ಉಡುಪಿ-ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ರಚನೆ ವಿಚಾರ ಜಿಲ್ಲಾಧಿಕಾರಿಯವರಿಂದ ರೈತರಿಗೆ ಅನ್ಯಾಯ-ರೈತ ಸಂಘ ಆರೋಪ

0

ವಿಟ್ಲ: ಉಡುಪಿ – ಕಾಸರಗೊಡು 400ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ರಚನೆಯ ವಿಚಾರವನ್ನು ಮುಚ್ಚಿಟ್ಟ ದ. ಕ. ಜಿಲ್ಲಾಧಿಕಾರಿಗಳು, ರೈತರ ಸಭೆಯನ್ನು ನಡೆಸದೆ, ಗ್ರಾಮ ಮಟ್ಟದಲ್ಲಿ ರೈತರಿಗೆ ಯಾವುದೇ ಮಾಹಿತಿಯನ್ನೂ ನೀಡದೆ, ದಾಖಲೆಗಳನ್ನು ಸಿದ್ದಪಡಿಸಿ ರೈತರಿಗೆ ಅನ್ಯಾಯ ಎಸಗುವ ಕಾರ್ಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತುರವರು ವಿಟ್ಲದ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 400ಕೆ.ವಿ. ವಿದ್ಯುತ್ ಮಾರ್ಗ ಹೋಗುವ ದಾರಿಯನ್ನು 2015ರಿಂದ ಇಲ್ಲಿಯ ತನಕ ನೀಡದೆ, ಸ್ಯಾಟಲೈಟ್ ಹಾಗೂ ಹೆಲಿಕಾಪ್ಟರ್ ಬಳಸಿ ಸರ್ವೇ ಕಾರ್ಯಗಳನ್ನು ಕಂಪನಿ ಮಾಡಿದ್ದು, ಜಿಲ್ಲಾಧಿಕಾರಿಗಳು ಅದಕ್ಕೆ ಒಪ್ಪಿಗೆ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಭೂಸುಧಾರಣೆ ಕಾಯ್ದೆ ಮೂಲಕ ರೈತರಿಗೆ ಸಿಕ್ಕ ಒಂದು ಎಕ್ರೆ ಅರ್ಧ ಎಕ್ರೆ ಕೃಷಿ ಭೂಮಿಯಲ್ಲಿ ಸಣ್ಣ ಹಾಗೂ ಅತೀ ಸಣ್ಣ ರೈತರು ಕೃಷಿ ಕಾರ್ಯ ಮಾಡಿಕೊಂಡು ಬರುತ್ತಿದ್ದು, ಈ ವಿದ್ಯುತ್ ಮಾರ್ಗದಿಂದ ಸಂಪೂರ್ಣ ಕೃಷಿಯನ್ನು ಕಳೆದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇರಳದಲ್ಲಿ ವಿದ್ಯುತ್ ಮಾರ್ಗ ರಚನೆಗೆ ಕೃಷಿ ಭೂಮಿಗಳು ಅಡ್ಡಿ ಮಾಡುತ್ತವೆ ಎಂಬ ಕಾರಣಕ್ಕೆ ಸಂಪೂರ್ಣ ಯೋಜನೆಯನ್ನೇ ಕೈಬಿಡಲಾಗಿತ್ತು. ಆದರೆ ಕರ್ನಾಟಕದಲ್ಲಿ ಕೇರಳ ವಿದ್ಯುತ್ ಮಾರ್ಗ ಹೋಗಲು ಅಡಿಕೆ, ತೆಂಗು, ಗೇರು, ರಬ್ಬರ್ ತುಂಬಿರುವ ಕೃಷಿ ಭೂಮಿಯನ್ನೇ ಬಳಸಿಕೊಳ್ಳಲಾಗುತ್ತಿರುವುದು ವಿಪರ್ಯಾಸವಾಗಿದೆ. ಮಾಹಿತಿ ನೀಡದೆ ಸರ್ವೆಗೆ ಬಂದ ಸಂದರ್ಭ ಜಿಲ್ಲಾಧಿಕಾರಿಗಳಿಗೆ ನಮ್ಮ ಕೃಷಿ ಜೀವನಕ್ಕೆ ಸಮಸ್ಯೆ ಮಾಡುವ ಯೋಜನೆ ನಮ್ಮೂರಲ್ಲಿ ಬರುವುದು ಬೇಡವೆಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಶ್ರೀಧರ ಶೆಟ್ಟಿ ಹೇಳಿದರು.


