್ನೆಲುಬಾಗಿ ಸಂಸ್ಥೆ ನಿಂತಿದೆ.ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಪೂರಕವಾಗಿ ಇದು ಕೆಲಸ ಮಾಡುತ್ತಿದೆ.ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ಕ್ಯಾಂಪ್ಕೋ ಸಂಸ್ಥೆಯನ್ನು ಬೆಳೆಗಾರರೇ ಮುನ್ನಡೆಸುತ್ತಿದ್ದಾರೆ.ಇವತ್ತು ಸಂಸ್ಥೆ ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ ಎಂದು ಶಾಸಕರು ಹೇಳಿದರು.


8 ಕಡೆಯಲ್ಲಿ ಊಟದ ವ್ಯವಸ್ಥೆ:

ಅಮಿತ್ ಶಾ ಸ್ವಾಗತಕ್ಕೆ ಇಡೀ ಪುತ್ತೂರನ್ನು ಬಿಜೆಪಿ ಕಾರ್ಯಕರ್ತರು ಸಿಂಗರಿಸುತ್ತಿದ್ದಾರೆ.ಜನರು ಆಗಮಿಸಲು ಬಸ್, ವಾಹನಗಳ ವ್ಯವಸ್ಥೆ ಮಾಡಲಾಗಿದೆ.ಜಿಲ್ಲೆಯ ನಾನಾ ಭಾಗಗಳಿಂದ ಬರುವವರಿಗೆ 8 ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. 5 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲಾ ಪೊಲೀಸ್ ಇಲಾಖೆ ಎಲ್ಲ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳುತ್ತಿದೆ ಎಂದು ಶಾಸಕರು ಹೇಳಿದರು.

ಅಮಿತ್ ಶಾ ಅವರಿಗೆ ಮನವಿ:

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಅಡಿಕೆ ಬೆಳೆಗಾರರ ಜಿಲ್ಲೆ.ನಮ್ಮ ಆರ್ಥಿಕತೆ ಅಡಿಕೆ ಮತ್ತು ಮೀನು ವ್ಯವಹಾರ ಅವಲಂಬಿಸಿದೆ.ಅಡಿಕೆ ಬೆಲೆ ಕುಸಿದಾಗ ದಕ್ಷಿಣ ಕನ್ನಡದ ಆರ್ಥಿಕತೆಯೂ ಕುಸಿಯುತ್ತದೆ. ಇವತ್ತು ಅಡಿಕೆಗೆ ದರ ನಿಗದಿಗೆ ಉತ್ಪಾದನೆ ವೆಚ್ಚವನ್ನು ಕೇಂದ್ರ ಸರಕಾರ ನಿಗದಿ ಮಾಡುತ್ತದೆ.ಉತ್ಪಾದನ ವೆಚ್ಚ ಹೆಚ್ಚಳಕ್ಕೆ ಸಚಿವರ ಗಮನಕ್ಕೆ ತರುವುದು, ಹೊರಗಡೆಯಿಂದ ಬರುವ ಅಡಿಕೆ ಆಮದನ್ನು ನಿಲ್ಲಿಸುವುದು, ಅಡಿಕೆಗೆ ಹಳದಿ ರೋಗ ಮತ್ತು ಎಲೆಚುಕ್ಕೆ ರೋಗದಿಂದ ಬೆಳೆಗೆ ಹಾನಿ ಆಗಿದೆ. ಇದಕ್ಕೆ ಶಾಶ್ವತ ಪರಿಹಾರಕ್ಕೆ ಸಂಶೋಧನೆಯನ್ನು ಮಾಡುವುದು ಸೇರಿದಂತೆ ಕೆಲವೊಂದು ಪ್ರಮುಖ ವಿಚಾರಗಳ ಕುರಿತು ಕೇಂದ್ರದ ಸಹಕಾರಿ ಸಚಿವರೂ ಆಗಿರುವ ಅಮಿತ್ ಶಾ ಅವರ ಗಮನಕ್ಕೆ ತರಲಾಗುವುದು.ಅಡಿಕೆ ಬೆಳೆಗಾರರು ಮುಂದಿನ ದಿನಗಳಲ್ಲೂ ನೆಮ್ಮದಿ, ಸಮೃದ್ಧಿಯಿಂದ ಬದುಕಬೇಕೆಂಬ ಉದ್ದೇಶದಿಂದಲೇ ಕೇಂದ್ರ ಸಚಿವರು ಕ್ಯಾಂಪ್ಕೋ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ಶಾಸಕರು ತಿಳಿಸಿದರು.