ಕರ್ನಾಟಕ ಉಚ್ಛನ್ಯಾಯಾಲಯ, ರೈತರ ಅಹವಾಲುಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವಂತೆ ನಿರ್ದೇಶನ ನೀಡಿದರೂ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ರೈತರ ಸಭೆಯನ್ನು ಕಾಟಾಚಾರಕ್ಕೆ ನಡೆಸಿ, ಕಂಪನಿಯವರ ಜತೆಗೆ ಕುಳಿತು, ಅರ್ಥಹೀನ ಮಾತುಗಳನ್ನಾಡಿದ್ದಾರೆ ಮತ್ತು ಅವರು ಹೇಳಿದ್ದನ್ನೇ ಕೇಳಬೇಕೆಂಬ ದಬ್ಬಾಳಿಕೆಯನ್ನು ಮಾಡಿದ್ದರಿಂದ ಮತ್ತೆ ನ್ಯಾಯಾಲಯದ ಮೊರೆ ಹೋಗಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಶ್ರೀಧರ ಶೆಟ್ಟಿ ಹೇಳಿದರು.


ಅರಣ್ಯ ಭೂಮಿಯ ಮೂಲಕ ಹೋಗುವುದರಿಂದ 10 ಸಾವಿರಕ್ಕೂ ಅಧಿಕ ಮರಗಳ ನಾಶವಾಗಿದೆ. ಇದು ಹವಾಮಾನದ ಮೇಲೆ ತೀವ್ರ ಪರಿಣಾಮವನ್ನು ಬೀರಲಿದೆ. 400 ಕೆ.ವಿ. ವಿದ್ಯುತ್ ಮಾರ್ಗದಿಂದ ಹೊರಸೂಸುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ಪವರ್ ಮನುಷ್ಯ ಸೇರಿ ಜೀವ ಸಂಕುಲದ ಮೇಲೆ ತೀವ್ರ ಪರಿಣಾಮವನ್ನು ಬೀರುವ ಬಗ್ಗೆ ವೈಜ್ಞಾನಿಕ ವರದಿಗಳಿದ್ದರೂ, ಸರ್ಕಾರ ಹಾಗೂ ಜಿಲ್ಲಾಡಳಿತ ಮುಚ್ಚಿಡುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಆರೋಪಿಸಿದರು.


ರೈತರ ಕೃಷಿ ಜಮೀನುಗಳ ಬಗ್ಗೆ ಸರಿಯಾಗಿ ಸ್ಥಳಕ್ಕೆ ಬಂದು ಮಾಹಿತಿಯನ್ನು ಪಡೆಯದ ಇಲಾಖೆಯ ಅಧಿಕಾರಿಗಳು ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ನ್ಯಾಯಾಲಯಕ್ಕೆ ನೀಡುವ ಕಾರ್ಯವನ್ನು ಮಾಡುವಂತಿದೆ. ಕಂಪನಿಗಳಿಗೆ ಲಾಭಮಾಡುವ ಉದ್ದೆಶದಿಂದ ರೈತರನ್ನು ಬೀದಿಗೆ ಹಾಕುವ ಕಾರ್ಯ ಮಾಡುವ ಕಾರ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ನಮ್ಮ ಭೂಮಿ ನಮ್ಮ ಹಕ್ಕಾಗಿದ್ದು, ಅದನ್ನು ಬಿಟ್ಟು ನಾವು ಬದುಕಲು ಸಾಧ್ಯವಿಲ್ಲ. ರೈತರ ಕೃಷಿ ಭೂಮಿಯನ್ನು ಬಿಟ್ಟು, ಕಂಪನಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಲಿ. ಕಂಪನಿ ಹಾಗೂ ಜಿಲ್ಲಾಡಳಿತ ನಮ್ಮ ಹೆಣದ ಮೇಲೆ ವಿದ್ಯುತ್ ಮಾರ್ಗ ನಿರ್ಮಿಸಲಿ ಎಂದರು.


ಉಡುಪಿ ಕಾಸರಗೋಡು 400ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಸಂತ್ರಸ್ತ ರೈತರಾದ ಚಿತ್ತರಂಜನ್, ವಾಸು ಗೌಡ, ರಾಬರ್ಟ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here