ಕಾಂಗ್ರೆಸ್ ಶಸ್ತ್ರ ತ್ಯಾಗ ಮಾಡಲಿದೆ:

ಚುನಾವಣೆ ಹತ್ತಿರ ಬರುತ್ತಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರ ಮತ್ತೊಮ್ಮೆ ಬಿಜೆಪಿಯ ಭದ್ರಕೋಟೆ ಆಗಲಿದೆ. ರಾಮ್ ಭಟ್ ಅವರ ಕಾಲದಲ್ಲಿ ಇಲ್ಲಿ ಹಿಂದುತ್ವದ ನೆಲೆಯಲ್ಲಿ ಸಂಘಟಿತ ಕೆಲಸ ಮಾಡಿ ಈ ಕ್ಷೇತ್ರವನ್ನು ಬಿಜೆಪಿ ಕ್ಷೇತ್ರವನ್ನಾಗಿ ಮಾಡುವ ಕೆಲಸ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕೂಡಾ ಯಾವುದೇ ಸವಾಲನ್ನು ಎದುರಿಸಲು ಬಿಜೆಪಿ ಸಜ್ಜಾಗಿದೆ ಎಂಬ ಸಂದೇಶ ಈ ಸಮಾವೇಶದಿಂದ ತೋರಿಸಲಿದ್ದೇವೆ.ಅದಕ್ಕಾಗಿ ಈ ಕಾರ್ಯಕ್ರಮ ಒಂದಷ್ಟು ಜನರಿಗೆ ನಡುಕ ಹುಟ್ಟಿಸಿದೆ.ಅಮಿತ್ ಶಾ ಬರಬೇಕಾದರೆ ಕಾಂಗ್ರೆಸ್‌ನವರು ಅವರಷ್ಟಕ್ಕೆ ಪ್ರೆಸ್ ಮಾಡುತ್ತಿದ್ದಾರೆ.ಅವರಿಗೆ ಭಯ ಹುಟ್ಟದೇ ಇದ್ದರೆ ಅವರು ಪ್ರೆಸ್ ಮಾಡುವುದಿಲ್ಲ. ಅಮಿತ್ ಶಾ ಬರುತ್ತಾರೆ ಎಂದಾಗ ಬಹುಶಃ ನಾವು ಕಾಲ್ಕಿತ್ತುಕೊಳ್ಳಬೇಕೆಂದು ಚಿಂತನೆ ಮಾಡಿರುವ ಕಾಂಗ್ರೆಸ್‌ನವರು ಶಸ್ತ್ರ ತ್ಯಾಗ ಮಾಡಲು ಸಿದ್ದರೆಂದು ತೋರಿಸುವ ಕೆಲಸ ಮಾಡಿದ್ದಾರೆ ಎಂದು ಮಠಂದೂರು ಹೇಳಿದರು.


ನಗರಸಭೆ ಅಧ್ಯಕ್ಷ ಕೆ. ಜೀವಂಧರ ಜೈನ್, ಕರಾವಳಿ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಆರ್.ಸಿ. ನಾರಾಯಣ್, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಎಸ್ ಅಪ್ಪಯ್ಯ ಮಣಿಯಾಣಿ, ಮಂಗಳೂರು ವಿಭಾಗ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಸಹಜ ರೈ ಬಳಜ್ಜ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ ರಾವ್ ಬಪ್ಪಳಿಗೆ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ದಿಶಾ ನಾಮನಿರ್ದೇಶಿತ ಸದಸ್ಯ ರಾಮದಾಸ್ ಹಾರಾಡಿ, ಅರುಣ್ ವಿಟ್ಲ, ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಶೆಣೈ, ಹರಿಪ್ರಸಾದ್ ಯಾದವ್, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಬಿಜತ್ರೆ, ಭಾಸ್ಕರ್ ರೈ ಕಂಟ್ರಮಜಲು, ವಿಶ್ವನಾಥ ಕುಲಾಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here